ADVERTISEMENT

ಸಂಸ್ಕೃತ–ಕನ್ನಡ ವಿದ್ವಾನ್ ಶರ್ಮಾ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 25 ಜನವರಿ 2014, 11:02 IST
Last Updated 25 ಜನವರಿ 2014, 11:02 IST
ಪ್ರಜಾವಾಣಿ ಸಂಗ್ರಹ ಚಿತ್ರ
ಪ್ರಜಾವಾಣಿ ಸಂಗ್ರಹ ಚಿತ್ರ   

ಬೆಂಗಳೂರು:

‘ಚೆಪ್ಪಲಿಯೊ ಇರಲಿಲ್ಲ, ರೊಕ್ಕ ಮೊದಲೇ ಇಲ್ಲ
ಇಪ್ಪತ್ತು ಮನೆಗಳಲಿ ಭಿಕ್ಷೆಯನು ಬೇಡಿ
ಸೊಪ್ಪು ಸಿಪ್ಪೆಗಳನ್ನು ಚಪ್ಪರಿಸಿ ತಿಂದೆಯೆಲೊ
ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು’
– ಇದು ದೇಶದ ಅಗ್ರಮಾನ್ಯ ಸಂಸ್ಕೃತ–ಕನ್ನಡ ಪಂಡಿತರಾಗಿದ್ದ ಎನ್‌. ರಂಗನಾಥ ಶರ್ಮಾ ಅವರು ತಮಗೆ ತಾವೇ ವಿನೋದ ಮಾಡಿಕೊಳ್ಳುತ್ತಿದ್ದ ಪರಿ.

ಮಹಾಮಹೋಪಾಧ್ಯಾಯ, ವಿದ್ಯಾವಾರಿಧಿ, ಶಂಕರ ಕಿಂಕರ ಮುಂತಾದ ಬಿರುದುಗಳ ಸರದಾರರಾಗಿದ್ದ ಶರ್ಮಾ ಅವರು ಶನಿವಾರ ನಸುಕಿನಲ್ಲಿ ಮೈಸೂರಿನ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಮೃತರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ. ಪತ್ನಿ ಕಮಲಾಕ್ಷಮ್ಮ ಅವರು ತೀವ್ರ ಅನಾರೋಗ್ಯದಿಂದ  1973ರಲ್ಲಿ ನಿಧನರಾಗಿದ್ದರು.

ADVERTISEMENT

ಡಿವಿಜಿ ಅವರು ಒಡನಾಡಿ ಎನಿಸಿದ್ದ ಶರ್ಮಾ, ಅವರಿಂದ ಬಾಯಿತುಂಬಾ ‘ಪಂಡಿತರೇ’ ಎಂದು ಕರೆಯಿಸಿಕೊಂಡಿದ್ದ ಮೇಧಾವಿ. 1935ರಿಂದ ಬೆಂಗಳೂರಿನಲ್ಲಿಯೇ ಇದ್ದ ಅವರು ಕಳೆದೆರಡು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದರು.

1916ರಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ನಡಹಳ್ಳಿ ಜನನ. ತಂದೆ ತಿಮ್ಮಪ್ಪ ಹಾಗೂ ತಾಯಿ ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿ ಮತ್ತು ಸೊರಬದಲ್ಲಿ ನಡೆಯಿತಾದರೂ ಪ್ರೌಢಶಿಕ್ಷಣಕ್ಕೆ ಅಲ್ಲಿ ಅವಕಾಶವಿರಲಿಲ್ಲ. ಆದರೆ ಓದುವ ಹುಮ್ಮಸ್ಸಿನಲ್ಲಿದ್ದ ಅವರು, ಕೆಳದಿಯ ಸಂಸ್ಕೃತ ಪಾಠಶಾಲೆಯನ್ನು ಸೇರಿ ಮೂರು ವರ್ಷ ಸಂಸ್ಕೃತ ಕಲಿತಿದ್ದರು. ಜತೆಗೆ ಅಲ್ಲಿಯೇ ರಂಗನಾಥ ಅವರು ರಂಗನಾಥ ಶರ್ಮಾ ಆಗಿದ್ದರು.

ವಿದ್ವತ್ ಪದವಿ ಗಳಿಸಿದ ನಂತರ ಕೆಲಕಾಲ ಪ್ರೌಢಶಾಲಾ ಅಧ್ಯಾಪಕರಾಗಿದ್ದ ಅವರು ನಂತರ ಬೇಲೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದರು.

1948ರಲ್ಲಿ ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿದ ಅವರು 1976ರಲ್ಲಿ ನಿವೃತ್ತರಾದರು. ವೃತ್ತಿಯಿಂದ ನಿವೃತ್ತರಾದರೂ ತಮ್ಮ ಬರವಣಿಗೆಯನ್ನು ಮುಂದುವರಿಸಿ ತಮ್ಮ 98ರ ಹರೆಯದಲ್ಲಿಯೂ ಅದನ್ನು ಕಾಯ್ದುಕೊಂಡಿದ್ದರು.

ವ್ಯಾಕರಣ, ಅಲಂಕಾರ, ವೇದಾಂತ ಶಾಸ್ತ್ರಗಳಲ್ಲಿ ಅವರ ವಿದ್ವತ್‌ಗೆ ಅವರೇ ಸಾಟಿ. ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಒಲಿದು ಬಂದಿದ್ದವು. ಅವರು ಸಂಸ್ಕೃತದಲ್ಲಿ 11, ಕನ್ನಡದಲ್ಲಿ 22 ಕೃತಿಗಳನ್ನು ರಚಿಸಿದ್ದಾರೆ. 17ಕ್ಕೂ ಹೆಚ್ಚು ಕೃತಿಗಳನ್ನು ಅನುವಾದಿಸಿದ್ದಾರೆ. ಆರಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.