ADVERTISEMENT

ಯಜ್ಞಗಳ ಅರ್ಥ

ವೇದ 8

ಪಶ್ಚಿಮದ ಅರಿವು /ಹಾರಿತಾನಂದ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST

ವೇದಗಳನ್ನು ಪ್ರಧಾನವಾಗಿ ಯಜ್ಞಗಳನ್ನು ನಿರ್ವಹಿಸಲು ಒದಗುವ ಮಂತ್ರಗಳು ಎನ್ನಬಹುದು. ಆದರೆ ‘ಯಜ್‌’ ಎಂಬ ಧಾತುವಿನಿಂದ ಸಿದ್ಧವಾಗುವುದು ಯಜ್ಞ ಎಂಬ ಶಬ್ದ. ಈ ಧಾತುವಿಗೆ ಹಲವು ಅರ್ಥಗಳಿವೆ. ಈ ಎಲ್ಲ ಅರ್ಥಗಳ ಹಿನ್ನೆಲೆಯಿಂದ ಹೇಳುವುದಾದರೆ ಅಲೌಕಿಕ ಶಕ್ತಿಯೊಂದಕ್ಕೆ ಮಣಿದು, ನಮ್ಮಲ್ಲಿರುವ ವಸ್ತುಗಳನ್ನು ಕೃತಜ್ಞತೆಯಿಂದ ಮತ್ತೆ ಅದಕ್ಕೆ ಸಲ್ಲಿಸುವ ಎಲ್ಲಾ ಕಾರ್ಯಗಳು ‘ಯಜ್ಞ’ ಎಂದೆನಿಸಿಕೊಳ್ಳುತ್ತವೆ. ಈ ವಿಶಾಲವಾದ ಅರ್ಥದಿಂದ ನೋಡಿದಾಗ ನಾವು ಮಾಡುವ ಪ್ರತಿಯೊಂದು ಕೆಲಸವೂ ಯಜ್ಞವೇ ಆಗುತ್ತದೆ. ಹೀಗಿದ್ದರೂ ಕೂಡ ಯಜ್ಞವನ್ನು ಹಲವು ನೆಲೆಗಳಲ್ಲಿ ಅರ್ಥೈಸಿ, ಅವುಗಳ ಆಚರಣೆಗೆ ನಿರ್ದಿಷ್ಟ ಕ್ರಮಗಳನ್ನು ವಿವರಿಸಿರುವುದೂ ಉಂಟು. ಆದುದರಿಂದ ಯಜ್ಞವನ್ನು ಕುರಿತು ಮಾತನಾಡುವಾಗ ಆ ಸಂದರ್ಭವನ್ನು ಅರಿತು ಅರ್ಥ ಮಾಡಬೇಕಾಗುತ್ತದೆ. ಭಗವದ್ಗೀತೆಯ ಪ್ರಸಿದ್ಧ ಶ್ಲೋಕವೊಂದು ಯಜ್ಞವನ್ನು ಹೀಗೆ ನಿರೂಪಿಸಿದೆ:

ಅನ್ನಾದ್ಭವಂತಿ ಭೂತಾನಿ
ಪರ್ಜನ್ಯಾದನ್ನಸಂಭವಃ |
ಯಜ್ಞಾದ್ಭವತಿ ಪರ್ಜನ್ಯಃ
ಯಜ್ಞಃ ಕರ್ಮಸಮುದ್ಭವಃ ||

‘ಎಲ್ಲ ಜೀವಿಗಳ ಬೆಳವಣಿಗೆಗೆ ಅನ್ನವೇ ಕಾರಣ. ಅನ್ನವು ಮಳೆಯಿಂದ ಉಂಟಾಗುತ್ತದೆ. ಯಜ್ಞಗಳಿಂದ ಮಳೆಯು ಉಂಟಾಗುತ್ತದೆ. ಆ ಯಜ್ಞಗಳು ಕರ್ಮದಿಂದ ನಡೆಯು‌ತ್ತವೆ’. ಇದು ಈ ಶ್ಲೋಕದ ಸರಳವಾದ ಅರ್ಥ.

ADVERTISEMENT

ಎಲ್ಲ ಜೀವಗಳೂ ಆಹಾರದಿಂದಲೇ ಬದುಕುತ್ತವೆಯಷ್ಟೆ. ಆಹಾರ ತಯಾರಾಗಲು ಬೆಳೆ ಬೇಕು. ಬೆಳೆಗೆ ನೀರು ಅನಿವಾರ್ಯ. ನೀರಿಗೆ ಆಧಾರ ಮಳೆ. ಈ ಮಳೆಗೆ ಕಾರಣವಾಗುವುದು ಯಜ್ಞ ಎನ್ನುತ್ತಿದೆ ಗೀತೆ. ಮಳೆಗೆ ಯಜ್ಞ ಹೇಗೆ ಕಾರಣವಾಗುತ್ತದೆ ಎಂದು ಇಲ್ಲಿ ವಿಮರ್ಶಿಸಬೇಕಾಗುತ್ತದೆ. ವಿಜ್ಞಾನದ ಹಿನ್ನೆಲೆಯಲ್ಲಿ ಯೋಚಿಸಿ ನಾವು ವೈಜ್ಞಾನಿಕವಾಗಿಯೇ ವೇದಗಳನ್ನು ಅರ್ಥೈಸುತ್ತೇವೆ ಎಂದು ಕೆಲವರು ಹಟವನ್ನು ತೊಟ್ಟು ಮಾತನಾಡುವುದುಂಟು. ಆದರೆ ವೇದ ‘ವಿಜ್ಞಾನ’ ಅಲ್ಲ. ವೇದಗಳ ಉದ್ದೇಶ ಜೀವನಕ್ಕೆ ಬೇಕಾದ ವಿವೇಕವನ್ನು ನೀಡುವುದು. ಅದನ್ನು ಸಂಕೇತಗಳ ಮೂಲಕ, ಧ್ವನಿಯ ಮೂಲಕ, ಪ್ರತಿಮೆಗಳ ಮೂಲಕ ಒದಗಿಸುತ್ತಿರುತ್ತವೆ. ಈ ಸಂಕೇತಗಳ ಗೂಡಾರ್ಥವು ನಮಗೆ ಎಟುಕದೇ ಹೋದರೆ ವೇದದ ನಿಜವಾದ ಅರ್ಥ ತಿಳಿಯದಂತಾಗುತ್ತದೆ. ಆಗ ಇಂದಿನ ಯಾವುದೋ ಒಂದು ಶಾಸ್ತ್ರದ ಹಿನ್ನೆಲೆಯಲ್ಲಿ ಅರ್ಥ ಮಾಡಲು ತೊಡಗಿದರೆ ಆಗ ವೇದಕ್ಕೂ ಅಪಮಾನ ಮಾಡಿದಂತೆ ಮತ್ತು ಆ ಶಾಸ್ತ್ರಕ್ಕೂ ಅಪಮಾನ ಮಾಡಿದಂತೆಯೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.