ADVERTISEMENT

ಯುವಜನರ ಸ್ಫೂರ್ತಿಯ ಸೆಲೆ

ಕೆ.ಓಂಕಾರ ಮೂರ್ತಿ
Published 8 ಏಪ್ರಿಲ್ 2017, 19:30 IST
Last Updated 8 ಏಪ್ರಿಲ್ 2017, 19:30 IST
ಲಿಯಾಂಡರ್‌ ಪೇಸ್‌
ಲಿಯಾಂಡರ್‌ ಪೇಸ್‌   

‘ನನಗೀಗ ಮರುಜನ್ಮ ಲಭಿಸಿದೆ. ಈ ದೇಶದ ಕ್ರೀಡಾಭಿಮಾನಿಗಳ ಹಾರೈಕೆ, ಅವರು ನನ್ನ ಮೇಲಿಟ್ಟಿರುವ ಪ್ರೀತಿ ಅದಕ್ಕೆ ಕಾರಣ. ಆ ಪ್ರೀತಿ, ಅಭಿಮಾನಕ್ಕೆ ನಾನೇನು ಉಡುಗೊರೆ ನೀಡಲಿ?’

–2003ರ ಆಗಸ್ಟ್‌ 26ರ ಮಧ್ಯಾಹ್ನ ಅಮೆರಿಕದ ಒರ್ಲ್ಯಾಂಡೊದಲ್ಲಿನ ಆ್ಯಂಡರ್ಸನ್‌ ಕ್ಯಾನ್ಸರ್‌ ಆಸ್ಪತ್ರೆಯ ಕೋಣೆಯಲ್ಲಿ ಮಾಧ್ಯಮದವರ ಎದುರು ಹೀಗೆಂದು ಹೇಳಿದ ಲಿಯಾಂಡರ್‌ ಪೇಸ್‌ ಗದ್ಗದಿತರಾದರು. ನಡುಗುತ್ತಿದ್ದ ದನಿಯೇ ಎಲ್ಲಾ ವಿಚಾರ ಬಿಚ್ಚಿಡುತ್ತಿತ್ತು.

ಮೆದುಳು ಸಂಬಂಧಿ ಕಾಯಿಲೆಯಿಂದ ಅವರು ಆ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೇನು ಲಿಯಾಂಡರ್‌ ಜೀವನವೇ ಮುಗಿಯಿತು ಎಂದು ಕೆಲವರು ಷರಾ ಬರೆದಿದ್ದರು. ಟೆನಿಸ್‌ ಟೂರ್ನಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅವರು ತಲೆಸುತ್ತು ಬಂದು ಬಿದ್ದಿದ್ದರು. ಅಂಗಳದಲ್ಲೇ ವಾಂತಿ ಮಾಡಿಕೊಂಡಿದ್ದರು.

ಅವರನ್ನು ಪರೀಕ್ಷಿಸಿದ ವೈದ್ಯರು ಮೆದುಳಿನಲ್ಲಿ ಕ್ಯಾನ್ಸರ್ ಗಡ್ಡೆ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು. ಅದಕ್ಕೂ ಮುನ್ನ ಕೆಲ ದಿನಗಳ ಹಿಂದೆಯಷ್ಟೇ ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿ ಅಮೆರಿಕದ ಮಾರ್ಟಿನಾ ನವ್ರಾಟಿಲೋವಾ ಜೊತೆಗೂಡಿ ವಿಂಬಲ್ಡನ್‌ನಲ್ಲಿ ಮಿಶ್ರ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದರು.

ಒಲಿಂಪಿಕ್ಸ್‌ ಕಂಚಿನ ಪದಕದೊಂದಿಗೆ ಟೆನಿಸ್‌ ಜಗತ್ತಿನಲ್ಲಿ ಹೆಸರು ಮಾಡಿ ದೇಶಕ್ಕೆ ಕೀರ್ತಿ ತಂದಿದ್ದ ಪೇಸ್‌ ಬದುಕುಳಿಯುವ ಬಗ್ಗೆಯೇ ಕೆಲ ವೈದ್ಯರು ಅನುಮಾನ ವ್ಯಕ್ತಪಡಿಸಿದರು. ಹಲವು ಪರೀಕ್ಷೆ, ತಪಾಸಣೆ ಬಳಿಕ ಅದು ಮೆದುಳು ಸೋಂಕು (ಪ್ಯಾರಾಸೈಟಿಕ್‌ ಬ್ರೇನ್‌ ಇನ್ಫೆಕ್ಷನ್‌) ಎಂಬುದು ಗೊತ್ತಾಯಿತು. ಚಿಕಿತ್ಸೆ ಬಳಿಕ ಸಮಸ್ಯೆಯಿಂದ ಪಾರಾಗಿ ಬಂದ ಪೇಸ್‌ ತಮ್ಮ ಸಾಧನೆಯ ಯಾತ್ರೆ ಮುಂದುವರಿಸಿದ್ದಾರೆ.

ಪೇಸ್‌ ನಿಸ್ಸಂದೇಹವಾಗಿ ಭಾರತ ಕ್ರೀಡಾಲೋಕದ ಧ್ರುವತಾರೆ. ಅವರು ತೋರುವ ಬದ್ಧತೆ ಉಳಿದ ಕ್ರೀಡಾಪಟುಗಳಿಗೆ ಮಾದರಿ ಆಗುವಂಥದ್ದು. ಒಬ್ಬ ಕ್ರೀಡಾಪಟು ಸತತ 27 ವರ್ಷ ದೇಶಕ್ಕಾಗಿ ಆಡಿದ ಉದಾಹರಣೆ ಇಲ್ಲ. ಹಲವು ದಾಖಲೆಗಳನ್ನು ಪೋಣಿಸಿ ಭಾರತ ಕ್ರಿಕೆಟ್‌ನ ಆರಾಧ್ಯದೈವ ಎನಿಸಿಕೊಂಡಿರುವ ಸಚಿನ್‌ ತೆಂಡೂಲ್ಕರ್‌ ಅವರಿಗಿಂತಲೂ ಈ ವಿಷಯದಲ್ಲಿ ಪೇಸ್‌ ಒಂದು ಹೆಜ್ಜೆ ಮುಂದೆ ಎನ್ನಬಹುದು. ಸಚಿನ್‌ 24 ವರ್ಷ ಆಡಿದ್ದಾರೆ.

‘ಇಷ್ಟೊಂದು ಸುದೀರ್ಘ ಕಾಲ ದೇಶಕ್ಕಾಗಿ ಆಡಲು ಅವಕಾಶ ಪಡೆದಿರುವ ನಾನೇ ಪುಣ್ಯವಂತ. ಯುವಪೀಳಿಗೆಯ ಆಟಗಾರರೊಂದಿಗೆ ಕಣಕ್ಕಿಳಿಯುವುದೇ ಖುಷಿಯ ವಿಚಾರ’ ಎನ್ನುತ್ತಾರೆ ಪೇಸ್‌.

ಈ ಹಂತದಲ್ಲಿ ಅವರ ಅಭಿಮಾನಿಗಳು ಬೇಸರಪಟ್ಟುಕೊಳ್ಳುವ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ 27 ವರ್ಷಗಳಲ್ಲಿ ಇದೇ ಮೊದಲ ಬಾರಿ ಅವರು ಭಾರತ ಡೇವಿಸ್‌ ಕಪ್‌ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಹೀಗಾಗಿಯೇ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಉಜ್ಬೇಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ. ಬೆಂಗಳೂರಿಗೆ ಕರೆಸಿಕೊಂಡು ಸ್ಥಾನ ನೀಡದೇ ಇರುವುದು ಅವರಲ್ಲಿ ತುಂಬಾ ನೋವುಂಟು ಮಾಡಿದೆ.

‘ನೀನು ತಂಡಕ್ಕೆ ಬೇಕಿಲ್ಲ ಎಂದು ದೂರವಾಣಿ ಮೂಲಕ ವಿಷಯ ಮುಟ್ಟಿಸಿದ್ದರೆ ಸಾಕಿತ್ತು. ನಾನು ಇಲ್ಲಿಗೆ ಬರುತ್ತಿರಲಿಲ್ಲ’ ಎಂದು ಬೇಸರದಿಂದಲೇ ನುಡಿದಿದ್ದಾರೆ. ಪೇಸ್‌ ಮೊದಲ ಬಾರಿ ಡೇವಿಸ್‌ ಕಪ್‌ನಲ್ಲಿ ಆಡಿದ್ದು 1990ರಲ್ಲಿ. ಆಗ ಅವರಿಗೆ ಕೇವಲ 16 ವರ್ಷ.

‘ಇಷ್ಟು ವರ್ಷಗಳಲ್ಲಿ ಟೆನಿಸ್‌ ಜೊತೆಗಿನ ನನ್ನ ಪಯಣ ಅದ್ಭುತವಾಗಿತ್ತು ಎನ್ನುವ ಖುಷಿಯಂತೂ ಇದ್ದೇ ಇದೆ. ಇಷ್ಟಕ್ಕೇ ಸುಮ್ಮನಾಗದೆ ಮುಂದಿನ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ.

ವೃತ್ತಿಪರ ಟೆನಿಸ್‌ನಲ್ಲಿ ಹಲವು ಸಾಧನೆ ಮಾಡಿರುವ ಅವರು ದೇಶಕ್ಕಾಗಿ ಆಡುವಾಗ ತುಂಬಾ ಭಾವುಕರಾಗುತ್ತಾರೆ. ಇದೇ ಕಾರಣಕ್ಕೆ ಎಲ್ಲರಿಗೂ ಇಷ್ಟವಾಗುತ್ತಾ ಹೋಗುತ್ತಾರೆ. 1996ರ ಅಟ್ಲಾಂಟ ಒಲಿಂಪಿಕ್ಸ್‌ನ ಟೆನಿಸ್‌ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದು ಲಿಯಾಂಡರ್‌ ಅವರ ಕ್ರೀಡಾ ಜೀವನಕ್ಕೆ ಲಭಿಸಿದ ಬಹುದೊಡ್ಡ ತಿರುವು.

1952ರ ಹೆಲ್ಸಿಂಕಿ ಒಲಿಂಪಿಕ್ಸ್‌ ಬಳಿಕ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕವದು. ಈ ಮೂಲಕ ದೇಶದ ಯುವ ಸಮೂಹದ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಏಳು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡು ದಾಖಲೆ ಬರೆದಿದ್ದಾರೆ.

ಯಾವುದೇ ಕ್ರೀಡೆಯಲ್ಲಿ 43ನೇ ವಯಸ್ಸಿನಲ್ಲೂ ದೈಹಿಕ ಸಾಮರ್ಥ್ಯ ಉಳಿಸಿಕೊಂಡು ಸ್ಥಿರ ಪ್ರದರ್ಶನ ನೀಡುವುದು ಹುಡುಗಾಟಿಕೆ ವಿಷಯವಲ್ಲ. ಕೋಲ್ಕತ್ತದಲ್ಲಿ ನೆಲೆಸಿರುವ ಲಿಯಾಂಡರ್‌ 17ನೇ ವಯಸ್ಸಿನಲ್ಲಿ ಅಮೆರಿಕ ಜೂನಿಯರ್‌ ಓಪನ್‌ ಹಾಗೂ ವಿಂಬಲ್ಡನ್‌ ಜೂನಿಯರ್‌ ಚಾಂಪಿಯನ್‌ ಆಗಿ ಅಗ್ರಪಟ್ಟಕ್ಕೇರಿದರು. ಇನ್ನುಳಿದಿದ್ದು ಇತಿಹಾಸ. 1999ರಲ್ಲಿ ಮಹೇಶ್‌ ಭೂಪತಿ ಜೊತೆಗೂಡಿ ಡಬಲ್ಸ್‌ ಆಡಲಾರಂಭಿಸಿದ ಲಿಯಾಂಡರ್‌ ಮನೆಯಲ್ಲಿ ಗ್ರ್ಯಾಂಡ್‌ಸ್ಲಾಮ್‌ ಟ್ರೋಫಿಗಳ ಭಂಡಾರವೇ ಇದೆ.

ADVERTISEMENT

ಸಿಂಗಲ್ಸ್‌ನಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡದಿದ್ದರೂ ಡಬಲ್ಸ್‌ನಲ್ಲಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ವಿವಿಧ ಆಟಗಾರರ ಜೊತೆಗೂಡಿ ಡಬಲ್ಸ್‌ನಲ್ಲಿ 8, ಮಿಶ್ರ ಡಬಲ್ಸ್‌ನಲ್ಲಿ 10 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಜಯಿಸಿದ್ದಾರೆ. ಟೆನಿಸ್‌ ದಂತಕತೆ ಅಮೆರಿಕದ ಪೀಟ್‌ ಸಾಂಪ್ರಾಸ್‌ ಎದುರು ಒಮ್ಮೆ ಸಿಂಗಲ್ಸ್‌ನಲ್ಲಿ ಗೆದ್ದಿದ್ದು ಸ್ಮರಣೀಯ. ಅರ್ಜುನ, ರಾಜೀವ್‌ ಗಾಂಧಿ ಖೇಲ್‌ ರತ್ನ, ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಲವು ವಿವಾದಗಳಿಗೆ ಕಾರಣರಾಗಿದ್ದೂ ಇದೆ. ಪ್ರಮುಖವಾಗಿ ಮಹೇಶ್‌ ಭೂಪತಿ ಜೊತೆಗಿನ ವೈಮನಸ್ಯ ಭಾರಿ ಸದ್ದು ಮಾಡಿದೆ. ಈಗಲೂ ಮಾಡುತ್ತಿದೆ. ಇದಕ್ಕೆ ಹಿತಾಸಕ್ತಿ ಸಂಘರ್ಷ, ಅಹಂ, ಸ್ವಾರ್ಥ ಎಲ್ಲವೂ ಕಾರಣ ಎಂಬ ಆರೋಪವಿದೆ. 2012ರ ಲಂಡನ್‌ ಒಲಿಂಪಿಕ್ಸ್‌ ಹಾಗೂ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಅವರ ಜೊತೆಗೂಡಿ ಆಡಲು ಹೆಚ್ಚಿನ ಆಟಗಾರರು ಒಪ್ಪಲಿಲ್ಲ. ಆದರೆ, ಸ್ವಸಾಮರ್ಥ್ಯದಿಂದ ಆಯ್ಕೆಯಾಗಿದ್ದ ಪೇಸ್‌ ಯುವ ಆಟಗಾರರ ಜೊತೆ ಕಣಕ್ಕಿಳಿದರು.

‘ನನ್ನ ಸಾಧನೆ ಹಾಗೂ ಯಶಸ್ಸಿನ ಬಗ್ಗೆ ಕೆಲವರಿಗೆ ಅಸೂಯೆ ಇದೆ’ ಎಂದು ಹಲವು ಬಾರಿ ಅಸಮಾಧಾನ ಹೊರಹಾಕಿದ್ದುಂಟು. ಭೂಪತಿ–ಪೇಸ್‌ ಜೊತೆಗೂಡಿ ಆಟ ಮುಂದುವರಿಸಿದ್ದರೆ ಮತ್ತಷ್ಟು ಪ್ರಶಸ್ತಿಗಳು ಭಾರತದ ಪಾಲಾಗುತ್ತಿದ್ದವು.

ಅಂದಹಾಗೆ, ಕೌಟುಂಬಿಕ ವಿಚಾರದಲ್ಲೂ ಅವರು ಹಲವು ವಿವಾದಗಳಿಗೆ ಒಳಗಾಗಿದ್ದಾರೆ. ಬಾಲಿವುಡ್‌ ನಟಿ ಮಹಿಮಾ ಚೌಧರಿ ಜೊತೆಗಿನ ಪ್ರಣಯ ಅರ್ಧದಲ್ಲೇ ಮುರಿದುಬಿತ್ತು. ಪತ್ನಿ ರಿಹಾ ಪಿಳ್ಳೈ ಅವರಿಂದ ದೂರವಾಗಿದ್ದಾರೆ. ಅದು ಕೋರ್ಟ್‌ ಮೆಟ್ಟಿಲು ಕೂಡ ಏರಿದೆ. ರಿಹಾ ಬಾಲಿವುಡ್‌ ನಟ ಸಂಜಯ್‌ ದತ್‌ ಅವರ ಮಾಜಿ ಪತ್ನಿ. ಪೇಸ್‌-ರಿಹಾ ಅವರಿಗೆ ಅಯಾನಾ ಎಂಬ ಮಗಳಿದ್ದಾಳೆ.

ಲಿಯಾಂಡರ್‌ ಅವರ ಪಾಲಿಗೆ ಕ್ರೀಡೆ ಎಂಬುದು ರಕ್ತಗತವಾಗಿದೆ. ತಂದೆ ಡಾ. ವೆಸ್‌ ಪೇಸ್‌ 1972ರ ಮ್ಯೂನಿಕ್‌ ಒಲಿಂಪಿಕ್ಸ್‌ ಹಾಕಿಯಲ್ಲಿ ಕಂಚಿನ ಪದಕ ಜಯಿಸಿದವರು. ಅವರು ಕ್ರೀಡಾ ಔಷಧ ವಿಭಾಗದಲ್ಲಿ ಪರಿಣತಿ ಹೊಂದಿದ್ದಾರೆ. ತಾಯಿ ಜೆನಿಫರ್‌ ಪೇಸ್‌ 1980ರ ಏಷ್ಯನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.