ADVERTISEMENT

ಚುರುಮುರಿ | ಚೊಂಬಿಗೆ ಕೊಂಬು

ಮಣ್ಣೆ ರಾಜು
Published 23 ಏಪ್ರಿಲ್ 2024, 21:52 IST
Last Updated 23 ಏಪ್ರಿಲ್ 2024, 21:52 IST
   

ಚೊಂಬಿನ ಅಂಗಡಿ ಓನರ್ ಶಂಕ್ರಿ, ಸುಮಿಯನ್ನು ಸ್ವಾಗತಿಸಿ, ‘ಬನ್ನಿ ಸಾರ್, ನಮ್ಮಲ್ಲಿ ವಿವಿಧ ಗಾತ್ರ- ಘನತೆಯ ಎಲ್ಲಾ ವೆರೈಟಿ ಚೊಂಬುಗಳಿವೆ’ ಎಂದ.

‘ಚುನಾವಣೆ ಗದ್ದಲ ಶುರುವಾದಾಗಿನಿಂದ ಚೊಂಬಿಗೆ ಕೊಂಬು ಬಂದುಬಿಟ್ಟಿದೆ ಸಾರ್?’ ಶಂಕ್ರಿ ನಕ್ಕ.

‘ಹೌದು ಸಾರ್, ಚೊಂಬಿನ ಮಾರ್ಕೆಟ್ ಮಾನ್ಯತೆ ಹೆಚ್ಚಾಗಿದೆ. ಮತದಾರರಿಗೆ ಹಂಚಲೆಂದು ಅವರ್‍ಯಾರೋ ಒಂದು ಲೋಡು ಚೊಂಬು ಕೊಂಡುಕೊಂಡರು. ಇನ್ನೊಂದು ಲೋಡ್‍ಗೆ ಆರ್ಡರ್ ಕೊಟ್ಟಿದ್ದಾರೆ’ ಓನರ್ ಪಿಸುಗುಟ್ಟಿದ.

ADVERTISEMENT

‘ಸೀರೆ, ಕುಕ್ಕರ್ ಬದಲು ಮತದಾರರಿಗೆ ಚೊಂಬು ಕೊಡಲು ಶುರುಮಾಡಿದ್ದಾರಾ?’ ಅಂದಳು ಸುಮಿ.

‘ಹೌದು ಮೇಡಂ, ಮನೆ ಅಂದ್ಮೇಲೆ ಚೊಂಬು ಇರಲೇಬೇಕು. ಚೊಂಬು ಇಲ್ಲದ ಮನೆ ಯಾವುದಿದೆ ಹೇಳಿ? ಈಗ ಹಂಡೆ, ಗುಂಡಿ, ಕೊಳಗ, ಬಿಂದಿಗೆ, ಬಕೆಟ್‍ನ ಸ್ಕೋಪ್ ಕಮ್ಮಿಯಾಗಿ ಚೊಂಬಿಗೆ ಡಿಮ್ಯಾಂಡ್ ಬಂದಿದೆ. ಗೃಹೋಪಯೋಗಿ ಪಾತ್ರೆಗಳಲ್ಲಿ ಚೊಂಬಿನ ಪಾತ್ರ ದೊಡ್ಡದು’.

‘ನೀರಿನ ಪ್ರತಿಭಟನೆಗಳಲ್ಲಿ ಖಾಲಿ ಕೊಡ ಪ್ರದರ್ಶನಕ್ಕಿಂತ ಖಾಲಿ ಚೊಂಬು ಪ್ರದರ್ಶನ ಕಂಫರ್ಟಬಲ್’ ಅಂದ ಶಂಕ್ರಿ.

‘ಬಾಟಲ್‍ನಲ್ಲಿ ನೀರು ಕುಡಿಯೋದು ಅನಾರೋಗ್ಯಕರ, ಅನಾಗರಿಕತನ. ಚೊಂಬಿನಲ್ಲಿ ನೀರು ಕುಡಿದರೆ ಆರೋಗ್ಯ, ಸೌಭಾಗ್ಯ
ವೃದ್ಧಿಯಾಗುತ್ತದೆ ಎಂದು ಟಿ.ವಿ. ಚಾನೆಲ್ ಜ್ಯೋತಿಷಿ ಹೇಳಿದ್ದನ್ನು ನನ್ನ ಫ್ರೆಂಡ್ ವಾಟ್ಸ್‌ಆ್ಯಪ್ ಮಾಡಿದ್ದಾಳೆ’ ಸುಮಿ ಮೊಬೈಲ್ ತೋರಿಸಿದಳು.

‘ಚೊಂಬಿನ ಮಹಿಮೆ ಅಪಾರ. ನಾನು ಖಾಲಿ ಚೊಂಬು ಹಿಡಿದು ಬಂದು ವ್ಯವಹಾರ ಶುರುಮಾಡಿದೆ, ಚೊಂಬು ಅಕ್ಷಯ ಪಾತ್ರೆಯಾಗಿ ಇಂದು ಚೊಂಬಿನ ವ್ಯವಹಾರ ದೊಡ್ಡದಾಗಿದೆ’.

‘ಸರಿ, ಹೆಂಡ್ತಿ ಕೋಪಗೊಂಡು ಎಸೆದರೂ ಡ್ಯಾಮೇಜ್ ಆಗದ ಗಟ್ಟಿಮುಟ್ಟಾದ ಚೊಂಬು ಕೊಡಿ’.

‘ಇಪ್ಪತ್ತು ಚೊಂಬು ಪ್ಯಾಕ್ ಮಾಡಿ’ ಅಂದಳು ಸುಮಿ.

‘ಇಪ್ಪತ್ತು ಯಾಕೆ?’

‘ಬಂಧುಬಳಗದ ಮದುವೆ, ನಾಮಕರಣ, ಗೃಹಪ್ರವೇಶದಲ್ಲಿ ಚೊಂಬು ಮುಯ್ಯಿ ಕೊಡೋಣ ಕಣ್ರೀ...’ ಎಂದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.