ADVERTISEMENT

ನಾದೆಲ್ಲ ಪಗಾರ ದಿನಕ್ಕೆ 1.4 ಕೋಟಿ

ಮೈಕ್ರೊಸಾಫ್ಟ್‌ ಸಿಇಒ 2014ನೇ ಹಣಕಾಸು ವರ್ಷದ ಸಂಪಾದನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ನ್ಯೂಯಾರ್ಕ್‌(ಪಿಟಿಐ): ಮೈಕ್ರೊಸಾಫ್ಟ್‌ ಕಂಪೆನಿಯ ಮುಖ್ಯ ಕಾರ್ಯನಿರ್ವಾ­ಹಣಾಧಿಕಾರಿ, ಭಾರತ ಮೂಲದ ಸತ್ಯ ನಾದೆಲ್ಲ (47) ಅವರ ವಾರ್ಷಿಕ ವೇತನ ಮತ್ತು ಭತ್ಯೆಯ ಒಟ್ಟು ಮೊತ್ತ 8.43 ಕೋಟಿ ಡಾಲರ್‌ಗಳಷ್ಟು (ಅಂದಾಜು  515 ಕೋಟಿ) ಇದೆ.
ಅಂದರೆ, ನಾದೆಲ್ಲ ಅವರ ದಿನದ ವೇತನ ಸುಮಾರು  1.4 ಕೋಟಿಗಳಷ್ಟಿದೆ.

ಅಮೆರಿಕದ ಷೇರು ಮತ್ತು ವಿನಿಮಯ ಆಯೋಗಕ್ಕೆ ಮೈಕ್ರೊಸಾಫ್ಟ್‌ ಕಂಪೆನಿ ಇತ್ತೀಚೆಗೆ ಸಲ್ಲಿಸಿರುವ ಲೆಕ್ಕಪತ್ರ ವಿವರ ಪ್ರಕಾರ, ನಾದೆಲ್ಲ ಅವರು 2014ರ ಜೂನ್‌ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ವೇತನ, ಭತ್ಯೆ, ಇತರೆ ಸವಲತ್ತು ಸೇರಿದಂತೆ ಒಟ್ಟಾರೆಯಾಗಿ 843 ಲಕ್ಷ ಡಾಲರ್‌ಗಳನ್ನು ಪಡೆದು­ಕೊಂಡಿದ್ದಾರೆ. 2013ರಲ್ಲಿ ಅವರು ಕೇವಲ 76.60 ಲಕ್ಷ ಡಾಲರ್‌ (47.11 ಕೋಟಿ) ಪಡೆದಿದ್ದರು.
ಇತ್ತೀಚೆಗೆ ಅವರು, ‘ಮಹಿಳಾ ಸಿಬ್ಬಂದಿ ವೇತನ ಹೆಚ್ಚಳಕ್ಕಾಗಿ ಒತ್ತಾಯಿಸ­ಬಾರದು. ಕೆಲಸವನ್ನು ಒಂದು ಉತ್ತಮ ಕರ್ಮ ಎಂದುಕೊಂಡು ಸೇವೆ ಸಲ್ಲಿಸ­ಬೇಕು’ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದರು. ಆನಂತರ ಅವರ ವೇತನ, ಭತ್ಯೆ ಮೊದಲಾದ ಗಳಿಕೆಗಳತ್ತ ಬಹಳಷ್ಟು ಮಂದಿಯ ಕಣ್ಣು ನೆಟ್ಟಿತ್ತು. ಅವರೆಲ್ಲರಿಗೂ ಈಗ ಮಾಹಿತಿ ಸಿಕ್ಕಂತಾಗಿದೆ.

2013ನೇ ಹಣಕಾಸು ವರ್ಷದಲ್ಲಿನ ನಾದೆಲ್ಲ ಅವರ ಗಳಿಕೆಗೆ ಹೋಲಿಸಿದರೆ 2014ನೇ ಹಣಕಾಸು ವರ್ಷದಲ್ಲಿ  766.40 ಲಕ್ಷ ಡಾಲರ್ (471.33 ಕೋಟಿ) ಹೆಚ್ಚಿಗೆ ವೇತನ – ಭತ್ಯೆ ಪಡೆದುಕೊಂಡಂತಾಗಿದೆ.  ಒಂದೇ ವರ್ಷ­ದಲ್ಲಿ ಅಕ್ಷರಶಃ 10 ಪಟ್ಟು ಅಧಿಕ ವೇತನ, ಭತ್ಯೆ ಸ್ವೀಕರಿಸಿ­ದಂತಾಗಿದೆ!. ನಾದೆಲ್ಲ ಅವರ 2014ನೇ ಹಣ­ಕಾಸು ವರ್ಷದ ಗಳಿಕೆಯಲ್ಲಿ 9,18,917 ಡಾಲರ್‌ (5.65 ಕೋಟಿ) ವೇತನ, 36 ಲಕ್ಷ ಡಾಲರ್‌ (22.14 ಕೋಟಿ) ಬೋನಸ್, 797.70 ಲಕ್ಷ ಡಾಲರ್‌ಗಳಷ್ಟು (490.58 ಕೋಟಿ) ಷೇರುಪಾಲು ಗಳಿಕೆ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.