ADVERTISEMENT

ಸತ್ಯದ ಕಗ್ಗೊಲೆ

ಸಿ.ಪಿ.ಸಿದ್ಧಾಶ್ರಮ, ಮೈಸೂರು
Published 30 ಆಗಸ್ಟ್ 2015, 19:30 IST
Last Updated 30 ಆಗಸ್ಟ್ 2015, 19:30 IST

ಕನ್ನಡದ ಹಿರಿಯ ಸಂಶೋಧಕ, ಸಾಹಿತಿ ಎಂ.ಎಂ.ಕಲಬುರ್ಗಿ ಆವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಅತ್ಯಂತ ದುಃಖದ ಸಂಗತಿ. ಅಪ್ಪಟ ಸಂಶೋಧಕರಾಗಿದ್ದ ಅವರು ತಮ್ಮ ಆಳವಾದ ಸಂಶೋಧನೆ ಮತ್ತು ಸಂಸ್ಕೃತಿ ಚಿಂತನೆಗಳ ಮೂಲಕ ಹಲವಾರು ಹೊಸ ಸಂಗತಿಗಳನ್ನು ಬೆಳಕಿಗೆ ಹಿಡಿಯುವುದರ ಮೂಲಕ ಸತ್ಯದ ಪ್ರತಿಪಾದಕರಾಗಿದ್ದರು.

ತಮ್ಮ ವಾದ ಮಂಡನೆಗೆ ಸಾಕಷ್ಟು ಸಾಕ್ಷ್ಯ ಆಧಾರಗಳನ್ನು ಇಟ್ಟುಕೊಂಡೇ ಮಾತನಾಡುತ್ತಿದ್ದರು; ಬರೆಯುತ್ತಿದ್ದರು. ಆ ಮೂಲಕ ಕನ್ನಡ ಸಂಶೋಧನಾ ಕ್ಷೇತ್ರದ ದಿಗಂತವನ್ನು ವಿಸ್ತರಿಸಿದ್ದರು; ಹೊಸ ಆಯಾಮ ನೀಡಿದ್ದರು. ಮುಕ್ತಚಿಂತಕರಾಗಿದ್ದ ಅವರು ನಿರ್ಭಯದಿಂದ ತಮ್ಮ ವಾದವನ್ನು ಮಂಡಿಸುತ್ತಿದ್ದರು; ಹೊಸ ಹೊಸ ಶೋಧಗಳನ್ನು ಕಾಣಿಸುತ್ತಿದ್ದರು.

ಸಂಶೋಧನೆ ಮತ್ತು ಚಿಂತನೆಗಳಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ. ಭಿನ್ನಮತದ ಮೂಲಕವೇ ಸತ್ಯದ ಹುಡುಕಾಟ ಮತ್ತು ಅರಿವಿನ ವಿಕಾಸ ಸಾಧ್ಯ. ಭಿನ್ನಾಭಿಪ್ರಾಯಗಳಿಗೆ ಮನ್ನಣೆ ನೀಡಬೇಕಾದುದು, ಅರಿವಿನ ಮೂಲಕ ಉತ್ತರ ನೀಡಬೇಕಾದುದು ಪ್ರಜಾಪ್ರಭುತ್ವದ ಲಕ್ಷಣ.

ಕಲಬುರ್ಗಿ ಅವರ ಹತ್ಯೆ ಅವರ ಮುಕ್ತಚಿಂತನೆ ಮತ್ತು ಸಂಶೋಧನೆಯ ಕಾರಣಕ್ಕಾಗಿ ನಡೆದಿದ್ದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಹಾಗೇನಾದರೂ ಆಗಿದ್ದರೆ ಅದು ಬರಿ ಒಬ್ಬ ಸಂಶೋಧಕನ, ಸತ್ಯ ಪ್ರತಿಪಾದಕನ ಹತ್ಯೆ ಮಾತ್ರವಾಗಿರದೆ ಸತ್ಯದ ಮತ್ತು ಪ್ರಜಾಪ್ರಭುತ್ವದ ಹತ್ಯೆಯೂ ಹೌದೆಂದು  ಹೇಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.