ADVERTISEMENT

‘ಅತಿಥಿ’ ಮಾಲೀಕನಲ್ಲ...

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

‘ಉಪನ್ಯಾಸಕ ಉಂಡ ಬಾಳೆಲೆಯೇ?’ (ವಾ.ವಾ., ಸೆ. 1) ಪತ್ರಕ್ಕೆ ಪ್ರತಿಕ್ರಿಯೆ. ೧೦–-೧೫ ವರ್ಷ ಅತಿಥಿ ಉಪ­ನ್ಯಾಸಕರಾಗಿ  ಸೇವೆ ಸಲ್ಲಿಸಿ­ರುವ ತಮ್ಮನ್ನು ಸರ್ಕಾರದ ಉದ್ದೇಶಿತ, ಸಹಾ­ಯಕ ಪ್ರಾಧ್ಯಾಪಕರ  ನೇಮಕಾತಿಗೆ ಅರ್ಹತೆ ಮತ್ತು ಸೇವಾ ಹಿರಿತನ ಆಧರಿಸಿ ಪರಿ­ಗಣಿಸ­ಬೇಕು ಎಂಬ ಬೇಡಿಕೆ ಎಷ್ಟರಮಟ್ಟಿಗೆ ಉಚಿತ?

ಒಂದು ವೇಳೆ ಅತಿಥಿ ಉಪನ್ಯಾಸಕರನ್ನೇ ಪರಿಗ­­­ಣಿ­­­ಸಿ­ದರೆ, ಅತಿಥಿ ಉಪನ್ಯಾಸಕರಲ್ಲದೆ ಇನ್ನಿತರ ಕಡೆ ಸೇವೆ ಸಲ್ಲಿಸುತ್ತಿರುವ ಸಾವಿರಾರು ಜನ ಅರ್ಹ ಪ್ರತಿಭಾನ್ವಿತ­ರಿಗೆ ದ್ರೋಹ ಮಾಡಿದಂತಾ­ಗು­ವುದಿಲ್ಲವೇ? ಅತಿಥಿ ಉಪನ್ಯಾಸ­ಕ­ರಾಗಿ ಸೇವೆ ಸಲ್ಲಿಸಿರುವುದೇ ಕಾಯಂ­ಗೊಳ್ಳುವು­ದಕ್ಕೆ ವಿಶೇಷ ಅರ್ಹತೆಯಾಗುವುದಾದರೆ ೧೦–೧೫ ವರ್ಷಗ­ಳಲ್ಲಿ ರಾಜ್ಯದ ಖಾಸಗಿ ಮತ್ತು ಅನುದಾನಿತ ಕಾಲೇ­ಜು­ಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ­ರುವವರನ್ನೂ ಇದೇ ಅರ್ಹತೆಯ ಆಧಾರದ ಮೇಲೆ ಪರಿಗಣಿಸಬೇಕಲ್ಲವೇ?

ಅನುದಾನಿತ ಕಾಲೇಜುಗಳ ಅನುದಾನರಹಿತ ಹುದ್ದೆ­ಗಳಲ್ಲಿ ಸಾವಿರಾರು ಸಂಖ್ಯೆಯ ಉಪನ್ಯಾ­ಸಕರು, ಅತಿಥಿ ಉಪನ್ಯಾಸಕರು ಪಡೆಯುವು­ದ­ಕ್ಕಿಂತ ಕಡಿಮೆ ವೇತನಕ್ಕೆ  ದುಡಿಯುತ್ತಿದ್ದು, ಅಲ್ಲೂ ಅರ್ಹರು ಇದ್ದಾರೆ. ಅಷ್ಟೇ ಅಲ್ಲದೆ, ಅತಿಥಿ ಉಪನ್ಯಾಸಕರಾಗಿ ನೇಮಕ­ಗೊಂಡಿರುವ ಅನೇಕರು ಸ್ಥಳೀಯ ರಾಜ­ಕಾರಣಿಗಳ ಪ್ರಭಾವ, ಅಧಿಕಾರಸ್ಥರ ಜೊತೆಗಿನ ನಂಟು ಹಾಗೂ ಪ್ರಾಂಶುಪಾಲರ ಮರ್ಜಿಗನು­ಗು­ಣವಾಗಿ ಆ ಕೆಲಸ ಗಿಟ್ಟಿಸಿಕೊಂಡಿದ್ದಾರೆ.

ಏಕೆಂದರೆ, ಅತಿಥಿ ಉಪನ್ಯಾಸಕರ ನೇಮಕಕ್ಕೆ ಈವರೆಗೂ ಸೂಕ್ತ ಮಾನದಂಡ ರೂಪಿಸಿರ­ಲಿಲ್ಲ. ಮೆರಿಟ್ ಆಧಾರದಲ್ಲಿ ನೇಮಕ ಮಾಡುವ ಆನ್‌­ಲೈನ್ ನೇಮಕಾತಿ ವ್ಯವಸ್ಥೆ ರಾಜ್ಯದಲ್ಲಿ ಜಾರಿಗೊಂಡದ್ದು ಕಳೆದ ವರ್ಷವಷ್ಟೆ. ಅದೂ ಇಡೀ ರಾಜ್ಯಕ್ಕೆ ಅನ್ವಯಿಸು­ವುದಿಲ್ಲ.
ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸಾಮಾ­ಜಿಕ ನ್ಯಾಯಪಾಲನೆಯೂ ಆಗಿರುವು­ದಿಲ್ಲ.

ಸ್ಥಳೀಯ ಪ್ರಭಾವಿ­ಗಳೇ ಹೀಗೆ ನೇಮಕ-­ಗೊಂಡಿ­ದ್ದನ್ನು ಕಾಣ­ಬಹುದು. ಅತಿಥಿ ಉಪನ್ಯಾ­ಸಕ ಎಂಬ ಹೆಸರಿನಲ್ಲೇ ಅದೊಂದು ತಾತ್ಕಾಲಿಕ ವ್ಯವಸ್ಥೆ ಎಂಬ ಸೂಚನೆ ಇದೆ. ಪೇಯಿಂಗ್ ಗೆಸ್ಟ್‌ ಆಗಿ ಮನೆಗೆ ಬಂದವರು ಮನೆಯ ಮಾಲೀಕ­ತ್ವ­ದಲ್ಲಿ ತಾವೂ ಹಕ್ಕುದಾರರು ಎನ್ನುವುದು ಎಷ್ಟು ಅಸಂಗತವೋ ಅಷ್ಟೇ ಅಸಂಗತ ಈ ಬೇಡಿಕೆ ಕೂಡ.
–ರೋಹಿಣಾಕ್ಷ ಶಿರ್ಲಾಲು, ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.