ADVERTISEMENT

ಭಾನುವಾರ, 17–12–1967

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಭಾನುವಾರ, 17–12–1967
ಭಾನುವಾರ, 17–12–1967   

ಭಾಷಾ ಮಸೂದೆ ಅಂಗೀಕಾರಕ್ಕೆ ಮುನ್ನ ಪ್ರತಿಭಟನೆ

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಡಿ. 16– ಪ್ರತಿಭಟನೆ, ಸಭಾತ್ಯಾಗಗಳ ನಡುವೆ ಭಾಷಾ (ತಿದ್ದುಪಡಿ) ಮಸೂದೆಗೆ ಲೋಕಸಭೆ ಇಂದು ಅಂಗೀಕಾರ ನೀಡಿತು.

ADVERTISEMENT

ಎಂಟು ದಿನಗಳ ಉದ್ರೇಕಪೂರ್ಣ ಚರ್ಚೆಯ ನಂತರ 205– 41 ಮತಗಳ ಭಾರೀ ಬಹುಮತದಿಂದ ಅಧಿಕೃತ ಭಾಷಾ (ತಿದ್ದುಪಡಿ) ಮಸೂದೆಯ ಹಾಗೂ ಸರ್ಕಾರದ ನಿರ್ಣಯವನ್ನು ಸಭೆ ಅಂಗೀಕರಿಸಿತು.

ಸ್ಪೀಕರ್ ಸಂಜೀವರೆಡ್ಡಿ ಅವರು ಮಸೂದೆಯನ್ನು ಮತಕ್ಕೆ ಹಾಕುವ ಸ್ವಲ್ಪ ಮೊದಲು ಜನಸಂಘ ಸಭಾ ತ್ಯಾಗ ಮಾಡಿತು.

ಏಕರೀತಿ ಶಿಕ್ಷಣ ಮಾಧ್ಯಮ ಸರ್ಕಾರದ ಆಲೋಚನೆಯಲ್ಲಿ

ಬೆಂಗಳೂರು, ಡಿ. 16– ರಾಜ್ಯಾದ್ಯಂತ ಶಿಕ್ಷಣ ಮಾಧ್ಯಮದಲ್ಲಿ ಏಕರೂಪ ತರುವ ವಿಚಾರವನ್ನು ಸರ್ಕಾರ ಆಲೋಚಿಸುತ್ತಿದೆ ಎಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ. ಸಪ್ಲಿಮೆಂಟರಿ ಪರೀಕ್ಷೆ ಫಲಿತಾಂಶದ ಪ್ರಮಾಣ ಇಳಿದಿರುವುದನ್ನು ಪರಿಶೀಲಿಸಲು ಶಿಕ್ಷಣ ತಜ್ಞರ ಸಮಿತಿಯನ್ನು ರಚಿಸುವ ಸಲಹೆಯನ್ನು ಸರ್ಕಾರ ಪರಿಶೀಲಿಸುವುದೆಂದು ಸಚಿವ ಶ್ರೀ ಶಂಕರಗೌಡ ಅವರು ಹೇಳಿದರು.

ಯಾರ ಮೇಲೂ ಹಿಂದಿ ಹೇರಲು ಅಸಾಧ್ಯ: ಇಂದಿರಾ

ನವದೆಹಲಿ, ಡಿ. 16– ಯಾರೊಬ್ಬರ ಮೇಲೂ ಹಿಂದಿಯನ್ನು ಹೇರುವುದು ಸಾಧ್ಯವೂ ಇಲ್ಲ, ವ್ಯಾವಹಾರಿಕವೂ ಅಲ್ಲ ಎಂದು ವಾರಾಣಾಸಿಯ ಸಂಸ್ಕೃತ ವಿಶ್ವವಿದ್ಯಾಲಯ ವಿದ್ಯಾರ್ಥಿ ನಿಯೋಗವೊಂದಕ್ಕೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ತಿಳಿಸಿದರು.

ಸಂಪರ್ಕ ಭಾಷೆಯಾಗಿ ಹಿಂದಿ ಬೆಳೆಯಬೇಕಾದರೆ ಹಿಂದಿಯೇತರ ಜನರ ಸದಿಚ್ಛೆ ಮತ್ತು ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಮಹಾಜನ್ ವರದಿ: ರಾಜ್ಯದ ಅಭಿಪ್ರಾಯ ತಿಳಿದೇ ನಿರ್ಧಾರ

ಬೆಂಗಳೂರು, ಡಿ. 16– ‘ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದ ಮೇಲೆ ಮಾತ್ರವೇ ಕೇಂದ್ರ ಸರ್ಕಾರ, ಮಹಾಜನ್ ವರದಿಯ ಮೇಲೆ ನಿರ್ಧಾರಕ್ಕೆ ಬರಲು ಸಾಧ್ಯ’ ಎಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.

ಕಾಶ್ಮೀರ ಪ್ರಶ್ನೆ: ಪಂಚಾಯಿತಿಗೆ ಆಯೂಬ್ ಸಿದ್ಧ

ನವದೆಹಲಿ, ಡಿ. 16– ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ಅಥವಾ ಪಂಚಾಯ್ತಿ ನಡೆಸಲು ಪಾಕಿಸ್ತಾನ ಸಿದ್ಧ. ಆದರೆ ಅದು ನ್ಯಾಯಬದ್ಧವಾಗಿ, ನಿಷ್ಪಕ್ಷಪಾತವಾಗಿ ಮತ್ತು ಗೌರವಯುತವಾಗಿರಬೇಕು ಎಂದು ಅಧ್ಯಕ್ಷ ಅಯೂಬ್ ಖಾನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.