ADVERTISEMENT

ಕ್ಷೀರಭಾಗ್ಯ ಬೇರೆ, ಕ್ಷೀರಧಾರೆ ಬೇರೆ...

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2017, 19:30 IST
Last Updated 12 ಆಗಸ್ಟ್ 2017, 19:30 IST

ಚಿಕ್ಕಬಳ್ಳಾಪುರ: ನಗರದ ವಾಪಸಂದ್ರದಲ್ಲಿರುವ ಜಚನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಿಸಿರುವ ‘ಸಿದ್ದರಾಮಯ್ಯ ಸಭಾಭವನ’ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳುತ್ತಿದ್ದರು. ಮಾತಿನ ನಡುವೆ, ವೇದಿಕೆ ಮೇಲಿದ್ದ ಜೆಡಿಎಸ್‌ ಶಾಸಕ ಎಂ.ರಾಜಣ್ಣ ಅವರತ್ತ ಪದೇ ಪದೇ ತಿರುಗಿ ‘ಗೊತ್ತಾ ರಾಜಣ್ಣ’ ಎಂದು ಕಿಚಾಯಿಸಿದ್ದು ಸಭೀಕರನ್ನು ನಗೆಗಡಲಲ್ಲಿ ತೇಲಿಸಿತು.

‘ನಾವು ಕ್ಷೀರಧಾರೆ ಎಂದು ಒಂದು ಕಾರ್ಯಕ್ರಮ ಮಾಡಿದ್ದೇವೆ. ಗೊತ್ತಾ ರಾಜಣ್ಣ’ ಎಂದು ಸಿದ್ದರಾಮಯ್ಯ ಅವರು ಕೇಳಿದಾಗ ರಾಜಣ್ಣ ‘ಗೊತ್ತು’ ಎನ್ನುವಂತೆ ತಲೆಯಾಡಿದರು. ಆಗ ಮುಖ್ಯಮಂತ್ರಿ, ‘ಕ್ಷೀರಭಾಗ್ಯ ಬೇರೆ, ಕ್ಷೀರಧಾರೆ ಬೇರೆ. ನೀನು ಎಲ್ಲಿಯೂ ಹೇಳಿಯೇ ಇಲ್ಲ  ಅನ್ನಿಸುತ್ತಿದೆ. ಇನ್ನಾದರೂ ನಮ್ಮ ಕಾರ್ಯಕ್ರಮಗಳ ಬಗ್ಗೆ ಹೇಳಪ್ಪ ಮಾರಾಯಾ’ ಎಂದಾಗ ಸಭೆಯಲ್ಲಿದ್ದವರೆಲ್ಲ ‘ಹೋ ..’ ಎಂದು ಕೂಗಿ, ಚಪ್ಪಾಳೆ ತಟ್ಟಿ, ಸಿಳ್ಳೆ ಹಾಕಿದರು.

‘ಹಾಲು ಉತ್ಪಾದನೆ ಮಾಡುವ ರೈತರಿಗೆ ಒಂದು ಲೀಟರ್‌ಗೆ ₹ 5 ಸಬ್ಸಿಡಿ ನೀಡುತ್ತೇವೆ. ಅದನ್ನೇ ಕ್ಷೀರಧಾರೆ ಎಂದು ಕರೆಯುವುದು. ಅದಕ್ಕಾಗಿ ನಮ್ಮ ಸರ್ಕಾರ ವರ್ಷಕ್ಕೆ ₹ 1200 ಕೋಟಿ ಖರ್ಚು ಮಾಡುತ್ತಿದೆ. ರಾಜಣ್ಣ ಜ್ಞಾಪಕ ಇಟ್ಟುಕೊ. ಇನ್ನೆಲ್ಲಿಯಾದರೂ ಹೋದರೆ ಹೇಳು’ ಎನ್ನುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಕರತಾಡನ, ಸಂತಸದ ಕೇಕೆ ಮುಗಿಲು ಮುಟ್ಟಿತ್ತು.
–ಈರಪ್ಪ ಹಳಕಟ್ಟಿ

ADVERTISEMENT

*
ಕುಡುಕರಿಗೆ ಸಂಯಮ ಮಂಡಳಿ ಸದಸ್ಯತ್ವ
ಬೆಂಗಳೂರು:
ಮದ್ಯ ಸೇವನೆಯ ಚಟವನ್ನು ತ್ಯಜಿಸುವ ಬಗ್ಗೆ ಜಾಗೃತಿ ಮೂಡಿಸುವ ಮದ್ಯಪಾನ ಸಂಯಮ ಮಂಡಳಿಗೆ ಕುಡುಕ ಮಹಾಶಯನನ್ನೇ ಸದಸ್ಯನನ್ನಾಗಿ ಮಾಡಿದರೆ ಹೇಗಿರುತ್ತದೆ ? ಇಂಥದ್ದೊಂದು ಸ್ವಾರಸ್ಯಕರ ಪ್ರಸಂಗವನ್ನು ವಾರ್ತಾ ಇಲಾಖೆ ಅಧಿಕಾರಿಯೊಬ್ಬರು ಬಿಚ್ಚಿಟ್ಟರು.

‘ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯನೀರು ಪೂರೈಸುವ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮ’ದಲ್ಲಿ ಭಾಗವಹಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಗೆ  ಶುಕ್ರವಾರ ತೆರಳುತ್ತಿದ್ದಾಗ ಅಧಿಕಾರಿ ಹೇಳಿದ ಸ್ವಾರಸ್ಯಕರವಾದ ಪ್ರಸಂಗವನ್ನು ಕೇಳಿ ಪತ್ರಕರ್ತರೆಲ್ಲ ಬಿದ್ದು ಬಿದ್ದು ನಕ್ಕರು.

‘ನಾನು ಈ ಮೊದಲು ಮದ್ಯಪಾನ ಸಂಯಮ ಮಂಡಳಿಯಲ್ಲಿ ಅಧಿಕಾರಿಯಾಗಿದ್ದೆ. ಅದರಲ್ಲಿ 30 ಜನ ಸದಸ್ಯರಿದ್ದರು. ಈ ಪೈಕಿ ಐವರು ಬಾರ್‌ ಮಾಲೀಕರು, ನಾಲ್ವರು ಕುಡುಕ ಸದಸ್ಯರೂ ಇದ್ದರು.

‘ಈ ಮಂಡಳಿಯು ಅಬಕಾರಿ ಇಲಾಖೆಯಡಿ ಬರುತ್ತದೆ. ಇದರ ಸದಸ್ಯನಾದರೆ ಪ್ರಭಾವ ಬಳಸಿ, ಸಂಬಂಧಿಕರ ಮತ್ತು ಸ್ನೇಹಿತರ ಬಾರ್‌ಗಳಿಗೆ ಅನುಕೂಲ ಮಾಡಿಕೊಡಬಹುದು ಎಂಬ ಉದ್ದೇಶದಿಂದ ನಾಗಮಂಗಲದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರೊಬ್ಬರು ಲಾಬಿ ನಡೆಸಿ ಮಂಡಳಿಯ ಸದಸ್ಯ ಸ್ಥಾನ ಗಿಟ್ಟಿಸಿಕೊಂಡಿದ್ದರು. ಮಂಡಳಿಯ ಕಚೇರಿಯಲ್ಲಿ 30 ಮಂದಿ ಸದಸ್ಯರು ಒಟ್ಟಿಗೆ ಕುಳಿತುಕೊಳ್ಳುವಷ್ಟು ಜಾಗವೂ ಇಲ್ಲ ಎಂಬುದು ಅವರಿಗೆ ತಿಳಿದದ್ದು ಅವರು ಮೊದಲ ಬಾರಿಗೆ ಕಚೇರಿಗೆ ಬಂದ ಬಳಿಕವೇ.

‘ಅವರಿಗೆ ಆಘಾತ ನೀಡಿದ ಮತ್ತೊಂದು ವಿಷಯವೆಂದರೆ,  ಮಂಡಳಿಯು ಅಬಕಾರಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬ ಅಂಶ. ಅದು ಕಾರ್ಯನಿರ್ವಹಿಸುವುದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಡಿ. ಈ ವಿಷಯ ತಿಳಿದ ಬಳಿಕ, ಆ ಆಸಾಮಿ ನೇರವಾಗಿ ಮುಖ್ಯಮಂತ್ರಿಗಳ ಬಳಿ ಹೋಗಿದ್ದರಂತೆ. ‘ಸಾರ್‌, ಕುಡಿಯಲು ನನಗೇ ದಿನಕ್ಕೆ ನಾಲ್ಕು ಕ್ವಾಟರ್‌ಗಳು ಬೇಕು.

ಈ ಮಂಡಳಿಯಲ್ಲಿದ್ದು ನಾನೇನು ಮಾಡಲಿ. ಬೇರೆ ಮಂಡಳಿಯ ಸದಸ್ಯತ್ವ ಕೊಡಿ’ ಎಂದು ಗೋಗರೆದಿದ್ದರಂತೆ.  ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ನೋಡಪ್ಪಾ... ನೀನು ದಿನಕ್ಕೆ ನಾಲ್ಕು ಕ್ವಾಟರ್‌ ಕುಡಿಯುತ್ತೀಯ ಎಂಬ ವಿಚಾರ ತಿಳಿದೇ ಈ ಮಂಡಳಿಯ ಸದಸ್ಯನನ್ನಾಗಿ ಮಾಡಿದ್ದೇನೆ. ಈ ರೀತಿಯಾದರೂ ನೀನೂ ಕುಡಿಯುವುದನ್ನು ಬಿಡುತ್ತಿಯಾ ಎಂಬ ಆಶಯ ನನ್ನದು ಎಂದು ಬುದ್ಧಿಹೇಳಿ ಕಳುಹಿಸಿದರಂತೆ’ ಎಂದು ಅಧಿಕಾರಿ ತಿಳಿಸಿದರು.
–ಪೀರ್‌ಪಾಷಾ

*
‘ನಾ ದೇವರಲ್ಲಾರೀ... ಇನ್ನೊಮ್ಮೆ ಆಶೀರ್ವದಿಸ್ರೀ..!’
ವಿಜಯಪುರ:
‘ಹತ್ತ್‌ ವರ್ಸದಲ್ಲಿ ಆಗೋ ಕೆಲ್ಸಾನಾ ನಾಕ್‌ ವರ್ಸದಲ್ಲೇ ಮುಗ್ಸ್ವೀನಿ ಗೌಡ. ಈ ಹಿಂದ ಹಿಂಗ್‌ ಯಾರಾದ್ರೂ ಮಾಡಿದ್ರಾ... ನಾ ನಿಮ್ಮವ ಇದ್ದೇನೆ ಅಂತ ಈ ಪರಿ ಕೆಲ್ಸಾ ನಡದ್ವೇ...’

ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಸಿ, ಇನ್ನೂ ಹೆಚ್ಚಿನ ನೀರು ನಿಲ್ಸಬೇಕೈತಿ. ಇದಕ್ಕ ಸಾಕಷ್ಟು ಭೂಮಿ ಬೇಕ. ಭೂಸ್ವಾಧೀನ ಪಡಿಸಿಕೊಳ್ಳೋಕ ಸಾಕಷ್ಟ್ ರೊಕ್ಕ ಬೇಕಾ. ವರ್ಸದೊಳಗ ಇದ್ ಆಗಲ್ಲ. ಈ ದೊಡ್ಡ ಕೆಲ್ಸಾನಾ ಒಮ್ಮೆಗೆ ಮುಗ್ಸೋಕೆ ನಾ ದೇವರಲ್ಲಾ. ನೀವೆಲ್ಲಾ ಇನ್ನೊಂದಪ್ಪ ಆಶೀರ್ವಾದ ಮಾಡ್ರೀ...’

ವಿಜಯಪುರ ಜಿಲ್ಲೆಯ ಮುಳವಾಡ, ಚಿಮ್ಮಲಗಿ ಏತ ನೀರಾವರಿ ಯೋಜನೆ ಕಾಮಗಾರಿಗಳ ಪರಿವೀಕ್ಷಣೆ ಸಂದರ್ಭ ತಮ್ಮನ್ನು ಭೇಟಿಯಾಗಿ ವಿವಿಧ ಮನವಿ ಸಲ್ಲಿಸುತ್ತಿದ್ದ ರೈತರಿಗೆ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರೇ ವಿನಂತಿಸಿಕೊಂಡ ಪರಿಯಿದು.

‘ಈ ವರ್ಸದಲ್ಲಿ ಹೊಲಕ್ಕ ನೀರ್‌ ಹರಿಸೋದ್‌ ಡೌಟ್‌. ಆದ್ರಾ ಗೌಡ, ನಿಮ್ಮೂರಿನ ಕೆರೆಗಳಿಗೆ ನೀರ್ ತುಂಬ್ತೀನಿ. ಆ ನೀರ ಬಲದಿಂದಲೇ ಇನ್ನೊಂದು ವರ್ಸ ಜಗ್ರೀ. ಮುಂದಿನ ವರ್ಸ ಮತ್ತೊಮ್ಮೆ ನೀವೆಲ್ಲಾ ನಮ್ಗ ಆಶೀರ್ವಾದ ಮಾಡ್ರೀ.

ನಿಮ್ಮೆಲ್ಲ ಸಮಸ್ಯೆ ಬಗೆಹರಿಸ್ತೀನಿ. ನಾ ಇಲ್ಯಾವನೇ. ರೈತರಿಗ ಎಂದೂ ಮೋಸ ಮಾಡಲ್ಲ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ’ ಎಂದು ಎಂ.ಬಿ.ಪಾಟೀಲ ಮನವಿ ಸಲ್ಲಿಸಲು ಬಂದಿದ್ದ ರೈತರಿಗೆ, ಪ್ರತಿ ಮನವಿ ಮಾಡುತ್ತಿದ್ದಂತೆ, ಆವಾಕ್ಕಾಗುವ ಸರದಿ ರೈತರದ್ದು.
–ಡಿ.ಬಿ.ನಾಗರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.