ADVERTISEMENT

ಮರಳು ಪೂರೈಕೆಗೆ ಆನ್‌ಲೈನ್‌

ಶಾಸಕರ ಅಧ್ಯಯನ ತಂಡದ ಶಿಫಾರಸು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 19:39 IST
Last Updated 27 ನವೆಂಬರ್ 2015, 19:39 IST

ಬೆಂಗಳೂರು: ‘ಮರಳು ವಿತರಣೆ, ಸಾಗಣೆ ನಿಯಂತ್ರಿಸಲು ಆನ್‌ಲೈನ್‌ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಪೂರ್ಣ ಪ್ರಮಾಣದ ವೆಬ್‌ಸೈಟ್‌ ಆರಂಭಿಸಬೇಕು’ ಎಂದು ಮರಳು ಅಕ್ರಮ ಗಣಿಗಾರಿಕೆ ಕುರಿತ ವಿಧಾನಸಭಾ ಸದಸ್ಯರ ಅಧ್ಯಯನ ತಂಡ ಶಿಫಾರಸು ಮಾಡಿದೆ.

ಡಾ.ಎಸ್‌. ರಫಿಕ್‌ ಅಹ್ಮದ್‌ ಅಧ್ಯಕ್ಷತೆಯ ಸಮಿತಿ ವರದಿಯನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಇದು 19 ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ. 

ಲೋಕೋಪಯೋಗಿ ಇಲಾಖೆ ವೈಫಲ್ಯ: 2011ರಲ್ಲಿ ಜಾರಿಗೊಳಿಸಿದ ಏಕರೂಪದ ಮರಳು ನೀತಿಯನ್ನು ಸಮರ್ಪಕವಾಗಿ ಜಾರಿಗೆ ತರದ ಬಗ್ಗೆ  ತಂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ನೀತಿ ಪ್ರಕಾರ ಗಣಿಗಾರಿಕೆಯ ಹೊಣೆಯನ್ನು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ವಹಿಸಲಾಗಿತ್ತು.  ಇಲಾಖೆಯು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸದ ಕಾರಣ ಮರಳಿನ ಅಭಾವ ತೀವ್ರಗೊಂಡಿದೆ ಎಂದು ಅಭಿಪ್ರಾಯಪಟ್ಟಿದೆ.

ಗಣಿಗಾರಿಕೆ ಪ್ರದೇಶದಿಂದ ಗ್ರಾಹಕರಿಗೆ ಮರಳು ವಿತರಣೆ ಮಾಡುವುದರಲ್ಲಿ ಲಾರಿ ಮಾಲೀಕರೇ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಗ್ರಾಹಕರು ಮತ್ತು ಸರ್ಕಾರದ ನಡುವೆ ನಿಕಟ ಸಂಪರ್ಕವೇ ಇಲ್ಲ.  ಹಾಗಾಗಿ ಮರಳಿನ ಲಭ್ಯತೆ ಆಧಾರದಲ್ಲಿ ಬೆಲೆ ನಿಗದಿ ಸಾಧ್ಯವಾಗುತ್ತಿಲ್ಲ ಎಂಬುದನ್ನು  ಅದು ಗಂಭೀರವಾಗಿ ಪರಿಗಣಿಸಿದೆ.

ಮರಳು ವಿತರಣಾ ಕೇಂದ್ರಗಳ ಪೂರ್ಣ ಮಾಹಿತಿ ವೆಬ್‌ಸೈಟ್‌ನಲ್ಲಿರಬೇಕು. ಬೆಂಗಳೂರು ಒನ್‌, ಕರ್ನಾಟಕ ಒನ್‌ ಹಾಗೂ ನೆಮ್ಮದಿ ಕೇಂದ್ರಗಳ ಸಹಾಯದಿಂದ ಮರಳು ವಿತರಣಾ ಕೇಂದ್ರವನ್ನು ಆನ್‌ಲೈನ್‌ ಮೂಲಕ ಅಥವಾ ಮೊಬೈಲ್‌ ಮೂಲಕ ಸಂಪರ್ಕಿಸಿ  ಮರಳು ಕಾಯ್ದಿರಿಸಲು ಸಾಧ್ಯವಾಗಬೇಕು ಎಂದು ಶಿಫಾರಸು ಮಾಡಿದೆ.
*
ಪ್ರಮುಖ ಸಲಹೆಗಳು
* ಮರಳು ಗಣಿಗಾರಿಕೆಗೆ ಯಂತ್ರ ಬಳಸಲು ಅನುಮತಿ

* ಪಟ್ಟಾ ಜಮೀನಿನಲ್ಲಿ ಮರಳು ತೆಗೆಯಲು ಅವಕಾಶ

* ಪರವಾನಗಿ ಪಡೆದ ಲಾರಿಗಳ ಅಂತರ ಜಿಲ್ಲಾ ಸಂಚಾರಕ್ಕೆ ಇರುವ ನಿರ್ಬಂಧ ರದ್ದು

* ಪೊಲೀಸರ ಅನಗತ್ಯ ಹಸ್ತಕ್ಷೇಪಕ್ಕೆ ತಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT