ADVERTISEMENT

ಲೈಂಗಿಕವೃತ್ತಿ ಕಾನೂನು ಬದ್ಧಗೊಳ್ಳಲಿ

ವಾರದ ಸಂದರ್ಶನ

ಹೇಮಾ ವೆಂಕಟ್
Published 10 ಆಗಸ್ಟ್ 2015, 11:33 IST
Last Updated 10 ಆಗಸ್ಟ್ 2015, 11:33 IST

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಲೈಂಗಿಕ ವೃತ್ತಿಯನ್ನು ಕಾನೂನುವ್ಯಾಪ್ತಿಗೆ ಒಳಪಡಿಸುವುದೂ ಸೇರಿದಂತೆ, ರಾಜ್ಯ ಮಹಿಳಾ ಆಯೋಗಗಳ ಕಾರ್ಯವೈಖರಿ, ಮಹಿಳಾ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಆಯೋಗ ಹಾಕಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಅವರು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ್ದಾರೆ.

* ಲೈಂಗಿಕ ವೃತ್ತಿಯನ್ನು ಕಾನೂನು ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ನಿಮ್ಮ ನಿಲುವೇನು?
ಲೈಂಗಿಕ ವೃತ್ತಿಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಕಾನೂನಿನ ವ್ಯಾಪ್ತಿಗೆ ಒಳಪಡಿಸುವುದು ಸಮಾಜದ ದೃಷ್ಟಿಯಿಂದಲೂ, ಆ ವೃತ್ತಿಯಲ್ಲಿರುವ ಮಹಿಳೆಯರ ಆರೋಗ್ಯದ ದೃಷ್ಟಿಯಿಂದಲೂ ಸರಿಯಾದ ಕ್ರಮ. ಇದರಿಂದ ಲೈಂಗಿಕ ವೃತ್ತಿಯಲ್ಲಿರುವ ಮಹಿಳೆಯರು ಒಂದೆಡೆ ಇರುತ್ತಾರೆ. ಅವರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಸಾಧ್ಯ. ಅಪ್ರಾಪ್ತ ಹೆಣ್ಣು ಮಕ್ಕಳನ್ನು ಲೈಂಗಿಕ ವೃತ್ತಿಗೆ ತಳ್ಳುವುದನ್ನು ತಡೆಯಬಹುದು. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆ ಮಾಡಬಹುದು. ಪೊಲೀಸರ ಹಿಂಸೆ, ವಸೂಲಿ ತಪ್ಪಿಸಬಹುದು.  ಅಗತ್ಯವಿರುವವರು ಅವರಿರುವ ಜಾಗಕ್ಕೆ ಹೋಗುತ್ತಾರೆ. ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಆಗುವ ತೊಂದರೆ ತಪ್ಪುತ್ತದೆ. ಕಾನೂನು ವ್ಯಾಪ್ತಿಗೆ ಬಂದಾಗ ಅವರೂ ಸರ್ಕಾರದ ಸೌಲಭ್ಯಗಳನ್ನು ಪಡೆಯುವುದು ಸಾಧ್ಯ.

* ಇತ್ತೀಚೆಗೆ ಪುರುಷರಿಗೂ ಆಯೋಗ ರಚಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪುರುಷರು ಲೈಂಗಿಕ ಶೋಷಣೆ, ಅತ್ಯಾಚಾರಗಳಿಗೆ ಒಳಗಾಗುತ್ತಿಲ್ಲ. ವರದಕ್ಷಿಣೆಯಂಥ ಕೌಟುಂಬಿಕ ಕಿರುಕುಳ ಅವರಿಗಿಲ್ಲ. ಹೆಣ್ಣು ಮಕ್ಕಳಿಗೆ ಕಾಡುವಷ್ಟು ಅಪೌಷ್ಟಿಕತೆ  ಗಂಡು ಮಕ್ಕಳನ್ನು ಕಾಡುತ್ತಿಲ್ಲ. ಈ ಎಲ್ಲ ಸಮಸ್ಯೆಗಳು ಹೆಣ್ಣು ಮಕ್ಕಳನ್ನು ಕಾಡುತ್ತಿವೆ.  ಅವರ ರಕ್ಷಣೆ, ಬೆಂಬಲಕ್ಕೆ ಆಯೋಗ ರಚನೆ ಮಾಡಲಾಗಿದೆ. ಪುರುಷರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಅದರ ಪ್ರಮಾಣ ತುಂಬ ಕಡಿಮೆಯಿದೆ. ವರದಕ್ಷಿಣೆ ತಡೆ ಕಾನೂನನ್ನು ದುರುಪಯೋಗಪಡಿಸಿ ಪುರುಷರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಆರೋಪವಿದೆ. ಅದನ್ನು ಕಾನೂನಿನ ಮೂಲಕವೇ ಬಗೆಹರಿಸಿಕೊಳ್ಳಬಹುದು. ಹೀಗಾಗಿ ಪುರುಷರಿಗೂ ಆಯೋಗ ರಚನೆ ಮಾಡಬೇಕು ಎಂಬುದರಲ್ಲಿ ಅರ್ಥವಿಲ್ಲ. 

* ಮಹಿಳಾ ಹಕ್ಕುಗಳ ಹೋರಾಟಗಳಿಗೂ ರಾಜಧಾನಿ ಎನಿಸಿರುವ  ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿಲ್ಲ. ನಿಜವಾದ ಸಮಸ್ಯೆ ಎಲ್ಲಿದೆ?
ದೆಹಲಿಯ ಪ್ರಕರಣಗಳು ಹೆಚ್ಚು ಸುದ್ದಿಯಾಗುತ್ತಿವೆ. ಆದರೆ, ರಾಜಸ್ತಾನ, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ.  ಅತ್ಯಾಚಾರ ಎಂಬ ಅಪರಾಧಕ್ಕೆ ರಾಜ್ಯ ಎಂಬುದಿಲ್ಲ. ಹೆಣ್ಣು ಮಕ್ಕಳ ಬಗ್ಗೆ ಗಂಡು ಮಕ್ಕಳ ಅಭಿಪ್ರಾಯ ಬದಲಾಗುವಂಥ ಶಿಕ್ಷಣ ನೀಡುವ ಅಗತ್ಯವಿದೆ.  ಮಹಿಳೆಯರ ಸಬಲೀಕರಣ ಆಗಬೇಕು. ಸುಶಿಕ್ಷಿತ ಮತ್ತು ದುಡಿಯುವ ಹೆಣ್ಣು ಮಕ್ಕಳಿರುವ ಪ್ರದೇಶಗಳಲ್ಲಿ ಇಂಥ ಪ್ರಕರಣಗಳು ಕಡಿಮೆ. 

* ಮಹಿಳೆಯರ ಬಗ್ಗೆ ಅಗೌರವ ಮೂಡಿಸುವಂಥ, ಲಘು ಹೇಳಿಕೆಗಳನ್ನು ನೀಡುತ್ತಿರುವ  ವ್ಯಕ್ತಿಗಳು, ರಾಜಕಾರಣಿಗಳ ಬಗ್ಗೆ ಏನು ಕ್ರಮ ಜರುಗಿಸಿದ್ದೀರಿ?
ಅಂಥ ಹೇಳಿಕೆಗಳನ್ನು ನೀಡಿರುವ ಎಲ್ಲರಿಗೂ ಪಕ್ಷಭೇದವಿಲ್ಲದೆ ನೋಟಿಸ್‌ ಜಾರಿ ಮಾಡಿದ್ದೇವೆ. ಬಿಜೆಪಿ ಸಂಸದರಾದ ಸಾಕ್ಷಿ ಮಹಾರಾಜ್‌, ಗಿರಿರಾಜ್‌ ಸಿಂಗ್‌, ಸಾಧ್ವಿ ಬಾಲಿಕಾ ಸರಸ್ವತಿ, ಕಾಂಗ್ರೆಸ್‌ನ ಗುರುದಾಸ್‌ ಕಾಮತ್‌ ಅವರ ಮೇಲೆ ಮಹಿಳಾ ಆಯೋಗ ನೋಟಿಸ್‌ ಜಾರಿ ಮಾಡಿದೆ. ಮುಂದೆ ಇಂಥ ಹೇಳಿಕೆ ನೀಡದಂತೆ ಎಚ್ಚರಿಸಲಾಗಿದೆ. ಸಾಕ್ಷಿ ಮಹಾರಾಜ್‌ ಅವರಿಗೆ ಎರಡು ಬಾರಿ ನೋಟಿಸ್‌ ಜಾರಿ ಮಾಡಲಾಗಿದೆ.

* ಮಹಿಳಾ ಆಯೋಗ ಪೇಪರ್‌ ಹುಲಿಯಂತಾಗಿದೆ, ಹೆಚ್ಚು ಅಧಿಕಾರ ಬೇಕು ಅನ್ನಿಸುವುದಿಲ್ಲವೇ?
ಹೌದು. ಈ ಬಗ್ಗೆ ಕಾನೂನು ತಿದ್ದುಪಡಿ ತರಬೇಕು. ಈಗ ಇರುವ ಅಧಿಕಾರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದೇನೆ. ಆಯೋಗವನ್ನು ಸದೃಢಗೊಳಿಸಬೇಕು. ಪರಿಹಾರ ಕೊಡಿಸುವುದು, ಶಿಕ್ಷೆ ಕೊಡಿಸುವುದು ಮುಂತಾದ ಅಧಿಕಾರ ಬೇಕಾಗುತ್ತದೆ.

* ರಾಜ್ಯ ಮಹಿಳಾ ಆಯೋಗಗಳ ಜೊತೆ ನಿಮ್ಮ ಸಂಬಂಧ ಹೇಗಿದೆ?
ಕೆಲವು ರಾಜ್ಯಗಳ ಮಹಿಳಾ ಆಯೋಗಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಆಯೋಗಗಳು ನಮ್ಮ ಜೊತೆ ನಿರಂತರ ಸಂಪರ್ಕ ಹೊಂದಿವೆ. ಕೆಲವು ರಾಜ್ಯಗಳಲ್ಲಿ ಅಷ್ಟೇನೂ ಕೆಲಸಗಳು ಆಗುತ್ತಿಲ್ಲ.  ಕೆಲವರಿಗೆ ‘ಈಗೊ’ ಸಮಸ್ಯೆ ಇದೆ.  ಸೆಪ್ಟೆಂಬರ್‌ ಮೊದಲ ವಾರದಲ್ಲಿ ಎಲ್ಲ ರಾಜ್ಯಗಳ ಆಯೋಗಗಳ ಸಭೆ ದೆಹಲಿಯಲ್ಲಿ ನಡೆಯಲಿದೆ. ರಾಜ್ಯ ಆಯೋಗಗಳನ್ನು ಕ್ರಿಯಾಶೀಲವಾಗಿಸುವ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು.

* ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ನಿಮ್ಮ ಪ್ರವಾಸದ ಬಗ್ಗೆ ಮಾಹಿತಿ ನೀಡುತ್ತಿಲ್ಲವಂತೆ?
ಯಾವುದೇ ರಾಜ್ಯಕ್ಕೆ  ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಭೇಟಿ ನೀಡುವಾಗ  ಅಲ್ಲಿನ ಪೊಲೀಸ್‌ ಇಲಾಖೆಗೆ ತಿಳಿಸಬೇಕು ಎಂಬ ನಿಯಮವಿದೆ.  ಮಹಿಳಾ  ಆಯೋಗಕ್ಕೆ ತಿಳಿಸಬೇಕು ಎಂಬ ನಿಯಮವಿಲ್ಲ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ರಾಷ್ಟ್ರೀಯ ಆಯೋಗದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ರಾಜ್ಯಕ್ಕೆ ಬಂದಾಗ ಸೌಜನ್ಯಕ್ಕೂ ಅವರನ್ನು ಭೇಟಿ ಮಾಡುತ್ತಿಲ್ಲ.

* ಅತ್ಯಾಚಾರ ಪ್ರಕರಣದ ದೂರುದಾರೆ ಪ್ರೇಮಲತಾ ಶಾಸ್ತ್ರಿ ಅವರ ಮನೆಗೆ ಭೇಟಿ ನೀಡಿದ್ದೀರಿ. ಬೇರೆಲ್ಲ ಪ್ರಕರಣಗಳಲ್ಲಿಯೂ ಹೀಗೆ ದೂರುದಾರರ ಮನೆಗೆ ಭೇಟಿ ನೀಡುವ ರೂಢಿಯಿದೆಯೇ?
ಹೌದು. ದೂರುದಾರರು ಇರುವಲ್ಲಿಗೆ ಹೋಗಿ  ಭೇಟಿ ಮಾಡಿ ಅವರಿಂದ ಮಾಹಿತಿ ಪಡೆಯುತ್ತೇವೆ.  ಆದರೆ, ಮನೆಯಲ್ಲೇ ಭೇಟಿ ಮಾಡುತ್ತೇವೆ ಎಂದೇನಿಲ್ಲ.  ಅವರಿಗೆ ಕಚೇರಿ ಇದ್ದರೆ ಅಲ್ಲೇ ಭೇಟಿ ಮಾಡುತ್ತೇವೆ. ರಾಜಸ್ತಾನ, ಹರಿಯಾಣ, ಉತ್ತರ ಪ್ರದೇಶದ ಕುಗ್ರಾಮಗಳ ಸಂತ್ರಸ್ತ ಹೆಣ್ಣು ಮಕ್ಕಳ ಮನೆಗಳಿಗೂ ಭೇಟಿ ನೀಡಿದ್ದೇವೆ. ಪ್ರೇಮಲತಾ ಅವರಿಗೆ ಕಚೇರಿ ಇಲ್ಲದ ಕಾರಣ ಅವರ ಮನೆಯಲ್ಲಿ ಭೇಟಿ ಮಾಡಿದ್ದೇನೆ.  ಪ್ರಕರಣದ ಬಗ್ಗೆ ಅವರಿಂದ ಮಾಹಿತಿ ಪಡೆದಿದ್ದೇನೆ.  ಆರೋಪಪಟ್ಟಿ  ಸಲ್ಲಿಕೆಯಾಗದಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

* ಆಯೋಗದ ಕಾರ್ಯಗಳಿಗೆ ಕೇಂದ್ರ ಸರ್ಕಾರದ ಹಸ್ತಕ್ಷೇಪವಿದೆಯೇ?
ಖಂಡಿತಾ ಇಲ್ಲ. ಕೇಂದ್ರ ಸರ್ಕಾರದ ಸಚಿವರಾಗಲಿ, ಸಂಸದರಾಗಲಿ ನನಗೆ ಫೋನ್‌ ಕರೆಯನ್ನೂ ಮಾಡುವುದಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮೇನಕಾ ಗಾಂಧಿ ಕೂಡಾ ಇದುವರೆಗೆ ಹಸ್ತಕ್ಷೇಪ ಮಾಡಿಲ್ಲ. ಅವರಿಗೆ ಬಂದ ದೂರುಗಳನ್ನು ನನಗೆ ಕಳುಹಿಸಿಕೊಡುತ್ತಾರೆ. ಉತ್ತಮ ಸಲಹೆಗಳನ್ನು ನೀಡುತ್ತಾರೆ. ಇಲ್ಲಿ ಯಾರ ಹಸ್ತಕ್ಷೇಪವಿಲ್ಲ. ಮಹಿಳೆಯರಿಗೆ ರಕ್ಷಣೆ ನೀಡುವುದು ಎಲ್ಲರ ಆದ್ಯತೆ.

* ರಾಷ್ಟ್ರೀಯ ಮಹಿಳಾ ಆಯೋಗದ ಕಾರ್ಯ ಚಟುವಟಿಕೆಗಳ ಬಗ್ಗೆ ತೃಪ್ತಿ ಇದೆಯೇ?
ಹಿಂದೆ ಆಯೋಗದ ಅಧ್ಯಕ್ಷರಾಗಿದ್ದವರು ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಅದು ಜನರಿಗೆ ತಲುಪಿಲ್ಲ. ನಾನು  ಈ ಸ್ಥಾನಕ್ಕೆ ಬಂದು ಹತ್ತು ತಿಂಗಳಷ್ಟೇ ಆಗಿದೆ. ಎಲ್ಲ ರಾಜ್ಯಗಳಿಗೆ ಪ್ರವಾಸ ಮಾಡಿ ಅಲ್ಲಿನ ಆಯೋಗಗಳಿಗೆ ಸಲಹೆ ನೀಡುತ್ತಿದ್ದೇನೆ. ಆಯೋಗವನ್ನು ಸದೃಢಗೊಳಿಸಲು ಪ್ರಯತ್ನಿಸುತ್ತಿದ್ದೇನೆ. ಕೆಲವು ರಾಜ್ಯಗಳ ಆಯೋಗಗಳಿಗೆ ಮೂಲಭೂತ ಸೌಕರ್ಯದ ಕೊರತೆಯಿದೆ, ಅನುದಾನದ ಕೊರತೆಯಿದೆ ಎಂಬ ದೂರುಗಳಿವೆ. ಇದಕ್ಕೆ ಆಯಾ ರಾಜ್ಯ ಸರ್ಕಾರಗಳು ಸಹಕರಿಸುವ ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರ್ಕಾರಗಳ ಜೊತೆ ಮಾತುಕತೆ ನಡೆಸಲಾಗುವುದು.

* ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ನೀವು ಯಾವ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದಿದ್ದೀರಿ?
ಇಡೀ ದೇಶಕ್ಕೆ ಒಂದು ಮಹಿಳಾ ಸಹಾಯವಾಣಿ ಸಂಖ್ಯೆಯನ್ನು ಸದ್ಯವೇ ಜಾರಿಗೊಳಿಸಲಿದ್ದೇವೆ. ಅದು ಎಲ್ಲ ರಾಜ್ಯಗಳ ಪ್ರಾದೇಶಿಕ ಭಾಷಾ ಟಿ.ವಿ., ಪತ್ರಿಕೆಗಳಲ್ಲಿಯೂ ಪ್ರಸಾರವಾಗುವಂತೆ ಮಾಡಲಿದ್ದೇವೆ. ಇತ್ತೀಚೆಗೆ ರೈಲಿನಲ್ಲಿ ಪ್ರಕಟಿಸಿರುವ ಸಹಾಯವಾಣಿ ಸಂಖ್ಯೆಯನ್ನು ನೋಡಿದ ಹುಡುಗಿಯೊಬ್ಬಳು ಕರೆ ಮಾಡಿ ತನಗೆ ಆಗಿರುವ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಳು. ತಕ್ಷಣ ಮಾಹಿತಿ ಪಡೆದು ದೂರು ದಾಖಲಿಸಿಕೊಂಡಿದ್ದೇವೆ. ಸಹಾಯವಾಣಿ ಸಂಖ್ಯೆ ಇದ್ದರೆ ಯಾರೇ ಆದರೂ ಎಲ್ಲಿಂದ ಬೇಕಾದರೂ ದೂರು ನೀಡಬಹುದು. ಅದಕ್ಕಾಗಿ ಎಲ್ಲ ಮಾಧ್ಯಮಗಳಲ್ಲಿ ಸಹಾಯವಾಣಿ ಸಂಖ್ಯೆಯನ್ನು ಪ್ರಸಾರ ಮಾಡುವಂತೆ ನಿರ್ದೇಶನ ನೀಡಲಾಗುವುದು. ರಾಜ್ಯ ಮಹಿಳಾ ಆಯೋಗಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. 

* ಅತ್ಯಾಚಾರದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವ ಬಗ್ಗೆ ನಿಮ್ಮ ನಿಲುವೇನು?
ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬುದು  ನನ್ನ ವೈಯಕ್ತಿಕ ನಿಲುವಾಗಿದ್ದರೂ, ಆಯೋಗದ ಅಧ್ಯಕ್ಷೆಯಾಗಿ ಮಾತನಾಡುವಾಗ, ಅಪರಾಧಿಯೊಬ್ಬ ತನ್ನ ತಪ್ಪುಗಳನ್ನು ತಿದ್ದಿಕೊಂಡು ಬದುಕುವುದಾದರೆ ಅದಕ್ಕೆ ಅವಕಾಶ ನೀಡಬೇಕು. ಗಲ್ಲು ಶಿಕ್ಷೆ ನೀಡುವುದರಿಂದ ಅತ್ಯಾಚಾರ ತಡೆಯಲು ಸಾಧ್ಯವಿಲ್ಲ. ಸಾಮಾಜಿಕ ಜಾಗೃತಿ ಮೂಡಿಸುವುದು ಎಲ್ಲಕ್ಕಿಂತ ಮುಖ್ಯ. ಕಾನೂನು, ಸರ್ಕಾರಗಳ ಮೇಲೆ ಜವಾಬ್ದಾರಿ ಹೊರಿಸಿದರೆ ಸಾಲದು. ಇಡೀ ಸಮಾಜದ ಜವಾಬ್ದಾರಿಯಿದೆ.

ಅನೇಕ ಮಾನವ ಹಕ್ಕುಗಳ ಹೋರಾಟಗಾರರು ಅಪರಾಧಿಗಳ ಹಕ್ಕಿನ ಬಗ್ಗೆ  ಮಾತನಾಡುತ್ತಾರೆ. ಅತ್ಯಾಚಾರಿಗಳನ್ನು ಗಲ್ಲಿಗೆ ಹಾಕಬೇಕು ಎಂದು ಹೇಳುವವರೂ ಇದ್ದಾರೆ. ದೆಹಲಿ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ದೆಹಲಿ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ. ಸದ್ಯ ದೇಶದಲ್ಲಿ ಗಲ್ಲು ಶಿಕ್ಷೆಯನ್ನೇ ರದ್ದುಪಡಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಬೇಕೋ, ಬೇಡವೋ ಎಂಬ ಬಗ್ಗೆ  ನ್ಯಾಯಾಧೀಶರ ಮಟ್ಟದಲ್ಲಿಯೂ  ಚರ್ಚೆ ನಡೆಯುತ್ತಿದೆ.

 * ದೆಹಲಿಯಲ್ಲಿ ಶೇಕಡ 60ರಷ್ಟು ಮಹಿಳೆಯರು ಸುರಕ್ಷಿತರಲ್ಲ  ಎಂದು ವರದಿ ತಿಳಿಸಿದೆ. ಬೆಂಗಳೂರಿನಲ್ಲೂ ಹೆಣ್ಣು ಮಕ್ಕಳು ಸುರಕ್ಷಿತರಲ್ಲ ಎಂಬ ಭಾವನೆ ಇದೆ.
ಇದು ದುರದೃಷ್ಟಕರ. ಮಹಿಳೆಯರ ಮೇಲಿನ ಅತ್ಯಾಚಾರ ಎಂದ ಕೂಡಲೇ ಮಹಿಳೆಯರ ವರ್ತನೆಯ ಬಗ್ಗೆ, ಉಡುಗೆ ತೊಡುಗೆಗಳ ಬಗ್ಗೆ ಮಾತನಾಡುತ್ತಾರೆ. ಈ ಪ್ರವೃತ್ತಿ ನಿಲ್ಲಬೇಕು. ಅತ್ಯಾಚಾರಕ್ಕೆ ಬೇರೆ ಯಾವುದೇ ಕಾರಣ ಇರದು, ಉಡುಗೆ ತೊಡುಗೆಗಳು ಅತ್ಯಾಚಾರಕ್ಕೆ ಪ್ರೇರಣೆ ಎನ್ನುವುದಾದರೆ ಹರೆಯದ ಹುಡುಗಿಯರು ಮಾತ್ರ ಅತ್ಯಾಚಾರಕ್ಕೆ ಒಳಗಾಗಬೇಕಿತ್ತು.  ಆದರೆ, ವಯಸ್ಸಿನ ಅಂತರವಿಲ್ಲದೆ ಅತ್ಯಾಚಾರ ನಡೆಯುತ್ತಿದೆ. ಇದು ಸೊನ್ನೆಗೆ ಇಳಿಯಬೇಕು ಎಂಬುದು ನಮ್ಮ ಗುರಿಯಾಗಬೇಕು.

* ನಿಮ್ಮ ಆಯೋಗಕ್ಕೆ ದಿನವೊಂದಕ್ಕೆ ಸರಾಸರಿ ಎಷ್ಟು ದೂರುಗಳು ಬರುತ್ತಿವೆ?
ದಿನಕ್ಕೆ ಸರಾಸರಿ 250ರಷ್ಟು ದೂರುಗಳು ಬರುತ್ತಿವೆ. ಇದರಲ್ಲಿ ಶೇಕಡ 60ರಷ್ಟು ದೂರುಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದು.  ದೂರುಗಳು ಪುರುಷರ ಮೇಲೆ ಮಾತ್ರವಿರುತ್ತದೆ ಎಂದೇನಿಲ್ಲ. ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳೂ  ಆರೋಪಿಗಳಾಗಿರುತ್ತಾರೆ.

* ಅತ್ಯಾಚಾರ ಪ್ರಕರಣಗಳ ತನಿಖೆ ವಿಳಂಬವಾಗುತ್ತಿದೆ. ಇದಕ್ಕೆ ಏನು ಕಾರಣ?
ಬಹುತೇಕ ಅತ್ಯಾಚಾರ ಪ್ರಕರಣಗಳ ತನಿಖೆ ವಿಳಂಬವಾಗುತ್ತಿದೆ.  ಆರೋಪಪಟ್ಟಿ ಸಲ್ಲಿಕೆ, ಸಾಕ್ಷ್ಯ ಸಂಗ್ರಹ ಸೇರಿದಂತೆ ಎಲ್ಲ ಪ್ರಕ್ರಿಯೆ ವಿಳಂಬವಾಗುತ್ತಿದೆ. ಆದರೆ, ಎಲ್ಲದಕ್ಕೂ ಪೊಲೀಸರು ಕಾರಣ ಎನ್ನುವಂತಿಲ್ಲ. ಬೇರೆ ಬೇರೆ ಕಾರಣಗಳೂ ಇರುತ್ತವೆ.  
*
ಗಲ್ಲು ಶಿಕ್ಷೆ ನೀಡುವುದರಿಂದ ಅತ್ಯಾಚಾರ ತಡೆಯಲು ಸಾಧ್ಯವಿಲ್ಲ. ಸಾಮಾಜಿಕ ಜಾಗೃತಿ ಮೂಡಿಸುವುದು ಎಲ್ಲಕ್ಕಿಂತ ಮುಖ್ಯ. ಕಾನೂನು, ಸರ್ಕಾರಗಳ ಮೇಲೆ ಜವಾಬ್ದಾರಿ ಹೊರಿಸಿದರೆ ಸಾಲದು. ಇಡೀ ಸಮಾಜದ ಜವಾಬ್ದಾರಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT