ADVERTISEMENT

ಗಂಡನೇ ತಲೆಹಿಡುಕನಾದಾಗ...!

ಸಿ.ಎಚ್.ಹನುಮಂತರಾಯ
Published 10 ಫೆಬ್ರುವರಿ 2018, 19:30 IST
Last Updated 10 ಫೆಬ್ರುವರಿ 2018, 19:30 IST
ಗಂಡನೇ ತಲೆಹಿಡುಕನಾದಾಗ...!
ಗಂಡನೇ ತಲೆಹಿಡುಕನಾದಾಗ...!   

ಬೆಂಗಳೂರು ನಗರ ಬೆಳೆಯುತ್ತಿದ್ದ ಜಾಗದಲ್ಲಿತ್ತು ಆ ಕೊಳಚೆ ಪ್ರದೇಶ. ಕಟ್ಟಡ ನಿರ್ಮಾಣ ಕಾಮಗಾರಿಗಳ ಕೂಲಿ ಕೆಲಸಗಳಿಗಾಗಿ ಬರುತ್ತಿದ್ದ ಕುಟುಂಬಗಳು, ಇಬ್ಬರು ಮಲಗಲು ಕೊಸರಾಡಬೇಕಾದ, 10 ಅಡಿ ಅಗಲ 10 ಅಡಿ ಉದ್ದದ ಮನೆಗಳಲ್ಲಿ ಸಂಸಾರ ಹೂಡುತ್ತಿದ್ದವು. ಸ್ಲಂ ನಿವಾಸಿಗಳು ದಿನಗೂಲಿಗಳಾಗಿ ಗಾರೆ ಕೆಲಸ ಮಾಡುತ್ತಾ, ಹೆಣ್ಣಾಳು ದಿನಕ್ಕೆ ₹ 50, ಗಂಡಾಳು ₹ 100 ಕೂಲಿ ಸಂಪಾದಿಸಿಕೊಂಡು, ಅದರಲ್ಲೇ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದರು. ಆ ಸ್ಲಂನಲ್ಲಿದ್ದ ಬಹಳಷ್ಟು ಕುಟುಂಬಗಳ ಮಹಿಳೆಯರು, ಗಂಡಂದಿರ ಕುಡಿತದ ಚಟಕ್ಕೆ ಬಸವಳಿದಿದ್ದರು.‌

ಸಂಕವ್ವೆ– ತುಕ್ಕಪ್ಪ, ಅವರ 10 ವರ್ಷದ ಮಗ ಮತ್ತು 7 ವರ್ಷದ ಮಗಳನ್ನು ಒಳಗೊಂಡ ಸಂಸಾರ ಒಂದು ಮನೆಯಲ್ಲಿತ್ತು. ತುಕ್ಕಪ್ಪನಿಗೆ ದುಡಿದ ಕೂಲಿಯೆಲ್ಲಾ ತನ್ನ ಮದ್ಯದ ಗೀಳು ನೀಗಿಸಿಕೊಳ್ಳಲು ಸಾಲುತ್ತಿರಲಿಲ್ಲ. ತನ್ನಲ್ಲಿದ್ದ ಹಣ ಖಾಲಿಯಾಗುತ್ತಿದ್ದಂತೆ ಹಸಿದ ರಣಹದ್ದಿನಂತೆ ಹಣಕ್ಕಾಗಿ ಸಂಕವ್ವೆಗೆ ಬಡಿಯುತ್ತಿದ್ದ. ತುಕ್ಕಪ್ಪನನ್ನು ಮದುವೆಯಾಗಿ ಸಂಕವ್ವೆ 12 ವರ್ಷದಿಂದ ಇದೇ ಬಾಳು ಏಗಿದ್ದಳು. ಈ ಹೊಯ್ದಾಟದ ನಡುವೆಯೇ ಇಬ್ಬರು ಮಕ್ಕಳನ್ನೂ ಹಡೆದಿದ್ದಳು. ಬೆಳಗಿನಿಂದ ಸಂಜೆವರೆಗೂ ಗಾಣದೆತ್ತಿನಂತೆ ಅವರಿವರ ಮನೆ ಮುಸರೆ ತಿಕ್ಕಿ, ಬಟ್ಟೆ ಒಗೆದು ಮಕ್ಕಳಿಗೊಂದಷ್ಟು ಅನ್ನದ ದಾರಿ ಮಾಡಿಕೊಡುತ್ತಿದ್ದಳು. ಕತ್ತಲಾದರೆ ಸಾಕು ಗಂಡನ ಏಟುಗಳಿಗೆ ತತ್ತರಿಸುತ್ತಿದ್ದ ಸಂಕವ್ವೆಯ ಆಕ್ರಂದನ ಸ್ಲಂನಲ್ಲಿ ಪ್ರತಿಧ್ವನಿಸುತ್ತಿತ್ತು. ಯಾರೂ ಮುಂದೆ ಬಂದು ತುಕ್ಕಪ್ಪನನ್ನು ಪ್ರಶ್ನಿಸಿ ಅವಮಾನಿತರಾಗಲು ಸಿದ್ಧರಿರಲಿಲ್ಲ. ಕಾರಣ, ಅವನ ಬಾಯಿ ಹೊಲಸಿನ ಗುಡಾಣವೆಂದು ಎಲ್ಲರಿಗೂ ತಿಳಿದಿತ್ತು.

1986ನೇ ಇಸವಿಯ ಒಂದು ರಾತ್ರಿ, ಚಂದ್ರನ ಬೆಳಕು ನಿಧಾನವಾಗಿ ಭೂ ಸ್ಪರ್ಶಕ್ಕೆ ಹಾತೊರೆಯುತ್ತಿದ್ದರೆ, ಇತ್ತ ಎಂದಿನಂತೆ ತುಕ್ಕಪ್ಪನ ಹೊಟ್ಟೆಗೆ ಮದ್ಯ ಇಳಿಯುತ್ತಿತ್ತು. ಅದು ಖಾಲಿಯಾದಂತೆ ತುಕ್ಕಪ್ಪ ಹಣಕ್ಕಾಗಿ ಸಂಕವ್ವೆ ಮೇಲೆರಗಿದ. ಈ ಆಕ್ರಮಣ ಇಷ್ಟು ವರ್ಷಗಳ ಕಾಲ ನಡೆದ ಚಿತ್ರಹಿಂಸೆಗಿಂತ ಬೇರೆಯೇ ಆಗಿತ್ತು. ಮನೆಯೊಳಗೆ ಗಾಢನಿದ್ರೆಗೆ ಜಾರಿದ್ದ ಮಕ್ಕಳಿಬ್ಬರಿಗೆ ಯಾವ ಸದ್ದು ಗದ್ದಲದ ಅರಿವೂ ಆಗಲಿಲ್ಲ.

ADVERTISEMENT

‘ಲೇ ರಂಡೆ ಕಾಸು ತಗೊಂಡು ಬಂದು ಬೇಗ ಮಡಗು...’ ತುಕ್ಕಪ್ಪ ಎಂದಿನಂತೆ ಸಂಕವ್ವೆಯ ಜುಟ್ಟು ಹಿಡಿದು ಬಡಿಯಲು ಪ್ರಾರಂಭಿಸಿದ. ಸಂಕವ್ವೆ ‘ನಾನು ದುಡಿಯೋ ಹಣದಲ್ಲಿ ಮನೆಗೆ ಸಾಮಾನು ತಂದಾಕೋದೇ ಕಷ್ಟ ಆಗಿದೆ, ಇವತ್ತು ನನ್ನಲ್ಲಿ ಚಿಕ್ಕಾಸೂ ಇಲ್ಲ, ನಾಳೆ ಕೂಲಿ ಬಂದ್ಮೇಲೆ ಕೊಡ್ತೀನಿ. ಹೊಡಿಬೇಡ ಬಿಟ್ಬಿಡೋ’ ಎಂದು ಬೇಡಿದಳು, ಇಷ್ಟಕ್ಕೇ ಬಿಡದ ತುಕ್ಕಪ್ಪ ‘12 ವರ್ಷಗಳಿಂದ ಎಷ್ಟು ದುಡಿದ್ರೂ ಒಳ್ಳೇ ಬದುಕು ಮಾಡೋಕೆ ಆಗ್ತಿಲ್ಲಾ, ಮುಂದೇ ಏನೂ ಕೂಡಿಡೋಕೂ ಆಗಲ್ಲಾ, ಈಗ ಇದಕ್ಕೆಲ್ಲಾ ಒಂದು ದಾರಿ ಹುಡುಕಿದ್ದೀನಿ, ಬಾ ನನ್ನ ಜೊತೆ ಲಾಡ್ಜ್‌ಗೆ. ನಿನ್ನ ಮೈ ಮಾರಿ ಸಂಪಾದ್ನೆ ಮಾಡ್ಕೊಡು’ ಅಂದವನೆ, ಸಂಕವ್ವೆಯ ಜುಟ್ಟಿಡಿದು ಮನೆಯಿಂದ ಹೊರಗೆಳೆದುಕೊಂಡು ಬಂದ. ತುಕ್ಕಪ್ಪ ತೆಗೆದ ಹೊಸ ವರಾತದಿಂದ ಸಂಕವ್ವೆ ಎದೆ ಹಿಡಿದುಕೊಂಡು ಧಸಕ್ಕೆಂದು ಕುಸಿದು ಬಿದ್ದಳು. ಜೀವ ಝಲ್ಲೆನ್ನುವಂತಹ ತುಕ್ಕಪ್ಪನ ಮಾತುಗಳಿಂದ ಸಾವಾರಿಸಿಕೊಂಡ ಸಂಕವ್ವೆ ಮನೆಯೊಳಗೆ ಬಂದು ಬಾಗಿಲು ಮುಚ್ಚಿ ‘ಮದುವೆಯಾಗಿ 12 ವರ್ಷ ಆಗಿದೆ, ನಮಗೆ ಇಬ್ರು ಮಕ್ಕಳಿದ್ದಾರೆ, ಈಗ ನನ್ನ ಕರ್ಕೊಂಡೋಗಿ ತಲೆ ಹಿಡಿದ್ರೆ ಮಕ್ಕಳ ಕತೆ ಏನಾಗುತ್ತೆ ಯೋಚ್ನೆ ಮಾಡು ಇದೆಲ್ಲಾ ತರವಲ್ಲ...’ ಎನ್ನುತ್ತಾ ಎದುರಾದ ಅಪಾಯದಿಂದ ತಪ್ಪಿಸಿಕೊಳ್ಳಲು ಉಪಾಯಗಳಿಗೆ ಸಿದ್ಧಳಾದಳು. ಸಂಕವ್ವೆಯ ಈ ಮಾತುಗಳಿಗೆ ಜಗ್ಗದ ತುಕ್ಕಪ್ಪ ‘ಲಾಡ್ಜ್‌ಗೆ ಬರೋಕೆ ಆಗ್ದಿದ್ರೆ ದುಡ್ಡಿರೋ ಒಬ್ಬನತ್ರ ಮೈಗೂಡ್ಸು, ಏನಾದ್ರೂ ಸರಿ ಹಣಕ್ಕೆ ಒಂದು ದಾರಿ ಆಗ್ಲೇಬೇಕು’ ಎಂದೆಲ್ಲಾ ಕೂಗಾಡತೊಡಗಿದ.

ಹಣ ಸಂಪಾದನೆಗಾಗಿ ತುಕ್ಕಪ್ಪ ತೋರಿಸುತ್ತಿದ್ದ ಅನೈತಿಕ ದಾರಿ ತುಳಿಯಲು ಸಂಕವ್ವೆ ಗಟ್ಟಿಯಾಗಿ ವಿರೋಧಿಸಿದಳು. ಕ್ರುದ್ಧನಾದ ತುಕ್ಕಪ್ಪ ಅಲ್ಲಿದ್ದ ಮಚ್ಚು ಎಳೆದುಕೊಂಡು ಅಬ್ಬರಿಸುತ್ತ ಹೆಂಡತಿಯ ಕುತ್ತಿಗೆಯ ಮೇಲಿಟ್ಟು ಹೊರಗೆ ದರದರ ಎಳೆದೊಯ್ದ. ಜೀವ ಉಳಿದ್ರೆ ಸಾಕು ಮಕ್ಕಳಿಗೆ ಒಂದು ದಾರಿ ಮಾಡ್ಬಹುದು ಅಂತ ತೀರ್ಮಾನಿಸಿಕೊಂಡ ಸಂಕವ್ವೆ, ‘ಈಗಾಗ್ಲೇ ಅವೇಳೆ ಹೊತ್ತಾಗಿದೆ, ನಾಳೆ ಬೆಳಿಗ್ಗೆ ನೀನು ಹೇಳ್ದಂಗೆ ಕೇಳ್ತೀನಿ, ಈಗ ಬಿಟ್ಟುಬಿಡು’ ಎಂದು ಅಂಗಲಾಚಿದಳು.

ಸಂಕವ್ವೆ ಕೊಟ್ಟ ಮಾತಿಗೆ ಒಪ್ಪಿ, ‘ನಾಳೆ ಬೆಳಿಗ್ಗೆ ನನ್ ಜೊತೆ ಲಾಡ್ಜ್‌ಗೆ ಬಂದ್ರೆ ಸರಿ. ಇಲ್ಲಾ ಕತ್ತು ಸೀಳಿ ಬಿಡ್ತೀನಿ, ಓಡೋಗೋಕೆ ಏನಾದ್ರು ಪ್ರಯತ್ನ ಪಟ್ರೆ ನಿನ್ನ ಮಕ್ಕಳನ್ನೂ ಸೀಳಿ ಹಾಕ್ತೀನಿ. ಇದನ್ನೆಲ್ಲಾ ಯಾರಲ್ಲಾದ್ರೂ ಬಾಯ್ಬಿಟ್ರೆ ಹುಷಾರ್, ಇವತ್ತು ರಾತ್ರಿ ಇಲ್ಲೇ ಬಿದ್ದುಕೋ’ ಎಂದು ಆರ್ಭಟಿಸುತ್ತ ಒಸಲಿಗೆ ತಲೆ ಮಡಗಿ ಮಲಗಿದ.

ಸಂಕವ್ವೆಗೆ ಆ ರಾತ್ರಿಯ ಒಂದೊಂದು ಕ್ಷಣವನ್ನು ತಳ್ಳುವುದು ಯಮಯಾತನೆಯಾಗಿತ್ತು. ಮಲಗಿರುವ ಮುಗ್ಧ ಮಕ್ಕಳು ಒಂದು ಕಡೆಯಾದರೆ, ಮತ್ತೊಂದು ಕಡೆ ತನ್ನ ಮಾನವನ್ನೇ ಪಣಕ್ಕಿಟ್ಟು, ದೇಹ ಮಾರಿ ಮದ್ಯಕ್ಕಾಗಿ ದಾರಿ ಮಾಡಿಕೊಳ್ಳಲು ಬಾಗಿಲಲ್ಲೇ ಯಮನಾಗಿ ಮಚ್ಚುಹಿಡಿದೇ ಮಲಗಿರುವ ಗಂಡ. ಪ್ರಾಣ ಮತ್ತು ಮಾನವಿದ್ದರೆ ತನ್ನಿಬ್ಬರೂ ಮಕ್ಕಳು ಹೇಗೋ ಬದುಕಿಕೊಳ್ಳುತ್ತವೆ ಎಂದು ಪಾರಾಗಲು ಯೋಚಿಸುತ್ತಿದ್ದವಳ ನೆರವಿಗೆ ಯಾರೂ ಬರದಿದ್ದಾಗ ಅವಳ ಕಣ್ಣಿಗೆ ಬಿದ್ದುದು ರುಬ್ಬುಗುಂಡು. ಕತ್ತಲು ಚದುರಿ ಮುಂಜಾನೆಯಾಗುವ ಹೊತ್ತು. ಕೊಳಚೆ ಪ್ರದೇಶದ ಕೋಳಿಗಳು ಕೂಗಲು ಶುರುವಿಟ್ಟುಕೊಳ್ಳುತ್ತಿದ್ದಂತೆ, ಹುಚ್ಚನಂತೆ ಬಿದ್ದುಕೊಂಡಿದ್ದ ಗಂಡ ಎದ್ದವನೇ ‘ಲೇ ಸಂಕಿ, ಬೇಗ ಬೇಗ ಮೈ ತೊಳಕೋ ಸ್ವಲ್ಪ ಶೃಂಗಾರ ಮಾಡ್ಕೊಂಡು ತಯಾರಾಗು, ನಾನು ಇಲ್ಲೇ ಇರ್ತೀನಿ, ನಾನು ಇಲ್ಲಿ ಇಲ್ದಿದ್ರೆ ನೀನು ಕೈ ಕೊಡ್ತೀ ಅಂತ ಖಾತ್ರಿ ಆಗೈತೆ’ ಎಂದವನೇ ಮಚ್ಚನ್ನು ಮುದ್ದಿಸುತ್ತಿದ್ದನು.

ಗಂಡನ ಭೀಕರ ಮಾತುಗಳು ಬರ ಸಿಡಿಲಿನಂತೆ ಸಂಕವ್ವೆಯನ್ನು ಮತ್ತೆ ಗಾಸಿಗೊಳಿಸಿದವು. ತನಗೂ ತನ್ನ ಮಕ್ಕಳಿಗೂ ಉಳಿಗಾಲವಿಲ್ಲವೆಂದು ಖಚಿತವಾಯಿತು. ರುಬ್ಬುಗುಂಡು ಮುಂದಿನ ಸಾಧ್ಯತೆಯನ್ನು ಹುಟ್ಟುಹಾಕಿಸಿತು. ವಿಟ ಪುರುಷನ ಕರಾಳ ಬಾಹುಗಳಿಗೆ ತುತ್ತಾಗುವ ಬದಲು ತನ್ನನ್ನು ಅಲ್ಲಿಗೆ ನೂಕುತ್ತಿರುವ ಗಂಡನನ್ನು ಇಲ್ಲವಾಗಿಸಿದರೆ ದೇವರೂ ಮೆಚ್ಚುವನೆಂದು ತೀರ್ಮಾನಿಸಿದಳು.

ಪಶುತ್ವದ ಪತಿಯ ಮಚ್ಚಿಗೆ ಕತ್ತುಕೊಡುವ ಬದಲು ಅವನನ್ನೇ ಮುಗಿಸಿ ತಾನು ಮತ್ತು ತನ್ನ ಮಕ್ಕಳು ರಕ್ಷಿಸಿಕೊಳ್ಳುವುದೇ ಸರಿ ಎಂದು ಧಿಗ್ಗನೆ ಎದ್ದವಳೇ, ಮಕ್ಕಳಿಬ್ಬರ ಮುಖಗಳನ್ನು ನೋಡಿ ಮತ್ತಷ್ಟು ಶಕ್ತಿ ತುಂಬಿಕೊಂಡು ಮನೆ ದೇವತೆಯಾದ ತಿಬ್ಬಾದೇವಿಗೆ ಮನದಲ್ಲಿ ಜೈಕಾರ ಹಾಕುತ್ತಾ ಎತ್ತಿತಂದ ರುಬ್ಬುಗುಂಡನ್ನು ಗಂಡನ ರುಂಡದ ಮೇಲೆ ಹಾಕಿದಳು. ಮಲಗಿದ್ದ ಮಕ್ಕಳಿಬ್ಬರನ್ನೂ ಬಾಚಿ ತಬ್ಬಿಕೊಂಡು ರೋದಿಸಲಾರಂಭಿಸಿದಳು. ಅವಳ ಆರ್ತನಾದ ಅಕ್ಕಪಕ್ಕದವರನ್ನು ತಲುಪಿ, ಕೆಲವೇ ಕ್ಷಣಗಳಲ್ಲಿ ನೂರಾರು ಜನರು ಅಲ್ಲಿ ಗುಂಪಾದರು. ಸುದ್ದಿ ಪಡೆದ ಸ್ಥಳೀಯ ಪೊಲೀಸರು ಬಂದರು. ಪೊಲೀಸರು ಸಂಕವ್ವೆಯನ್ನು ಘಟನೆಯ ಕುರಿತು ಪ್ರಶ್ನಿಸುವ ಮೊದಲೇ ಅದಕ್ಕೆ ತಾನೇ ಹೊಣೆಗಾರಳೆಂದು ತಿಳಿಸಿಯೇ ಬಿಟ್ಟಳು. ಅವಳ ಧೀರ ವರ್ತನೆಗೆ ಆವಾಕ್ಕಾದ ಪೊಲೀಸರು ಮುಂದಿನ ಕ್ರಮ ಜರುಗಿಸಲು ಮುಂದಾದರು.

ತನಿಖೆ ಮುಗಿಸಿದ ಪೊಲೀಸರು ಸಂಕವ್ವೆಯ ವಿರುದ್ಧ ಕೊಲೆ ಆರೋಪ ಹೊರಿಸಿ ಆಪಾದನಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ವಿಚಾರಣೆಯ ವೇಳೆ ಸಂಕವ್ವೆಯ ಮಕ್ಕಳು, ನೆರೆ ಹೊರೆಯವರು ಮತ್ತು ಬಂಧು-ಬಳಗದವರನ್ನು ಅಭಿಯೋಜಕರು ಬರ ಮಾಡಿಕೊಂಡು ಅವರ ಸಾಕ್ಷ್ಯ ದಾಖಲಾಯಿತು. ಬಂದು ಹೋದ ಎಲ್ಲ ಸಾಕ್ಷಿದಾರರು ತುಕ್ಕಪ್ಪ ಮದ್ಯ ವ್ಯಸನಿಯಾಗಿದ್ದು, ತನ್ನ ದುಡಿಮೆಯ ಎಲ್ಲ ಹಣವನ್ನು ಸಾರಾಯಿಗೆ ಒಪ್ಪಿಸಿ, ಹಣ ಮುಗಿದಾಗಲೆಲ್ಲಾ ತನ್ನ ಹೆಂಡತಿ ಅನೇಕ ಕಡೆ ಮನೆಗೆಲಸ ಮಾಡಿ ತರುತ್ತಿದ್ದ ಹಣವನ್ನೂ ಲಪಟಾಯಿಸಿ ಮದ್ಯಕ್ಕೆ ಬಳಸಿಕೊಳ್ಳುತ್ತಿದ್ದ ವಿಚಾರವನ್ನು ಮತ್ತು ಸಂಕವ್ವೆ ತನ್ನ ಇಬ್ಬರೂ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕೆಂದು ಶಾಲೆಗೆ ಕಳುಹಿಸುತ್ತಾ ಖರ್ಚು ವೆಚ್ಚವನ್ನು ತಾನೇ ನೋಡಿಕೊಳ್ಳುತ್ತಿದ್ದಳು ಎಂದು ನನ್ನ ಪಾಟೀ ಸವಾಲಿನಲ್ಲಿ ತಿಳಿಸಿದರು.

ಘಟನೆಯ ರಾತ್ರಿ ತನ್ನನ್ನು ಹಾದರ ಮಾಡಲು ಹಿಂಸಿಸಿದ ಗಂಡನ ವರ್ತನೆಯ ಕುರಿತು ತಿಳಿಸಲು ಸಂಕವ್ವೆಯನ್ನು ಒಬ್ಬ ಡಿಫೆನ್ಸ್ ಸಾಕ್ಷಿಯಾಗಿ ವಿಚಾರಣೆ ಮಾಡಲು ನಾನು ಮಾಡಿದ ಮನವಿಗೆ ನ್ಯಾಯಾಲಯ ಸಮ್ಮತಿಸಿತು. ಅವಳ ಸಾಕ್ಷ್ಯದಲ್ಲಿ ತುಕ್ಕಪ್ಪ ಒಬ್ಬ ಪೀಡನ ಸುಖಿಯಷ್ಟೇ ಅಲ್ಲದೆ ಅವಳನ್ನು ಹಾದರಕ್ಕೆ ಸಹಕರಿಸಬೇಕೆಂದು ಕೊಟ್ಟ ಕ್ರೂರ ಹಿಂಸೆ ಉತ್ಪಾದಿಸಿದ್ದ ಕಿಚ್ಚನ್ನು ವಿವರಿಸಿದಳು. ಅಭಿಯೋಜಕರು ಸಂಕವ್ವೆಯ ಪಾಟೀ ಸವಾಲಿನಲ್ಲಿ ಎಷ್ಟನ್ನೊ ಕಳೆದುಕೊಂಡರೇ ಹೊರತು ಏನನ್ನೂ ಪಡೆದುಕೊಳ್ಳಲಿಲ್ಲ. ತುಕ್ಕಪ್ಪನ ಹೊಟ್ಟೆಯಲ್ಲಿ ಶವ ಪರೀಕ್ಷೆಯ ವೇಳೆ 200 ಎಂ.ಎಲ್. ಮದ್ಯ (ಸಾರಾಯಿ) ಇನ್ನೂ ಇದ್ದದ್ದು ಕಂಡು ಬಂದಿತ್ತು. ಅವರು ತಮ್ಮ ವಾದದಲ್ಲಿ, ‘ತುಕ್ಕಪ್ಪನ ಕೊಲೆಯು ಉದ್ದೇಶಪೂರಿತವಾದದ್ದು; ಆಕೆಗೆ ಗಂಡನ ಜೊತೆ ಬಾಳಲು ಅಸಾಧ್ಯವಾಗಿದ್ದರೆ ಹಿರಿಯರಿಂದ ಪಂಚಾಯಿತಿ ಮಾಡಿಸಿ ತೀರ್ಮಾನಿಸಿಕೊಳ್ಳಬಹುದಿತ್ತು. ಇಲ್ಲವೇ ನ್ಯಾಯಾಲಯದ ಮೊರೆ ಹೋಗಿ ವಿವಾಹ ವಿಚ್ಛೇದನ ಪಡೆಯಬಹುದಿತ್ತು. ಇದ್ಯಾವುದನ್ನೂ ಮಾಡದೇ ಗಂಡನ ಕೊಲೆಯನ್ನು ಉದ್ದೇಶಪೂರ್ವಕವಾಗಿ ಮಾಡಿರುವ ಕಾರಣ ಅವಳು ತಪ್ಪಿತಸ್ಥಳೆಂದು ತೀರ್ಮಾನಿಸಬೇಕು’ ಎಂದು ಕೇಳಿಕೊಂಡರು.

ನನ್ನ ವಾದದಲ್ಲಿ ಸಂಕವ್ವೆಯು ಮದುವೆಯಾದ ಕೆಲವೇ ತಿಂಗಳುಗಳಲ್ಲಿ ತನ್ನ ಗಂಡ ಒಬ್ಬ ಹಿಂಸಾಸಕ್ತನೆಂದು ಗೊತ್ತಾಯಿತು. ಕಡುಬಡತನದಲ್ಲಿ ಹುಟ್ಟಿದ್ದರೂ ಸ್ವಾಭಿಮಾನಿ, ಮೇಲಾಗಿ ಇಮಾನ್ದಾರಿ ವ್ಯಕ್ತಿಯಾಗಿದ್ದಳು. ಧೃತಿಗೆಟ್ಟು ಮಾನಸಿಕ ಸ್ಥಿಮಿತ ಕಳೆದುಕೊಳ್ಳದೇ ಬದುಕು ಸಾಗಿಸುತ್ತಿದ್ದಳು. ಮಕ್ಕಳನ್ನು ಪಡೆದ ನಂತರ ಅವರಿಗಾಗಿ ತನ್ನ ಬದುಕನ್ನು ಒತ್ತೆಯಿಟ್ಟವಳಂತೆ ದುಡಿಯುತ್ತಿದ್ದಳು. ಗಂಡನ ಹಿಂಸಾಸಕ್ತಿ ಮತ್ತು ಮದ್ಯಾಸಕ್ತಿ ಕುರಿತು ತಂದೆ–ತಾಯಿಗೆ, ಅತ್ತೆ–ಮಾವಂದಿರಿಗೆ ಮತ್ತು ಇತರ ಎಲ್ಲಾ ರಕ್ತ ಸಂಬಂಧಿಗಳಿಗೆ ಹೇಳಿಕೊಂಡಳು. ಅವರು ಮಾಡಿದ ಪ್ರಯತ್ನಗಳು ತುಕ್ಕಪ್ಪನನ್ನು ತಿದ್ದಲಿಲ್ಲ. ತನ್ನ ನೋಟವನ್ನೆಲ್ಲಾ ಮಕ್ಕಳ ಮೇಲಿಟ್ಟು, ಗಂಡನನ್ನು ಏಕಾಂಗಿಯಾಗಿ ಎದುರಿಸಲು ಮುಂದಾದಳು. ಗಂಡನ ಕೊಲೆಯಾದ ರಾತ್ರಿ ಸೃಷ್ಟಿಯಾದ ಸಂದರ್ಭ ಅವಳಿಗೆ ಮಾನ ಮತ್ತು ಆತ್ಮರಕ್ಷಣೆಯಲ್ಲಿ ಕೊಲೆ ಮಾಡಿಸಿತ್ತು. ಆ ಕೃತ್ಯವು ಕಾನೂನಿನಲ್ಲಿರುವ ವಿಶೇಷ ಧೋರಣೆಯ ವ್ಯಾಪ್ತಿಯಲ್ಲಿ ಬರುವುದರಿಂದ ಅದನ್ನು ಕೊಲೆಯೆಂದು ಭಾವಿಸದೇ ಆರೋಪಿಯ ಬಿಡುಗಡೆಗಾಗಿ ಬೇಡಿದೆ.

ಸಂಕವ್ವೆಯನ್ನು ಕೊಲೆ ಆರೋಪದಿಂದ ಬಿಡುಗಡೆ ಮಾಡಿದ ನ್ಯಾಯಾಧೀಶರು ತಮ್ಮ ತೀರ್ಪಿನ ಒಂದು ಭಾಗವನ್ನು ತೆರೆದ ನ್ಯಾಯಾಲಯದಲ್ಲಿ ಎಲ್ಲರಿಗೂ ಕೇಳಿಸುವಂತೆ ಓದಲು ಮರೆಯಲಿಲ್ಲ. ಅವರು ಓದಿದ ಭಾಗ ಈಗಲೂ ನನ್ನ ಕಿವಿಗಳಲ್ಲಿ ರಿಂಗಣಿಸುತ್ತಿದೆ, ಅದೇನೆಂದರೆ:

‘ಈ ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇರುವ ಅವಕಾಶಗಳು ಅತ್ಯಂತ ಕಡಿಮೆ. ತಮ್ಮ ಗಂಡನನ್ನೂ ಒಳಗೊಂಡಂತೆ ಇತರ ವ್ಯಕ್ತಿಗಳ ಅತಿಕ್ರೂರ ಅಥವಾ ಘಾತುಕತನದ ಕೃತ್ಯಗಳಿಗೆ ಅವರು ಸುಲಭವಾಗಿ ಒಳಪಡುತ್ತಾರೆ ಹಾಗೂ ಅಂತಹ ದರ್ಪದ ನಡವಳಿಕೆಗಳಿಗೆ ತಮ್ಮನ್ನು ಹೊಂದಿಸಿಕೊಳ್ಳುವ ಮತ್ತು ವಿಧೇಯರಾಗುವ ಗುಣಗಳನ್ನು ಮಹಿಳೆಯರು ಹೊಂದಿರುತ್ತಾರೆ. ತಮಗಾಗುತ್ತಿರುವ ಅನ್ಯಾಯ ಅಥವಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಅವರ ಎಲ್ಲಾ ಪ್ರಯತ್ನಗಳನ್ನು ಪೋಷಕರು, ಅತ್ತೆ–ಮಾವಂದಿರು ಮತ್ತು ಸಮುದಾಯದಲ್ಲಿ ಒಟ್ಟಾರೆಯಾಗಿ ವಿರೋಧಿಸಲಾಗುತ್ತದೆ.

ಪರಿಸ್ಥಿತಿ ಹೀಗಿರುವಾಗ, ಈ ಪ್ರಕರಣದ ಆರೋಪಿಯು ತನ್ನ ಪತಿಯ ಕಿರುಕುಳವನ್ನು ಸತತವಾಗಿ 12 ವರ್ಷಗಳ ಕಾಲ ಅನುಭವಿಸಿರುವುದರಲ್ಲಿ ಆಶ್ಚರ್ಯವಿಲ್ಲ. ಇಂತಹ ಸನ್ನಿವೇಶವನ್ನು, ‘ತನ್ನನ್ನು ವೇಶ್ಯಾವಾಟಿಕೆಗೆ ದೂಡಲು ಬಲವಂತಪಡಿಸಿದ ಗಂಡನ ವಿರುದ್ಧ ಪಂಚಾಯಿತಿಗೆ ದೂರು ನೀಡಬಹುದಿತ್ತು ಅಥವಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಿತ್ತು’ ಎಂಬ ದೃಷ್ಟಿಕೋನದಿಂದ ನೋಡುವುದು, ಅದರಲ್ಲಿಯೂ ಒಬ್ಬ ಮನೆಗೆಲಸ ಮಾಡುವ ಬಡ ಮಹಿಳೆಯಿಂದ ಇಂತಹ ನಡವಳಿಕೆಯನ್ನು ನಿರೀಕ್ಷಿಸುವುದು ನನ್ನ ಅಭಿಪ್ರಾಯದಲ್ಲಿ ಅತಿ ಹೆಚ್ಚಿನ ನಿರೀಕ್ಷೆ ಎಂದೆನಿಸುತ್ತದೆ.

ಯಾವುದೇ ಶಿಕ್ಷಣವಿಲ್ಲದ, ದುರ್ಬಲ ಮಹಿಳೆಯ ದೃಷ್ಟಿಕೋನದಿಂದ ನೋಡಿದಾಗ, ಮೃತ ಗಂಡನ ತಂದೆಯನ್ನೂ ಸೇರಿದಂತೆ ಯಾರೂ ಅವಳ ಸಹಾಯಕ್ಕೆ ನಿಲ್ಲದೆ, ಗಂಡನ ಕಿರುಕುಳವನ್ನು ಪ್ರೋತ್ಸಾಹಿಸಿದಾಗ ಆರೋಪಿತಳಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳದೆ ಅನ್ಯಮಾರ್ಗವಿಲ್ಲ ಎಂದು ತೋಚಿರಬಹುದು. ಕನಿಷ್ಠ ಎಂದರೆ ಅವಳು ತನ್ನ ಗಂಡ ಪ್ರತಿಪಾದಿಸಿದ ವಿವಿಧ ಸಂಚುಗಳಿಗೆ ತನ್ನನ್ನು ಒಪ್ಪಿಸಿಕೊಳ್ಳಬೇಕಾಗುತ್ತಿತ್ತು ಅಥವಾ ತನ್ನ ವಿರುದ್ಧ ಒಂದು ಅಪರಾಧ ಪ್ರಕರಣದ ದೂರು ಇಲ್ಲವೇ ತನ್ನದೇ ಕೊಲೆಯ ಬೆದರಿಕೆಗೆ ಅವಳು ಸಿದ್ಧಳಾಗಬೇಕಾಗುತ್ತಿತ್ತು. ಇಲ್ಲಿ ಆಕೆ ಆಯ್ದುಕೊಂಡ ಖಾಸಗಿ ರಕ್ಷಣೆಯ ಹಕ್ಕು ಒಪ್ಪುವಂತಹದು. ತನ್ನ ಗಂಡನ ಇಚ್ಛೆಯಂತೆ ಅವಳು ನಡೆದಿದ್ದೇ ಆಗಿದ್ದರೆ ಅದರಿಂದ ಅವಳ ಗಂಡನ ಅಗತ್ಯಗಳು ಪೂರೈಸುತ್ತಿದ್ದವು. ಆದರೆ ಅವಳು ಮರಳಿ ಬಾರದ ಸ್ಥಿತಿಗೆ ತಲುಪುತ್ತಿದ್ದಳು. ಇಂತಹ ಸನ್ನಿವೇಶದಲ್ಲಿ ಆರೋಪಿತಳು ಕೊಲೆ ಮಾಡಿಲ್ಲ ಎನ್ನುವ ತೀರ್ಪುನ್ನು ನೀಡಲು ನಮಗೆ ಯಾವುದೇ ಹಿಂಜರಿಕೆಯಾಗುವುದಿಲ್ಲ’.

ಸಂಕವ್ವೆ ಇದಾದ 13 ವರ್ಷಗಳ ನಂತರ ತನ್ನ ಮಗನ ಮದುವೆಗೆ ನನ್ನನ್ನು ಆಹ್ವಾನಿಸಲು ಕಚೇರಿಗೆ ಮಗ ಮತ್ತು ಮಗಳೊಂದಿಗೆ ಬಂದಿದ್ದರು. ‘ಮಗನು ಸ್ನಾತ್ತಕೋತ್ತರ ಪದವೀಧರ, ಮಗಳು ಪದವೀಧರೆ’ ಎಂದು ಆಕೆಯು ಹೇಳುತ್ತಿದ್ದಾಗ ನನಗೆ ಹೆಮ್ಮೆಯೆನಿಸಿತ್ತು.

ಹೆಸರುಗಳನ್ನು ಬದಲಾಯಿಸಲಾಗಿದೆ

(ಲೇಖಕ ಹೈಕೋರ್ಟ್‌ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.