ADVERTISEMENT

ರಾಜಕೀಯ ಪ್ರತಿತಂತ್ರಕ್ಕೆ ಸಜ್ಜು

ಇಂಧನ ಸಚಿವ ಡಿ.ಕೆ ಶಿವಕುಮಾರ್ ಮನೆ, ಸಂಸ್ಥೆಗಳ ಮೇಲೆ ಐ.ಟಿ. ದಾಳಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2017, 19:30 IST
Last Updated 3 ಆಗಸ್ಟ್ 2017, 19:30 IST
ಡಿಕೆಶಿ ಮನೆ ಎದುರು ಸಿಆರ್‌ಪಿಎಫ್‌ ಕಾವಲು
ಡಿಕೆಶಿ ಮನೆ ಎದುರು ಸಿಆರ್‌ಪಿಎಫ್‌ ಕಾವಲು   

ಬೆಂಗಳೂರು: ಇಂಧನ ಸಚಿವ ಶಿವಕುಮಾರ್‌ ಮನೆ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆ ದಾಳಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌, ಇದಕ್ಕೆ ರಾಜಕೀಯವಾಗಿಯೇ ತಿರುಗೇಟು ನೀಡಲು  ಗುರುವಾರ ತೀರ್ಮಾನಿಸಿದೆ.

‘ಹಿರಿಯ ಮುಖಂಡ ಅಹ್ಮದ್‌ ಪಟೇಲ್‌ ಅವರನ್ನು ರಾಜ್ಯಸಭಾ ಚುನಾವಣೆಯಲ್ಲಿ ಸೋಲಿಸಿ, ಪಕ್ಷಕ್ಕೆ ಮುಖಭಂಗ ಮಾಡುವ ಸಲುವಾಗಿಯೇ ಗುಜರಾತ್‌ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿತ್ತು. ಶಾಸಕರನ್ನು ಜೋಪಾನ ಮಾಡುವ ಕಾಯಕದಲ್ಲಿ ನಿರತರಾಗಿದ್ದ ಶಿವಕುಮಾರ್‌ ಅವರನ್ನು ಹೆದರಿಸಲು ಬಿಜೆಪಿ ಈ ದಾಳಿ ನಡೆಸಿದೆ ಎಂಬ ಖಚಿತ ನಿಲುವಿಗೆ ಪಕ್ಷ ಬಂದಿದೆ’ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಬುಧವಾರ ದೂರವಾಣಿಯಲ್ಲಿ ಮಾತನಾಡಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ‘ರಾಜಕೀಯ ಪ್ರೇರಿತವಾದ ಈ ದಾಳಿಯನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದ್ದರು.

ADVERTISEMENT

ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಜಿ. ಪರಮೇಶ್ವರ, ಪಕ್ಷದ ಮುಂದಿನ ನಡೆಯ ಕುರಿತು ಅರ್ಧಗಂಟೆ ಸಮಾಲೋಚಿಸಿದರು. ಐ.ಟಿ ದಾಳಿಯನ್ನು ಬಿಜೆಪಿ ವಿರುದ್ಧವೇ ತಿರುಗಿಸಲು ಹೆಣೆಯಬೇಕಾದ ರಣತಂತ್ರಗಳ ಬಗ್ಗೆ ಉಭಯ ನಾಯಕರೂ ಚರ್ಚಿಸಿದರು ಎಂದು ಮೂಲಗಳು ಹೇಳಿವೆ.

ಶಿವಕುಮಾರ್‌ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸುವ ಮೂಲಕ ಈಗಲ್‌ಟನ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್‌ ಶಾಸಕರನ್ನು ಬೆದರಿಸಿ, ಅಲ್ಲಿಗೆ ವಾಪಸ್‌ ಕರೆಸಿಕೊಂಡು ಕುದುರೆ ವ್ಯಾಪಾರ ಮಾಡಲು ಬಿಜೆಪಿ ನಾಯಕರು ಹವಣಿಸಿದ್ದರು ಎಂದು ಬಿಂಬಿಸಲು  ಕಾಂಗ್ರೆಸ್‌ ನಿರ್ಧರಿಸಿದೆ.

ಬಿಜೆಪಿ ನಾಯಕರ ಬಂಡವಾಳ ಬಯಲು: ‘ರಾಜ್ಯ ಬಿಜೆಪಿ ನಾಯಕರ ಮೇಲಿರುವ ಭ್ರಷ್ಟಾಚಾರ ಮೊಕದ್ದಮೆಗಳು ಹಾಗೂ ಹಗರಣಗಳ ಬ್ರಹ್ಮಾಂಡವನ್ನು ಜನರ ಮುಂದೆ ಬಣ್ಣಿಸುವ ಆಂದೋಲನ ಕೈಗೆತ್ತಿಕೊಳ್ಳಲು ಪಕ್ಷ ನಿರ್ಧರಿಸಿದೆ’ ಎಂದು  ಮೂಲಗಳು ವಿವರಿಸಿವೆ.

ಲೋಕಾಯುಕ್ತ, ಸಿಐಡಿ ಮತ್ತು ಎಸಿಬಿಯಲ್ಲಿ ಈ ಹಿಂದೆ ದಾಖಲಾದ ಪ್ರಕರಣಗಳು, ತನಿಖೆಯಿಂದ ಸಾಬೀತಾಗಿರುವ ಹಗರಣಗಳು, ಜೈಲು ವಾಸ ಅನುಭವಿಸಿದ ಬಿಜೆಪಿ ನಾಯಕರ ಸಂಪೂರ್ಣ ಮಾಹಿತಿಯನ್ನು ಸಿದ್ಧಪಡಿಸುವಂತೆ ಸಂಬಂಧಪಟ್ಟ ಸಂಸ್ಥೆಗಳ ಮುಖ್ಯಸ್ಥರಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್‌, ಕೆ.ಎಸ್. ಈಶ್ವರಪ್ಪ, ಕೇಂದ್ರ ಸಚಿವ ಸದಾನಂದಗೌಡ, ಪ್ರಧಾನ ಕಾರ್ಯದರ್ಶಿಗಳಾದ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಸಿ.ಟಿ. ರವಿ, ರಾಮಚಂದ್ರಗೌಡ, ಜನಾರ್ದನ ರೆಡ್ಡಿ ವಿರುದ್ಧ ಈ ಹಿಂದೆ  ಲೋಕಾಯುಕ್ತ, ಸಿಐಡಿಯಲ್ಲಿ ದಾಖಲಾದ ಪ್ರಕರಣಗಳ ಮಾಹಿತಿ ಕಲೆಹಾಕಲು ತೀರ್ಮಾನಿಸಲಾಗಿದೆ.

ಬಿಜೆಪಿಯಿಂದ ಸಿಡಿದೆದ್ದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿದ್ದ  ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರು, ಸದಾನಂದಗೌಡ, ಜಗದೀಶ ಶೆಟ್ಟರ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಭ್ರಷ್ಟಾಚಾರ ಬಗ್ಗೆ ಪ್ರಮುಖವಾಗಿ ಆಗ ಪ್ರಸ್ತಾಪಿಸಿದ್ದರು.

ಅವರೇ ಬಿಡುಗಡೆ ಮಾಡಿದ್ದ ದಾಖಲೆಗಳನ್ನು ಮತ್ತೆ ಬಿಡುಗಡೆ ಮಾಡಿ, ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡುವ ತಂತ್ರವನ್ನೂ ಕಾಂಗ್ರೆಸ್‌ ಹೆಣೆಯುತ್ತಿದೆ.

ಡಿಜಿಪಿ ದತ್ತ ಜತೆ ಸಿದ್ದರಾಮಯ್ಯ ಚರ್ಚೆ:  ರಾಜ್ಯ ಪೊಲೀಸ್‌ ಮಹಾನಿರ್ದೇಶಕ  ಆರ್.ಕೆ. ದತ್ತ ಅವರನ್ನು ತಮ್ಮ ಅಧಿಕೃತ ನಿವಾಸ ‘ಕಾವೇರಿ’ಗೆ ಕರೆಸಿಕೊಂಡ ಸಿದ್ದರಾಮಯ್ಯ ಅರ್ಧಗಂಟೆಗೂ ಹೆಚ್ಚು ಹೊತ್ತು ಸಮಾಲೋಚನೆ ನಡೆಸಿದರು.

ಅನೇಕ ವರ್ಷ ಸಿಬಿಐ ಸೇವೆಯಲ್ಲಿದ್ದ ದತ್ತ, ಹೆಚ್ಚುವರಿ ಮಹಾನಿರ್ದೇಶಕ ಸ್ಥಾನದಂತಹ ಮಹತ್ವದ ಹುದ್ದೆಯನ್ನೂ ನಿಭಾಯಿಸಿದ್ದರು. ಐ.ಟಿ ದಾಳಿಯ ನಂತರ ಆಗಬಹುದಾದ ಪರಿಣಾಮಗಳ ಕುರಿತು ಸಿದ್ದರಾಮಯ್ಯ ಅವರು ದತ್ತ ಅವರಿಂದ ಮಾಹಿತಿ ಪಡೆದರು ಎನ್ನಲಾಗಿದೆ.ಇದಾದ ಬಳಿಕ, ಅಡ್ವೊಕೇಟ್ ಜನರಲ್‌ ಮದುಸೂಧನ ನಾಯಕ ಜತೆಗೂ ಚರ್ಚೆ ನಡೆಸಿದರು.

ಕಳೆದ  ನಾಲ್ಕು ದಿನಗಳಿಂದ ಹೊರಗೆ ಕಾಣಿಸಿಕೊಳ್ಳದ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಅವರ ಸಂಬಂಧಿಗಳ ಮನೆಗಳ ಮೇಲೆ ಐ.ಟಿ ದಾಳಿ ನಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಗುರುವಾರವೂ  ಅವರು ಮನೆಯಿಂದ ಹೊರಬರಲಿಲ್ಲ.

ಕೇಂದ್ರಕ್ಕೆ ರಾಜ್ಯದ ಪತ್ರ
ಬೆಂಗಳೂರು: ಆದಾಯ ತೆರಿಗೆ (ಐ.ಟಿ) ಇಲಾಖೆ ನಡೆಸಿದ ದಾಳಿಯ ವೇಳೆ ರಾಜ್ಯ ಪೊಲೀಸರ ನೆರವು ಪಡೆಯದೆ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)  ಬಳಸಿರುವುದಕ್ಕೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಅಧಿಯಾಗೆ ಎರಡು ಪುಟಗಳ ಪತ್ರ ಬರೆದಿರುವ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ, ರಾಜ್ಯ ಸರ್ಕಾರದ ತಕರಾರುಗಳನ್ನು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.