ADVERTISEMENT

ಮಾಲಿನ್ಯ ನಿಯಂತ್ರಿಸಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2014, 19:30 IST
Last Updated 19 ಆಗಸ್ಟ್ 2014, 19:30 IST

ಬೆಂಗಳೂರಿನ ಮೂಲೆ ಮೂಲೆಯಲ್ಲೂ ಪರಿಸರ ಮಾಲಿನ್ಯ ಮಿತಿಮೀರಿದೆ. ಇದನ್ನೇ ಮುಂದಿಟ್ಟುಕೊಂಡ ಹೈಕೋರ್ಟ್‌, ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯನ್ನು ಏಕೆ ಸೂಪರ್‌ಸೀಡ್‌ ಮಾಡಬಾರದು’ ಎಂದು ಖಾರವಾಗಿ ಪ್ರಶ್ನಿಸಿದೆ. ಜನಸಾಮಾನ್ಯರ ಮನಸ್ಸಿನಲ್ಲಿ ಇರುವ ಆಕ್ರೋಶ, ನ್ಯಾಯಾಲಯದ ಮೂಲಕ ಹೊರಹೊಮ್ಮಿದೆ.

ಕೈಗಾರಿಕೆ   ಮತ್ತು ಜನವಸತಿ ಪ್ರದೇಶಗಳಲ್ಲಿನ  ಶಬ್ದ ಹಾಗೂ ವಾಯುಮಾಲಿನ್ಯದ ಗರಿಷ್ಠ ಮಿತಿಯನ್ನು ಮಂಡಲಿ ಗುರುತಿಸಿದೆ. ಆದರೆ ಬೆಂಗಳೂರಿನಲ್ಲಿ ಮಾಲಿನ್ಯದ ಪ್ರಮಾಣ ಎಲ್ಲಿಯೂ ನಿಯಂತ್ರಣದಲ್ಲಿ  ಇಲ್ಲ. ಕೈಗಾರಿಕೆ ಮತ್ತು ವಾಹನಗಳಿಂದ ಉಂಟಾಗುವ ವಾಯು ಮತ್ತು ಶಬ್ದ ಮಾಲಿನ್ಯದ ಪ್ರಮಾಣವಂತೂ ಮಿತಿಮೀರಿದೆ. ಇದನ್ನು ನಿಯಂತ್ರಿಸುವ ಇಲ್ಲವೇ ಪರೀಕ್ಷೆಗೆ ಒಳಪಡಿಸುವ ಯತ್ನವೂ ಆದಂತಿಲ್ಲ. ವಾಹನ ಮಾಲಿನ್ಯ ನಿಯಂತ್ರಣ ನೇರವಾಗಿ ಮಂಡಲಿಯ ವ್ಯಾಪ್ತಿಗೆ ಬರದಿದ್ದರೂ, ಹೈಕೋರ್ಟ್‌ನಲ್ಲಿ ಹೊಣೆಯನ್ನು ಒಪ್ಪಿಕೊಳ್ಳುವ ಮೂಲಕ ಮಂಡಲಿಯು ಈ ಜವಾಬ್ದಾರಿಯನ್ನು  ತನ್ನ ಹೆಗಲಿಗೇರಿಸಿಕೊಂಡಿದೆ.

ಮಾಲಿನ್ಯ ನಿಯಂತ್ರಣ ಮಂಡಲಿ, ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸರ ನಡವಳಿಕೆಯನ್ನು ಗಮನಿಸಿದರೆ ಇವರ್‍ಯಾರಿಗೂ ಬೆಂಗಳೂರಿನ ಪರಿಸರ ಸ್ವಾಸ್ಥ್ಯದ ಬಗ್ಗೆ ಕಾಳಜಿಯೇ ಇಲ್ಲ ಎನಿಸುತ್ತದೆ. ಕೆಲ ವಾಹನಗಳ ಹಾರ್ನ್‌ ಕಿವುಡಾಗುವಷ್ಟು ಜೋರಾಗಿರುತ್ತದೆ.

  ಇಂತಹ ವಾಹನಗಳ ಮಾಲೀಕರು ಮೂಲ ಹಾರ್ನ್‌ಗಳನ್ನು ಕಿತ್ತು ತಮಗೆ ಬೇಕಾದಂತೆ ಕರ್ಕಶವಾದ  ಹಾರ್ನ್‌ಗಳನ್ನು ಅಳವಡಿಸಿಕೊಂಡಿರುತ್ತಾರೆ. ಮುಂದುವರೆದ ದೇಶಗಳಲ್ಲಿ ಹಾರ್ನ್‌ ಮಾಡುವುದೇ ಅನಾಗರಿಕ ವರ್ತನೆ. ಆದರೆ ಭಾರತದಲ್ಲಿ ಹೆಚ್ಚು ಸದ್ದಿನ (ಡೆಸಿಬಲ್‌) ಹಾರ್ನ್‌ ಮಾಡುವುದು ತಮ್ಮ ಹಕ್ಕು ಎಂದು ಚಾಲಕರು ಭಾವಿಸಿದಂತಿದೆ.  ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲೂ ಹಾರ್ನ್‌ ಮಾಡುವಾಗ ಸಂಯಮ ಇರಬೇಕು.  

ಇನ್ನು ವಾಹನಗಳು ಉಗುಳುವ ಹೊಗೆಯನ್ನು ನೋಡಿದರೆ ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಇರದಿದ್ದರೂ ನಡೆಯುತ್ತದೆ ಎನ್ನುವ ತಾತ್ಸಾರ ಚಾಲಕರಲ್ಲಿ ಎದ್ದು ಕಾಣುತ್ತದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ದಂಡ ಹಾಕುತ್ತಾರೆ ಎನ್ನುವ ಭಯ ಇಲ್ಲದಿದ್ದರೆ  ಏನಾಗುತ್ತದೆ ಎನ್ನುವುದಕ್ಕೆ ರಸ್ತೆ ಮೇಲಿರುವ ವಾಹನಗಳು ಉಗುಳುವ ಹೊಗೆ, ಕರ್ಕಶ ಹಾರ್ನ್‌ ಸಾಕ್ಷಿ. ಶಬ್ದ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸಿದರೆ ಸಾಕು. ಕಿವುಡುತನ, ಉಸಿರಾಟದ ತೊಂದರೆ ಮತ್ತು ಕಣ್ಣಿನ ಉರಿ ಖಂಡಿತ  ಕಡಿಮೆಯಾಗುತ್ತದೆ. 

ವಾಹನ ಮಾಲಿನ್ಯ ತಡೆಯಲು ಮಾಲಿನ್ಯ ನಿಯಂತ್ರಣ ಮಂಡಲಿಯು ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿಗಳುಳ್ಳ ತಂಡ ರಚಿಸಬೇಕು.  ಮದ್ಯ ಸೇವಿಸಿ ಚಾಲನೆ ಮಾಡುವವರ, ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸಲು ತೋರಿಸುವ ಉತ್ಸಾಹವನ್ನು ಮಾಲಿನ್ಯ ಮಾಡುವ ವಾಹನ ಚಾಲಕರ ವಿರುದ್ಧವೂ ಸಂಚಾರ ಪೊಲೀಸರು ಪ್ರದರ್ಶಿಸಬೇಕು. ಶಬ್ದ ಮತ್ತು ವಾಯುಮಾಲಿನ್ಯ ಮಾಡುವ ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಸಿಬ್ಬಂದಿ ಇಲ್ಲ ಎನ್ನುವ ಸಬೂಬು ಹೇಳಲೇಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.