ADVERTISEMENT

ಚುನಾವಣೆಗೆ ಕಣ ಸಿದ್ಧ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2014, 19:30 IST
Last Updated 30 ಮಾರ್ಚ್ 2014, 19:30 IST

ನಾಮಪತ್ರ ವಾಪಸಾತಿ ಗಡುವಿನ ಮುಕ್ತಾಯದೊಂದಿಗೆ ನಮ್ಮ ರಾಜ್ಯ­ದಲ್ಲಿ ಮಹಾ ಚುನಾವಣೆಗೆ ಕಣ ಸಿದ್ಧವಾಗಿದೆ. ಮುಖಾ­ಮುಖಿ­­ಯಾಗುವ ಹುರಿಯಾಳುಗಳು ಯಾರೆಂಬುದು ಅಂತಿಮಗೊಂಡಿದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್‌ ಅಧಿಕೃತ ಅಭ್ಯರ್ಥಿ ಶಿವಾನಂದ ನಾಯ್ಕ ಅವರು ಕೊನೆ ಕ್ಷಣದಲ್ಲಿ ಹಿಂದೆ ಸರಿದು ನಾನಾ ಬಗೆಯ ವ್ಯಾಖ್ಯಾನಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಪಕ್ಷ ನಿಷ್ಠೆ ಪರಿಗಣಿಸದೆ ಏನೇನೋ ಲೆಕ್ಕಾಚಾರ ಹಾಕಿ ಪಕ್ಷಕ್ಕೆ ಬರಮಾಡಿಕೊಂಡು ಟಿಕೆಟ್ ಕೊಡುವ ರಾಜಕೀಯ ಪಕ್ಷಗಳು ಇದರಿಂದ ಕಲಿಯುವುದು ಬಹಳಷ್ಟಿದೆ. ಈ ವಿದ್ಯ­ಮಾನ ಬಿಟ್ಟರೆ ಉಳಿದಂತೆ ಬಹುತೇಕ ಕಡೆ ತ್ರಿಕೋನ ಸ್ಪರ್ಧೆ ಎದ್ದು­ಕಾಣುತ್ತಿದೆ.

ಸಾಂಪ್ರದಾಯಿಕ ಕುಸ್ತಿಯಲ್ಲಿ ಗೆದ್ದವರು ಮತ್ತು ಸೋತವರು ಸ್ನೇಹ ಭಾವದಿಂದಲೇ ಕಣದಿಂದ ನಿರ್ಗಮಿಸುತ್ತಾರೆ. ಈ ಚುನಾವಣೆ ಕೂಡ ಅಂಥ ಉನ್ನತ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಬೇಕು. ಸ್ಪರ್ಧಿಗಳು ಪ್ರಜಾ­ಪ್ರಭುತ್ವದ ಮೌಲ್ಯ, ಆದರ್ಶಗಳನ್ನು ಎತ್ತಿಹಿಡಿಯಬೇಕು. ಮುಕ್ತ, ನಿಷ್ಪಕ್ಷ­ಪಾತ ಮತ್ತು ನ್ಯಾಯಯುತ ಚುನಾವಣೆ ನಡೆಸುವ ಪವಿತ್ರ ಕಾರ್ಯ­ದಲ್ಲಿ ಎಲ್ಲ ಪಕ್ಷಗಳು, ಹುರಿಯಾಳುಗಳು, ಮತದಾರರು ಒಗ್ಗೂಡಿ ಚುನಾ­ವಣಾ ಆಯೋಗಕ್ಕೆ ನೆರವಾಗಬೇಕು. ಏಕೆಂದರೆ ಇದು ಆಯೋಗಕ್ಕೆ ಮಾತ್ರ ಸೇರಿದ ಜವಾಬ್ದಾರಿಯಲ್ಲ. ಎಲ್ಲರ ಸಹಕಾರವೂ ಮುಖ್ಯ.

ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಸರ್ಕಾರಿ ಸಿಬ್ಬಂದಿ ಮೇಲಂತೂ ಹೆಚ್ಚು ಹೊಣೆ­ಯಿದೆ. ಸ್ಥಳೀಯ ಚಿಲ್ಲರೆ ರಾಜಕೀಯದ ಪ್ರಭಾವಕ್ಕಾಗಲಿ, ಆಸೆ ಆಮಿಷ­ಗಳಿ­ಗಾ­ಗಲಿ ಅವರು ಬಲಿಯಾಗಬಾರದು. ಹಂಸಕ್ಷೀರ ನ್ಯಾಯವನ್ನು ಪರಿಪಾಲಿ­ಸ­ಬೇಕು. ವೃಥಾ ಆರೋಪಗಳನ್ನು ಮೈಮೇಲೆ ಎಳೆದುಕೊಳ್ಳುವ ದುಸ್ಸಾಹಸ ಬೇಡ. ಏಕೆಂದರೆ ಚುನಾವಣೆ ಎನ್ನುವುದು ಜನತಂತ್ರದ ಜೀವಾಳ. ಇಡೀ ವಿಶ್ವ ನಮ್ಮ ದೇಶದ ಚುನಾವಣೆಗಳನ್ನು ಬೆರಗುಗಣ್ಣಿನಿಂದ ನೋಡುತ್ತಿರುವಾಗ ಯಾವುದೇ ಲೋಪ, ಆಪಾದನೆಗಳಿಗೆ ಅವಕಾಶ ಇಲ್ಲದೆ ಇಡೀ ಪ್ರಕ್ರಿಯೆ ಮುಗಿ­ಯುವಂತೆ ನೋಡಿಕೊಳ್ಳುವಲ್ಲಿ ಸರ್ಕಾರಿ ಆಡಳಿತ ಯಂತ್ರ ಮೈಯೆಲ್ಲ ಕಣ್ಣಾಗಿ ಕೆಲಸ ನಿರ್ವಹಿಸಬೇಕು.

ಇನ್ನು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮೇಲೆಯೂ ತುಂಬ ಜವಾ­ಬ್ದಾರಿಯಿದೆ. ಚುನಾವಣೆ ಎಂದರೆ ಎದುರಾಳಿಗಳನ್ನು ಹಳಿಯುವುದು ಸಹಜ. ಆದರೆ ಅದು ಆರೋಗ್ಯಕರವಾಗಿರಬೇಕು ಮತ್ತು ಅದಕ್ಕೊಂದು ಸೈದ್ಧಾಂ­ತಿಕ, ತಾತ್ವಿಕ ನೆಲೆಗಟ್ಟು ಇರಬೇಕು. ವೈಯಕ್ತಿಕ ನಿಂದನೆ, ಚಾರಿತ್ರ್ಯ­ವಧೆ, ನಾಲಿಗೆ ಹರಿಬಿಟ್ಟು ಬೇಕಾಬಿಟ್ಟಿ ಮಾತನಾಡುವುದು ಸಲ್ಲದು. ಅತಿ ಹೆಚ್ಚಿನ ಸಂಯಮ ಪ್ರದರ್ಶಿಸಬೇಕು. ಮತದಾರರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿ­ಸು­ತ್ತಾರೆ ಎಂಬುದು ಸದಾ ನೆನಪಿನಲ್ಲಿರಲಿ.

ಆಯೋಗ ಕೂಡ ಸಾಕಷ್ಟು ಕ್ರಿಯಾಶೀಲವಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವ­ರನ್ನು ಕತ್ತರಿಸಿ ಹಾಕಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದ ಉತ್ತರ­ಪ್ರದೇಶದ ಸಹಾರನಪುರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು ಉಳಿದವ­ರಿಗೂ ಎಚ್ಚರಿಕೆಯ ಗಂಟೆ. ಪ್ರಾಯಶಃ ಹಿಂದೆ ಯಾವಾಗಲೂ ಆಯೋಗ ಇಷ್ಟೊಂದು ತ್ವರಿತವಾಗಿ ಕ್ರಮ ಕೈಗೊಂಡಿರಲಿಲ್ಲ. ಬಾಯಿ ತೆರೆಯುವಾಗ ಹುಷಾ­ರಾಗಿ­ರಬೇಕು ಎನ್ನುವುದನ್ನು ಅಭ್ಯರ್ಥಿಗಳು, ರಾಜಕಾರಣಿಗಳು ಈ ಪ್ರಕರಣದಿಂದ ಅರಿತರೆ ಚುನಾವಣಾ ರಂಗ ಎಷ್ಟೋ ಶುದ್ಧವಾಗುತ್ತದೆ. ಜನ­ತಂತ್ರದ ಉನ್ನತ ಪರಂಪರೆಯೂ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT