ADVERTISEMENT

ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾಯಂ ಬರ: ಎಚ್ಚೆತ್ತುಕೊಳ್ಳದಿದ್ದರೆ ಅಪಾಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾಯಂ ಬರ: ಎಚ್ಚೆತ್ತುಕೊಳ್ಳದಿದ್ದರೆ ಅಪಾಯ
ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾಯಂ ಬರ: ಎಚ್ಚೆತ್ತುಕೊಳ್ಳದಿದ್ದರೆ ಅಪಾಯ   

ರಾಜ್ಯದಲ್ಲಿ ಮುಂಗಾರು ಈಗ ಚುರುಕುಗೊಂಡಿದೆ. ಅಲ್ಲಲ್ಲಿ ಮಳೆ ಬೀಳುತ್ತಿರುವುದರಿಂದ ನಿರಾಸೆ, ಹತಾಶೆ ದೂರವಾಗಿ ಅಲ್ಪಸ್ವಲ್ಪ ಆಸೆ ಚಿಗುರಿದೆ. ಆದರೆ ಆರಂಭದಲ್ಲಿ ಬೇಕಾದಾಗ ಮಳೆ ಬಿದ್ದಿರಲಿಲ್ಲ. ಹೀಗಾಗಿ ಮುಂಗಾರು ಬೆಳೆ ಪೂರ್ಣವಾಗಿ ಕೈಗೆ ಬರುವ ಸೂಚನೆಗಳು ಇಲ್ಲ. ಈಗಲೂ ಬಹುತೇಕ ಕೆರೆಕಟ್ಟೆಗಳಿಗೆ, ಜಲಾಶಯಗಳಿಗೆ ನಿರೀಕ್ಷೆಯಷ್ಟು ನೀರು ಬಂದಿಲ್ಲ.

ದರ ನಡುವೆಯೇ, ‘ರಾಜ್ಯದ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳು ಶಾಶ್ವತ ಬರಪೀಡಿತ’ ಎಂದು ಕೇಂದ್ರ ಕೃಷಿ ಇಲಾಖೆ ಗುರುತಿಸಿದೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಅಂದರೆ ನಮ್ಮಲ್ಲಿ ಅರ್ಧಕ್ಕೂ ಹೆಚ್ಚು ಜಿಲ್ಲೆಗಳು ಕಾಯಂ ಬರ ಪ್ರದೇಶಗಳು ಎಂದಾಯಿತು. ಇಲಾಖೆಯ ಅಧ್ಯಯನದ ಪ್ರಕಾರ, ನಮ್ಮ ದೇಶದಲ್ಲಿ ಶಾಶ್ವತ ಬರದಿಂದ ಬಳಲುತ್ತಿರುವ ಜಿಲ್ಲೆಗಳು 24. ಆ ಪೈಕಿ ಮೂರನೇ ಎರಡರಷ್ಟು ಜಿಲ್ಲೆಗಳು ನಮ್ಮಲ್ಲಿಯೇ ಇವೆ.

ಇವು 2000– 2015ರ ಅವಧಿಯಲ್ಲಿ 10ಕ್ಕೂ ಹೆಚ್ಚು ಸಲ ಬರಪೀಡಿತ ಎಂದು ಘೋಷಣೆಯಾಗಿರುವ ಜಿಲ್ಲೆಗಳು. ಮಲೆನಾಡು ಮತ್ತು ಕರಾವಳಿ ಬಿಟ್ಟರೆ ಬಹುಪಾಲು ಜಿಲ್ಲೆಗಳು  ಈ ಪಟ್ಟಿಯಲ್ಲಿವೆ. ಮಲೆನಾಡಿನ ಅಂಚಿನಲ್ಲಿರುವ ಬೆಳಗಾವಿ, ಹಾಸನಗಳೂ ಕಾಯಂ ಬರಪೀಡಿತ ಎನ್ನುವುದಂತೂ ಪರಿಸ್ಥಿತಿ ಹೇಗೆ ದಿನೇದಿನೇ ಬಿಗಡಾಯಿಸುತ್ತಿದೆ ಎಂಬುದಕ್ಕೆ ನಿದರ್ಶನ.

ADVERTISEMENT

ಸಾಲದ್ದಕ್ಕೆ, ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ತೇವಾಂಶದ ಪ್ರದೇಶಗಳು, ಕೆರೆಗಳು ಕಣ್ಮರೆಯಾಗುತ್ತಿವೆ. ಇದನ್ನು ಗಮನಕ್ಕೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌, ಕಳವಳ ವ್ಯಕ್ತಪಡಿಸಿದೆ. ಇದನ್ನೆಲ್ಲ ನೋಡಿದರೆ ಮುಂಬರುವ ದಿನಗಳಲ್ಲಿ ಏನು ಕಾದಿದೆಯೋ ಎಂಬ ಆತಂಕವೂ ಮೂಡುತ್ತದೆ.

ಇದಕ್ಕೆಲ್ಲ ಕಾರಣ ದೂರದೃಷ್ಟಿಯ ಅಭಾವ. ನಮ್ಮದೆಲ್ಲ ತಾತ್ಕಾಲಿಕ ಕ್ರಮ. ಆ ಹೊತ್ತಿನ ಸಮಸ್ಯೆ ದೂರವಾದರೆ ಸಾಕು ಎನ್ನುವ ಮನೋಭಾವ. ಬರ ಪರಿಹಾರ ಎಂದರೆ ನೀರಿನ ಕೊರತೆ ನೀಗಿಸುವುದು ಎಂಬ ಸೀಮಿತ ಪರಿಕಲ್ಪನೆ. ಕೊಳವೆಬಾವಿ ಕೊರೆಸುವುದು, ಇರುವ ಕೊಳವೆಬಾವಿ ಮತ್ತಷ್ಟು ಆಳಗೊಳಿಸುವುದು, ಟ್ಯಾಂಕರ್‌ನಲ್ಲಿ ನೀರು ಪೂರೈಸುವುದು, ಒಂದಿಷ್ಟು ಉದ್ಯೋಗ ಒದಗಿಸುವುದು, ಬಹಳಷ್ಟು ಒತ್ತಡ ಬಂದರೆ ಗೋಶಾಲೆ ಮತ್ತು ಮೇವಿನ ಕೇಂದ್ರಗಳನ್ನು ತೆರೆಯುವುದು, ರೈತರಿಗೆ ಎಕರೆಗೆ ಇಂತಿಷ್ಟು ಎಂದು ಒಂದಿಷ್ಟು ಜುಜುಬಿ ಪರಿಹಾರ ಕೊಡುವುದು.

ಇಷ್ಟು ಮಾಡಿ, ‘ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ’ ಎಂದು ಜಂಬ ಕೊಚ್ಚಿಕೊಳ್ಳುವುದು. ಆದರೆ  ಇದು ಬರಗಾಲ ಹೋಗಲಾಡಿಸಲು ಶಾಶ್ವತ ಮದ್ದು ಅಲ್ಲ. ಏಕೆಂದರೆ ರಾಜಸ್ಥಾನ ಬಿಟ್ಟರೆ ಅತಿಹೆಚ್ಚು ಒಣಭೂಮಿ ಇರುವುದು ನಮ್ಮಲ್ಲಿಯೇ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ನಮ್ಮಲ್ಲಿ ಶೇ 80 ರಷ್ಟು ಭೌಗೋಳಿಕ ಪ್ರದೇಶ ಬರಕ್ಕೆ ತುತ್ತಾಗುವ ಎಲ್ಲ ಅಪಾಯಗಳೂ ಇವೆ.

ಶೇ 24ರಷ್ಟು ಪ್ರದೇಶಗಳಲ್ಲಿ ಚಂಡಮಾರುತ ಮತ್ತು ಪ್ರವಾಹ, ಶೇ 22ರಷ್ಟು ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ಹಾನಿಯ ಸಾಧ್ಯತೆ ಹೆಚ್ಚು.  ಇವನ್ನೆಲ್ಲ ಗಣನೆಗೆ ತೆಗೆದುಕೊಂಡು  ಸಮಗ್ರ  ದೀರ್ಘಕಾಲೀನ  ಕಾರ್ಯಕ್ರಮ ರೂಪಿಸಬೇಕು.

ನೀರಾವರಿ ಸೌಕರ್ಯದ ವಿಸ್ತರಣೆ ಮಾತ್ರವಲ್ಲದೆ, ಲಭ್ಯ ನೀರಿನ ಮಿತವ್ಯಯ ಬಳಕೆ, ಕಡಿಮೆ ನೀರು ಬಳಸುವ ಬೆಳೆಗಳು ಹಾಗೂ ಸುಧಾರಿತ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ಮಾಹಿತಿ, ರೋಗ ನಿರೋಧಕ ಮತ್ತು ಅತಿವೃಷ್ಟಿ ಅನಾವೃಷ್ಟಿಯಲ್ಲೂ ಬೆಳೆಯಬಲ್ಲ ತಳಿಗಳ ಸಂಶೋಧನೆ, ಬೆಳೆಗಳಿಗೆ ಲಾಭದಾಯಕ ಬೆಲೆ, ಇವನ್ನೆಲ್ಲ ಒಳಗೊಂಡ ಕೃಷಿ ನೀತಿ... ಹೀಗೆ ಬಹುಮುಖ ಕಾರ್ಯತಂತ್ರ ಬೇಕು.

ದುರದೃಷ್ಟದ ಸಂಗತಿ ಎಂದರೆ ಹತಾಶರಾದ ರೈತರಲ್ಲಿ ಆತ್ಮವಿಶ್ವಾಸ ತುಂಬುವ, ಕೃಷಿಯನ್ನು ಲಾಭದಾಯಕವಾಗಿಸುವ ಯೋಜನೆ  ರೂಪಿಸುವ ವ್ಯವಧಾನವನ್ನಾಗಲೀ, ಮುಂದಾಲೋಚನೆಯನ್ನಾಗಲೀ ನಮ್ಮ ರಾಜ್ಯ ಸರ್ಕಾರಗಳು ಪ್ರದರ್ಶಿಸಿಲ್ಲ.

ಬರ ಅಥವಾ ಪ್ರವಾಹ ಈ ಎರಡರ ಹಿಂದೆಯೂ ಪ್ರಾಕೃತಿಕ ಮತ್ತು ಮಾನವ ನಿರ್ಮಿತ ಕಾರಣಗಳಿವೆ. ಚಂಡಮಾರುತ, ಆಲಿಕಲ್ಲು ಮಳೆ ಇವೆಲ್ಲ ಯಾರ ಕೈಯಲ್ಲಿಲ್ಲ. ಇವುಗಳ ಬಗ್ಗೆ ಮುನ್ಸೂಚನೆ ಕೊಟ್ಟು ಅಪಾಯ ಕಡಿಮೆ ಮಾಡಬಹುದು. ಆದರೆ ಮಾನವ ನಿರ್ಮಿತ ಅನಾಹುತದ ಹೊಣೆಯನ್ನು ನಮ್ಮ ಸರ್ಕಾರಗಳೇ ಹೊರಬೇಕು. ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ಮತ್ತು ಅದಕ್ಕೆ ಕುಮ್ಮಕ್ಕಿನ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ.

ಇದು ಸಾಲದು ಎಂದು ಈಗ ರಾಜ್ಯದಲ್ಲಿ ಅನುಪಯುಕ್ತ ಎಂಬ ಹಣೆಪಟ್ಟಿ ಕಟ್ಟಿ ಕೆರೆಗಳ ಡಿನೋಟಿಫಿಕೇಷನ್‌ಗೆ ಸರ್ಕಾರ ಮುಂದಾಗಿದೆ. ನೀರು ಇಂಗುವ ಪ್ರದೇಶವೇ ಕಡಿಮೆ ಆಗುತ್ತಿದೆ ಎಂದು ಅಧ್ಯಯನಗಳೇ ಹೇಳುತ್ತಿರುವಾಗ ಇಂತಹ ಆಲೋಚನೆಯೇ ವಿನಾಶಕಾರಿ. ಆದ್ದರಿಂದ ಜನರೇ ಸರ್ಕಾರದ ಕಿವಿಹಿಂಡಬೇಕು. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ  ಕರಾಳ ಭವಿಷ್ಯ ಕಟ್ಟಿಟ್ಟ ಬುತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.