ADVERTISEMENT

ಕಡಿಮೆ ಬೆಲೆಗೆ ಸಾಕಷ್ಟು ಸವಲತ್ತು: ಮೈಕ್ರೋಸಾಫ್ಟ್‌ ಲುಮಿಯಾ 532

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 8:57 IST
Last Updated 16 ಜೂನ್ 2018, 8:57 IST

ನೀಡುವ ಹಣಕ್ಕೆ ಉತ್ತಮ ಎನ್ನಬಹುದಾದ ಕಡಿಮೆ ಬೆಲೆಯ ವಿಂಡೋಸ್‌ ಫೋನ್ ಮೈಕ್ರೋಸಾಫ್ಟ್‌ ಲುಮಿಯಾ 532.

ನೋಕಿಯಾ ಕಂಪೆನಿಯ ಮೊಬೈಲ್ ವಿಭಾಗವನ್ನು ಮೈಕ್ರೋಸಾಫ್ಟ್  ಕೊಂಡುಕೊಂಡ ನಂತರ ಹಲವು ಮಾದರಿಯ ಲುಮಿಯಾ ಫೋನ್‌ಗಳು ಮಾರುಕಟ್ಟೆಯನ್ನು ತುಂಬಿವೆ. ಪ್ರಾರಂಭದಲ್ಲಿ ದುಬಾರಿ ಬೆಲೆಯ ಫೋನ್‌ಗಳನ್ನು ಹೊರತಂದರೂ ನಂತರ ಮಾರುಕಟ್ಟೆಯನ್ನು ಅರ್ಥಮಾಡಿಕೊಂಡ ಮೈಕ್ರೋಸಾಫ್ಟ್ ಮಧ್ಯಮ ಮತ್ತು ಕಡಿಮೆ ಬೆಲೆಯ ಲುಮಿಯಾ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡತೊಡಗಿದೆ. ಮಧ್ಯಮ ಬೆಲೆಯ ಮೈಕ್ರೋಸಾಫ್ಟ್ ಲುಮಿಯಾ 640 ಎಕ್ಸ್ಎಲ್ ಫೋನಿನ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಈ ಸಲ ಒಂದು ಕಡಿಮೆ ಬೆಲೆಯ ಲುಮಿಯಾ ಫೋನಿನ ಕಡೆ ನಮ್ಮ ಗಮನ. ಅದುವೇ ಮೈಕ್ರೋಸಾಫ್ಟ್ ಲುಮಿಯಾ 532 (Microsoft Lumia 532).

ಗುಣವೈಶಿಷ್ಟ್ಯಗಳು
1.2 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Quad-core 1.2 GHz Snapdragon 200), ಗ್ರಾಫಿಕ್ಸ್‌ಗೆ ಪ್ರತ್ಯೇಕ ಪ್ರೊಸೆಸರ್, 1+8 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್‌ ಹಾಕುವ ಸೌಲಭ್ಯ, ಎರಡು ಮೈಕ್ರೋ ಸಿಮ್, 4 ಇಂಚು ಗಾತ್ರದ 800x480 ಪಿಕ್ಸೆಲ್ ರೆಸೊಲೂಶನ್‌ನ ಪರದೆ, 5 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 0.3 ಮೆಗಾಪಿಕ್ಸೆಲ್‌ನ ಇನ್ನೊಂದು (ಎದುರುಗಡೆಯ ಸ್ವಂತೀ) ಕ್ಯಾಮೆರಾ, ವಿಡಿಯೊ ಚಿತ್ರೀಕರಣ, ವೈಫೈ, ಬ್ಲೂಟೂತ್, ಎಫ್ಎಂ ರೇಡಿಯೊ, 118.9x65.5x 11.6 ಮಿ.ಮೀ. ಗಾತ್ರ, 136.3ಗ್ರಾಂ ತೂಕ, 1560mAh ಶಕ್ತಿಯ ತೆಗೆಯಬಹುದಾದ, ಬದಲಿಸಬಹುದಾದ ಬ್ಯಾಟರಿ, ನಾಲ್ಕು ಬಣ್ಣಗಳಲ್ಲಿ ಲಭ್ಯ, ಇತ್ಯಾದಿ. ನಿಗದಿತ ಬೆಲೆ ₹6,349. ಕೆಲವು ಜಾಲತಾಣಗಳಲ್ಲಿ ₹ 5,500ಕ್ಕೂ ದೊರೆಯುತ್ತಿದೆ.

 ಈ ಫೋನಿನ ವಿಮರ್ಶೆಯನ್ನು ಓದುವ ಮುನ್ನ ಈ ಫೋನಿನ ಬೆಲೆಯ ಕಡೆ ಮೊದಲು ಗಮನ ಹರಿಸಬೇಕು. ಇದು ಕಡಿಮೆ ಬೆಲೆಯ ಫೋನ್. ದುಬಾರಿ ಬೆಲೆಯ ಫೋನ್‌ಗಳ ಜೊತೆ ಇದನ್ನು ಹೋಲಿಸಬಾರದು. ನಮಗೆ ದೊರೆಯುವ ಉತ್ಪನ್ನ ಮತ್ತು ಅದರಲ್ಲಿರುವ ಸವಲತ್ತುಗಳ ಗುಣಮಟ್ಟ ನಾವು ನೀಡುವ ಹಣಕ್ಕೆ ಸರಿಹೊಂದುತ್ತದೆಯೇ ಎಂಬುದಷ್ಟೇ ಈ ವಿಮರ್ಶೆಯ ಉದ್ದೇಶ. ಈ ವಿಮರ್ಶೆ ಮಾತ್ರವಲ್ಲ ಎಲ್ಲ ವಿಮರ್ಶೆಗಳ ಉದ್ದೇಶವೂ ಇದೇ ಆಗಿದೆ. ಈ ಫೋನ್ ಸಂಪೂರ್ಣ ಪ್ಲಾಸ್ಟಿಕ್‌ನಿಂದ ತಯಾರಾದುದು. ಇದರ ರಚನೆ ಮತ್ತು ವಿನ್ಯಾಸ ಬಹುಮಟ್ಟಿಗೆ ನೋಕಿಯಾ ಕಂಪೆನಿಯ ತುಂಬ ಜನಪ್ರಿಯವಾಗಿದ್ದ ಆಶಾ ಫೋನಿನಿಂದ ಎರವಲು ಪಡೆದುದಾಗಿದೆ.

ಫೋನಿನ ಎದುರುಗಡೆ ಕೆಳಭಾಗದಲ್ಲಿರುವ ವಿಂಡೋಸ್ ಲಾಂಛನ ಮತ್ತು ಫೋನಿನ ಮೇಲ್ಭಾಗದಲ್ಲಿ ಮೈಕ್ರೋಸಾಫ್ಟ್ ಎಂದು ಬರೆದುದನ್ನು ಗಮನಿಸದಿದ್ದರೆ ಇದು ಆಶಾ ಫೋನ್ ಎಂದು ತಪ್ಪು ತಿಳಿಯುವ ಸಾಧ್ಯತೆಯಿದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಭಾಗದಲ್ಲಿ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಮತ್ತು ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಗಳಿವೆ. ಎದುರುಗಡೆ ಕೆಳಭಾಗಲ್ಲಿ ಮೂರು ಸಾಫ್ಟ್ ಬಟನ್‌ಗಳಿವೆ.

ADVERTISEMENT

ಇವು ಪರದೆಯಿಂದ ಪ್ರತ್ಯೇಕವಾಗಿರುವುದು ಉತ್ತಮ ಸೌಲಭ್ಯ ಎನ್ನಬಹುದು. ಲುಮಿಯಾ 640 ಎಕ್ಸ್ಎಲ್ ಫೋನಿನಲ್ಲಿ ಈ ಬಟನ್‌ಗಳು ಪರದೆಯಲ್ಲೇ ಕೆಳಭಾಗದಲ್ಲಿ ಅಗತ್ಯ ಬಂದಾಗ ಮೂಡಿಬರುತ್ತವೆ. ಅದಕ್ಕಿಂತ ಈ 532ರಲ್ಲಿ ನೀಡಿರುವ ಪ್ರತ್ಯೇಕ ಬಟನ್‌ಗಳು ಉತ್ತಮ ಎಂದು ನನ್ನ ವೈಯಕ್ತಿಕ ಅಭಿಪ್ರಾಯ. ಕೆಲವು ಲುಮಿಯಾ ಫೋನ್‌ಗಳಲ್ಲಿರುವಂತೆ ಈ ಫೋನಿನಲ್ಲಿ ಕ್ಯಾಮೆರಾಕ್ಕೆ ಪ್ರತ್ಯೇಕ ಬಟನ್ ಇಲ್ಲ. ಹಿಂಭಾಗದ ಕವಚ ಮಧ್ಯದಲ್ಲಿ ಉಬ್ಬಿದ್ದು ತಲೆದಿಂಬಿನಾಕಾರದಲ್ಲಿದೆ.

1 1.2ಗಿಗಾಬೈಟ್ ಮೆಮೊರಿ ಇದೆ. ಇದು ಆಂಡ್ರಾಯ್ಡ್‌ ಫೋನ್‌ಗಳಿಗಾದರೆ ಅಲ್ಲಿಂದಲ್ಲಿಗೆ ಸಾಕು. ಆದರೆ ಲುಮಿಯಾ ಫೋನಿಗೆ ಇದು ಧಾರಾಳ ಸಾಕು. ಅಂದರೆ ಇದರ ಕೆಲಸದ ವೇಗ ತೃಪ್ತಿದಾಯಕವಾಗಿದೆ ಎನ್ನಬಹುದು. ಮೂರು ಆಯಾಮಗಳ ಆಟ ಆಡುವ ಅನುಭವ ವೇಗದ ಮಟ್ಟಿಗೆ ತೃಪ್ತಿದಾಯಕವಾಗಿದೆ. ಪರದೆಯ ಗುಣಮಟ್ಟ ಅಂತಹ ಹೇಳಿಕೊಳ್ಳುವಂತೇನೂ ಇಲ್ಲ. ವೀಕ್ಷಣೆಯ ವ್ಯಾಪ್ತಿಯೂ (viewing angle) ಚೆನ್ನಾಗಿಲ್ಲ. ಆದುದರಿಂದ ಆಟ ಆಡುವಾಗ ವೇಗವೇನೋ ಚೆನ್ನಾಗಿದ್ದರೂ ವೀಕ್ಷಣೆಯ ಅನುಭವ ಮಾತ್ರ ಅಷ್ಟಕ್ಕಷ್ಟೆ.

ಪರದೆಯ ರೆಸೊಲೂಶನ್ 800 x480 ಆಗಿದ್ದರೂ ಹೈಡೆಫಿನಿಶನ್ ವಿಡಿಯೊಗಳನ್ನೂ ಪ್ಲೇ ಮಾಡಬಹುದು. ಎಲ್ಲೂ ಅಡೆತಡೆ ಎಂದು ಅನ್ನಿಸಲಿಲ್ಲ. ಆದರೆ 4k ವಿಡಿಯೊಗಳನ್ನು ಪ್ಲೇ ಮಾಡಲಿಲ್ಲ. ಇದರ ಆಡಿಯೊ ಇಂಜಿನ್ ಉತ್ತಮ ಎನ್ನುವಂತಿಲ್ಲದಿದ್ದರೂ ನೀಡುವ ಹಣಕ್ಕೆ ಮೋಸವಿಲ್ಲ ಎನ್ನಬಹುದು. ಎಫ್ಎಂ ರೇಡಿಯೊ ಅಥವಾ ಸಂಗೀತ ಆಲಿಸುವ ಅನುಭವ ಕೆಟ್ಟದಾಗೇನೂ ಇಲ್ಲ.

ಉತ್ತಮ ಅಥವಾ ತೃಪ್ತಿದಾಯಕವಾದ ಕ್ಯಾಮೆರಾ ಬೇಕು ಎನ್ನುವವರಿಗೆ ಮಾತ್ರ ಈ ಫೋನ್ ಹೇಳಿದ್ದಲ್ಲ. ಕ್ಯಾಮೆರಾಕ್ಕೆ ಆಟೋಫೋಕಸ್ ಇಲ್ಲ. 60 ಸೆ.ಮೀ.ಗಿಂತ ಹತ್ತಿರದ ವಸ್ತುವಿನ ಫೋಟೊ ತೆಗೆದರೆ ಜಾಳುಜಾಳಾಗಿ ಮೂಡಿಬರುತ್ತದೆ. ಅದಕ್ಕಿಂತ ದೂರದ ಎಲ್ಲ ವಸ್ತುಗಳು ಇದಕ್ಕೆ ಅನಂತದೂರ (infinity) ಎಂದು ಪರಿಗಣಿಸಲ್ಪಡುತ್ತವೆ. ಕ್ಯಾಮೆರಾಕ್ಕೆ ಫ್ಲಾಶ್ ಕೂಡ ಇಲ್ಲ. ಕಡಿಮೆ ಬೆಳಕಿನಲ್ಲಿ ಅಥವಾ ರಾತ್ರಿ ಹೊತ್ತಿನಲ್ಲಿ ತೆಗೆದ ಫೋಟೊಗಳು ಚೆನ್ನಾಗಿ ಮೂಡಿಬರುವುದಿಲ್ಲ. ವಿಡಿಯೊ ರೆಕಾರ್ಡಿಂಗ್ ಕೂಡ ಚೆನ್ನಾಗಿಲ್ಲ. ಒಟ್ಟಿನಲ್ಲಿ ಕ್ಯಾಮೆರಾ ಚೆನ್ನಾಗಿಲ್ಲ ಎಂದೇ ಹೇಳಬಹುದು.

ಇದರ ಬ್ಯಾಟರಿ ಚೆನ್ನಾಗಿದೆ. ಬಳಕೆಯನ್ನು ಅನುಸರಿಸಿ ಒಂದರಿಂದ ಎರಡು ದಿನ ಬಾಳಿಕೆ ಬರುತ್ತದೆ. ಈ ಫೋನ್ ಬಳಸುವುದು ವಿಂಡೋಸ್ 8.1 ಕಾರ್ಯಾಚರಣ ವ್ಯವಸ್ಥೆಯನ್ನು. ಎಲ್ಲ ವಿಂಡೋಸ್ ಫೋನ್‌ಗಳಂತೆ ಇದರಲ್ಲೂ ಕನ್ನಡದ ತೋರುವಿಕೆ ಸರಿಯಿದೆ. ಆದರೆ ಕೀಲಿಮಣೆ ಇಲ್ಲ. ಪ್ರತ್ಯೇಕ ನೋಟ್‌ಪ್ಯಾಡ್ ಮಾದರಿಯ ಕಿರುತಂತ್ರಾಂಶ (ಆಪ್) ಹಾಕಿಕೊಂಡು ಅದರಲ್ಲಿ ಕನ್ನಡವನ್ನು ಊಡಿಸಿ ನಿಮಗೆ ಬೇಕಾದ ಕಿರುತಂತ್ರಾಂಶಕ್ಕೆ ಅಂಟಿಸಬೇಕು. ಈ ತೊಂದರೆ ವಿಂಡೋಸ್ 10ರಲ್ಲಿ ನೀಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.