ADVERTISEMENT

ಪರಮ ಪಾವನ ರಾತ್ರಿ (ಲೈಲತುಲ್ ಖದ್ರ್)

ಫಕೀರ್ ಮಹಮ್ಮದ ಕಟ್ಪಾಡಿ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ರಮಝಾನಿನ ಶ್ರೇಷ್ಠತೆ ಈ ತಿಂಗಳು ಪೂರ್ತಿ ವಿಶೇಷ ನಮಾಜು, ಉಪವಾಸ ವ್ರತ, ಕುರಾನ್ ದಿವ್ಯ ಸಂದೇಶಗಳ ಪ್ರಥಮ ಬೋಧನೆ ಮುಂತಾದ ಕಾರಣಗಳಿಗೆ ಮಾತ್ರ ಸೀಮಿತಗೊಂಡಿಲ್ಲ. ಈ ತಿಂಗಳ ಮಹತ್ವಕ್ಕೆ ಇನ್ನೊಂದು ಕಾರಣವೂ ಇದೆ. ಅದು ಪರಮ ಶಕ್ತಿಶಾಲಿ ಪಾವನ ರಾತ್ರಿಯೊಂದು ಈ ತಿಂಗಳಲ್ಲಿ ಶಾಮೀಲಾಗಿದೆ ಎಂಬ ಕಾರಣಕ್ಕೆ. ಈ ರಾತ್ರಿ ರಮಝಾನಿನ ಎಷ್ಟನೆಯ ದಿನಕ್ಕೆ ಸಂಬಂಧಿಸಿದ್ದು ಎನ್ನುವು ನಿಗೂಢ.

ಈ ದಿನ ಯಾವಾಗ ಬರುತ್ತದೆ ಎಂಬುದು ಪ್ರವಾದಿ ಮತ್ತು ಅಲ್ಲಾಹನಿಗೆ ಮಾತ್ರ ತಿಳಿದಿದೆ ಎನ್ನುವುದು ಒಂದು ರಹಸ್ಯ. ಕುರಾನ್ ಸಂದೇಶಗಳಲ್ಲಿ ಕೂಡ ಇದು ಯಾವ ದಿನದ ರಾತ್ರಿ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸಿಲ್ಲ. ಕುರಾನ್‌ನ 97ನೆಯ ‘ಅಲ್ ಕದ್ರ್’ ಎಂಬ(ಸೂರಃ) ಪಾಠದಲ್ಲಿ “ಅದನ್ನು(ಕುರಾನನ್ನು) ನಾವು ಒಂದು ಪ್ರತಿಷ್ಠಿತ ರಾತ್ರಿಯಲ್ಲಿ ತಂದಿರಿಸಿದ್ದೇವೆ. ನಿಮಗೆ ಗೊತ್ತು ಆ ಪ್ರತಿಷ್ಠಿತ ರಾತ್ರಿ ಯಾವ ಮಹತ್ವದ್ದು ಎಂದು. ಆ (ಒಂದು) ಪ್ರತಿಷ್ಠಿತ ರಾತ್ರಿ ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾದದ್ದು! ಆ ರಾತ್ರಿಯಲ್ಲಿ ದೇವದೂತರು ತಮ್ಮ ಪ್ರಭುವಿನ ಆಜ್ಞೆಯ ಮೇರೆಗೆ (ಭೂಮಿಗೆ) ಆಗಮಿಸುತ್ತಾರೆ. ಸೂರ್ಯೋದಯದ ತನಕ (ವಾತಾವರಣದಲ್ಲಿ) ಶಾಂತಿಯೇ ಶಾಂತಿ ಇರುತ್ತದೆ” ಕುರಾನಿನ ಇನ್ನೊಂದು ಕಡೆ ಸೂರಃ ೪೪: ೩-೫ರಲ್ಲಿ “ನಿಸ್ಸಂದೇಹವಾಗಿ ನಾವಿದೊಂದು ಧನ್ಯವಾದ ಸಲ್ಲಿಸುವ ರಾತ್ರಿಯಾಗಿ ಸೃಷ್ಟಿಸಿದ್ದೇವೆ. ನಿಸ್ಸಂದೇಹವಾಗಿ ನಾವು (ಈ ಬಗ್ಗೆ) ಮುನ್ಸೂಚನೆಗಳನ್ನು ನೀಡುವವರಾಗಿದ್ದೇವೆ. ಇದರಲ್ಲಿ (ಈ ರಾತ್ರಿಯಲ್ಲಿ) ಎಲ್ಲ ತರದ ನ್ಯಾಯಪರಿಪಾಲನೆಯ ಆದೇಶವನ್ನು ಕೊಡಲಾಗುತ್ತದೆ. ನಿಸ್ಸಂದೇಹವಾಗಿಯೂ ನಾವೇ ಈ ಸಂದೇಶವಾಹಕರನ್ನು ಕಳುಹಿಸುವವರು” ಎನ್ನಲಾಗಿದೆ. ಇಷ್ಟಕ್ಕೂ ಈ ರಾತ್ರಿಯ ವೈಶಿಷ್ಟ್ಯ ಏನೆಂದರೆ ಈ ರಾತ್ರಿಯಲ್ಲಿ ಪ್ರವಾದಿಯವರಿಗೆ ಕುರಾನ್ ಸಂದೇಶಗಳ ಬೋಧನೆ ಶುರುವಾಗಿತ್ತು.

ಕೆಲವು ಧರ್ಮಪಂಡಿತರ ಅಭಿಪ್ರಾಯದಂತೆ ಈ ರಾತ್ರಿ ಕುರಾನ್ ಸಂದೇಶಗಳನ್ನು ಪೂರ್ತಿಯಾಗಿ ದೇವರು ತನ್ನ ದೂತರಿಗೆ ನೀಡಿದ, ನಂತರದಲ್ಲಿ ಅವಶ್ಯಕತೆಗೆ ಅನುಕೂಲವಾದಂತೆಲ್ಲ ದೇವದೂತರು ಕಂತಿನಂತೆ ಹಂತಹಂತವಾಗಿ 23 ವರ್ಷಗಳಷ್ಟು ದೀರ್ಘ ಅವಧಿಯಲ್ಲಿ ಪ್ರವಾದಿಯವರಿಗೆ ಬೋಧಿಸಿದರು. ಈ ಪಾವನ ರಾತ್ರಿಯಂದು ತನ್ನ ದೂತರಿಗೆ ಅಲ್ಲಾಹನು ಪ್ರತೀ ವ್ಯಕ್ತಿ ಮತ್ತು ಜನ ಸಮುದಾಯದ ಬಗೆಗಿನ ಒಳಿತು ಕೆಡುಕಿನ ತೀರ್ಮಾನಗಳನ್ನು ಒಪ್ಪಿಸುತ್ತಾನೆ.

ಅದನ್ನು ದೇವದೂತರು ಕಾರ್ಯರೂಪಕ್ಕೆ ತರುತ್ತಾರೆ ಎಂದು ಹೇಳಲಾಗುತ್ತದೆ. ಅಂದರೆ ಈ ಪಾವನ ರಾತ್ರಿಯಂದು ಭೂಮಿಯಲ್ಲಿರುವ ಸಕಲ ಪ್ರಾಣಿಗಳ, ಮನುಷ್ಯರ ಪಾಪ-ಪುಣ್ಯಗಳ ಪಟ್ಟಿಯನ್ನು ದೇವದೂತರು ತಯಾರಿಸುತ್ತಾರೆ. ಈ ರಾತ್ರಿಯ ಪ್ರಭಾವವನ್ನು ಅರಿತ ಭೂಮಿಯ ಮೇಲಿರುವ ಪ್ರಾಣಿ ಪಕ್ಷಿಗಳು, ಮರಗಿಡ ಬಳ್ಳಿಗಳು, ವಾಯು ನೀರು ಎಲ್ಲವೂ ಶಾಂತವಾಗಿದ್ದು ದೇವರನ್ನು ಸ್ತುತಿಸುತ್ತವೆ ಎನ್ನಲಾಗುತ್ತದೆ. ಈ ಕಾರಣಕ್ಕಾಗಿ ನಿರ್ದಿಷ್ಟ ದಿನ ಯಾವುದೆಂಬ ಕುತೂಹಲ ಇನ್ನೂ ಹಾಗೆಯೇ ಉಳಿದಿದೆ. ಈ ರಾತ್ರಿಯು ರಮಝಾನಿನ 13, 17, 19,21 ಅಥವಾ 27ನೆಯ ದಿನಾಂಕ ಇರಬಹುದೆಂದು ಧರ್ಮ ಪಂಡಿತರಲ್ಲಿ ಅಭಿಪ್ರಾಯ ಬೇಧವಿದೆ. ಆದರೆ ರಮಝಾನಿನ ೨೭ನೆಯ ದಿನವನ್ನು ಲೈಲತುಲ್ ಕದ್ರ್ ಎಂದು ಹೆಚ್ಚುಕಮ್ಮಿ ಎಲ್ಲ ಒಮ್ಮತದ ಅಭಿಪ್ರಾಯಪಡುತ್ತಾರೆ. ಈ ರಾತ್ರಿಯಂದು ನಮಾಝ್, ದೇವರ ನಾಮದ ದಿಕ್ರ್(ಜಪ) ಮಾಡಿ ರಾತ್ರಿ ಕಳೆಯುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.