ADVERTISEMENT

ಶುಕ್ರವಾರ, 30–12–1966

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2016, 19:30 IST
Last Updated 29 ಡಿಸೆಂಬರ್ 2016, 19:30 IST

ಪುರಿ ಜಗದ್ಗುರುಗಳಿಗೆ ಹೆಚ್ಚು ನಿಶ್ಶಕ್ತಿ
ಪುರಿ, ಡಿ. 29–
ಗೋಹತ್ಯೆಯನ್ನು ನಿಷೇಧಿಸಬೇಕೆಂದು ಒತ್ತಾಯಪಡಿಸುವ ಸಲುವಾಗಿ ಕಳೆದ 40 ದಿವಸಗಳಿಂದಲೂ ಉಪವಾಸ ಮಾಡುತ್ತಿರುವ ಪುರಿ ಜಗದ್ಗುರು ಶ್ರೀ ಶಂಕರಾಚಾರ್‍ಯರು ಇಂದು ಇನ್ನಷ್ಟು ನಿಶ್ಶಕ್ತರಾಗಿದ್ದಾರೆಂದೂ, ಅವರ ಕೈಕಾಲುಗಳಲ್ಲಿ ಮತ್ತು ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡಿದೆಯೆಂದೂ ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.

***
ದೆಹಲಿ ಪತ್ರ: ಕಾಮರಾಜ್‌–ಪ್ರಧಾನಿ ವಿರಸದ ವಿಸ್ತಾರ
ನವದೆಹಲಿ, ಡಿ. 29–
ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಕಾಮರಾಜ್‌ ಅವರ ನಡುವೆ ಭಿನ್ನಾಭಿಪ್ರಾಯಗಳು ದಿನೇ ದಿನೇ ಹೆಚ್ಚುತ್ತಿವೆಯೆಂಬುದಕ್ಕೆ ಅನೇಕ ನಿದರ್ಶನಗಳು ದೊರೆತಿವೆ.  ಇತ್ತೀಚೆಗೆ ವಾರ್ತಾ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಶ್ರೀಮತಿ ಗಾಂಧಿಯವರೊಡನೆ ಅವರ ಮತ್ತು ಶ್ರೀ ಕಾಮರಾಜರ ನಡುವಣ ಬಾಂಧವ್ಯದ ಬಗ್ಗೆ ಪ್ರಶ್ನಿಸಿದಾಗ, ಈ ವಿಷಯ ಸ್ಪಷ್ಟವಾಯಿತು.

***
ಜನವರಿ 11ರಂದು ಗಿರಿ ನಾಯಕರ ಚರ್ಚೆ
ಷಿಲ್ಲಾಂಗ್‌, ಡಿ. 29–
ಸರ್ವಪಕ್ಷ ಗಿರಿ ನಾಯಕರ ಪರಿಷತ್ತಿನ ನಾಯಕರು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರೊಡನೆ ಜನವರಿ 11ರಂದು ನವದೆಹಲಿಯಲ್ಲಿ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಅಸ್ಸಾಂನ ಗಿರಿ ಪ್ರದೇಶಗಳನ್ನೊಳಗೊಂಡ ಪ್ರತ್ಯೇಕ ಗಿರಿ ರಾಜ್ಯವೊಂದನ್ನು ರಚಿಸಬೇಕೆಂಬ ಪರಿಷತ್ತಿನ ಬೇಡಿಕೆಯನ್ನು ಕುರಿತು ಈ ಮಾತುಕತೆಗಳು ನಡೆಯಲಿವೆ.

***
ಭಾಷಾರಾಜ್ಯ, ಹಿಂದಿ ಶಿಕ್ಷಣ ಮಾಧ್ಯಮಕ್ಕೆ ಶ್ರೀ ಗಿರಿ ಅವರ ವಿರೋಧ
ಮುಂಬೈ, ಡಿ. 29–
ಭಾಷಾವಾರು ರಾಜ್ಯಗಳನ್ನು ರದ್ದುಗೊಳಿಸಿ ಇಡೀ ರಾಷ್ಟ್ರಕ್ಕೆ ಏಕೀಕೃತ ರಾಜ್ಯವನ್ನು ರಚಿಸಬೇಕೆಂದು ಮೈಸೂರಿನ ರಾಜ್ಯಪಾಲರಾದ ಶ್ರೀ ವಿ.ವಿ.ಗಿರಿಯವರು ಇಲ್ಲಿ ಇಂದು ಕರೆ ನೀಡಿದರು. ತ್ವರಿತವಾಗಿ ಕ್ಷೀಣಿಸುತ್ತಿರುವ ರಾಷ್ಟ್ರೀಯ ಐಕ್ಯ ಮನೋಭಾವವನ್ನು ಪುನರುಜ್ಜೀವನಗೊಳಿಸಲು ಇದೊಂದೇ ಮಾರ್ಗವೆಂದು ಅವರು ಇಲ್ಲಿನ ಪ್ರಗತಿಶೀಲರ ಕೂಟದಲ್ಲಿ ಮಾತನಾಡುತ್ತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.