ADVERTISEMENT

ಬದುಕು ಬದಲಿಸಿದ ವಾಷಿಂಗ್ ಮಷಿನ್

ಡಾ. ಗುರುರಾಜ ಕರಜಗಿ
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST

ಇದು ಯೂರೋಪಿನ ಪತ್ರಿಕೆಯಲ್ಲಿ ಬಂದಿದ್ದ ಪುಟ್ಟ ಘಟನೆ. ಆಸ್ಟ್ರಿಯಾ ದೇಶದ ವಿಯೆನ್ನಾದಲ್ಲಿ ಜಾನ್ ಕ್ಲೇಪೂಲ್ ಎಂಬ ವ್ಯಕ್ತಿ ಇದ್ದ. ಅವನನ್ನು ಎಲ್ಲರೂ ಅಸಾಮಾನ್ಯ ವ್ಯಕ್ತಿ, ದಾರ್ಶನಿಕ ಎಂದು ಭಾವಿಸುತ್ತಿದ್ದರು. ಅವನ ಮನ­ಸ್ಥಿಮಿತತೆಯ ಬಗ್ಗೆ ಎಲ್ಲರಿಗೂ ಗೌರವ, ಅಭಿಮಾನ. ಆತ ಯಾರ ಮೇಲೆಯೂ ಕೋಪಗೊಂಡ­ದ್ದನ್ನಾಗಲೀ, ಯಾವ ವಿಷಯದ ಬಗ್ಗೆ ಅತಿ ಪ್ರೀತಿ ಅಥವಾ ಜುಗುಪ್ಸೆ ಪಟ್ಟಿದ್ದನ್ನಾಗಲೀ ಯಾರೂ ಕಂಡಿರಲಿಲ್ಲ. ಭಗವದ್‌ ಗೀತೆ ಹೇಳಿದ, ಸುಖ ದು:ಖೇ ಸಮೇಕೃತ್ವಾ ಎಂಬ ಮಾತಿಗೆ ಆತ ಉದಾಹರಣೆ­ಯಂತಿದ್ದ.        

 ಅವನ ಅರವ­ತ್ತನೆಯ ವಯಸ್ಸಿನ ಹೊತ್ತಿಗೆ ಅವನನ್ನು ಎಲ್ಲರೂ ಸಂತನೆಂದೇ ಭಾವಿಸತೊ­ಡಗಿದ್ದರು. ಒಂದು ಬಾರಿ ಅವನನ್ನು ಪತ್ರಕರ್ತರು ಕೇಳಿದರು, ‘ನೀವು ನಿಮ್ಮ ಜೀವನದಲ್ಲಿ ಅಷ್ಟೊಂದು ಏರುಪೇರು ಕಂಡಿದ್ದೀರಿ. ಆದರೆ, ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳಲಿಲ್ಲ. ಇದು ನಿಮಗೆ ಸಾಧ್ಯವಾದದ್ದು ಹೇಗೆ?’

ಜಾನ್ ಕ್ಲೇಪೂಲ್ ತನ್ನ ಎಂದಿನ ಮಂದಹಾಸ ತೋರಿ, ‘ಇದೆಲ್ಲಕ್ಕೂ ಕಾರಣ ನಮ್ಮ ಮನೆಯಲ್ಲಿದ್ದ ವಾಷಿಂಗ್ ಮಷಿನ್’ ಎಂದ. ಮನಸ್ಥಿಮಿತಕ್ಕೆ ವಾಷಿಂಗ್ ಮಷಿನ್ನೇ? ಎಂದು ಕೇಳಿದರವರು. ಆಗ ಆತ ಹೇಳಿದ್ದು ಹೀಗೆ. ‘ಅದು ಎರಡನೆಯ ಮಹಾಯುದ್ಧದ ಸಮಯ. ಆಗ ಜಾನ್‌ಗೆ ಸುಮಾರು ಎಂಟು ಹತ್ತು ವರ್ಷವಿದ್ದಿರಬೇಕು. ಈತನದು ಬಡ ಕುಟುಂಬ. ಮಹಾಯುದ್ಧದ ಸಮಯದಲ್ಲಿ ಯಾವ ವಸ್ತುವೂ ದೊರೆಯುತ್ತಿರಲಿಲ್ಲ. ಪೆಟ್ರೋಲ್ ತುಂಬ ಬೆಲೆಯಾದ್ದರಿಂದ ಮನೆಯಲ್ಲಿದ್ದ ವಾಹನವನ್ನು ಅತ್ಯಂತ ಮಿತವಾಗಿ ಬಳಸಬೇಕಿತ್ತು. ಹೀಗಾಗಿ ಬಟ್ಟೆಗಳನ್ನು ಒಗೆಯುವುದಕ್ಕೆ ಲಾಂಡ್ರಿಗೆ ಹೋಗುವುದು ಅಪರೂಪವಾಗಿತ್ತು. ಬಟ್ಟೆಗಳನ್ನು ಮೇಲಿಂದ ಮೇಲೆ ತೊಳೆಯುವುದಾಗದೇ ರಾಶಿ ಬಟ್ಟೆಗಳು ಬಿದ್ದಿರುತ್ತಿದ್ದವು. ಇವರ ಮನೆಯಲ್ಲಿ ವಾಷಿಂಗ್ ಮಷಿನ್ ಎನ್ನುವುದು ಕನಸಿನ ವಸ್ತು. ಆ ಸಮಯಕ್ಕೆ ಒಂದು ಘಟನೆ ನಡೆಯಿತು. ಜಾನ್‌ನ ಮನೆಯ ಪಕ್ಕದ­ಲ್ಲಿದ್ದವರು ಯುದ್ದಕ್ಕೆ ಹೋಗ­ಬೇಕಾ­ಯಿತು. ಮನೆಯಾತ ಹೆಂಡತಿ ಮಕ್ಕಳನ್ನು ದೂರದ ಊರಿಗೆ ಕಳುಹಿಸಿ, ತನ್ನ ಮನೆಯ ಕೆಲವು ಸಾಮಾನುಗಳನ್ನು ಜಾನ್‌ನ ತಂದೆತಾಯಿಯರ ಒಪ್ಪಿಗೆ ಪಡೆದು ಇವರ ಮನೆಯಲ್ಲಿರಿಸಿದ. ಅವುಗಳಲ್ಲಿ ವಾಷಿಂಗ್ ಮಷಿನ್‌ ಕೂಡ ಒಂದು. ಆತ ಹೊರಡುವಾಗ ಈ ಮಷಿನ್‌ನ್ನು ಬಳಸಬೇಕೆಂದೂ, ಹಾಗೆಯೇ ಇಟ್ಟರೆ ಅದು ತುಕ್ಕು ಹಿಡಿದು ಹಾಳಾಗಬಹುದು ಎಂದು ಹೇಳಿ ಹೋದ. ಹಾಗಾಗಿ ಜಾನ್‌ನ ಮನೆಯಲ್ಲಿ ವಾಷಿಂಗ್ ಮಷಿನ್ ಬಳಕೆಗೆ ಬಂತು. ಅತಿ ಉತ್ಸಾಹದಿಂದ ಜಾನ್ ಅದರ ಬಳಕೆ ಮಾಡುತ್ತಿದ್ದ. ಅದರ ಬಗ್ಗೆ ಅತಿಯಾದ ಪ್ರೀತಿ ಬೆಳೆಸಿಕೊಂಡ. ಮೂರು ನಾಲ್ಕು ವರ್ಷ ಹೀಗೆಯೇ ನಡೆಯಿತು.
ಯುದ್ಧ ಮುಗಿದ ನಂತರ ಬದುಕಿ ಬಂದ ನೆರೆಮನೆಯಾತ ತನ್ನ ಸಾಮಾನು­ಗಳನ್ನು ತೆಗೆದುಕೊಂಡು ಹೋಗಲು ಬಂದ. ಎಲ್ಲವನ್ನೂ ಸಾಗಿಸಿದ ಮೇಲೆ ವಾಷಿಂಗ್ ಮಷಿನ್ ತೆಗೆದುಕೊಂಡು ಹೋಗಲು ಬಂದಾಗ ಜಾನ್ ಜಗಳ ತೆಗೆದ. ಅದನ್ನು ಕೊಡುವುದಿಲ್ಲವೆಂದು ಹಟ ಮಾಡಿದ.

ಆಗ ಅವನ ತಾಯಿ ಅವನನ್ನು ಕರೆದು ಕುಳ್ಳಿರಿಸಿ ಹೇಳಿದಳು ‘ಮಗೂ, ಈ ಮಷಿನ್ ಎಂದಿಗೂ ತಮ್ಮದಾಗಿರಲಿಲ್ಲ ಎಂಬುದು ನಿನಗೆ ನೆನಪಿರಬೇಕು. ಅದನ್ನು ಇಷ್ಟು ದಿನ ಉಪಯೋಗಿಸಲು ಸಾಧ್ಯವಾದದ್ದು ನೆರೆಮನೆಯವರ ಕಾಣಿಕೆ ಎಂಬುದನ್ನು ಮರೆಯಬೇಡ. ಅದೊಂದು ಇಷ್ಟು ದಿನಗಳ ಕಾಣಿಕೆ ನಮಗೆ. ಆದ್ದರಿಂದ ಮಷಿನ್ ಹೋಗುತ್ತದಲ್ಲ ಎಂದು ದುಃಖಪಡುವುದಕ್ಕಿಂತ ಅದು ಅಷ್ಟು ದಿನ ಮತ್ತೊಬ್ಬರ ಕಾಣಿಕೆಯಾಗಿ ನಮ್ಮ ಬಳಿ ಇತ್ತಲ್ಲ ಎಂದು ದೈವಕ್ಕೆ ಕೃತಜ್ಞತೆ ತೋರು­ವುದು ಸರಿಯಾದ ದಾರಿ. ಇದನ್ನೆಂದೂ ಮರೆಯಬೇಡ’.

ಈ ಮಾತು ಜಾನ್‌ನ ಜೀವನಕ್ಕೆ ದಾರಿ ದೀಪವಾಯಿತು. ತನಗೆ ಏನು ದೊರೆತರೂ ಅದನ್ನೊಂದು ಕಾಣಿಕೆಯೆಂದೇ ಭಾವಿಸಿದ. ಮುಂದೆ ಅವನ ಮಗಳು ರಕ್ತದ ಕ್ಯಾನ್ಸರಿನಿಂದ ದಿನದಿನಕ್ಕೆ ಸವೆದು ತನ್ನ ಕಣ್ಣಮುಂದೆಯೇ ಇಲ್ಲವಾಗಿ ಹೋದಾಗ ಮನಸ್ಸಿಗೆ ದುಃಖವಾದರೂ ಕುಸಿದು­ಹೋಗಲಿಲ್ಲ. ಬದಲಾಗಿ, ನನ್ನ ಮಗಳು ನನಗೆ ಭಗವಂತನ ಒಂದು ಅತ್ಯಂತ ಪರಿಶುದ್ಧವಾದ ಕಾಣಿಕೆಯಾಗಿ ಕೆಲವರ್ಷ ದೂರಕಿದ್ದಳು. ನೀಡುವುದು, ಮರಳಿ ಪಡೆಯುವುದು ಅವನ ಮರ್ಜಿ. ಆದರೆ, ಅಷ್ಟು ವರ್ಷಗಳ ಕಾಲ ಆ ಕಾಣಿಕೆಯನ್ನು ನನ್ನೊಡನೆ ಇಟ್ಟು­ಕೊಳ್ಳಲು ಅವಕಾಶ ಕೊಟ್ಟಿದ್ದನಲ್ಲ ಅದಕ್ಕೆ ಅವನಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸಿದ್ದೇನೆ’ ಎಂದ. ನಂತರ ಯಾವ ಸುಖ ಅಥವಾ ದುಃಖ ಬಂದರೂ ಅದು ಜಾನ್‌ನಿಗೆ ಭಗವಂತನ ಕಾಣಿಕೆಯೇ ಆಯಿತು.

ನಾವೂ ಅನೇಕ ಬಾರಿ  ಆಸ್ತಿ, ನೌಕರಿ, ಸಂಬಂಧಗಳು, ಸ್ನೇಹಿತರು, ಮನೆಯ ಪ್ರೀತಿಯ ಜನ, ಸ್ವಾತಂತ್ರ್ಯ, ಗೌರವ ಮುಂತಾದವು­ಗಳನ್ನು ಕಳೆದುಕೊಳ್ಳುತ್ತೇವೆ. ಇವು ಯಾವುದನ್ನೂ ನಾವು ಭೂಮಿಗೆ ಬಂದಾಗ ಹೊತ್ತು ತಂದವರಲ್ಲ. ಇವೆಲ್ಲ ಒಂದೊಂದು ಹಂತದಲ್ಲಿ ಕಾಣಿಕೆಯಾಗಿ ಬಂದವುಗಳು. ಕಾಣಿಕೆಗಳು ಸದಾ ನಮ್ಮೊಡನೆಯೇ ಇರಬೇಕೆಂದು ಆಶಿಸು­ವುದು ಸರಿಯಲ್ಲ. ಅವು ಹೋದರೆ ಅಷ್ಟು ದಿನವಾದರೂ ನಮ್ಮೊಡನೆ ಇದ್ದುವಲ್ಲ ಎಂದು ಕೃತಜ್ಞತೆ ಸೂಚಿಸುವುದು ಸರಿಯಾದ ಮಾರ್ಗ ಎನ್ನುವುದು ಜಾನ್‌ನ ಸಿದ್ಧಾಂತ. ಅದು ಕೇಳಲು, ಹೇಳಲು ಸುಲಭವೆನ್ನಿಸಿದರೂ ಪಾಲಿಸು­ವುದು ಸುಲಭ ಸಾಧ್ಯವಲ್ಲ. ಆದರೆ, ಆ ದಿಸೆಯಲ್ಲಿ ಪ್ರಯತ್ನ ಮಾಡುವುದು ನಮ್ಮ ಮನಸ್ಸಿನ ಆರೋಗ್ಯಕ್ಕೇ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT