ADVERTISEMENT

ಸಾರ್ವಜನಿಕ ಪ್ರದರ್ಶನಕ್ಕೆ ಸೂಪರ್‌ಸಾನಿಕ್‌ ಸಜ್ಜು

ಪಿಟಿಐ
Published 4 ಜುಲೈ 2018, 19:29 IST
Last Updated 4 ಜುಲೈ 2018, 19:29 IST
ನಾಸಾ
ನಾಸಾ   

ವಾಷಿಂಗ್ಟನ್‌: ಸೂಪರ್‌ಸಾನಿಕ್‌ ವಿಮಾನಗಳನ್ನು ಸಾರ್ವಜನಿಕವಾಗಿ ಹಾರಾಟ ನಡೆಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಮುಂದಾಗಿದೆ.

ಶಬ್ದಕ್ಕಿಂತ ವೇಗವಾಗಿ ಚಲಿಸುವ ಈ ವಿಮಾನಗಳ ಹಾರಾಟ ಪ್ರದರ್ಶನವನ್ನು ಭೂಮಿಯ ಮೇಲೆ ನಡೆಸುವುದನ್ನು ಅಮೆರಿಕ ನಿಷೇಧಿಸಿದೆ. ಇದು ಭಾರಿ ಶಬ್ದ ಮಾಡುವುದರಿಂದ ಕಟ್ಟಡಗಳಿಗೂ ಹಾನಿ ಮಾಡುವ ಸಾಧ್ಯತೆಗಳಿರುವುದರಿಂದ ಅಮೆರಿಕ ಈ ನಿರ್ಧಾರ ಕೈಗೊಂಡಿದೆ.

ಹೀಗಾಗಿ, ಸೂಪರ್‌ಸಾನಿಕ್‌ ರೀತಿಯಲ್ಲಿ ಹೆಚ್ಚು ಶಬ್ದವಾಗದಂತೆ ಎಲ್ಲ ರೀತಿಯ ನಿಯಂತ್ರಣ ಕ್ರಮಗಳನ್ನು ಕೈಗೊಂಡಿರುವ ನಾಸಾ ಈ ಪ್ರದರ್ಶನಕ್ಕೆ ಮುಂದಾಗಿದೆ.

ADVERTISEMENT

ಯುದ್ಧ ವಿಮಾನ ಜೆಟ್‌ ಎಫ್‌/ಎ–18 ಬಳಸಿಕೊಂಡು ನಿಗದಿಪಡಿಸಿದ ಪ್ರದೇಶದಲ್ಲಿ ಈ ಹಾರಾಟ ಪ್ರದರ್ಶನ ನಡೆಸಲು ಯೋಜನೆ ರೂಪಿಸಲಾಗಿದೆ. 2011ರಲ್ಲಿ ಕ್ಯಾಲಿಫೋರ್ನಿಯಾದ ಎಡ್ವರ್ಡ್‌ ವಾಯು ನೆಲೆಯಲ್ಲಿ ಪ್ರಾಥಮಿಕ ಪರೀಕ್ಷೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಇಲ್ಲಿ ವಾಸಿಸುವ ಅಮೆರಿಕ ಮಿಲಿಟರಿ ಸಮುದಾಯದವರ ನೆರವು ಪಡೆಯಲಾಗಿತ್ತು. ಈ ಬಾರಿ ಸಾನಿಕ್‌ ಶಬ್ದದ ಹೆಚ್ಚು ಪರಿಯಚವಿಲ್ಲದ ಜನರನ್ನು ಬಳಸಿಕೊಂಡು ಪ್ರದರ್ಶನ ನಡೆಸಲು ಉದ್ದೇಶಿಸಲಾಗಿದೆ.

ಶಬ್ದಕ್ಕಿಂತ ವೇಗವಾಗಿ ಚಲಿಸುವ ’ಎಕ್ಸ್‌–59’ ವಿಮಾನವನ್ನು ನಿರ್ಮಿಸಿಕೊಡುವಂತೆ ನಾಸಾ ಇತ್ತೀಚೆಗೆ ’ಲಾಕ್‌ಹೀಡ್‌ ಮಾರ್ಟಿನ್‌ ಏರೋನಾಟಿಕ್ಸ್‌ ಕಂಪನಿಗೆ ₹1699.45 ಕೋಟಿ ಮೊತ್ತದ ಗುತ್ತಿಗೆ ನೀಡಿದೆ. ಈ ವಿಮಾನಕ್ಕೆ ಸೂಪರ್‌ಸಾನಿಕ್‌ ತಂತ್ರಜ್ಞಾನ ಸಹ ಬಳಕೆಯಾಗಲಿದೆ.

‘ಎಕ್ಸ್‌–59’ ವಿಮಾನವನ್ನು ಹಲವು ನಗರ ಮತ್ತು ಪಟ್ಟಣಗಳ ಮೇಲೆ ಹಾರಾಟ ನಡೆಸಲು ನಾಸಾ ಉದ್ದೇಶಿಸಿದೆ. ಇದರಿಂದ, ಸೂಪರ್‌ಸಾನಿಕ್‌ ವಿಮಾನದಿಂದ ಉಂಟಾಗುವ ಶಬ್ದವನ್ನು ಜನರು ಯಾವ ರೀತಿ ಗ್ರಹಿಸಿದರು ಮತ್ತು ಯಾವ ರೀತಿಯ ಪರಿಣಾಮ ಬೀರಿತು ಎನ್ನುವ ಬಗ್ಗೆ ವಿಶ್ಲೇಷಣೆ ನಡೆಸಲಿದೆ.

ಗಲ್ಫ್‌ ಮೆಕ್ಸಿಕೊ ಸಮೀಪದ ಗಲ್ಫ್‌ ಕೋಸ್ಟ್‌ ನಗರದ ಬಳಿ ಈ ಪ್ರದರ್ಶನ ನಡೆಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.