ADVERTISEMENT

‘ಫಾರ್ಚೂನ್‌’ ಪಟ್ಟಿಯಲ್ಲಿ ಮೋದಿ, ಕೈಲಾಶ್‌ ಸತ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST
‘ಫಾರ್ಚೂನ್‌’ ಪಟ್ಟಿಯಲ್ಲಿ ಮೋದಿ, ಕೈಲಾಶ್‌ ಸತ್ಯಾರ್ಥಿ
‘ಫಾರ್ಚೂನ್‌’ ಪಟ್ಟಿಯಲ್ಲಿ ಮೋದಿ, ಕೈಲಾಶ್‌ ಸತ್ಯಾರ್ಥಿ   

ನ್ಯೂಯಾರ್ಕ್‌ (ಪಿಟಿಐ): ‘ಫಾರ್ಚೂನ್‌’ ನಿಯತಕಾಲಿಕ ಸಿದ್ಧಪಡಿಸಿರುವ ವಿಶ್ವದ 50 ಮಂದಿ ಅತ್ಯುನ್ನತ ನಾಯಕರ ವಾರ್ಷಿಕ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಅವರು ಒಳಗೊಂಡಿದ್ದಾರೆ.

ಉದ್ಯಮ, ಸರ್ಕಾರಿ ಸೇವೆ ಮತ್ತು ಸಮಾಜಸೇವಾ ಕ್ಷೇತ್ರಗಳಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದ ಪುರುಷರು ಮತ್ತು ಮಹಿಳೆ­ಯರ ಪಟ್ಟಿಯನ್ನು ಪ್ರತಿವರ್ಷ­ದಂತೆ ಸಿದ್ಧಪಡಿಸಿದ್ದು ಅದರಲ್ಲಿ ಮೋದಿ ಅವರು ‘ಜಗತ್ತಿನ ಮಹಾನ್‌ ನಾಯಕರ’ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, ಸತ್ಯಾರ್ಥಿ 28ನೇ ಸ್ಥಾನದಲ್ಲಿದ್ದಾರೆ. ‘ಆ್ಯಪಲ್‌’ ಕಂಪೆನಿಯ ಸಿಇಒ ಟಿಮ್‌ ಕುಮ್‌ ಮೊದಲನೆಯವರಾಗಿದ್ದಾರೆ.

ಆದರೆ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಪಟ್ಟಿಯಲ್ಲಿ ಇಲ್ಲದಿರು­ವುದು ಗಮನಾರ್ಹ. ‘ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಸಂಕಷ್ಟಗಳನ್ನು ಎದುರಿಸಿದ ಕಾರಣ ಒಬಾಮ ಸೋತಿ­ದ್ದಾರೆ’ ಎಂದು ಫಾರ್ಚೂನ್‌ ಸಮರ್ಥನೆ ನೀಡಿದೆ. ‘ಮೋದಿ ಅವರು ಭಾರತವನ್ನು ಹೆಚ್ಚು ಉದ್ಯಮಸ್ನೇಹಿಯಾಗಿಸಿದ್ದು, ಮಹಿಳೆ­ಯರ ಮೇಲಿನ ದೌರ್ಜನ್ಯ ಪ್ರಕರಣ­ಗಳನ್ನು ನಿಭಾಯಿಸುವ ರೀತಿ, ಸ್ವಚ್ಛತೆಗೆ ಆದ್ಯತೆ ಮತ್ತು ಅಮೆರಿಕ ಹಾಗೂ ಏಷ್ಯನ್‌ ರಾಷ್ಟ್ರಗಳೊಂದಿಗೆ ಬಾಂಧವ್ಯ ವೃದ್ಧಿಯಂತಹ ಅಂಶಗಳು ಅವರನ್ನು ಐದನೇ ಸ್ಥಾನಕ್ಕೇರಿಸಿವೆ’ ಎಂದು ನಿಯತಕಾಲಿಕೆ ಹೇಳಿಕೊಂಡಿದೆ. 

ಫಾರ್ಚೂನ್‌ ಪಟ್ಟಿಯಲ್ಲಿ ಯುರೋ­ಪಿ­ಯನ್‌ ಸೆಂಟ್ರಲ್‌ ಬ್ಯಾಂಕ್‌ನ ಅಧ್ಯಕ್ಷರಾದ ಮಾರಿಯೊ ಡ್ರಘಿ ಅವರು ಎರಡನೇ ಸ್ಥಾನದಲ್ಲಿದ್ದರೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮೂರನೇ ಮತ್ತು ಪೋಪ್‌ ಫ್ರಾನ್ಸಿಸ್‌ ಅವರು ನಾಲ್ಕನೆಯವರಾಗಿದ್ದಾರೆ.

ಬಾಲಕಾರ್ಮಿಕ ಪದ್ಧತಿ ನಿರ್ಮೂ­ಲನೆಗೆ ಸತ್ಯಾರ್ಥಿ ಅವರಷ್ಟು ಕೆಲಸಗಳನ್ನು ವಿಶ್ವದಲ್ಲೇ ಯಾರೂ ಮಾಡಿಲ್ಲ
- ಫಾರ್ಚೂನ್‌ ನಿಯತಕಾಲಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.