ADVERTISEMENT

ಹಿಜಾಬ್‌ನಿಷೇಧಕ್ಕೆ ವಿರೋಧ

ಮಂಗಳೂರು ವಳಚ್ಚಿಲ್‌ನ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:43 IST
Last Updated 27 ಆಗಸ್ಟ್ 2016, 19:43 IST
ಮಂಗಳೂರಿನ ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಬರುವುದನ್ನು ನಿಷೇಧಿಸಿರುವುದನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್‌ ಆಫ್‌ ಇಂಡಿಯಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಕಾಲೇಜಿನ ಪ್ರವೇಶದ್ವಾರದ  ಎದುರು ಪ್ರತಿಭಟನೆ ನಡೆಸಿದರು.– ಪ್ರಜಾವಾಣಿ ಚಿತ್ರ
ಮಂಗಳೂರಿನ ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಬರುವುದನ್ನು ನಿಷೇಧಿಸಿರುವುದನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್‌ ಆಫ್‌ ಇಂಡಿಯಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಕಾಲೇಜಿನ ಪ್ರವೇಶದ್ವಾರದ ಎದುರು ಪ್ರತಿಭಟನೆ ನಡೆಸಿದರು.– ಪ್ರಜಾವಾಣಿ ಚಿತ್ರ   

ಮಂಗಳೂರು: ನಗರದ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ (ಶಿರವಸ್ತ್ರ) ಧರಿಸಿ ತರಗತಿ ಪ್ರವೇಶಿಸುವುದನ್ನು ನಿಷೇಧಿಸಿರುವುದನ್ನು ವಿರೋಧಿಸಿ ಕ್ಯಾಂಪಸ್‌ ಫ್ರಂಟ್‌ ಆಫ್ ಇಂಡಿಯಾ (ಸಿಎಫ್‌ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಸಿಎಫ್‌ಐ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ ಸಮಾವೇಶಗೊಂಡ ವಿದ್ಯಾರ್ಥಿಗಳು ಹಿಜಾಬ್‌ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸುತ್ತಿರುವ ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಆಡಳಿತ ಮಂಡಳಿಯ ತೀರ್ಮಾನದಿಂದ ವಿದ್ಯಾರ್ಥಿಗಳ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ದೂರಿದ ಅವರು, ಹಿಜಾಬ್‌ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡುವಂತೆ ಆಗ್ರಹಿಸಿದರು.

‘ಹಿಜಾಬ್‌ ಧರಿಸಿ ತರಗತಿಗೆ ಬರುವ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ತರಗತಿ ಪ್ರವೇಶಿಸುವ ಮೊದಲು ಹಿಜಾಬ್‌ ತೆಗೆಯುವಂತೆ ಒತ್ತಡ ಹೇರಲಾಗುತ್ತಿದೆ. ಸಂಸ್ಥೆಯ ನಿಯಮಗಳನ್ನು ಪಾಲಿಸದಿದ್ದರೆ ಕಾಲೇಜಿನಿಂದ ಹೊರ ಹಾಕುವುದಾಗಿ ವಿದ್ಯಾರ್ಥಿಗಳನ್ನು ಬೆದರಿಸಲಾಗುತ್ತಿದೆ’ ಎಂದು ಕ್ಯಾಂಪಸ್ ಫ್ರಂಟ್ ಆಫ್‌ ಇಂಡಿಯಾದ ಮುಖಂಡ ಅಶ್ರಫ್‌ ಆರೋಪಿಸಿದರು.

‘ಹಿರಿಯ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಲು ಅವಕಾಶ ನೀಡಲಾಗುತ್ತಿತ್ತು. ಈಗ ನಮಗೆ ಹಿಜಾಬ್‌ ಧರಿಸದಂತೆ ಸೂಚನೆ ನೀಡುತ್ತಿದ್ದಾರೆ. ಹಿಜಾಬ್‌ ಧರಿಸಿಕೊಂಡು ತರಗತಿಗೆ ಬಂದರೆ ಹೊರಕ್ಕೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ನಮ್ಮಿಂದ ಪಡೆದಿರುವ ಪ್ರಮಾಣಪತ್ರದ ಆಧಾರದಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಆಡಳಿತ ಮಂಡಳಿ ಹೇಳುತ್ತಿದೆ. ಹಿಜಾಬ್, ಜೀನ್ಸ್‌, ಟಿ ಷರ್ಟ್‌ ಧರಿಸಿ ಕಾಲೇಜಿಗೆ ಬರುವಂತಿಲ್ಲ ಎಂಬ ಷರತ್ತುಗಳು ಪ್ರಮಾಣಪತ್ರದಲ್ಲಿ ಇದ್ದವು. ಆದರೂ ಇದು ಶೋಷಣೆಯಲ್ಲವೇ’ ಎಂದು ಪ್ರಥಮ ವರ್ಷದ ಬಿ ಫಾರ್ಮ ವಿದ್ಯಾರ್ಥಿನಿಯರು ದೂರಿದರು.

ಪ್ರಮಾಣಪತ್ರ ಪಡೆಯಲಾಗಿದೆ: ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಕಾಲೇಜಿನ ಪ್ರಾಂಶುಪಾಲ ಆರ್.ಶಬರಾಯ, ‘ವಸ್ತ್ರ ಸಂಹಿತೆ ಮತ್ತು ನಡವಳಿಕೆಗಳಿಗೆ ಸಂಬಂಧಿಸಿದಂತೆ ಕಾಲೇಜಿಗೆ ಪ್ರವೇಶ ನೀಡುವಾಗಲೇ ವಿದ್ಯಾರ್ಥಿಗಳಿಂದ ಪ್ರಮಾಣಪತ್ರ ಪಡೆಯಲಾಗಿದೆ. ಅದರ ಪ್ರಕಾರ, ತರಗತಿ ಕೊಠಡಿ, ಪರೀಕ್ಷಾ ಕೊಠಡಿ, ಕಚೇರಿ ಮತ್ತು ಗ್ರಂಥಾಲಯ ಪ್ರವೇಶಿಸುವಾಗ ಹಿಜಾಬ್‌ ಧರಿಸಲು ಅವಕಾಶವಿಲ್ಲ. ಪ್ರಮಾಣ ಪತ್ರದಲ್ಲಿರುವ ಎಲ್ಲಾ ಷರತ್ತುಗಳನ್ನು ಓದಿದ ಬಳಿಕವೇ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಹಿ ಮಾಡಿ, ನಮಗೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.