ADVERTISEMENT

ಮಮತೆಯ ಮಹಾ ಪ್ರವಾಹ

ಡಾ. ಗುರುರಾಜ ಕರಜಗಿ
Published 21 ಆಗಸ್ಟ್ 2014, 19:30 IST
Last Updated 21 ಆಗಸ್ಟ್ 2014, 19:30 IST

ದಕ್ಷಿಣ ಧ್ರುವದಲ್ಲಿ ವಾಸಿಸುವ ಬಿಳಿ ಕರಡಿಗಳ ಬಗ್ಗೆ ಒಂದು ಮಾತಿದೆ. ತಾಯಿ ಕರಡಿ ಮರಿಗಳೊಂದಿಗೆ ಇದ್ದಾಗ ಮರಿ­ಗಳ ಹತ್ತಿರ ಹೋಗಬೇಡಿ. ನೋಡಲು ಶಾಂತವಾಗಿರುವ ತಾಯಿ ಕರಡಿ ಅದನ್ನು ಸಹಿಸುವುದಿಲ್ಲ. ಕ್ಷಣದಲ್ಲಿ ನಿಮ್ಮ ಮೇಲೆ ಹಾರಿ ಚಿಂದಿ ಮಾಡಿಬಿಡುತ್ತದೆ. ಇದು ತಾಯಿ ಕರಡಿಗೆ ಮಕ್ಕಳ ಬಗ್ಗೆ ಇರುವ ಪ್ರೀತಿ, ಆತಂಕದ ಲಕ್ಷಣ.

ಇದು ಬಹುಶಃ ಕರಡಿಗಳಿಗೆ ಮಾತ್ರ ಸೀಮಿತವಲ್ಲ.  ಕೆಲ ತಿಂಗಳು­ಗಳ ಹಿಂದೆ ಅಮೆರಿಕದ ‘ಡಲ್ಲಾಸ್ ಮಾರ್ನಿಂಗ್ ನ್ಯೂಸ್’ ಪತ್ರಿಕೆಯಲ್ಲಿ ಬಂದ ಲೇಖನವೊಂದು ಇಂಥದ್ದನ್ನೇ ದಾಖಲಿಸಿದೆ. ಅಂತೆಲ್ಮಾ ಆರೋಯೋ ಎಂಬ ಸುಮಾರು ೩೯ ವರ್ಷದ ಮಹಿಳೆ ತನ್ನ ಮೂರು ಮಕ್ಕಳನ್ನು ಕಾರಿನಲ್ಲಿ ಕರೆದು­ಕೊಂಡು ಹೊರಟಿದ್ದಳು. ಪೆಟ್ರೋಲ್ ತುಂಬಿಸಲು ಗ್ಯಾಸ್ ಸ್ಟೇಷನ್ನಿಗೆ ಬಂದಳು. ಅಮೆರಿಕೆಯಲ್ಲಿ ಬಹಳಷ್ಟು ಕಡೆಗೆ ಪೆಟ್ರೋಲ್ ತುಂಬಲು ಹುಡುಗರು ಇರುವುದಿಲ್ಲ, ನಾವೇ ಹಾಕಿಕೊಳ್ಳಬೇಕು.

ಅಂತೆಲ್ಮಾ ಕಾರಿನಿಂದಿಳಿದು ಪೆಟ್ರೋಲ್ ಹಾಕ­ತೊಡಗಿದಳು. ಆಗ ಅಲ್ಲಿಗೊಬ್ಬ ಕಪ್ಪು ದಾಂಡಿಗ ಬಂದ. ನೋಡಲು ಅವನೊಬ್ಬ ನಿರುದ್ಯೋಗಿ ಗೂಂಡಾನ ಹಾಗೆ ಕಾಣುತ್ತಿದ್ದ. ಆತ ತುಂಬ ಕುಡಿದಿದ್ದ ಎಂದು ತೋರುತ್ತಿತ್ತು. ಅವನು ನೇರವಾಗಿ ಅಂತೆಲ್ಮಾ ಬಳಿಗೆ ಬಂದು, ‘ನಿನ್ನ ಪರ್ಸ ಕೊಡು, ನನಗೆ ಹಣ ಬೇಕಾಗಿದೆ’ ಎಂದು ಆಕೆಯ ಹಣದ ಚೀಲವನ್ನು ಎಳೆದ. ಆಕೆ ಕೊಡುವುದಿಲ್ಲವೆಂದು ಕೊಸರಿಕೊಂಡು ತಳ್ಳಿದಾಗ ಆಕೆಯನ್ನು ಬಿಟ್ಟು ಕಾರಿನ ಕಡೆಗೆ ಹೋದ. 

ಕಾರಿನಲ್ಲಿ ಡ್ರೈವರ್ ಕುರ್ಚಿಯಲ್ಲಿ ಕುಳಿತ. ಆಕೆಗೆ ತಕ್ಷಣ ಅರ್ಥ­ವಾಯಿತು.  ಈಗ ಆತ ಕಾರು ಕದ್ದುಕೊಂಡು ಹೋಗುತ್ತಾನೆ! ಆಕೆಯ ಮೂವರೂ ಮಕ್ಕಳು ಒಳಗಿದ್ದಾರೆ! ಆಕೆ ಗಾಬರಿಯಿಂದ ಕೂಗಿದಳು, ‘ಜಾರ್ಜ, ಫ್ರೆಡ್, ಕಾರಿನಿಂದ ಹೊರಗೆ ಹಾರಿಕೊಳ್ಳಿ, ಬೇಗ’. ದೊಡ್ಡ ಹುಡುಗ ಜಾರ್ಜ ತಕ್ಷಣ ಬಾಗಿಲು ತೆರೆದು ಹಾರಿದ. ಅಂತೆಲ್ಮಾ ಬೇಗನೇ ಫ್ರೆಡ್‌ನನ್ನು ಎಳೆದು ಹಾಕಿದಳು. ಅಷ್ಟರಲ್ಲಿ ಆ ಕಳ್ಳ ಕಾರು ಚಾಲೂ ಮಾಡಿದ.  ಅಂತೆಲ್ಮಾಗೆ ಏನು ಮಾಡಬೇಕೆಂದು ತೋಚಲಿಲ್ಲ. ಆಕೆಯ ಒಂದೂವರೆ ವರ್ಷದ ಮಗನನ್ನು ಡ್ರೈವರ್ ಸೀಟಿನ ಪಕ್ಕದ ಕುರ್ಚಿಯಲ್ಲಿ ಬೆಲ್ಟ್ ಹಾಕಿ ಕೂಡ್ರಿಸಿದ್ದಾಳೆ.  ಅವ ಹೇಗೆ ಹೊರಗೆ ಬಂದಾನು? ಅಂತೆಲ್ಮಾ ಓಡಿ ಡ್ರೈವರ್ ಪಕ್ಕದ ಕಿಟಕಿಯನ್ನು ಹಿಡಿದು ಎಳೆದಳು. ಕಳ್ಳ ಕಾರು ಚಾಲೂ ಮಾಡಿ ಹೊರಟೇ ಬಿಟ್ಟ.

ಈಕೆ ಕಿಟಕಿಯ ಕೈ ಬಿಡಲಿಲ್ಲ. ಕಾರು ಆಕೆಯನ್ನು ಎಳೆಯು­ತ್ತಲೇ ಸಾಗಿತು. ಆಕೆ ಕೂಗುತ್ತಲೇ ಇದ್ದಾಳೆ. ರಸ್ತೆಯಲ್ಲಿ ಯಾರೂ ಇಲ್ಲ. ಇದರ ಮೇಲೆ ಆ ನೀಚ ಈಕೆಯನ್ನು ತಳ್ಳಲು ಆಕೆಯ ಕೈ ಮೇಲೆ ಹೊಡೆ­ಯುತ್ತಿದ್ದಾನೆ.  ಮುಖದ ಮೇಲೆ ಮುಷ್ಟಿಯಿಂದ ಗುದ್ದುತ್ತಿದ್ದಾನೆ. ಅಂತೆ­ಲ್ಮಾಳ ತುಟಿಯೊಡೆದು ರಕ್ತ ಚಿಮ್ಮಿತು. ಆಕೆ ಆ ಸ್ಥಿತಿಯಲ್ಲೇ  ಎಡಗೈಯಿಂದ ಕಾರಿನ ಸ್ಟೇಯರಿಂಗ್ ಹಿಡಿದುಕೊಂಡಳು, ಎಳೆದಳು. ಕಾರು ಅಡ್ಡಾದಿಡ್ಡಿಯಾಗಿ ಓಡತೊಡಗಿತು.  ರಸ್ತೆಯ ಮೇಲೆ ಎಳೆದಾ­ಡು­ತ್ತಿದ್ದ ಅವಳ ಕಾಲುಗಳಿಂದ ರಕ್ತ ಹರಿಯುತ್ತಿತ್ತು.  ಕಳ್ಳ ಮತ್ತೊಮ್ಮೆ ಆಕೆಯ ಮೇಲೆ ಹೊಡೆದಾಗ ಅವನ ಕೈಯನ್ನು ಬಲವಾಗಿ ಕಚ್ಚಿದಳು. 

ಅದೆಷ್ಟು ಬಲವಾಗಿತ್ತೆಂದರೆ ಅವಳ ಹಲ್ಲುಗಳು ಅವನ ಕೈಯ ಆಳಕ್ಕಿಳಿದವು. ಅದರ ನೋವು, ಕಾರು ಹೊಯ್ದಾ­ಡುತ್ತಿದ್ದ ಬಗೆಯನ್ನು ಆ ಕುಡುಕನಿಂದ ನಿಭಾಯಿ­ಸಲಾಗಲಿಲ್ಲ. ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಿ, ತನ್ನ ಕೈಯನ್ನು ಬಲವಂತವಾಗಿ ಬಿಡಿಸಿ­ಕೊಂಡು ಓಡಿ ಹೋದ.

ನಂತರ ನಿಲ್ಲಲೂ ಆಗದಿದ್ದ ಅಂತೆಲ್ಮಾ ಪೊಲೀಸರಿಗೆ ಫೋನ್ ಮಾಡಿ ಅವರು ಬಂದ ಮೇಲೆ ಕಾರನ್ನು ಪೆಟ್ರೋಲ್ ಬಂಕ್‌ವರೆಗೂ ಕರೆದೊಯ್ದು ಮಕ್ಕಳನ್ನು ಸೇರಿ­ಕೊಂಡಳು. ಅಂತೆಲ್ಮಾ ಅಪ್ಪಿ­ಕೊಂಡಾಗ ಮುಂದೆ ಕುಳಿತಿದ್ದ ಮಗು ತಾಯಿಯನ್ನು ನೋಡಿ ಮುಗ್ಧವಾಗಿ ನಕ್ಕಿತು. ಪಾಪ! ಅದಕ್ಕೇನು ತಿಳಿದೀತು, ತನ್ನ ತಾಯಿ ತನ್ನನ್ನು ಉಳಿಸಿಕೊಳ್ಳಲು ಅದೆಂಥ ಹೋರಾಟ ಮಾಡಿದಳೆ­ನ್ನುವುದು? ಅಂತೆಲ್ಮಾಳಿಗೆ ಹತ್ತು ನಿಮಿಷಗಳ ಹಿಂದೆ ಇಂಥ ಪ್ರಸಂಗ ಬಂದೀತು ಎಂಬ ಕಲ್ಪನೆ ಇರಲಿಲ್ಲ, ಯಾವ ಮುನ್ಸೂ­ಚನೆಯೂ ಇರಲಿಲ್ಲ. ಆಕೆ ಇಂಥದಕ್ಕೆ ಸಿದ್ಧಳೂ ಆಗಿರಲಿಲ್ಲ. ಈ ಮಮತೆ­ಯೆಂಬ ಮಹಾಶಕ್ತಿ ಮನುಷ್ಯನ ಆಂತರ್ಯದಲ್ಲಿ ಸದಾ ತುಡಿಯುತ್ತಲೇ ಇರುತ್ತದೆ. 

ಇದು ಮಮತೆಯ ನಿಜಸ್ವರೂಪ. ಮೇಲ್ನೋಟಕ್ಕೆ ಅತ್ಯಂತ ತಾಳ್ಮೆಯ, ಸಮಾಧಾನದ ಅಶಕ್ತರೆಂದು ತೋರುವ ವ್ಯಕ್ತಿಗಳೂ ಇಂಥ ಉತ್ಕಟ ಸನ್ನಿವೇಶದಲ್ಲಿ ಅಸಾಧಾರಣ ಪ್ರತಿಕ್ರಿಯೆ ತೋರುವುದು ಈ ಮಮತೆಯ ಮಹಾಪ್ರವಾಹ ಉಕ್ಕಿ ಬಂದಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT