ADVERTISEMENT

ಈ ದುರ್ವರ್ತನೆ ಖಂಡನಾರ್ಹ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2014, 19:30 IST
Last Updated 15 ಡಿಸೆಂಬರ್ 2014, 19:30 IST

ಚಾಂಪಿಯನ್ಸ್‌ ಟ್ರೋಫಿ ಹಾಕಿಯ ಸೆಮಿಫೈನಲ್‌ನಲ್ಲಿ ಪಾಕಿ­ಸ್ತಾನದ ಕೆಲವು ಆಟಗಾರರ ದುರ್ವರ್ತನೆ ಕ್ರೀಡಾ ಜಗತ್ತು ನಾಚಿ ತಲೆ ತಗ್ಗಿಸುವಂತಿದೆ. ಆ ಆಟಗಾರರು ಭಾರತ ತಂಡದ ಎದುರು ಗೆದ್ದಾಗ ನಡೆದುಕೊಂಡ ರೀತಿ ಕ್ರೀಡಾ ಸ್ಫೂರ್ತಿಗೆ ತಕ್ಕುದಾಗಿರಲಿಲ್ಲ. ಕೆಲವು ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸುತ್ತಾ ತಮ್ಮ ಬೆರಳುಗಳ ಮೂಲಕ ಅಶ್ಲೀಲ ಭಾವಗಳನ್ನು ವ್ಯಕ್ತಪಡಿಸಿದ್ದಲ್ಲದೆ,  ಪ್ರೇಕ್ಷಕರನ್ನು ಅವ­ಹೇಳನ ಮಾಡಿದ್ದರು. ಕಿಕ್ಕಿರಿದಿದ್ದ ಪ್ರೇಕ್ಷಕರು ದಂಗು ಬಡಿದಂತಾದರು. ಜಗತ್ತಿ­ನಾದ್ಯಂತ ಕೋಟ್ಯಂತರ ಹಾಕಿಪ್ರಿಯರು ಟಿ.ವಿ. ಚಾನೆಲ್‌ಗಳಲ್ಲಿ ಈ ದೃಶ್ಯ ನೋಡಿ ಹೇಸಿಗೆ ಪಟ್ಟುಕೊಂಡಿದ್ದಾರೆ.

ಕ್ರೀಡಾಪಟುಗಳು ಸಂಬಂಧಪಟ್ಟ ಕ್ರೀಡೆ­ಯೊಂದರಲ್ಲಿ ನೈಪುಣ್ಯ ಸಾಧಿಸಿದರಷ್ಟೇ ಸಾಲದು, ಉತ್ತಮ ಸಂಸ್ಕಾರವನ್ನೂ ಹೊಂದಿರಬೇಕು. ಈ ಘಟನೆಯ ಬಗ್ಗೆ ಹಾಕಿ ಇಂಡಿಯಾ­ದವರು ಅಂತರ­ರಾಷ್ಟ್ರೀಯ ಹಾಕಿ ಫೆಡರೇಷನ್‌ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮೊದಲಿಗೆ ಹಾಕಿ ಫೆಡರೇಷನ್‌ ಆಡಳಿತಗಾರರು ಪಾಕ್‌ನ ಕೆಲವು ಆಟ­ಗಾರರಿಗೆ ಎಚ್ಚರಿಕೆ ನೀಡಿ ಕೈತೊಳೆದುಕೊಳ್ಳಲು ಯತ್ನಿಸಿದರು. ಪಾಕ್‌ ತಂಡದ ಕೋಚ್‌ ಕ್ಷಮೆ ಯಾಚಿಸಿದರು. ಆದರೆ ಹಾಕಿ ಇಂಡಿಯಾ ಅಷ್ಟಕ್ಕೇ ಸುಮ್ಮನಾ­ಗ­ಲಿಲ್ಲ. ಸಂಬಂಧಪಟ್ಟ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲೇಬೇಕೆಂದು ಪಟ್ಟು ಹಿಡಿಯಿತು. ಹಾಕಿ ಇಂಡಿಯಾದ ಈ ಬಿಗಿಪಟ್ಟು  ಸರಿಯಾಗಿಯೇ ಇದೆ. ಆದರೂ ಹಾಕಿ ಫೆಡರೇಷನ್‌ ಮೀನ ಮೇಷ ಎಣಿಸತೊಡಗಿತು. ಆಗ ಸಂಬಂಧಪಟ್ಟ ಆಟಗಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಮೂರು ವರ್ಷಗಳ ಕಾಲ ಭಾರತ ಯಾವುದೇ ಅಂತರರಾಷ್ಟ್ರೀಯ ಕೂಟಕ್ಕೆ ಆತಿಥ್ಯ ವಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ಹಾಕಿ ಇಂಡಿಯಾ ನೀಡಿತು.

ಭಾರತದ ಹಾಕಿ ಆಡಳಿತಗಾರರ ಒತ್ತಡಕ್ಕೆ ಹಾಕಿ ಫೆಡರೇಷನ್‌ ಕೊನೆಗೂ ಮಣಿಯಿತು. ಅನುಚಿತವಾಗಿ ನಡೆದುಕೊಂಡಿದ್ದ ಅಮ್ಜದ್‌ ಅಲಿ ಮತ್ತು ಮೊಹಮ್ಮದ್‌ ತೌಸಿಕ್‌ ಅವರು ಫೈನಲ್‌ ಪಂದ್ಯದಲ್ಲಿ ಆಡದಿರುವಂತೆ ಆದೇಶ ನೀಡಿತು. ಅಂತಿಮ ಪಂದ್ಯದಲ್ಲಿ ಪಾಕ್‌ ತಂಡ ಜರ್ಮನಿಯ ಎದುರು ಸೋತಿತು. ಪಾಕ್‌ ಆಟಗಾರರು ಈ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ­ವನ್ನೇ ತೋರಿದ್ದಾರೆ. ಇಲ್ಲಿ ಅದು ಗೆದ್ದಿದ್ದರೆ ಏಷ್ಯಾದ ದೇಶಗಳೆಲ್ಲವೂ ಸಂತಸ­ಡುತ್ತಿದ್ದವು.

ಆದರೆ ಒಲಿಂಪಿಕ್‌ ಚಾಂಪಿಯನ್‌ ಜರ್ಮನಿ ಅತ್ಯುತ್ತಮ ಆಟ­ಗಾರ­ರನ್ನು ಹೊಂದಿದೆ. ಹಿಂದೆ ಹತ್ತು ಸಲ ಈ ಪ್ರಶಸ್ತಿಯನ್ನು ಗೆದ್ದ ಪರಂಪ­ರೆಯೂ ಈ ತಂಡದ ಬೆನ್ನಿಗಿದೆ. ಇಂತಹ ಪ್ರಬಲರ ಎದುರು ಪಾಕ್‌ ವೀರೋ­ಚಿತವಾಗಿಯೇ ಆಡಿ ಸೋತಿತು, ನಿಜ. ಆದರೆ ಭಾರತದ ಎದುರಿನ ಪಂದ್ಯದ ನಂತರ ಕೆಲವು ಆಟಗಾರರ ದುರ್ವರ್ತನೆಯಿಂದ ಇಡೀ ಪಾಕ್‌ ತಂಡಕ್ಕೆ ಕಪ್ಪು ಮಸಿ ಬಳಿದಂತಾಗಿದೆ. ಭಾರತ ಮತ್ತು ಪಾಕ್‌ ನಡುವಣ ರಾಜಕೀಯ ಸಂಬಂಧ ಬಹಳ ಸೂಕ್ಷ್ಮವಾಗಿರುವಂತಹ ಸಂದರ್ಭದಲ್ಲಿ  ಕ್ರೀಡೆಯ ಮೂಲಕ ಉಭಯ ರಾಷ್ಟ್ರಗಳ ನಡುವೆ ಸುಮಧುರ ವಾತಾವರಣ ಮೂಡಿಸಲು ಎಲ್ಲರೂ ಯತ್ನಿಸಬೇಕಾದ ಅಗತ್ಯವಿದೆ. ಅಂತಹುದರಲ್ಲಿ ಪಾಕ್‌ನ ಕೆಲವು ಆಟಗಾರರ ವರ್ತನೆ ಖಂಡನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.