ADVERTISEMENT

ಪ್ರೀತಿಯ ಶಕ್ತಿ

ಡಾ. ಗುರುರಾಜ ಕರಜಗಿ
Published 18 ಆಗಸ್ಟ್ 2014, 19:30 IST
Last Updated 18 ಆಗಸ್ಟ್ 2014, 19:30 IST

ಚಂಬಲ್ ನದಿ ಮಧ್ಯಪ್ರದೇಶದಲ್ಲಿ ಹುಟ್ಟಿ ಹರಿಯುವ ನದಿ. ಧೋಲ್‌ಪುರ ಎಂಬ ಗ್ರಾಮದ ಹತ್ತಿರ ಹುಟ್ಟುವ ನದಿ ಭಾರತದ ಬಹುತೇಕ ನದಿ­ಗಳಿಗಿಂತ ಕಡಿಮೆ ಮಲಿನವಾದದ್ದು ಎಂದು ಹೇಳುತ್ತಾರೆ. ಧೋಲ್‌ಪುರ್ ಹೇಗೆ ಚಂಬಲ್ ನದಿ ಉಗಮಕ್ಕೆ ಹೆಸರಾಗಿ­ದೆಯೋ ಹಾಗೆಯೇ ಚಂಬಲ್ ಕಣಿವೆಯ ಭಯಂಕರ ಢಕಾಯಿತರನ್ನು ಸೃಷ್ಟಿ ಮಾಡಿದ್ದಕ್ಕೂ ಹೆಸರಾಗಿದೆಯಂತೆ.

ಮಾಧೋ­ಸಿಂಗ್‌­ನನ್ನು ಡಕಾಯಿತರಲ್ಲಿ ಸಿಂಹವೆಂದು ಕರೆಯುತ್ತಿದ್ದರು. ಅವನ ಹೆಸರು ಹೇಳಿ­ದರೆ ಸಾಕು ಚಂಬಲ್ ಕಣಿವೆಯ ಶ್ರೀಮಂತರ ಗುಂಡಿಗೆಗಳು ನಡುಗುತ್ತಿದ್ದವು. ಮುಂದೆ ಹುಲಿ ಬಂದು ನಿಂತರೆ ಹೇಗಾದರೂ ಎದುರಿಸ­ಬಹುದು ಆದರೆ, ಮಾಧೋ­­ಸಿಂಗ್ ಎದುರಿಗೆ ಬಂದರೆ ಅದು ಯಮದರ್ಶನವೇ. ಅವನು ತಮ್ಮ ಹಳ್ಳಿಯ ಕಡೆಗೆ ಹೊರಟಿದ್ದಾನೆ ಎಂಬ ಸುದ್ದಿ ಏನಾದರೂ ಬಂದರೆ ಊರಿಗೆ ಊರೇ ಖಾಲಿಯಾ­ಗುತ್ತಿತ್ತು. ಒಂದು ಶ್ರಾವಣದ ಹುಣ್ಣಿಮೆಯ ದಿನ ಧೋಲ್‌ಪುರ್‌­ದಲ್ಲಿ  ಸಂಭ್ರಮ ಮನೆಮಾಡಿತ್ತು.

ಎಲ್ಲಿ ನೋಡಿದಲ್ಲಿ ಹೂವಿನ ಅಲಂಕಾರ. ಮನೆಮನೆ­ಗಳ ಮುಂದೆ ರಂಗೋಲಿಗಳ ಚಿತ್ತಾರ. ಅದು ರಕ್ಷಾ­ಬಂಧನದ ದಿನ. ಹೆಣ್ಣುಮಕ್ಕಳು ತಮ್ಮ ಅಣ್ಣ-ತಮ್ಮಂದಿರಿಗೆ ರಕ್ಷೆಯನ್ನು ಕಟ್ಟುವ ದಿನ. ಆ ಅಣ್ಣ-ತಮ್ಮಂದಿರುಗಳು ತಮ್ಮ ಸಹೋದರಿ­ಯರಿಗೆ ರಕ್ಷಣೆಯ ರಕ್ಷೆಯನ್ನು ನೀಡುವ ದಿನ. ಆ ಊರಿನ ಕೊತ್ವಾಲನ ಮಗಳು ಚಮೇಲಿಯ ಕಾಲುಗಳು ನೆಲದ ಮೇಲೆಯೇ ನಿಲ್ಲುತ್ತಿಲ್ಲ. ಸಂಭ್ರಮ­ದಿಂದ ಕುಣಿದು ಕುಪ್ಪಳಿಸುತ್ತಿದ್ದಳು. ಪ್ರತಿ­ವರ್ಷವೂ ಅವಳದೊಂದು ವಿಶೇಷ.

ಹೊಸಬಟ್ಟೆ ಧರಿಸಿ, ತಿಂಡಿ ತಿಂದು ಮನೆಯ ಮುಂದಿನ ಕಟ್ಟೆಯ ಮೇಲೆ ನೂರಾರು ಅಲಂಕಾರ ಮಾಡಿದ ರಕ್ಷೆಗಳನ್ನು ತಟ್ಟೆಯಲ್ಲಿಟ್ಟುಕೊಂಡು ಕುಳಿತು­ಕೊಳ್ಳು­ವಳು. ಅದರೊಂದಿಗೆ ಒಂದು ಗಂಧದ ಮತ್ತು ಕುಂಕುಮದ ಬಟ್ಟಲುಗಳು. ಮನೆಯ ಮುಂದಿನ ರಸ್ತೆಯಲ್ಲಿ ಹೋಗುವ ಪ್ರತಿಯೊಬ್ಬ ಗಂಡಸಿನ ಕೈಗೂ ರಕ್ಷೆ­ಯನ್ನು ಕಟ್ಟಲು ಆಕೆಗೆ ಭಾರಿ ಸಂತೋಷ. ಆಕೆಯನ್ನು ಕಂಡರೆ ಎಲ್ಲರಿಗೂ ಇಷ್ಟ­ವಾದ್ದ­ರಿಂದ ಎಲ್ಲ ಹುಡುಗರು, ಹಿರಿಯರು ಬೇಕೆಂದೇ ಇವಳ ಮನೆಯ ಮುಂದೆಯೇ ಬಂದು ರಕ್ಷೆಯನ್ನು ಕಟ್ಟಿಸಿಕೊಂಡು, ಕಾಣಿಕೆ ನೀಡಿ ಹೋಗುತ್ತಿದ್ದರು. ಅಂದು ಚಮೇಲಿಯ ಬುಟ್ಟಿ ಕಾಣಿಕೆಗಳಿಂದ, ತುಂಬಿ ಹೋಗುತ್ತಿತ್ತು.

ಅವಳು ತಲೆ ತಗ್ಗಿಸಿ ರಕ್ಷೆ ಕಟ್ಟುತ್ತಲೇ ಇದ್ದಳು.  ಆಗ ಅವಳ ಮನೆಯ ಮುಂದಿದ್ದ ಜನ ಓಡತೊಡಗಿದರು. ಕ್ಷಣಾರ್ಧದಲ್ಲಿ ರಸ್ತೆ ಖಾಲಿಯಾಯಿತು, ಮನೆಗಳ ಬಾಗಿಲು­ಗಳು ಮುಚ್ಚತೊಡ­ಗಿದವು. ಚಮೇಲಿ ತಲೆ ಎತ್ತಿ ನೋಡಿದರೆ ಮುಂದೆ ಒಬ್ಬ ಆಜಾನುಬಾಹು ವ್ಯಕ್ತಿ ನಿಂತಿದ್ದಾನೆ. ಅವನ ಕೆಂಪುಕಣ್ಣುಗಳು,  ಭಾರಿ ಮೀಸೆ, ಕೆಂಪು ರುಮಾಲು, ಹೆಗಲ ಮೇಲೆ ಇಳಿ ಬಿದ್ದಿದ್ದ ಎರಡು ಭಾರಿ ಗಾತ್ರದ ಬಂದೂಕು­ಗಳು ಮತ್ತು ಎದೆಯ ಮೇಲೆ ಹರಡಿದ ಗುಂಡುಗಳ ಸರಪಳಿ ಅವನೇ ಮಾಧೋ­ಸಿಂಗ್ ಎಂದು ಸಾರಿ ಹೇಳಿದವು.

ಚಮೇಲಿಗೆ ಗಾಬರಿಯಾ­ಯಿತು. ಆಕೆ ಎದ್ದು ಓಡಿ­ಹೋಗಲೂ ಆಗದು. ಯಾಕೆಂದರೆ ಅವನು ಮುಂದೆಯೇ ನಿಂತಿದ್ದಾನೆ. ಸಿಡಿಲಿ­ನಂತಹ ಅವನ ಧ್ವನಿ ಗುಡುಗಿತು, ‘ಏ ಹುಡುಗಿ, ನನಗೆ ರಕ್ಷೆ ಕಟ್ಟುವುದಿಲ್ಲವೇನೇ?’ ಒಂದೆರಡು ಗಳಿಗೆ ತಡಬಡಿಸಿದ ಹೃದಯವನ್ನು ಧೃಡತೆಗೆ ತಂದುಕೊಂಡು ಚಮೇಲಿ ಕೇಳಿದಳು, ‘ಕಟ್ಟುತ್ತೇನೆ ಅಣ್ಣಾ, ಆದರೆ ನೀನು ನನಗೆ ಯಾವ ಕಾಣಿಕೆ ಕೊಡುತ್ತೀ?’ ಆತ ಅಬ್ಬರಿಸಿ ನಕ್ಕ, ‘ನಿನಗೇನು ಬೇಕು ಹೇಳು. ಇಡೀ ಧೋಲ್‌ಪುರ ಕೊಟ್ಟು ಬಿಡಲೇ?’ ಚಮೇಲಿ ಧೈರ್ಯದಿಂದ ಹೇಳಿದಳು, ‘ನಿನಗೆ ರಕ್ಷೆ ಕಟ್ಟಿದ ಮೇಲೆ ನೀನು ನನ್ನ ಅಣ್ಣನೇ. ನನಗೆ ಕೆಟ್ಟ ಅಣ್ಣ ಬೇಡ. ಈಗ ಎಲ್ಲರೂ ನಿನ್ನನ್ನು ಕಂಡರೆ ಹೆದರು­ತ್ತಾರೆ, ದ್ವೇಷಿಸುತ್ತಾರೆ.

ಎಲ್ಲ ಕೆಟ್ಟ ಕೆಲಸಗಳನ್ನು ಬಿಟ್ಟು ಎಲ್ಲರಿಗೆ ಪ್ರಿಯವಾಗುವಂತೆ ಇರುವುದಾದರೆ ಪ್ರೀತಿಯಿಂದ ರಕ್ಷೆ ಕಟ್ಟುತ್ತೇನೆ’. ಆತ ಕಣ್ಣುಮುಚ್ಚಿ ಒಂದು ಕ್ಷಣ ನಿಂತ.  ನಂತರ ಮುಗುಳ್ನಕ್ಕು ಹೇಳಿದ, ‘ಆಯ್ತು ತಂಗಿ, ರಕ್ಷೆ ಕಟ್ಟು. ಈ ಕ್ಷಣದಿಂದ ಮಾಧೋಸಿಂಗ್ ಒಂದೂ ಕೆಟ್ಟ ಕೆಲಸ ಮಾಡುವುದಿಲ್ಲ. ನನ್ನನ್ನು ನಂಬು’.  ಆಮೇಲೆ ಬಲಗೈ ಮುಂದೆ ಚಾಚಿ ನಿಂತ. ನಗುತ್ತಲೇ ಚಮೇಲಿ ಸುಂದರವಾದ ರಕ್ಷೆ ಕೈಗೆ ಕಟ್ಟಿದಳು.  ಮಾಧೋಸಿಂಗ್ ತನ್ನ ಕೊರಳಲ್ಲಿದ್ದ ಚಿನ್ನದ ಹಾರವನ್ನು ತೆಗೆದು ಆಕೆಗೆ ಕಾಣಿಕೆಯೆಂದು ನೀಡಿದ. ನೇರವಾಗಿ ಪೋಲೀಸ್ ಠಾಣೆಗೆ ನಡೆದು ಶರಣಾದ. ಅವನ ಜೀವನದ ಡಕಾಯಿತನದ ಅವಧಿ ಮುಗಿದಿತ್ತು. ಪೊಲೀಸರ ಗುಂಡಿನ ಹೆದರಿಕೆಯಿಂದ, ಜನರ ಪ್ರತಿಭಟನೆ­ಯಿಂದ, ಆಗದ್ದು ಪ್ರೀತಿಯಿಂದ ಸಾಧ್ಯವಾಗಿತ್ತು.

ಅದಕ್ಕೇ ತಿಳಿದ­­ವರು ಹೇಳುತ್ತಾರೆ, ಪ್ರೀತಿಗಿರುವ ಶಕ್ತಿ ಕ್ರೌರ್ಯಕ್ಕೆ ಎಂದೂ ಬರಲಾರದು. ಆದರೆ, ದೌರ್ಭಾಗ್ಯವೆಂದರೆ ಕೆಲ ನಾಯಕರು ಕ್ರೌರ್ಯದಿಂದ, ಹಿಂಸೆ­ಯಿಂದ ಎಲ್ಲವನ್ನೂ ಸಾಧಿಸಬಹುದೆಂದು ನಂಬಿ ಪ್ರಪಂಚದ ಶಾಂತಿ, ನೆಮ್ಮದಿ  ಕದಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.