ADVERTISEMENT

ಕಾದು ಸುಸ್ತಾದರು; ಹುಡುಕುತ್ತಾ ಅಲೆದರು

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2016, 19:30 IST
Last Updated 17 ಡಿಸೆಂಬರ್ 2016, 19:30 IST

ಬಳ್ಳಾರಿ: ಮೇಟಿ ಲೈಂಗಿಕ ಹಗರಣದ ತನಿಖೆ ಸಲುವಾಗಿ ಸಿಐಡಿ ಅಧಿಕಾರಿಗಳ ತಂಡ ನಗರಕ್ಕೆ ಬರಲಿದೆ ಎಂಬ ಮಾಹಿತಿ ಮೇರೆಗೆ ಪತ್ರಕರ್ತರು ಇತ್ತೀಚೆಗೆ ಬೆಳಿಗ್ಗೆಯಿಂದ ಸಂಜೆವರೆಗೂ ಕಾದು ಕಾದು ಸುಸ್ತಾದರು.

‘ಬೆಳಿಗ್ಗೆಯೇ ಬ್ರೇಕಿಂಗ್‌ ನ್ಯೂಸ್‌ ಕೊಟ್ಟಾಗಿದೆ. ಆದರೆ ಸಿಐಡಿಯವ್ರು ಇನ್ನೂ ಬರುವಲ್ರು. ಬಂದಾರೋ ಇಲ್ಲೋ ತಿಳೀವಲ್ದು’ ಎಂದು ಟಿ.ವಿ ವರದಿಗಾರರೊಬ್ಬರು ಹೇಳುತ್ತಿದ್ದರು. ಅವರ ಬ್ರೇಕಿಂಗ್‌ ನ್ಯೂಸ್‌ ಮೇಲೆ ಸದಾ ಕಣ್ಣಿಡುವ ಪತ್ರಿಕಾ ವರದಿಗಾರರು ಕುತೂಹಲ ತಣಿಸಿಕೊಳ್ಳುವ ಆತುರದಲ್ಲಿದ್ದರು.

ಸಿಐಡಿಯವರು ಬಂದರೂ ಆ ಬಗ್ಗೆ ತಮಗೆ ಮಾಹಿತಿಯನ್ನೇನೂ ನೀಡುವುದಿಲ್ಲ ಎಂದು ಎಸ್ಪಿ ಚೇತನ್‌ ಕೂಡ ಖಚಿತವಾಗಿ ಹೇಳಿಬಿಟ್ಟಿದ್ದರು. ಹೀಗಾಗಿ ಸಿಐಡಿಯವರನ್ನು ಎಲ್ಲಿ ಹುಡುಕುವುದು, ಅವರು ಯಾವ ವಾಹನದಲ್ಲಿ ಬರುತ್ತಾರೆ ಎಂದು ಊಹಿಸುತ್ತಾ  ಸುದ್ದಿಗಾರರು ಅಲೆದದ್ದೇ ಅಲೆದದ್ದು.

ಸಿಐಡಿ ಅಧಿಕಾರಿಗಳು ನೇರವಾಗಿ ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ ಮುಲಾಲಿ ಅವರ ಮನೆಗೇ ಬರಬಹುದು ಎಂದುಕೊಂಡು ಅಲ್ಲಿಗೂ ಹೋದದ್ದಾಯಿತು. ಭದ್ರತೆಗೆಂದು ನಿಯೋಜನೆಗೊಂಡ ಪೊಲೀಸರನ್ನು ಬಿಟ್ಟರೆ ಅಲ್ಲಿ ಬೇರೆ ಯಾರೂ ಇರಲಿಲ್ಲ.

‘ಸಿಐಡಿ ತಂಡ ಇಂದು ನಗರಕ್ಕೆ ಬರಲಿದೆ ಎಂದು ಮತ್ತೊಂದು ಬ್ರೇಕಿಂಗ್‌ ನ್ಯೂಸ್‌ ನಾಳೆ ಕೊಟ್ಟರಾಯಿತು ಬಿಡು’ ಎಂದು ಪರಸ್ಪರ ಸಂತೈಸಿಕೊಂಡ ದೃಶ್ಯ ಮಾಧ್ಯಮದ ಪ್ರತಿನಿಧಿಗಳು ಅಲ್ಲಿಂದ ನಿರ್ಗಮಿಸಿದರು. 
- ಕೆ.ನರಸಿಂಹಮೂರ್ತಿ

‘ಗುಜರಿ’ ಆಯುವ ಬುದ್ಧಿವಂತಿಕೆ!
ದಾವಣಗೆರೆ: ಇಲ್ಲಿ ಈಚೆಗೆ ನಡೆದ ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲರ ಸ್ಮರಣೋತ್ಸವದಲ್ಲಿ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ‘ಗುಜರಿ ಸಾಮಾನಿಗೆ’ ಹೋಲಿಸಿದ ಪ್ರಸಂಗ ನಡೆಯಿತು.

ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯಾ ಮಾತನಾಡಿ, ‘ದೇವೇಗೌಡ ಹಾಗೂ ಬಿ.ಎಸ್‌. ಯಡಿಯೂರಪ್ಪ ರಾಜ್ಯದ ಎರಡು ಪ್ರಮುಖ ಶಕ್ತಿಗಳು. ಎರಡು ಪ್ರಬಲ ಸಮಾಜದವರ ಬೆಂಬಲ ಇರುವುದರಿಂದ ಈ ನಾಯಕರನ್ನು ಕಡೆಗಣಿಸುವಂತಿಲ್ಲ. ಇದರ ನಡುವೆ ಪರ್ಯಾಯ ಶಕ್ತಿ ರಚಿಸಲು ಸಾಧ್ಯವೇ ಎಂಬ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರಾಜ್ಯದ ಒಂದು ಶಕ್ತಿ. ತೇರಿನೊಳಗೆ ಯಾವ ಮೂರ್ತಿ ಇದೆ ಎಂಬುದರ ಮೇಲೆ ತೇರು ಎಳೆಯುವವರ ಹಾಗೂ ದಬ್ಬುವವರ ಕಷ್ಟ ನಿರ್ಧಾರವಾಗುತ್ತದೆ’ ಎಂದು ಇಬ್ರಾಹಿಂ ತಮ್ಮದೇ ಧಾಟಿಯಲ್ಲಿ ಮಾತು ಆರಂಭಿಸಿದರು.

‘1994ರಲ್ಲಿ ಭದ್ರಾವತಿಯಲ್ಲಿ ನಡೆದ ಸಮಾರಂಭದಲ್ಲಿ ‘ಮುಂದಿನ ಮುಖ್ಯಮಂತ್ರಿ ದೇವೇಗೌಡರಾಗಲಿದ್ದಾರೆ, ನನ್ನ ಮಾತನ್ನು ಬರೆದಿಟ್ಟುಕೊಳ್ಳಿ’ ಎಂದು ಹೇಳಿದ್ದೆ. ಅದರಂತೆ ದೇವೇಗೌಡರು ಮುಖ್ಯಮಂತ್ರಿಯಾದರು. ಏಳು ವರ್ಷಗಳ ಹಿಂದೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಭವಿಷ್ಯ ನುಡಿದಿದ್ದೆ.

ನನ್ನ ಮಾತು ಕೇಳಿದ ಜನ ವ್ಯಂಗ್ಯ ಮಾಡಿದ್ದರು. ಆದರೆ, ನಮ್ಮ ಶ್ರಮದ ಫಲವಾಗಿ ಅವರೂ ಮುಖ್ಯಮಂತ್ರಿಯಾದರು. ಸಾಬರು ‘ಗುಜರಿ ಸಾಮಾನು’ ಕಂಡು ಹಿಡಿ ಯುವುದರಲ್ಲಿ ಬಹಳ ಬುದ್ಧಿವಂತರು. ನಾವು ಹೊಸದನ್ನು ತೆಗೆದುಕೊಳ್ಳುವುದಿಲ್ಲ. ಒಡೆದು ಹೋಗಿರುವ ಕಾರನ್ನು ತಂದು ಗೇರ್‌ ಬಾಕ್ಸ್‌, ಟೈರ್‌ ಮತ್ತಿತರ ಸಾಮಾನುಗಳನ್ನು ಜೋಡಿಸಿ ಕಾರು ಓಡುವಂತೆ ಮಾಡುತ್ತೇವೆ’ ಎಂದು ಇಬ್ರಾಹಿಂ ಹೇಳಿದಾಗ ಸಭಿಕರು  ಮುಸಿ ಮುಸಿ ನಕ್ಕರು.
- ವಿನಾಯಕ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT