ADVERTISEMENT

ನಮಗರಿವಿಲ್ಲದ ಶಕ್ತಿ

ಡಾ. ಗುರುರಾಜ ಕರಜಗಿ
Published 24 ಮಾರ್ಚ್ 2014, 19:30 IST
Last Updated 24 ಮಾರ್ಚ್ 2014, 19:30 IST

ಈ ಘಟನೆ ಇತ್ತೀಚಿಗೆ ಅಮೇರಿಕೆಯ ಫ್ಲಾರಿಡಾದಲ್ಲಿ ನಡೆಯಿತೆಂದು ವರದಿ­ಯಾಗಿದೆ. ಆಕೆ ಒಬ್ಬ ಹಿರಿಯ ವಯಸ್ಸಿನ ಮಹಿಳೆ. ಸುಮಾರು ಎಪ್ಪತ್ತು ವರ್ಷ ವಯಸ್ಸು ಇದ್ದೀತು.  ಕಳೆದ ವರ್ಷ ಹೃದಯದ ತೊಂದರೆಯಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಎರಡೂ ಮೊಣಕಾಲುಗಳಲ್ಲಿ ವಿಪರೀತ ನೋವು, ನಡೆಯುವುದೇ ಕಷ್ಟದ ಕೆಲಸ. ಇಂಥ ಸ್ಥಿತಿಯಲ್ಲಿ ಆಕೆಗೆ ಒಂದು ದಿನ ಹತ್ತಿರದಲ್ಲಿದ್ದ ಶಾಪಿಂಗ್ ಮಾಲ್‌ಗೆ ಹೋಗಿ ಸಾಮಾನುಗಳನ್ನು ತರಬೇಕಾ­ಯಿತು.

ಯಾಕೆಂದರೆ ಆಕೆಯ ಜೊತೆಗಿದ್ದ ಮಗಳು ಕಾರ್ಯನಿಮಿತ್ತ ಬೇರೆ ಊರಿಗೆ ಹೋಗಿದ್ದಾಳೆ.  ಅಜ್ಜಿ ತನ್ನ ಕಾರು ತೆಗೆದುಕೊಂಡು ಮಾಲ್‌ಗೆ ಹೋದಳು. ಒಬ್ಬಳೇ ಇರುವುದರಿಂದ ಜೊತೆಗೆ ಇರಲಿ ಎಂದು ತನ್ನ ಪಿಸ್ತೂಲನ್ನೂ ಕೈಚೀಲದಲ್ಲಿ ಇಟ್ಟು­ಕೊಂಡಿದ್ದಳು. ಸಾಮಾನುಗಳನ್ನು ಖರೀದಿಸಿ ಅವುಗಳನ್ನು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ತನ್ನ ಕಾರಿನ ಹತ್ತಿರ ಬಂದಳು. ಹತ್ತಿರ ಬಂದಾಗ ಅಲ್ಲಿಯ ದೃಶ್ಯವನ್ನು ನೋಡಿ ಹೌಹಾರಿದಳು.

ತನ್ನ ಕಾರಿನಲ್ಲಿ ನಾಲ್ಕು ಜನ ದಡೂತಿ ಕಪ್ಪು ಮನುಷ್ಯರು ಕುಳಿತಿದ್ದಾರೆ. ಅದರಲ್ಲೊಬ್ಬ ಇನ್ನೇನು ಕಾರನ್ನು ಚಾಲೂ ಮಾಡಿ ಹೊರಡುವುದರಲ್ಲಿದ್ದ. ಈ ಕಳ್ಳರು ತನ್ನ ಕಾರನ್ನು ಅಪಹರಿಸಲು ಬಂದಿದ್ದಾರೆ ಎಂಬುದು ಖಾತ್ರಿಯಾಯಿತು ಅಜ್ಜಿಗೆ. ತಕ್ಷಣವೇ ಆಕೆ ತನ್ನ ತಳ್ಳುಗಾಡಿಯಲ್ಲಿದ್ದ ಸಾಮಾನುಗಳನ್ನು ಬಿಟ್ಟು ಕೈಚೀಲ­ದಲ್ಲಿದ್ದ ಪಿಸ್ತೂಲನ್ನು ಹೊರತೆಗೆದು ಜೋರಾಗಿ ಕಿರಿಚಿದಳು, ‘ಹೇ ಕಾರು ಕಳ್ಳತನ ಮಾಡೋದಿಕ್ಕೆ ಬಂದಿದ್ದೀ­ರೇನ್ರೋ? ನನ್ನ ಹತ್ತಿರ ಪಿಸ್ತೂಲಿದೆ. ಒಂದು ಕ್ಷಣದಲ್ಲಿ ನೀವು ಕಾರಿನಿಂದ ಹೊರಗೆ ಬಂದು ಓಡದಿದ್ದರೆ ನಿಮ್ಮನ್ನೆಲ್ಲ ತಕ್ಷಣ ಸುಟ್ಟು ಹಾಕಿಬಿಡುತ್ತೇನೆ’. ಹೀಗೆ ಹೇಳುತ್ತ ಆಕೆ ಮತ್ತಷ್ಟು ಕಾರಿನ ಹತ್ತಿರ ಬಂದಳು. ಕಾರಿನಲ್ಲಿ ಕುಳಿತವರಿಗೆ ಮತ್ತೊಂದು ಆಮಂತ್ರಣ ಬೇಕಿರಲಿಲ್ಲ. ಒಂದು ಗಳಿಗೆ ಗಲಿಬಿಲಿಯಾದಂತೆ ತೋರಿದ ಅವರೆಲ್ಲ ಕಾರಿನಿಂದ ಹೊರಗೆ ಧುಮುಕಿ ಜೀವದಾಸೆಯಿಂದ ಓಡಿಹೋದರು.

ಅವರೆಲ್ಲ ಹೊರಟು ಹೋದರೂ ಗಾಬರಿಯಿಂದ, ಆತಂಕದಿಂದ ಅಜ್ಜಿಯ ಕೈಗಳು ನಡುಗುತ್ತಿದ್ದವು. ಪಿಸ್ತೂಲನ್ನು ಮರಳಿ ಕೈ ಚೀಲದಲ್ಲಿ ಇಟ್ಟುಕೊಂಡು ಸಾಮಾನುಗಳನ್ನು ಕಾರಿನ ಡಿಕ್ಕಿಯಲ್ಲಿ ಹಾಕಲು ಪ್ರಯತ್ನಿಸಿದಳು. ಕೀಲಿಯನ್ನು ತೆರೆಯಲಾಗುತ್ತಿಲ್ಲ. ತನ್ನ ಕೈ ನಡುಗು­ತ್ತಿದ್ದುದರಿಂದಲೋ ಅಥವಾ ಕಳ್ಳರು ಅದನ್ನು ತೆರೆಯಲೆಂದು ಹಾನಿ­ಮಾಡಿದ್ದರಿಂದಲೋ ಆಗಿರಲಿ­ಕ್ಕಿಲ್ಲ­ವೆಂದುಕೊಂಡು ಸಾಮಾನುಗಳನ್ನು ಹಿಂದಿನ ಸೀಟಿನಲ್ಲಿಟ್ಟು ಚಾಲಕನ ಸ್ಥಾನದಲ್ಲಿ  ಕುಳಿತಳು.

ಕಾರು ಚಾಲೂ ಮಾಡಬೇಕೆಂದರೆ ತನ್ನ ಕೀಲೀ ಕೈ ಕಾರಿನ ಕೀಲಿಯೊಳಗೆ ಹೋಗುತ್ತಲೇ ಇಲ್ಲ! ಈಗ ಒಂದು ಕ್ಷಣ ನಿಧಾನವಾಗಿ ಶಾಂತಿಯಿಂದ ಕಾರಿನೊಳಗೆಲ್ಲ ನೋಡಿದಳು. ಆಕೆಗೆ ಆಗ ಅರಿವಾಯಿತು. ಇದು ತನ್ನ ಕಾರಲ್ಲ. ಇದು ಅದೇ ಕಂಪನಿಯ, ಅದೇ ಬಣ್ಣದ ಕಾರು. ಆಕೆ ನಿಧಾನವಾಗಿ ಕೆಳಗಿಳಿದು ಮುಂದೆ ಸುತ್ತಾಡಿ ನೋಡಿದರೆ ಸ್ವಲ್ಪ ದೂರದಲ್ಲಿ ತನ್ನ ಕಾರು ನಿಂತಿದೆ. ಸಾಮಾನುಗಳನ್ನೆಲ್ಲ ಎತ್ತಿಕೊಂಡು ಈ ಕಾರಿನ ಬಾಗಿಲನ್ನು ಮುಚ್ಚಿ ತನ್ನ ಕಾರಿಗೆ ನಡೆದಳು. ಈಗ ಆಕೆಗೆ ತನ್ನ ತಪ್ಪಿನ ಅರಿವಾಗಿತ್ತು. ಆದ್ದರಿಂದ ಆಕೆ ಹತ್ತಿರದ ಪೋಲೀಸ್ ಠಾಣೆಗೆ ಹೋಗಿ ಅಲ್ಲಿಯ ಅಧಿಕಾರಿಗೆ ನಡೆದ ವಿಷಯವನ್ನೆಲ್ಲ ತಿಳಿಸಿ ಆ ಕಾರು ಅಲ್ಲಿಯೇ ಇದೆಯೆಂತಲೂ ಅದಕ್ಕೆ ಬೀಗ ಹಾಕಲಿಲ್ಲವೆಂತಲೂ ತಿಳಿಸಿದಳು.

ಅದನ್ನು ಕೇಳಿದ ಪೋಲೀಸ್ ಅಧಿಕಾರಿ ಕುರ್ಚಿಯ ಮೇಲಿನಿಂದ ಹಾರಿ ಬಿದ್ದು ಬಿದ್ದು ನಕ್ಕ. ನಂತರ ನಿಧಾನವಾಗಿ ಸಾವರಿಸಿಕೊಂಡು ತನ್ನ ಕೋಣೆಯ ಹಿಂದೆ ಮೂಲೆಯಲ್ಲಿ ನಿಂತಿದ್ದ, ಬಿಳಿಚಿಕೊಂಡಿದ್ದ ನಾಲ್ಕು ಕಪ್ಪು ದಡೂತಿ ಅಸಾಮಿಗಳನ್ನು ತೋರಿಸಿದ. ಅವರು ಆಗ ತಾನೇ ದೂರು ಬರೆದುಕೊಟ್ಟಿದ್ದರು. ಅದರಲ್ಲಿ ಒಬ್ಬ ಕುಳ್ಳಗಿನ, ದಪ್ಪನಾದ, ಕನ್ನಡಕ ಧರಿಸಿದ ಮುದುಕಿಯೊಬ್ಬಳು ತಮ್ಮನ್ನು ಹೆದರಿಸಿ ಕಾರನ್ನು ಅಪಹರಿಸಿದ್ದಾಳೆ. ಆಕೆ ಬಹುಶಃ ಹುಚ್ಚಿಯಾಗಿರಬೇಕು. ಆದರೆ, ಆಕೆಯ ಬಳಿ ಒಂದು ಪ್ರಬಲವಾದ ಪಿಸ್ತೂಲಿದೆ ಎಂದು ಬರೆದಿದ್ದರು.

ನಂತರ ಅಧಿಕಾರಿ ಅವರನ್ನು ಕರೆದು ಪರಿಚಯ ಮಾಡಿದ. ಆಕೆ ತನ್ನ ತಪ್ಪು ಗ್ರಹಿಕೆಯಿಂದಾದ ಅಪಚಾರಕ್ಕೆ ಕ್ಷಮೆ ಕೇಳಿದಳು. ಅವರೆಲ್ಲ ಸ್ನೇಹದಿಂದ ನಕ್ಕು ಬೇರ್ಪಟ್ಟರು. ತನ್ನ ಅಶಕ್ತ ದೇಹದಲ್ಲಿ ಆ ಧೈರ್ಯವಿ­ದೆಯೆಂದು ಆ ಅಜ್ಜಿಗೆ ಎಂದೂ ತಿಳಿದಿರಲಿಲ್ಲ. ಆ ಕ್ಷಣದ ಪ್ರಚೋದನೆ ಅವಳಲ್ಲಿ ಸ್ಥೈರ್ಯವನ್ನು ತುಂಬಿ ನಾಲ್ಕು ಜನ ಬಲಿಷ್ಠರನ್ನು ಹೆದರಿಸಿ ಓಡಿಸುವಷ್ಟು ಬಲವಾಗಿತ್ತು.

ಅಪಾಯದ ಮುನ್ಸೂಚನೆ ಬಂದೊಡನೆ ನಮ್ಮಲ್ಲಿ ಸುಪ್ತವಾಗಿದ್ದ ಅಪಾರವಾದ ಶಕ್ತಿ ನುಗ್ಗಿ ಬರುತ್ತದೆ. ಅಷ್ಟು ಶಕ್ತಿ ನಮ್ಮಲ್ಲಿತ್ತೇ ಎಂದು ಆಶ್ಚರ್ಯವಾಗುವಷ್ಟು ಬಲ ಬಂದಿರುತ್ತದೆ. ಅದು ನಮ್ಮಲ್ಲಿದೆ ಎಂಬ ಅರಿವೂ ನಮಗಿರುವುದಿಲ್ಲ. ಬಹಳ ಬಾರಿ ಅದನ್ನು ನಾವು ಬಳಸುವುದೇ ಇಲ್ಲ. ಅದನ್ನು ನೆನಪಿಸಿಕೊಂಡು ಬಳಸಿದರೆ ಅದೆಷ್ಟು ಕೆಲಸ ಮಾಡಬಹುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.