ADVERTISEMENT

ಲಿಬಿಯಾ: ಉಗ್ರರ ಅಟ್ಟಹಾಸಕ್ಕೆ ಮೂವರ ಬಲಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 12:49 IST
Last Updated 27 ಜನವರಿ 2015, 12:49 IST
ಲಿಬಿಯಾ: ಉಗ್ರರ ಅಟ್ಟಹಾಸಕ್ಕೆ ಮೂವರ ಬಲಿ
ಲಿಬಿಯಾ: ಉಗ್ರರ ಅಟ್ಟಹಾಸಕ್ಕೆ ಮೂವರ ಬಲಿ   

ಟ್ರಿಪೊಲಿ (ಎಪಿ): ವಿದೇಶಿ ಪ್ರವಾಸಿಗರು ಹೆಚ್ಚಾಗಿ ತಂಗುವ ಇಲ್ಲಿನ ಪ್ರಸಿದ್ಧ ಕೊರಂಥಯಾ ಪಂಚತಾರಾ ಹೋಟೆಲಿಗೆ ಮಂಗಳವಾರ ಮಧ್ಯಾಹ್ನ  ನುಗ್ಗಿದ ಐವರು ಉಗ್ರರು,  ಭದ್ರತಾ ಪಡೆಯ ಮೂವರನ್ನು ಹತ್ಯೆಗೈದು ಹಲವು ಪ್ರವಾಸಿಗರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಘಟನೆ ನಡೆದಿದೆ.

ಟ್ರಿಪೊಲಿ ಸೆಕ್ಯುರಿಟಿ ಏಜೆನ್ಸಿ ಪ್ರಕಾರ, ಮೂವರು ಭದ್ರತಾ ಸಿಬ್ಬಂದಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಭದ್ರತಾ ಸಿಬ್ಬಂದಿ ಮುಖ್ಯದ್ವಾರದ ಬಳಿ ಉಗ್ರರರನ್ನು ತಡೆದು ಪರಿಶೀಲನೆಗೆ ಮುಂದಾದಾಗ ಮನಬಂದಂತೆ ಗುಂಡು ಹಾರಿಸಿದರು.  ನಂತರ ಹೋಟೆಲಿನ ಲಾಬಿಗೆ ನುಗ್ಗಿ ಸಿಬ್ಬಂದಿಗಳ ಮೇಲೆ ಗುಂಡಿನ ಮಳೆಗೆರೆದರು. ಪ್ರತ್ಯಕ್ಷದರ್ಶಿಗಳ ಪ್ರಕಾರ ಈ ತಂಡದಲ್ಲಿ ಒಟ್ಟು ಐವರು ಉಗ್ರರಿದ್ದು, ಎಲ್ಲರೂ ಗುಂಡು ನಿರೋಧಕ ಜಾಕೆಟ್‌ ಧರಿಸಿದ್ದಾರೆ.

ಹೋಟೆಲಿನಲ್ಲಿ ಇಟಲಿ, ಬ್ರಿಟನ್‌, ಟರ್ಕಿ ದೇಶದ ಪ್ರವಾಸಿಗರಿದ್ದರು. ಉಗ್ರರು ನುಗ್ಗಿರುವ ಮಾಹಿತಿ ಲಭಿಸುತ್ತಿದ್ದಂತೆ ಕೆಲವು ಪ್ರವಾಸಿಗರು ಹಿಂಬದಿ ಬಾಗಿಲಿನ ಮೂಲಕ ಪಾರ್ಕಿಂಗ್ ಲಾಟ್‌ ತಲುಪಿ  ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.ತಪ್ಪಿಸಿಕೊಳ್ಳುವ ಸಂದರ್ಭದಲ್ಲೇ ಪಾರ್ಕಿಂಗ್‌ ಲಾಟ್‌ನ ಅನತಿ ದೂರದಲ್ಲಿ ಕಾರ್‌ ಬಾಂಬ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟರು ಎಂಬ ಮಾಹಿತಿಯೂ ಸುದ್ದಿಸಂಸ್ಥೆಗೆ ಲಭ್ಯವಾಗಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT