ADVERTISEMENT

ಗುರ್ಮೀತ್‌ಗೆ 20 ವರ್ಷ ಜೈಲು ನ್ಯಾಯಕ್ಕೆ ಕೊನೆಗೂ ಸಂದ ಜಯ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2017, 19:30 IST
Last Updated 28 ಆಗಸ್ಟ್ 2017, 19:30 IST
ಗುರ್ಮೀತ್‌ಗೆ 20 ವರ್ಷ ಜೈಲು ನ್ಯಾಯಕ್ಕೆ ಕೊನೆಗೂ ಸಂದ ಜಯ
ಗುರ್ಮೀತ್‌ಗೆ 20 ವರ್ಷ ಜೈಲು ನ್ಯಾಯಕ್ಕೆ ಕೊನೆಗೂ ಸಂದ ಜಯ   

ಅತ್ಯಾಚಾರದ ಅಪರಾಧಕ್ಕಾಗಿ ದೇವಮಾನವ, ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಇನ್ಸಾನ್‌ ಕೊನೆಗೂ ಜೈಲು ಪಾಲಾಗಿದ್ದಾನೆ. ಆಶ್ರಮದ ಇಬ್ಬರು ಸಾಧ್ವಿಗಳ ಮೇಲೆ ಬಲಾತ್ಕಾರ ನಡೆಸಿದ ಪ್ರಕರಣದಲ್ಲಿ ಆತ 20 ವರ್ಷ ಸೆರೆವಾಸ ಅನುಭವಿಸಬೇಕಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಸನ್ಯಾಸಿಯ ಸೋಗು ಹಾಕಿಕೊಂಡು ಮುಗ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆ ಕುಕೃತ್ಯದಿಂದ ಪಾರಾಗಲು ಆತ ಏನೆಲ್ಲ ಕಸರತ್ತು ಮಾಡಿದ್ದ. ಒತ್ತಡದ ತಂತ್ರವಾಗಿ ಆತನ ಅಸಂಖ್ಯಾತ ಬೆಂಬಲಿಗರು ಕೋರ್ಟ್‌ನ ಸುತ್ತ 2–3 ದಿನ ಠಿಕಾಣಿ ಹೂಡಿದ್ದರು. ಆದರೆ ನ್ಯಾಯದ ಕಟಕಟೆಯಲ್ಲಿ ಈ ನಾಟಕ ನಡೆಯಲಿಲ್ಲ. ಮಾಡಿದ ಪಾಪಕ್ಕೆ ಕಾನೂನಿನ ಪ್ರಕಾರ ಸರಿಯಾದ ಶಿಕ್ಷೆ ವಿಧಿಸಿದ ಹರಿಯಾಣದ ಪಂಚಕುಲಾದ ವಿಶೇಷ ಸಿಬಿಐ ಕೋರ್ಟ್‌ನ ನ್ಯಾಯಾಧೀಶ ಜಗದೀಪ್‌ ಸಿಂಗ್‌ ಅವರ ಧೈರ್ಯ, ನ್ಯಾಯಪರತೆ ಶ್ಲಾಘನೀಯ. ಇದು ಅನ್ಯಾಯಕ್ಕೆ ತಕ್ಕ ಶಾಸ್ತಿ, ನ್ಯಾಯಕ್ಕೆ ಸಂದ ಜಯ.

ಗುರ್ಮೀತ್‌ ರಾಮ್‌ ರಹೀಮ್‌ನನ್ನು ಅಪರಾಧಿ ಎಂದು ನ್ಯಾಯಾಲಯ ಶುಕ್ರವಾರ ಘೋಷಿಸಿದ ನಂತರ ನಡೆದ ಹಿಂಸಾಚಾರ, ಪುಂಡಾಟಗಳು ಖಂಡನೀಯ. ಈ ಸಂದರ್ಭದಲ್ಲಿ 38ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾರಿ ಪ್ರಮಾಣದಲ್ಲಿ ಆಸ್ತಿ ಹಾನಿಯಾಗಿದೆ. ವರದಿಗಾಗಿ ಹೋಗಿದ್ದ ಮಾಧ್ಯಮದವರ ಮೇಲೆ ಗುರ್ಮೀತ್‌ನ ಅನುಯಾಯಿಗಳು ಅಮಾನುಷ ಹಲ್ಲೆ ನಡೆಸಿ, ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಹಿಂಸಾಚಾರ ನಡೆಯಬಹುದು ಎಂಬುದನ್ನು ಊಹಿಸಿ ತಕ್ಕ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಹರಿಯಾಣದ ಮನೋಹರಲಾಲ್‌ ಖಟ್ಟರ್‌ ನೇತೃತ್ವದ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಅದರ ಕಹಿಫಲವನ್ನು ಅಮಾಯಕ ನಾಗರಿಕರು ಅನುಭವಿಸಬೇಕಾಯಿತು. ನ್ಯಾಯಾಲಯದ ಸುತ್ತಮುತ್ತ ಸೇರಲು ಗುರ್ಮೀತ್‌ನ ಹಿಂಬಾಲಕರಿಗೆ ಅವಕಾಶ ಕೊಟ್ಟಿದ್ದೇ ಈ ಎಲ್ಲ ಅನಾಹುತಗಳಿಗೆ ಕಾರಣ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯಲ್ಲಿ ಖಟ್ಟರ್‌ ನೇತೃತ್ವದ ಸರ್ಕಾರ ವಿಫಲವಾಗುತ್ತಿರುವುದು ಇದು ಮೂರನೇ ಸಲ. ಅದರಿಂದಾಗಿ ಆ ರಾಜ್ಯ ಮೂರು ಸಲ ದೊಡ್ಡ ಪ್ರಮಾಣದ ಹಿಂಸಾಚಾರ, ದೊಂಬಿಯನ್ನು ಕಾಣಬೇಕಾಯಿತು. ಅದಕ್ಕಾಗಿ ಹೈಕೋರ್ಟ್, ಖಟ್ಟರ್‌ ನೇತೃತ್ವದ ಸರ್ಕಾರಕ್ಕೆ ಸರಿಯಾಗಿಯೇ ಛೀಮಾರಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನೂ ಬಿಡದೆ ತರಾಟೆಗೆ ತೆಗೆದುಕೊಂಡಿದೆ. ಪದೇಪದೇ ವಿಫಲರಾಗುತ್ತಿರುವ ಖಟ್ಟರ್‌ ಬಗ್ಗೆ ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಬಿಜೆಪಿ ಬೇಗ ನಿರ್ಧಾರ ತೆಗೆದುಕೊಳ್ಳಬೇಕು. ನಿಷ್ಕ್ರಿಯ ಆಡಳಿತದಿಂದ ಆ ರಾಜ್ಯದ ಜನ ಅನುಭವಿಸುತ್ತಿರುವ ಬವಣೆಗೆ ಅಂತ್ಯ ಹಾಡಬೇಕು.

ಗುರ್ಮೀತ್‌ನ ಬಹುಪಾಲು ಅನುಯಾಯಿಗಳು ಸಿಖ್‌ ಸಮುದಾಯದಲ್ಲಿನ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರು. ಸಂಖ್ಯಾಬಲವೂ ಇದೆ. ಅದರಿಂದಾಗಿ ಈತ ರಾಜಕೀಯವಾಗಿ ಪ್ರಭಾವಶಾಲಿ. ಎಲ್ಲ ಪಕ್ಷಗಳೂ ಅವನಿಂದ ಲಾಭ ಪಡೆದುಕೊಂಡಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ. ಹೀಗಾಗಿಯೇ ಬಿಜೆಪಿ ಸರ್ಕಾರ ಅವನ ಬಗ್ಗೆ ಮೃದು ಧೋರಣೆ ತಳೆದಿದೆ ಎಂಬ ಆರೋಪಗಳಲ್ಲಿ ಹುರುಳಿದೆ ಎಂಬುದು ಸರ್ಕಾರಿ ಯಂತ್ರದನಿಷ್ಕ್ರಿಯತೆಯಿಂದ ಸ್ಪಷ್ಟವಾಗಿದೆ.

ADVERTISEMENT

ನಮ್ಮ ದೇಶದಲ್ಲಿ ಸನ್ಯಾಸಿಗಳು, ಮಠಾಧಿಪತಿಗಳು, ಬಾಬಾಗಳು, ಸಾಧು–ಸಂತರು, ಸ್ವಯಂಘೋಷಿತ ದೇವಮಾನವರು, ಅನುಭಾವಿಗಳು, ಯೋಗಿಗಳು... ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕರೆಸಿಕೊಳ್ಳುವ ಧಾರ್ಮಿಕ, ಆಧ್ಯಾತ್ಮಿಕ ಮಾರ್ಗದರ್ಶಕರಿಗೆ ಬಹಳ ಗೌರವ. ಅದು ನಮಗೆ ಪರಂಪರೆಯಿಂದಲೇ ಬಂದಿದೆ. ಇವರಲ್ಲಿ ಹೆಚ್ಚಿನವರು ತುಂಬ ಗಾಂಭೀರ್ಯದಿಂದಲೇ ನಡೆದುಕೊಂಡಿದ್ದಾರೆ. ಸಮಾಜಕ್ಕೆ ಕಾಲಕಾಲಕ್ಕೆ ಮಾರ್ಗದರ್ಶನ ಮಾಡುತ್ತ ಸರ್ವಸಂಗ ಪರಿತ್ಯಾಗಕ್ಕೆ ಮಾದರಿಯಾಗಿದ್ದಾರೆ. ಆದರೆ ಕೆಲವರು ಮಾತ್ರ ತುಂಬ ಅಸಹ್ಯವಾಗಿ ವರ್ತಿಸುವ ಮೂಲಕ ಇಡೀ ಸಮಾಜಕ್ಕೆ ಕೆಟ್ಟ ಹೆಸರು ತಂದಿದ್ದಾರೆ. ಸತ್‌ಪರಂಪರೆಗೇ ಕಳಂಕ ಅಂಟಿಸಿದ್ದಾರೆ. ಕೊಲೆ, ವ್ಯಭಿಚಾರ, ಅತ್ಯಾಚಾರದಂತಹ ಅನಿಷ್ಟ ಕೃತ್ಯಗಳನ್ನು ನಡೆಸಿ ತಮ್ಮ ಪೀಠಕ್ಕೆ, ತಮ್ಮಲ್ಲಿ ವಿಶ್ವಾಸ ಇಟ್ಟಂತಹ ಭಕ್ತರಿಗೆ ದ್ರೋಹ ಎಸಗಿದ್ದಾರೆ. ಇವರನ್ನೆಲ್ಲ ಸಮಾಜವೇ ದೂರ ಇಡಬೇಕು. ಇಂತಹ ಡೋಂಗಿ ಬಾಬಾಗಳನ್ನು ಗುರುತಿಸಲು ಅಖಿಲ ಭಾರತ ಅಖಾಡ ಪರಿಷತ್‌ ನಿರ್ಧರಿಸಿರುವುದು ಈ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.