ADVERTISEMENT

ಪೂರ್ಣಾವಧಿ ರಕ್ಷಣಾ ಸಚಿವರ ನೇಮಕ ಶೀಘ್ರ ಆಗಲಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2017, 2:47 IST
Last Updated 17 ಮಾರ್ಚ್ 2017, 2:47 IST
ಪೂರ್ಣಾವಧಿ ರಕ್ಷಣಾ ಸಚಿವರ ನೇಮಕ ಶೀಘ್ರ ಆಗಲಿ
ಪೂರ್ಣಾವಧಿ ರಕ್ಷಣಾ ಸಚಿವರ ನೇಮಕ ಶೀಘ್ರ ಆಗಲಿ   

ಕೇಂದ್ರ ರಕ್ಷಣಾ ಸಚಿವ ಹುದ್ದೆ  ತೊರೆದು  ಮನೋಹರ ಪರಿಕ್ಕರ್ ಅವರು ಗೋವಾ ಮುಖ್ಯಮಂತ್ರಿಯಾಗಿ ಮೂರನೇ ಬಾರಿ  ಅಧಿಕಾರ ಸ್ವೀಕರಿಸಿದ್ದಾರೆ. ಹೀಗಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೆಚ್ಚುವರಿಯಾಗಿ ಮತ್ತೆ ರಕ್ಷಣಾ ಸಚಿವ ಖಾತೆ ವಹಿಸಿಕೊಂಡಿದ್ದಾರೆ. 

2014ರಲ್ಲಿ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದಾಗ  ಜೇಟ್ಲಿ ಅವರೇ ಹಣಕಾಸು ಜೊತೆಗೆ ರಕ್ಷಣಾ ಖಾತೆಯ ಹೆಚ್ಚುವರಿ ಹೊಣೆಯನ್ನು  ಹೊತ್ತುಕೊಂಡು  ಆರು ತಿಂಗಳು ನಿಭಾಯಿಸಿದ್ದರು. ಈಗ ಮತ್ತೆ ಅದೇ ಪುನರಾವರ್ತನೆಯಾಗಿದೆ.

ಯುಪಿಎ ಆಡಳಿತ ಅವಧಿಯಲ್ಲಿ ಎ.ಕೆ. ಆಂಟನಿ ಅವರು ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿ ಇಲಾಖೆಯಲ್ಲಿ ಆವರಿಸಿಕೊಂಡಿದ್ದ ಜಡತ್ವ ಅಳಿಸಿಹಾಕಲು ಈ ಐಐಟಿ ಪದವೀಧರನನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗೋವಾದಿಂದ  ಕರೆಸಿಕೊಂಡಿದ್ದರು.

ADVERTISEMENT

ಜೊತೆಗೆ ಆಂಟನಿ ಅವರ ದೃಢ ನಿರ್ಧಾರ ಕೈಗೊಳ್ಳಲಾಗದ ಮನಸ್ಥಿತಿಯಿಂದ ತಡೆಹಿಡಿಯಲಾಗಿದ್ದ ರಕ್ಷಣಾ ಸಾಮಗ್ರಿ ಖರೀದಿ ವ್ಯವಹಾರಕ್ಕೆ ವೇಗ ನೀಡುವ ಅಗತ್ಯವೂ ಆ ಸಂದರ್ಭದಲ್ಲಿ ಇತ್ತು. ಆದರೆ ಈಗ ಪರಿಕ್ಕರ್ ಮತ್ತೆ  ಗೋವಾಗೆ ವಾಪಸಾಗಿದ್ದಾರೆ. 

ರಕ್ಷಣಾ ಸಚಿವಾಲಯದಲ್ಲಿ ಖರೀದಿ ವ್ಯವಹಾರಗಳು ಈಗಲೂ ನನೆಗುದಿಗೆ ಬಿದ್ದಿವೆ. ಪಠಾಣ್‌ಕೋಟ್ ಹಾಗೂ ಉರಿ ಮಿಲಿಟರಿ ನೆಲೆಗಳಲ್ಲಿ ಪರಿಕ್ಕರ್ ಅವಧಿಯಲ್ಲಿ ದಾಳಿಗಳೂ ನಡೆದಿದ್ದವು. ಪರಿಕ್ಕರ್ ಅವರು ಆದರ್ಶ ಗುರಿಗಳನ್ನು ಹೊಂದಿದ್ದರೂ ಅಧಿಕಾರಶಾಹಿಯ ಜೊತೆ ಸಮನ್ವಯ ಸಾಧಿಸುವಲ್ಲಿ ವಿಫಲರಾದರು. ಹೀಗಾಗಿ ರಕ್ಷಣಾ ಸಾಮಗ್ರಿ ಖರೀದಿ ಸುಧಾರಿಸುವಲ್ಲಿ ಸಫಲರಾಗಲಿಲ್ಲ. ನನೆಗುದಿಗೆ ಸಿಲುಕಿರುವ ರಕ್ಷಣಾ ಸಾಮಗ್ರಿ ಖರೀದಿ ವ್ಯವಹಾರಗಳನ್ನು ಮುಂದಕ್ಕೊಯ್ಯಲು ಇಲಾಖೆಗೆ ಸಮರ್ಥ ನಾಯಕತ್ವದ ಅಗತ್ಯ ಇದೆ.

27 ತಿಂಗಳ ಕಾಲ ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿ ಮನೋಹರ ಪರಿಕ್ಕರ್ ಅವರು ಹಲವು ರಂಗಗಳಲ್ಲಿ ಸುಧಾರಣಾ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಹಲವು ದಶಕಗಳಿಂದ ವಿವಾದಕ್ಕೀಡಾಗಿದ್ದ ‘ಒಂದು ಶ್ರೇಣಿ, ಒಂದು ಪಿಂಚಣಿ’ ವಿಚಾರಕ್ಕೆ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಾಗದಿದ್ದರೂ ಸೂತ್ರವೊಂದನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದರು.

ವಿದೇಶಿ ಹೂಡಿಕೆ ಹಾಗೂ ವಿದೇಶಿ ತಂತ್ರಜ್ಞಾನವನ್ನೇ ಹೆಚ್ಚು ಅವಲಂಬಿಸಿರುವ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಗೆ ಪರಿಕ್ಕರ್ ಆದ್ಯತೆ ನೀಡಿದರು. ಅವರು ಆರಂಭಿಸಿದ ‘ಭಾರತದಲ್ಲೇ ತಯಾರಿಸಿ’ ಉಪಕ್ರಮವನ್ನು ಮುಂದಕ್ಕೊಯ್ಯುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ  ಭಾರಿ ಪ್ರಮಾಣದ ಆಮದನ್ನು ತಪ್ಪಿಸಬೇಕಾಗಿದೆ.

ಇದಕ್ಕೆ ಸಂಬಂಧಿಸಿದಂತೆ 2016ರ ಮಾರ್ಚ್‌ ತಿಂಗಳಲ್ಲಿ ಬಿಡುಗಡೆ ಮಾಡಲಾಗಿರುವ ರಕ್ಷಣಾ ಸಾಮಗ್ರಿಗಳ ಖರೀದಿ ಪ್ರಕ್ರಿಯೆ (ಡಿಪಿಪಿ) ಪರಿಷ್ಕೃತ ನೀತಿಯನ್ನು ಮುಂದಕ್ಕೊಯ್ಯಬೇಕಾಗಿದೆ. ಬಹಳ ವರ್ಷಗಳಿಂದ, ವಿಶ್ವದಲ್ಲೇ ಶಸ್ತ್ರಾಸ್ತ್ರಗಳ ಅತಿ ದೊಡ್ಡ ಆಮದುದಾರ ರಾಷ್ಟ್ರವಾಗಿದೆ ಭಾರತ. ಹಾಗೆಯೇ ರಕ್ಷಣಾ ಸಾಮಗ್ರಿಗಳ ಖರೀದಿ ವ್ಯವಹಾರ ಅನೇಕ ಭಾರಿ ಹಗರಣಗಳಿಗೂ ಕಾರಣವಾಗಿದೆ ಎಂಬುದನ್ನು ನೆನೆಯಬೇಕು.

ಜೊತೆಗೆ, 2001ರಲ್ಲಿ ಸಚಿವರ ತಂಡದ (ಜಿಒಎಂ) ಶಿಫಾರಸನ್ನು ಆಧರಿಸಿ  ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಹುದ್ದೆ ಸೃಷ್ಸಿಸುವ ಪ್ರಸ್ತಾವವೂ ನನೆಗುದಿಗೆ ಸಿಲುಕಿದೆ. ಭೌಗೋಳಿಕ ರಾಜಕೀಯ ಬೆದರಿಕೆಗಳಲ್ಲದೆ ಬದಲಾಗುತ್ತಿರುವ ಜಗತ್ತಿನ ವಾಸ್ತವಗಳಿಗೆ ತಕ್ಷಣ ಸ್ಪಂದಿಸಲು ಪೂರ್ಣ ಪ್ರಮಾಣದ ಸಚಿವರು ಅನಿವಾರ್ಯ.

ಸುಧಾರಣಾ ಯೋಜನೆಗಳನ್ನು ಮುಂದಕ್ಕೊಯ್ಯಲೂ ಪೂರ್ಣ ಪ್ರಮಾಣದ ಸಚಿವರು ಬೇಕು. ಆದರೆ ಈ ಹುದ್ದೆಯನ್ನು ಮುಂದೆ ಯಾರೇ ವಹಿಸಿಕೊಂಡರೂ ಸಶಸ್ತ್ರ ಪಡೆಗಳು ಹಾಗೂ ಸರ್ಕಾರದ ಮಧ್ಯದ ಅಧಿಕಾರದ ಸಾಂಸ್ಥಿಕ ಸಮತೋಲನವನ್ನು ಅಲುಗಾಡಿಸಬಾರದು.

ಯಾಕೆಂದರೆ ಈ ಸಮತೋಲನವೇ ಪ್ರಜಾಪ್ರಭುತ್ವದ ಶಕ್ತಿ. ಈ ವಿಚಾರದ ಬಗ್ಗೆ ಆಗಾಗ್ಗೆ ಕಳಕಳಿಯೂ  ವ್ಯಕ್ತವಾಗಿದೆ. ರಕ್ಷಣಾ ಖಾತೆಯ ಹೊಣೆಗಾರಿಕೆ ವಹಿಸಿಕೊಳ್ಳುವಂತಹವರು ಸ್ವಚ್ಛ ಆಡಳಿತ ನೀಡುವಂತಹ ದಕ್ಷತೆ ಜೊತೆಗೆ ಬದ್ಧತೆಯನ್ನೂ ಹೊಂದಿದವರಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.