ADVERTISEMENT

ಆತ್ಮಾವಲೋಕನಕ್ಕೆ ಸಕಾಲ

​ಪ್ರಜಾವಾಣಿ ವಾರ್ತೆ
Published 19 ಮೇ 2014, 19:30 IST
Last Updated 19 ಮೇ 2014, 19:30 IST

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ದಯ­ನೀಯ­ವಾಗಿ ಸೋತಿದೆ. ಇದು ಆ ಪಕ್ಷಕ್ಕೆ ಮಾತ್ರವಲ್ಲ ಅದರ ಎದುರಾಳಿ­ಗಳಿಗೂ ಅತ್ಯಂತ ಅನಿರೀಕ್ಷಿತ. ಅಧಿಕೃತ ವಿರೋಧ ಪಕ್ಷದ ಸ್ಥಾನಮಾನಕ್ಕೆ ಅಗತ್ಯವುಳ್ಳ 55 ಸದಸ್ಯರ ಸಂಖ್ಯಾಬಲವನ್ನು ಗಳಿಸಲೂ ಕಾಂಗ್ರೆಸ್‌ಗೆ ಸಾಧ್ಯವಾಗಲಿಕ್ಕಿಲ್ಲ ಎಂದು ಯಾರೂ ಊಹಿಸಿರಲಿಲ್ಲ.

128 ವರ್ಷಗಳ ಇತಿಹಾಸವುಳ್ಳ, ಸ್ವಾತಂತ್ರ್ಯಾ­ನಂತರ ನಾಲ್ಕೂವರೆ ದಶಕಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿದ ಪಕ್ಷಕ್ಕೆ ಇಂಥ ಪರಾಭವವನ್ನು ಅರಗಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ.  ಇದು ಸೋಲಿಗೆ ಕಾರಣಗಳನ್ನು ಹುಡುಕುವ, ತಪ್ಪುಗಳನ್ನು ಸರಿಪಡಿಸಿ­ಕೊಳ್ಳುವ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡ­ಬೇಕು.

ಏಕವ್ಯಕ್ತಿ ಸುತ್ತ  ಗಿರಕಿ ಹೊಡೆಯುವ ಪಕ್ಷಗಳ ಬಗ್ಗೆ ಜನ ಅಷ್ಟೊಂದು ತಲೆಕೆಡಿಸಿಕೊಂಡಿಲ್ಲ, ಆದರೆ ವಂಶಾಡಳಿತವನ್ನು ಇಷ್ಟಪಡುವುದಿಲ್ಲ ಎಂಬುದು ಈ ಸಲದ ಚುನಾ­ವಣೆಯ ಸಂದೇಶ. ಅದಕ್ಕಾಗೇ ನರೇಂದ್ರ ಮೋದಿ ಮಾತ್ರವಲ್ಲದೆ ಜಯ­ಲಲಿತಾ, ಮಮತಾ, ನವೀನ್‌ ಪಟ್ನಾಯಕ್‌ ಅವರ ಪಕ್ಷಗಳು ಗೆದ್ದಿವೆ. ಸೋನಿಯಾ, ಫಾರೂಕ್‌ ಅಬ್ದುಲ್ಲಾ, ಮುಲಾಯಂ, ಕರುಣಾನಿಧಿ ಮುಂತಾ­ದವರ ಪಕ್ಷಗಳು ಸೋತಿವೆ.

ಈ ಹಿಂದೆ ಗಾಂಧಿ– ನೆಹರೂ ಕುಟುಂಬ­ದವರಲ್ಲದ ಸೀತಾರಾಂ ಕೇಸರಿ– ಪಿ.ವಿ. ನರಸಿಂಹರಾವ್‌ ಅವಧಿಯಲ್ಲಿಯೂ ಜನ ಕಾಂಗ್ರೆಸ್ಸನ್ನು ತಕ್ಕಮಟ್ಟಿಗೆ ಬೆಂಬಲಿಸಿದ್ದರು. ಜನರ ಈ ತೀರ್ಪುಗಳನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಬೇಕು.
ಇಂದಿರಾ ಗಾಂಧಿ ಕಾಲದಿಂದ ಈಚಿನ ಕಾಂಗ್ರೆಸ್‌ ಇತಿಹಾಸವನ್ನು ಗಮನಿ­ಸಿದರೆ ಅಂಥ ಪ್ರಯತ್ನ ನಡೆಯಬಹುದು ಎಂಬುದೇ ಅನುಮಾನ. ಏಕೆಂದರೆ ಭಟ್ಟಂಗಿತನ, ನೆಹರೂ ಕುಟುಂಬದ ಆರಾಧನೆಯೇ ಕಾಂಗ್ರೆಸ್‌ನಲ್ಲಿ ವಿಜೃಂಭಿ­ಸುತ್ತ ಬಂದಿದೆ. ಸೋನಿಯಾ– ರಾಹುಲ್‌ ಗಾಂಧಿ ಕಾಲದಲ್ಲೂ ಇದು ಮುಂದು­­ವರಿದಿದೆ.

ಈ ಸಲ ಫಲಿತಾಂಶ ಕಾಂಗ್ರೆಸ್‌ಗೆ ವಿರುದ್ಧವಾಗಲಿದೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ‘ಇದಕ್ಕೆ ಸೋನಿಯಾ– ರಾಹುಲ್‌ ಮಾತ್ರ ಕಾರಣರಲ್ಲ, ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ­ದ್ದೆವು, ಹೀಗಾಗಿ ಸೋಲಿಗೆ ಎಲ್ಲರೂ ಹೊಣೆ’ ಎಂದು ಕಾಂಗ್ರೆಸ್‌ನ ಅನೇಕ ಮುಖಂಡರು ಭಟ್ಟಂಗಿಗಳಂತೆ ಸಾಲುಗಟ್ಟಿ ಹೇಳಿಕೆ ನೀಡಿದ್ದರು.

‘ರಾಹುಲ್‌ ಪಕ್ಷದ ನಾಯಕತ್ವ ವಹಿಸಿಕೊಂಡು ಬರೀ 7–8 ತಿಂಗಳಾಗಿದೆ, ಅವರು ಸರ್ಕಾರದ ಭಾಗವಾಗಿರಲಿಲ್ಲ’ ಎಂದು ಹೇಳಿ ಹೀನಾಯ ಸೋಲನ್ನು ಡಾ. ಮನಮೋಹನ್‌ ಸಿಂಗ್‌ ಅವರ ತಲೆಗೆ ಕಟ್ಟುವ ಪ್ರಯತ್ನಗಳೂ ನಡೆದವು. ಆದರೆ ಪಕ್ಷ ಒಳ್ಳೆಯ ಸಾಧನೆ ಮಾಡಿದಾಗ, ‘ಅದು ಸೋನಿಯಾ ನಾಯಕ­ತ್ವಕ್ಕೆ ಸಿಕ್ಕ ಜಯ’ ಎಂದು ಹೊಗಳಿಕೆಯ ಮಳೆ ಸುರಿಸಿದ ನಿದರ್ಶನಗಳು ಮಹಾ ಚುನಾವಣೆಗಳಿಂದ ಹಿಡಿದು ಪಂಚಾಯಿತಿ ಚುನಾವಣೆವರೆಗೂ ಇವೆ. 

ಪಕ್ಷದ ಸೂತ್ರ ಹಿಡಿದವರು ಇನ್ನಾದರೂ ಭಟ್ಟಂಗಿಗಳನ್ನು ದೂರ ಇಡಬೇಕು, ಎಲ್ಲ ಹಂತಗಳಲ್ಲಿ ವಸ್ತುನಿಷ್ಠ ವಿಮರ್ಶೆಗೆ ಅವಕಾಶ ಕೊಡಬೇಕು. ಈಗಿನ ಹೀನಾಯ ಸೋಲಿನ ಸಂದರ್ಭವನ್ನು ಆಂತರಿಕ ಪ್ರಜಾಸತ್ತೆ, ಸಾಮೂಹಿಕ ನಾಯಕತ್ವ ಬಲಪಡಿಸುವ ಅವಕಾಶವಾಗಿ ಬಳಸಿಕೊಳ್ಳಬೇಕು. ಭಾರತದಲ್ಲಿ ಪ್ರಜಾಸತ್ತೆ ಬೇರೂರಲು ಕಾಂಗ್ರೆಸ್‌ನ ಕೊಡುಗೆ ಸಾಕಷ್ಟಿದೆ.

ಅಂಥ ಚಾರಿತ್ರಿಕ ಪಕ್ಷ ದುರ್ಬಲವಾಗುವುದನ್ನು ಯಾರೂ ಅಪೇಕ್ಷಿಸುವುದೂ ಇಲ್ಲ. ಆದರೆ ಸ್ವಯಂಕೃತ ಅಪರಾಧ ಮುಂದುವರಿಸುತ್ತಲೇ ಹೋದರೆ ಅದಕ್ಕೆ ಕಾಂಗ್ರೆಸ್‌ ಇನ್ನೂ ದುಬಾರಿ ಬೆಲೆ ತೆರುವುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.