ADVERTISEMENT

ಯಾತ್ರೆಯ ನಿಜರೂಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 19:30 IST
Last Updated 10 ಜನವರಿ 2017, 19:30 IST

ಆಧುನಿಕತೆಯ ಭ್ರಮೆ ಮತ್ತು ಲೋಲುಪತೆಗಳ ನಡುವೆ ಸಿಲುಕಿ ಯಾತ್ರೆ ಎನ್ನುವ ಅಲೌಕಿಕ ಅರಿವಿನ ಪಯಣ ಲೌಕಿಕವಾಗುತ್ತಿರುವ ಮತ್ತು ಉದ್ಯಮವಾಗುತ್ತಿರುವ ಬಗೆಯನ್ನು ಪ್ರಸನ್ನ ಅವರ ‘ಏಳುಮಲೆ ಅಲೆದಾಟಗಳ ಕಥನ’  ಲೇಖನ (ಪ್ರ.ವಾ.,ಜ. 7) ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದೆ.

ಪ್ರಾಚೀನ ಆರಾಧನಾ ಸ್ಥಳಗಳೆಲ್ಲ ಸುಲಭದಲ್ಲಿ ಕಣ್ಣೋಟಕ್ಕೆ ಸಿಗುವಂತಹವಲ್ಲ. ಪ್ರಸನ್ನ ಅವರೇ ಪ್ರಸ್ತಾಪಿಸಿದಂತೆ ದುರ್ಗಮ ಸ್ಥಳಗಳು ಪ್ರಕೃತಿಯ ಆಳ ಗರ್ಭದಲ್ಲಿ ಅಡಗಿರುತ್ತವೆ. ಬಹುಶಃ ದೇವರನ್ನು ನೋಡುವ ಮತ್ತು ತಲುಪುವ ಪ್ರಕ್ರಿಯೆ ಅಷ್ಟು ಸುಲಭದ್ದಲ್ಲ ಎನ್ನುವುದನ್ನು ಇದು ಸಂಕೇತಿಸುತ್ತದೆ ಎನಿಸುತ್ತದೆ. ಅದಕ್ಕೆ ದೈಹಿಕವಾದ ಸಿದ್ಧತೆಗಿಂತ ಮಾನಸಿಕ ತುಡಿತ ಅತಿ ಅಗತ್ಯ.

ರಸ್ತೆ ಬದಿಗಳಲ್ಲಿ, ನಗರಗಳ ಕೇಂದ್ರದಲ್ಲಿ ಆರಾಧನಾ ಸ್ಥಳಗಳನ್ನು ನಿರ್ಮಿಸಿಕೊಂಡು ಅಲ್ಲೇ ಅತಿ ಸುಲಭದಲ್ಲಿ ದೇವರನ್ನು ‘ನೋಡುವ’, ಅದನ್ನೇ ಹಲವು ಸಮಸ್ಯೆಗಳೊಂದಿಗೆ ಮುಖಾಮುಖಿಯಾಗಿಸುತ್ತಿರುವ ಇಂದಿನ ಸಂದರ್ಭದಲ್ಲಿ, ವೇಗದ ಸಂಪರ್ಕ ಸಾಧನಗಳ ಮೂಲಕ ಹಲವು ಯಾತ್ರೆಗಳನ್ನು (ಪ್ರವಾಸ)  ನಿರಾಯಾಸವಾಗಿ ಮುಗಿಸಿಬಂದು ಮತ್ತೆ ಮೊದಲಿನಂತೆ ಬದುಕುತ್ತಿರುವ ಇವತ್ತಿನ ಸಂದರ್ಭಕ್ಕೆ ಪ್ರಸನ್ನ ಅವರ ಲೇಖನ ಹೊಸ ಆಯಾಮವನ್ನು ನೀಡುತ್ತದೆ ಎನ್ನಬಹುದು. ಜೊತೆಗೆ ಯಾತ್ರೆಗಿರುವ ವಿಶಾಲ ಹಾಗೂ ನೈಜ ಸ್ವರೂಪವನ್ನು ಈ ಲೇಖನ ಬಿಡಿಸಿಟ್ಟಿದೆ.
-ಸಂಜಯ್ ಬಿ.ಎಸ್., ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.