ADVERTISEMENT

ಪಾಕ್ ಪ್ರಧಾನಿ ವಿರುದ್ಧ ತನಿಖೆಗೆ ಸುಪ್ರೀಂ ಆದೇಶ: ಸದ್ಯಕ್ಕೆ ಅಧಿಕಾರ ಉಳಿಸಿಕೊಂಡ ಷರೀಫ್‌

ಪಿಟಿಐ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
ಕರಾಚಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ನವಾಜ್‌ ಷರೀಫ್‌ ಬೆಂಬಲಿಗರು
ಕರಾಚಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ನವಾಜ್‌ ಷರೀಫ್‌ ಬೆಂಬಲಿಗರು   

ಇಸ್ಲಾಮಾಬಾದ್‌: ಅಕ್ರಮ ಹಣ  ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಸದ್ಯಕ್ಕೆ ಅಧಿಕಾರ ಉಳಿಸಿಕೊಂಡಿದ್ದಾರೆ.

‘ಷರೀಫ್‌ ವಿರುದ್ಧದ ಆರೋಪಗಳಿಗೆ  ಸಂಬಂಧಪಟ್ಟಂತೆ ಸಾಕ್ಷ್ಯಾಧಾರಗಳ ಕೊರತೆ ಇರುವುದರಿಂದ ಪ್ರಧಾನಿ ಹುದ್ದೆಯಿಂದ ಅವರನ್ನು ಪದಚ್ಯುತಗೊಳಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡಿದೆ. ಇದರಿಂದ ಷರೀಫ್‌ ಅವರ ಮೇಲೆ ಬೀಸುತ್ತಿದ್ದ ತೂಗುಗತ್ತಿ ತಪ್ಪಿದಂತಾಗಿದೆ.

ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು 3:2 ಬಹುಮತದ ಮೇಲೆ ಈ ತೀರ್ಪು ನೀಡಿದೆ.

ADVERTISEMENT

ಆದರೆ, ಷರೀಫ್‌ ಹಾಗೂ ಅವರ ಕುಟುಂಬ ವಿರುದ್ಧದ ಪ್ರಕರಣದ ಬಗ್ಗೆ ಜಂಟಿ ತನಿಖಾ ತಂಡ (ಜೆಐಟಿ) ರಚಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿದೆ.
ನವಾಜ್ ಷರೀಫ್ ವಿರುದ್ಧ ನೇರ ಕ್ರಮಕೈಗೊಳ್ಳಲು ನಿರಾಕರಿಸಿರುವುದರಿಂದ ಷರೀಫ್‌ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಆದರೆ, ತನಿಖಾ ತಂಡದ ವರದಿ ಸಲ್ಲಿಸಿದ ನಂತರ ಮತ್ತೆ ಷರೀಫ್‌ ಅವರಿಗೆ ಸಂಕಷ್ಟ ಎದುರಾಗಬಹುದು ಎಂದು ವಿಶ್ಲೇಷಿಸಲಾಗಿದೆ.

67 ವರ್ಷದ ಷರೀಫ್‌ ಹಾಗೂ ಅವರ ಇಬ್ಬರು ಮಕ್ಕಳಾದ ಹಸನ್‌ ಹಾಗೂ ಹುಸೇನ್‌ ಅವರು ಜಂಟಿ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಈ ತನಿಖಾ ತಂಡದಲ್ಲಿ ಪಾಕಿಸ್ತಾನದ ಫೆಡರಲ್‌ ತನಿಖಾ ಸಂಸ್ಥೆ (ಎಫ್‌ಐಎ), ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೊ (ಎನ್‌ಎಬಿ), ಪಾಕಿಸ್ತಾನ ರಕ್ಷಣಾ ಮತ್ತು ವಿನಿಮಯ ಆಯೋಗ (ಎಸ್ಇಸಿಪಿ) ಹಾಗೂ ಐಎಸ್‌ಐ ಹಾಗೂ ಸೇನೆಯ ಗುಪ್ತಚರ ವಿಭಾಗದ ಅಧಿಕಾರಿಗಳು ಇರುತ್ತಾರೆ.

ಜೆಐಟಿಗೆ ತನಿಖೆಯನ್ನು ಪೂರ್ಣಗೊಳಿಸಲು ಎರಡು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ಪ್ರತಿ ಎರಡು ವಾರಕ್ಕೊಮ್ಮೆ ತನಿಖೆಯ ವರದಿಯನ್ನು  ನ್ಯಾಯಾಲಯಕ್ಕೆ ಸಲ್ಲಿಸಬೇಕು.

ನ್ಯಾಯಮೂರ್ತಿಗಳಾದ  ಆಸೀಫ್‌ ಸಯೀದ್‌ ಖೋಸಾ, ಗುಲ್ಜರ್‌ ಅಹಮದ್‌, ಇಜಾಝ್‌ ಅಫ್ಜಲ್‌ ಖಾನ್‌, ಅಜ್ಮತ್‌ ಸಯೀದ್‌ ಹಾಗೂ ಇಜಾಝುಲ್‌ ಅಹ್ಸನ್‌ ಅವರನ್ನೊಳಗೊಂಡ ಐವರ ಪೀಠ 57 ದಿನಗಳ ಕಾಲ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಈ ತೀರ್ಪು ಒಟ್ಟು 547 ಪುಟಗಳನ್ನು ಒಳಗೊಂಡಿದೆ.

ನ್ಯಾಯಮೂರ್ತಿಗಳಾದ ಇಜಾಝ್‌ ಅಫ್ಜಲ್‌ ಖಾನ್‌, ಅಜ್ಮತ್‌ ಸಯೀದ್ ಮತ್ತು ಇಜಾಝುಲ್‌ ಅಹ್ಸನ್‌ ಅವರು ಪ್ರಧಾನಿ ಷರೀಫ್‌ ಪರ ಬಹುಮತದ ತೀರ್ಪು ನೀಡಿದರೆ, ನ್ಯಾಯಮೂರ್ತಿಗಳಾದ ಗುಲ್ಜರ್‌ ಮತ್ತು ಖೋಸಾ ಅವರು ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದರು. ಷರೀಫ್‌ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಈ ಇಬ್ಬರು ನ್ಯಾಯಮೂರ್ತಿಗಳು ಉಲ್ಲೇಖಿಸಿದರು.

‘ಕತಾರ್‌ಗೆ ಯಾವ ರೀತಿ ಹಣ ವರ್ಗಾವಣೆ ಮಾಡಲಾಗಿದೆ ಎನ್ನುವ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಕೋರ್ಟ್‌ ಆದೇಶಿಸಿದೆ.

ಎನ್‌ಎಬಿ ಮುಖ್ಯಸ್ಥರು ತನಿಖೆಗೆ ಸಹಕಾರ ನೀಡಿಲ್ಲ ಮತ್ತು ಎಫ್‌ಐಎ ಮಹಾನಿರ್ದೇಶಕರು ಸಭ್ಯರ ಸೋಗಿನಲ್ಲಿ ನಡೆಯುವ ವಂಚನೆಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿಯೇ ಜಂಟಿ ತನಿಖಾ ತಂಡ ರಚಿಸಲು ಆದೇಶಿಸಲಾಗಿದೆ ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ. ನ್ಯಾಯಾಲಯದ ಆದೇಶವನ್ನು ಷರೀಫ್‌ ಬೆಂಬಲಿಗರು ಸ್ವಾಗತಿಸಿ ಸಂಭ್ರಮಿಸಿದರು.

ಕೊನೆಗೂ ತಪ್ಪಿದ ಪದಚ್ಯುತಿ ಕಂಟಕ
ಪಾಕಿಸ್ತಾನದಲ್ಲಿ  ಮೂರು ಬಾರಿ ಪ್ರಧಾನಿಯಾಗಿರುವ ಏಕೈಕ ರಾಜಕಾರಣಿ ನವಾಜ್‌ ಷರೀಫ್‌.

ಅಧಿಕಾರಾವಧಿ ಪೂರ್ಣಗೊಳ್ಳುವ ಮೊದಲೇ  ಮೂರನೇ ಬಾರಿಯೂ ಅಧಿಕಾರದಿಂದ  ಕೆಳಗಿಳಿದ ಪ್ರಧಾನಿ ಎನ್ನುವ ಕಳಂಕದಿಂದ ಅವರು ಸದ್ಯಕ್ಕೆ  ತಪ್ಪಿಸಿಕೊಂಡಿದ್ದಾರೆ.
ಈ ಹಿಂದೆಯೂ ಅವರ ವಿರುದ್ಧ ನ್ಯಾಯಾಂಗದಲ್ಲಿ ಆರೋಪ ಸಾಬೀತುಗೊಂಡಿದ್ದರಿಂದ ಎರಡು ಬಾರಿ ಅಧಿಕಾರದಿಂದ ವಜಾಗೊಂಡು ಅವಮಾನ ಅನುಭವಿಸಿದ್ದರು. ದೇಶದ ಪ್ರಬಲ ರಾಜಕೀಯ ಕುಟುಂಬವೊಂದರ ಯಜಮಾನ ಹಾಗೂ ಪಿಎಂಎಲ್‌–ಎನ್‌ ಪಕ್ಷದ ನೇತೃತ್ವ ವಹಿಸಿರುವ ಷರೀಫ್‌ ಅವರು 2013ರ ಜೂನ್‌ರಲ್ಲಿ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎಲ್ಲಾ ಅಡೆತಡೆಗಳನ್ನು ಮೀರಿ ಅಧಿಕಾರದಲ್ಲಿ ಮುಂದುವರಿದಿದ್ದಾರೆ.

‘ನನ್ನ ತಂದೆಯಿಂದ ಬಳುವಳಿಯಾಗಿ ಬಂದಿರುವ ಉದ್ಯಮವೇ ಆರ್ಥಿಕ ಮೂಲ. ಇದರಿಂದ ಲಂಡನ್‌ ಹಾಗೂ ಇತರ ಕಡೆಗಳಲ್ಲಿ ಆಸ್ತಿಗಳನ್ನು ಖರೀದಿಸಲಾಗಿದೆ’ ಎಂದು ಸಂಸತ್ತಿನಲ್ಲಿ ತಮ್ಮ ವಿರುದ್ಧದ ಪನಾಮಾಗೇಟ್‌ ಹಗರಣದ ಬಗ್ಗೆ ಷರೀಫ್‌ ಸ್ಪಷ್ಟನೆ ನೀಡಿದ್ದರು.

ಉಕ್ಕು ಉದ್ಯಮಿಯೂ ಆಗಿರುವ ಅವರು 1990ರಿಂದ 1993ರವರೆಗೆ ಮೊದಲ ಬಾರಿ ಪ್ರಧಾನಿಯಾಗಿದ್ದರು. ಬಳಿಕ 1997ರಿಂದ  1999ರ ಅಕ್ಟೋಬರ್‌ವರೆಗೆ ಎರಡನೇ ಬಾರಿ ಪ್ರಧಾನಿಯಾಗಿದ್ದರು.

ಪ್ರಕರಣವೇನು?
ನವಾಜ್‌ ಷರೀಫ್‌ ಅವರು  1990ರಲ್ಲಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿ, ಲಂಡನ್‌ನಲ್ಲಿ ಆಸ್ತಿ ಖರೀಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಕಳೆದ ವರ್ಷ ಪನಾಮಾ ದಾಖಲೆ ಸೋರಿಕೆ ಸಂದರ್ಭದಲ್ಲಿ ಷರೀಫ್‌ ಅವರ ಮಕ್ಕಳು ಸಾಗರೋತ್ತರ ಕಂಪೆನಿಗಳಲ್ಲಿ ಅಕ್ರಮವಾಗಿ ಬಂಡವಾಳ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿತ್ತು. ದೇಶದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಷರೀಫ್‌ ಅವರನ್ನು ಪ್ರಧಾನಿ ಸ್ಥಾನದಿಂದ ವಜಾ ಮಾಡಬೇಕು ಎಂದು ಕೋರಿ  ತೆಹ್ರೀಕ್‌ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್, ಶೇಖ್ ರಷೀದ್ ಅಹ್ಮದ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.