ADVERTISEMENT

ಕಣ್ಣಂಚಿನ ಈ ಮಿಂಚಲಿ...

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
ಕಣ್ಣಂಚಿನ ಈ ಮಿಂಚಲಿ...
ಕಣ್ಣಂಚಿನ ಈ ಮಿಂಚಲಿ...   

ನೋಟವನ್ನು ಮಿಂಚಿಗೆ ಹೋಲಿಸುವುದನ್ನು ಕೇಳಿದ್ದೇವೆ. ಹೊಳೆವ ಕಣ್ಣುಗಳು ಎಂದು ಕವಿಗಳು ಕಣ್ಣಿನ ಸೌಂದರ್ಯವನ್ನು ಬಣ್ಣಿಸಿರುವುದನ್ನೂ ಕಂಡಿದ್ದೇವೆ. ಸ್ವೀಡನ್‌ನ ವಿನ್ಯಾಸಕರಾದ ಟೈಸ್ ಫಾಮ್ ಆ ಉಪಮೆಗಳನ್ನೇ ಇಟ್ಟುಕೊಂಡು ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಅದೇ ಎಫ್ ಲ್ಯಾಶಸ್.

ಫ್ಲಾಶ್ ಹಾಗೂ ಐಲ್ಯಾಶ್ ಇವೆರಡೂ ಸೇರಿ ಎಫ್ ಲ್ಯಾಶಸ್ ಆಗಿದೆ. ತಂತ್ರಜ್ಞಾನ, ಫ್ಯಾಷನ್ ಎರಡೂ ಒಟ್ಟುಗೂಡಿದರೆ ಏನೆಲ್ಲಾ ಸಾಧ್ಯ ಎಂಬುದನ್ನು ತೋರಿಸಲೆಂದೇ ಈ ಕಣ್ಣಿನ ಫ್ಯಾಷನ್ ಪರಿಕರ ವಿನ್ಯಾಸಗೊಳಿಸಿದ್ದಾರೆ.

ರೆಪ್ಪೆ ಅಲುಗಾಡಿಸಿದರೆ ತನ್ನಿಂತಾನೇ ಹೊಳೆಯುವ, ಆಚೀಚೆ ನೋಡಿದರೆ ಮಿಂಚುವ ಎಫ್ ಲ್ಯಾಶಸ್‌ ಅನ್ನು, ಕ್ಯಾಲಿಫೋರ್ನಿಯಾದಲ್ಲಿ ನಡೆದ ಫ್ಯಾಷನ್‌ಶೋ ಒಂದರಲ್ಲಿ ರೂಪದರ್ಶಿಗಳನ್ನು ವಿಭಿನ್ನವಾಗಿ ಕಾಣಿಸಲು ಪ್ರಯೋಗಿಸಿದ್ದು. ನಂತರ ಆ ಪ್ರಯೋಗ ಎಲ್ಲೆಲ್ಲೂ ಮಾತಾಯಿತು. ಕಿಕ್‌ಸ್ಟಾರ್ಟರ್‌ನಲ್ಲಿ ಇದರ ಕ್ರೌಡ್ ಫಂಡಿಂಗ್ ಕೂಡ ಆರಂಭವಾಯಿತು.

ADVERTISEMENT

ಇದನ್ನು ‘ಧರಿಸಿಕೊಳ್ಳಬಹುದಾದ ತಂತ್ರಜ್ಞಾನ’ದ ಪರಿಕಲ್ಪನೆಯಲ್ಲಿ ಎಲ್‌ಇಡಿ ಲೈಟ್‌ಗಳಿಂದ ರೂಪಿಸ ಲಾಗಿದೆ. ಕೃತಕ ಐಲ್ಯಾಶ್‌ಗಳನ್ನು ಅಂಟಿಸಿಕೊಳ್ಳುವಂತೆಯೇ ಇದನ್ನೂ ತೊಡಬೇಕು. ಆದರೆ ಇದು ವೈರ್‌ಲೆಸ್ ಅಲ್ಲ. ತೆಳುವಾದ ವೈರ್ ಇದ್ದು, ಇದನ್ನು ಸಂಪರ್ಕಿಸಲು ಪುಟ್ಟ ಮೋಷನ್ ಸೆನ್ಸಿಂಗ್ ಕಂಟ್ರೋಲರ್ ಇರುತ್ತದೆ. ಇದನ್ನು ತಲೆಯ ಹಿಂಭಾಗದಲ್ಲಿ ಕೂದಲಿನ ಕ್ಲಿಪ್‌ ಜಾಗದಲ್ಲಿ ಕಾಣದಂತೆ ಇಟ್ಟುಕೊಳ್ಳಬಹುದು. ನಿಮ್ಮ ಚಲನವಲನಕ್ಕೆ ತಕ್ಕಂತೆ ಎಲ್‌ಇಡಿ ಲೈಟ್‌ಗಳೂ ಸ್ಪಂದಿಸುತ್ತವೆ. ಇದರ ಬ್ಯಾಟರಿ ಐದು ಗಂಟೆವರೆಗೂ ಇರಬಲ್ಲದಂತೆ.

ನೃತ್ಯಕ್ಕೆ, ಪಾರ್ಟಿಗೆ ಹೋಗುವವರ ಕಣ್ಸೆಳೆಯಲೆಂದೇ ಮೈಬಣ್ಣಕ್ಕೆ ಹೊಂದುವಂತೆ ಏಳು ಬಣ್ಣ ಹಾಗೂ ಐದು ಥರದಲ್ಲಿ ಇದನ್ನು ಪರಿಚಯಿಸಲಾಗಿದೆ. ಹೈಪರ್ ಬಸ್ಟ್, ಎಂಡ್‌ಲೆಸ್‌ ವಿಂಕ್ಸ್, ನೈಟ್ ರೈಡಿಂಗ್‌ ನಂಥ ಪರಿಕಲ್ಪನೆಯಲ್ಲಿ, ಸ್ಕ್ರಾಲ್, ಡ್ಯಾನ್ಸ್, ಸ್ಪಾರ್ಕಲ್‌ನಂಥ ಮೋಡ್‌ಗಳೂ ಇವೆ. ಇದರಿಂದ ಕಣ್ಣಿಗೆ ತೊಂದರೆ ಯಾಗುವುದಿಲ್ಲವೇ ಎಂಬುದೂ ಸಹಜವಾಗೇ ಮೂಡುವ ಪ್ರಶ್ನೆ. ಆದರೆ ಇದರಿಂದ ಶಾಖ ಉತ್ಪತ್ತಿಯಾಗದೇ ಇರುವುದರಿಂದ ಕಣ್ಣಿಗೂ ತೊಂದರೆಯಿಲ್ಲ ಎಂದಿದ್ದಾರೆ. ಜೊತೆಗೆ ವಾತಾವರಣಕ್ಕೆ ತಕ್ಕಂತೆ ಸ್ಪಂದಿಸಬಲ್ಲ ಗುಣ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಹುಡುಗರಿಗೂ ಇದು ಲಭ್ಯ. ರಾತ್ರಿ ಹೊತ್ತು ಧರಿಸಿದರೇ ಚೆಂದ.

ಸದ್ಯಕ್ಕೆ ಇದರ ಬೆಲೆ $40. 2018ಕ್ಕೆ ಪೂರ್ಣಪ್ರಮಾಣದಲ್ಲಿ ಆನ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಎಲ್ಲರೂ ತಿರುಗಿ ನೋಡುವಂಥ ನೋಟ ನಿಮ್ಮದಾಗಬೇಕಿದ್ದರೆ ಇದನ್ನು ಪ್ರಯೋಗಿಸಿ. ಇದು ‘ಫ್ಯೂಚರ್ ಫ್ಯಾಷನ್’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಟೈಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.