ADVERTISEMENT

‘ಸಂಪುಟಕ್ಕೆ ಲಾಡ್‌; ನಾಚಿಕೆಗೇಡಿನ ಸಂಗತಿ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 19:30 IST
Last Updated 25 ಜೂನ್ 2016, 19:30 IST

ಧಾರವಾಡ: ಕಲಘಟಗಿ ಶಾಸಕ ಸಂತೋಷ್‌ ಲಾಡ್‌ ಅವರನ್ನು ಪುನಃ ಸಚಿವ ಸಂಪುಟಕ್ಕೆ ತೆಗೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಶನಿವಾರ ಇಲ್ಲಿ ಟೀಕಿಸಿದರು.

ಲಾಡ್‌ ಸೇರಿದಂತೆ ಮತ್ತೊಬ್ಬ ಸಚಿವ ರಮೇಶಕುಮಾರ್‌ ವಿರುದ್ಧವೂ ಅನೇಕ ಆರೋಪಗಳು ಇವೆ. ಇಷ್ಟಾದರೂ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಅವರಿಗೆ ಲಾಡ್‌ ಸಾಕಷ್ಟು ಸಹಾಯ ಮಾಡಿದ್ದರು. ಆ ಸಂದರ್ಭದಲ್ಲಿ ಶಾಸಕರ ನಡುವೆ ಹಣದ ವ್ಯವಹಾರವೂ ನಡೆದಿತ್ತು. ಈ ಹಿಂದೆ ಆರೋಪ ಕೇಳಿ ಬಂದ ತಕ್ಷಣ ಸ್ವತಃ ಲಾಡ್‌ ಅವರೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು’ ಎಂದರು.

ಈ ಇಬ್ಬರೂ ಸಚಿವರ ಮೇಲಿನ ಆರೋಪಗಳ ವಿವರಗಳನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿಕೊಡಲಾಗುವುದು. ಕಾರ್ಯಾಂಗ ಹಾಗೂ ಶಾಸಕಾಂಗದ ಮೇಲೆ ನಮಗೆ ನಂಬಿಕೆ ಇಲ್ಲದಂತಾಗಿದೆ. ಹೀಗಾಗಿ ಅವರ ವಿರುದ್ಧ ಮತ್ತೊಮ್ಮೆ ಕಾನೂನು ಹೋರಾಟ ನಡೆಸುವುದಾಗಿಯೂ ಅವರು ಹೇಳಿದರು.

‘ಆರೋಪ ಮುಕ್ತನಾಗಿದ್ದೇನೆ’
ಧಾರವಾಡ:
‘ಸುಪ್ರೀಂ ಕೋರ್ಟ್‌ ನನಗೆ ಕ್ಲೀನ್‌ ಚಿಟ್‌ ನೀಡಿದೆ. ಸಿಇಸಿ ಹಾಗೂ ಸಿಬಿಐ ನಡೆಸಿದ ತನಿಖೆಯಲ್ಲೂ ನಾನು ಆರೋಪ ಮುಕ್ತನಾಗಿದ್ದೇನೆ. ಜತೆಗೆ ನನ್ನ ಸಾಮರ್ಥ್ಯದ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ಗೂ ವಿಶ್ವಾಸವಿದೆ. ಹೀಗಾಗಿ ಮತ್ತೊಮ್ಮೆ ಸಚಿವ ಸ್ಥಾನ ಸಿಕ್ಕಿದೆ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ಜನ ಸಂಗ್ರಾಮ ಪರಿಷತ್‌ನ ಎಸ್‌.ಆರ್‌. ಹಿರೇಮಠ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಹಿರೇಮಠ ಅವರು ನನ್ನ ಮೇಲೆ ಸಾಕಷ್ಟು ಆರೋಪ ಮಾಡಿದ್ದಾರೆ. ಆರೋಪ ಸಮರ್ಥಿಸುವಂತಹ ಸೂಕ್ತ ದಾಖಲೆಗಳು ಅವರ ಬಳಿ ಇದ್ದರೆ ಅದನ್ನು ಬಹಿರಂಗಪಡಿಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT