ADVERTISEMENT

ಮುರಿದ ಮಹಾಮೈತ್ರಿಕೂಟ ಅವಕಾಶವಾದಿ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 19:50 IST
Last Updated 27 ಜುಲೈ 2017, 19:50 IST
ಮುರಿದ ಮಹಾಮೈತ್ರಿಕೂಟ ಅವಕಾಶವಾದಿ ರಾಜಕಾರಣ
ಮುರಿದ ಮಹಾಮೈತ್ರಿಕೂಟ ಅವಕಾಶವಾದಿ ರಾಜಕಾರಣ   

ಬಿಹಾರದಲ್ಲಿ ಬುಧವಾರ ಸಂಜೆಯಿಂದೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳು ಆ ರಾಜ್ಯದ ಮೇಲೆ ಮಾತ್ರವಲ್ಲ ಇಡೀ ದೇಶದ ರಾಜಕಾರಣದ ಮೇಲೆ ಪರಿಣಾಮ ಬೀರಿವೆ. ಮುಂದೆಯೂ ಬೀರಲಿವೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಜತೆ ಸೇರಿಕೊಂಡು ತಾವೇ ಕಟ್ಟಿದ್ದ ‘ಮಹಾಘಟಬಂಧನ’ ಎಂಬ ಹೊಸ ರಾಜಕೀಯ ಪ್ರಯೋಗವನ್ನು ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತಾವೇ ಕೈಯಾರೆ ಅಂತ್ಯಗೊಳಿಸಿದ್ದಾರೆ. ಇದರೊಂದಿಗೆ ಬಿಜೆಪಿಯೇತರ ಪಕ್ಷಗಳ ಮಹಾ ಮೈತ್ರಿಕೂಟದ ಕನಸನ್ನು ಸದ್ಯಕ್ಕಂತೂ ನುಚ್ಚುನೂರು ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಬುಧವಾರ ಸಂಜೆ ರಾಜೀನಾಮೆ ಕೊಟ್ಟು ಗುರುವಾರ ಬಿಜೆಪಿಯ ಸಹಾಯದೊಂದಿಗೆ ಹೊಸ ಮೈತ್ರಿಕೂಟ ರಚಿಸಿ ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದಾರೆ.

ರಾಜೀನಾಮೆ ಕೊಡುವಾಗ ಅವರು ಹೇಳಿದ್ದು ‘ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತಿದ್ದೇನೆ’ ಎಂದು. ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪುನರುಚ್ಚರಿಸಿದ್ದು ‘ಭ್ರಷ್ಟಾಚಾರವನ್ನು ಎಳ್ಳಷ್ಟೂ ಸಹಿಸಲಾರೆ’ ಎಂದು. ಆದರೆ ಮೂರು ವರ್ಷಗಳ ಹಿಂದೆ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜತೆ ಕೈಜೋಡಿಸಿ ಮಹಾಮೈತ್ರಿಕೂಟ ರಚಿಸಿಕೊಳ್ಳುವಾಗಲೂ ಲಾಲು ಅವರ ಭ್ರಷ್ಟಾಚಾರದ ಹಿನ್ನೆಲೆ, ಮೇವು ಹಗರಣದಲ್ಲಿ ಅವರು ಜೈಲು ಶಿಕ್ಷೆ ಅನುಭವಿಸಿ ಬಂದದ್ದು ನಿತೀಶ್‌ಗೆ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ರಾಜಕಾರಣದಲ್ಲಿ ತತ್ವ, ಸಿದ್ಧಾಂತಗಳಿಗೆ ಯಾವ ಬೆಲೆಯೂ ಇಲ್ಲ; ಅನುಕೂಲಸಿಂಧು ನೀತಿಗೇ ಮಣೆ ಎನ್ನುವುದು ಎಲ್ಲರಿಗೂ ಗೊತ್ತು.

ನಿತೀಶ್‌ ನಡೆ ಕೂಡ ಅದೇ ದಾರಿಯಲ್ಲಿದೆ. ಅವರು 17 ವರ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಸಂಗದಲ್ಲಿ ಇದ್ದವರು. ಆಗಷ್ಟೇ ರಾಷ್ಟ್ರ ಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ನರೇಂದ್ರ ಮೋದಿ ಅವರಿಗೆ ಬಿಜೆಪಿಯು ಹೆಚ್ಚಿನ ಹೊಣೆ ನೀಡಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದನ್ನು ವಿರೋಧಿಸಿ ಎನ್‌ಡಿಎ ಸಂಬಂಧ ಕಡಿದುಕೊಂಡವರು. ಮೋದಿ ಆಗ ಬರೀ ‘ಪ್ರಧಾನಿ ಅಭ್ಯರ್ಥಿ’. ಅದನ್ನೇ ಸಹಿಸಿಕೊಳ್ಳದ ನಿತೀಶ್‌ ಈಗ ಪ್ರಧಾನಿ ಹುದ್ದೆಗೇರಿರುವ ಮೋದಿ ಜತೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಅದಕ್ಕೆ ‘ಬಿಹಾರದ ಅಭಿವೃದ್ಧಿಯಾಗುತ್ತದೆ, ಬಿಹಾರಕ್ಕೆ ಒಳ್ಳೆಯದಾಗುತ್ತದೆ’ ಎಂಬ ಸಮಜಾಯಿಷಿ ಕೊಟ್ಟಿದ್ದಾರೆ. ಇದರಿಂದ ಒಂದೇ ಏಟಿಗೆ ಎರಡು ಹಕ್ಕಿ ಹೊಡೆದಿದ್ದಾರೆ. ಮೊದಲನೆಯದು ‘ಭ್ರಷ್ಟಾಚಾರ ವಿರೋಧಿ’ ಎಂಬ ಇಮೇಜ್‌ ಮುಕ್ಕಾಗದಂತೆ ನೋಡಿಕೊಂಡಿದ್ದಾರೆ. ಎರಡನೆಯದಾಗಿ ಕೇಂದ್ರ ಸರ್ಕಾರದಿಂದ ಉದಾರ ಅನುದಾನ ಸಿಗುವ ಸಾಧ್ಯತೆಯೂ ಇದೆ.

ಲಾಲು– ನಿತೀಶ್‌ ನೇತೃತ್ವದ ಮೈತ್ರಿಕೂಟ ರಾಷ್ಟ್ರೀಯ ಮಟ್ಟದಲ್ಲಿ ಮೋದಿ ನಾಯಕತ್ವಕ್ಕೆ ದೊಡ್ಡ ಸವಾಲು ಒಡ್ಡುವ ರೀತಿಯಲ್ಲಿಯೇ ಬೆಳೆಯುತ್ತಿತ್ತು. ಇನ್ನೆರಡು ವರ್ಷಗಳಲ್ಲಿ ನಡೆಯಲಿದ್ದ ಲೋಕಸಭಾ ಚುನಾವಣೆ ವೇಳೆ ಮೋದಿ ಅವರಿಗೆ ಎದುರಾಗಿ ಬಿಜೆಪಿಯೇತರ ಪಕ್ಷಗಳ ಕಡೆಯಿಂದ ಪ್ರಧಾನಿ ಅಭ್ಯರ್ಥಿ ಎಂದೇ ನಿತೀಶ್ ಅವರನ್ನು ಬಿಂಬಿಸುವ ಸೂಚನೆ ಇತ್ತು. ಇವೆಲ್ಲದರ ನಡುವೆಯೂ ನಿತೀಶ್‌ ಆಗಾಗ ಲಾಲು ಮತ್ತವರ ಮಕ್ಕಳು– ಪರಿವಾರದಿಂದ ಮುಜುಗರ ಎದುರಿಸುತ್ತಲೇ ಬಂದರು. ಕೇಂದ್ರ ಸರ್ಕಾರದ ಅಧೀನದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಲಾಲು ಮಕ್ಕಳ ಮೇಲೆ ದಾಖಲಿಸಿಕೊಂಡ ತೆರಿಗೆ ವಂಚನೆ, ಅಕ್ರಮ ಆಸ್ತಿ ಸಂಪಾದನೆಯ ಪ್ರಕರಣಗಳು ಈ ಮುಜುಗರವನ್ನು ತುತ್ತತುದಿಗೆ ಒಯ್ದವು.

ಮಹಾಮೈತ್ರಿಕೂಟದ ಮತ್ತೊಂದು ಪ್ರಮುಖ ಪಾಲುದಾರ ಕಾಂಗ್ರೆಸ್‌ ಕೂಡ ಈ ಹಂತದಲ್ಲಿ ಅಸಮಾಧಾನ ಶಮನಕ್ಕೆ ಪ್ರಯತ್ನಿಸಲಿಲ್ಲ. ಬಿರುಕು ಮುಚ್ಚಲು ಮುಂದಾಗಲಿಲ್ಲ. ಒಂದು ಕಡೆ ಲಾಲು ಅವರ ಒರಟು ನಡೆ, ಇನ್ನೊಂದು ಕಡೆ ಮೋದಿ ಸ್ನೇಹ ಹಸ್ತ. ಕೊನೆಗೆ ನಿತೀಶ್ ಆರಿಸಿಕೊಂಡದ್ದು ಸ್ನೇಹ ಹಸ್ತವನ್ನು. ಬಿಜೆಪಿಯದು ಕೋಮುವಾದಿ ರಾಜಕಾರಣ ಎಂದು ಹಳಿಯುತ್ತ ಬಂದ ನಿತೀಶ್‌ ಈಗ ಅದೇ ಪಕ್ಷದ ಬೆಂಬಲದಿಂದಲೇ ಗದ್ದುಗೆ ಉಳಿಸಿಕೊಂಡಿದ್ದಾರೆ. ಈ ವಿದ್ಯಮಾನಗಳಿಂದ ಅನಾಯಾಸ ಲಾಭವಾಗಿದ್ದು ಬಿಜೆಪಿ ನೇತೃತ್ವದ ಎನ್‌ಡಿಎಗೆ. ರಾಜಕಾರಣದಲ್ಲಿ ಯಾರೂ ಕಾಯಂ ಮಿತ್ರರೂ ಅಲ್ಲ; ಕಾಯಂ ಶತ್ರುಗಳೂ ಅಲ್ಲ ಎನ್ನುವುದನ್ನು ಇದು ಮತ್ತೆ ಸಾಬೀತು ಮಾಡಿದೆ. ಅವಕಾಶವಾದಿ ರಾಜಕಾರಣಕ್ಕೆ ಮತ್ತೊಂದು ಉದಾಹರಣೆ ಎನಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.