ADVERTISEMENT

ಬಾಲಕಾರ್ಮಿಕ ಪದ್ಧತಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST

*ಕಠಿಣ ನಿಯಮ ನಿರೀಕ್ಷೆ

ದೇಶದಲ್ಲಿ ಹತ್ತಾರು ಕಾನೂನುಗಳಿದ್ದರೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯವಾಗಿಲ್ಲ. ಬಾಲಕಾರ್ಮಿಕರ ವಯೋಮಿತಿಯನ್ನು 14ರಿಂದ 18 ವರ್ಷಕ್ಕೆ ಏರಿಸಬೇಕು ಎಂದು ಕೆಲವರು ಒತ್ತಾಯಿಸಿದರೆ, ಮಕ್ಕಳು ಶಿಕ್ಷಣದ ಜೊತೆಗೇ ಒಂದಷ್ಟು ಹೊತ್ತು ದುಡಿಯುವುದು ಕೌಶಲ ವೃದ್ಧಿಗೆ ಮತ್ತು ಬಡ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಪೂರಕ ಎಂಬುದು ಇನ್ನೊಂದು ವಲಯದ ಅಭಿಮತ. ಈ ಕುರಿತ ಜಿಜ್ಞಾಸೆ...

ಯಾವ್ಯಾವ ಕಾನೂನಿದೆ?
*ಬಾಲ ಕಾರ್ಮಿಕ (ತಡೆ ಮತ್ತು ನಿಯಂತ್ರಣ) ಕಾಯ್ದೆ 1986: ಇದರ ಪ್ರಕಾರ 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ. ಈ ಕಾಯ್ದೆಯ ಮೂರನೇ ಪರಿಚ್ಛೇದ, ಮಕ್ಕಳು ದುಡಿಯಬಾರದ 18 ಅಪಾಯಕಾರಿ ವೃತ್ತಿಗಳು ಮತ್ತು 65 ಸಂಸ್ಕರಣಾ ಘಟಕಗಳನ್ನು ಗುರುತಿಸಿದೆ. ಕಾಯ್ದೆ ಉಲ್ಲಂಘಿಸಿ ಬಾಲ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ವ್ಯಕ್ತಿಗಳಿಗೆ 3 ತಿಂಗಳಿನಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಮಕ್ಕಳ ದುಡಿಮೆಗೆ ತಡೆ ಒಡ್ಡುವ ಇತರ ಕಾಯ್ದೆಗಳು:
*ಗಣಿ ಕಾಯ್ದೆ 1952: 18 ವರ್ಷಕ್ಕಿಂತ ಕೆಳಗಿನವರಿಗೆ ಗಣಿಯ ಯಾವುದೇ ಭಾಗಕ್ಕೂ ಪ್ರವೇಶವಿಲ್ಲ.
*ಕಾರ್ಖಾನೆಗಳ ಕಾಯ್ದೆ 1948, ವ್ಯಾಪಾರಿ ಹಡಗು ಕಾಯ್ದೆ
*1958, ಮೋಟಾರು ವಾಹನಗಳ ಕಾಯ್ದೆ 1961, ಬೀಡಿ ಮತ್ತು ಸಿಗಾರು ಕಾರ್ಮಿಕರ (ಉದ್ಯೋಗದ ಸ್ಥಿತಿಗತಿ) ಕಾಯ್ದೆ 1966: ಈ ಎಲ್ಲ ಕಾಯ್ದೆಗಳ ವ್ಯಾಪ್ತಿಯಡಿಯೂ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳುವಂತಿಲ್ಲ.
*ಜೀತ ಕಾರ್ಮಿಕ ವ್ಯವಸ್ಥೆ (ನಿರ್ಮೂಲನೆ) ಕಾಯ್ದೆ 1976: ಮಕ್ಕಳು ಸೇರಿದಂತೆ ಯಾವ ವ್ಯಕ್ತಿಯನ್ನೂ ಜೀತಕ್ಕೆ ಇಟ್ಟುಕೊಳ್ಳುವಂತಿಲ್ಲ.
*ಸ್ಫೋಟಕ ಕಾಯ್ದೆ 1984:18 ವರ್ಷದ ಒಳಗಿನವರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತಿಲ್ಲ.
*ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಣೆ ತಡೆ ಕಾಯ್ದೆ 1956, ಬಾಲಕಾರ್ಮಿಕ (ತಡೆ ಮತ್ತು ನಿಯಂತ್ರಣ) ಕರ್ನಾಟಕ ನಿಯಮಗಳು 1997: ಇವು ಸಹ ಬಾಲಕಾರ್ಮಿಕ ವಿರೋಧಿಯಾಗಿವೆ.
*ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆ 2013: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಒತ್ತಾಯವಾಗಿ ದುಡಿಸಿಕೊಳ್ಳುವುದರಿಂದ ರಕ್ಷಿಸುತ್ತದೆ.

ಎಲ್ಲೆಲ್ಲಿ ನಿಷೇಧ?
ಬಾಲಕಾರ್ಮಿಕ ಪದ್ಧತಿಗೆ ನಿಷೇಧ ಇರುವ ವೃತ್ತಿಗಳು:
ರೈಲ್ವೆ ಕಟ್ಟಡ, ನಿಲ್ದಾಣ ಅಥವಾ ರೈಲ್ವೆ ಲೈನುಗಳ ಕಾಮಗಾರಿ, ರೈಲ್ವೆ ಆವರಣದಲ್ಲಿ ಕೆಂಡ ಆಯುವುದು, ಬೂದಿಗುಂಡಿ ತೆರವು, ಪ್ಲಾಟ್‌ಫಾರ್ಮ್‌ ಅಥವಾ ಚಲಿಸುವ ರೈಲುಗಳಲ್ಲಿ ಆಹಾರ ಪೂರೈಕೆ, ಬಂದರು ವ್ಯಾಪ್ತಿಯ  ಕಾಮಗಾರಿ, ಕಸಾಯಿಖಾನೆ, ಆಟೊಮೊಬೈಲ್‌ ವರ್ಕ್‌ಶಾಪ್‌ಗಳು, ಗ್ಯಾರೇಜುಗಳು, ಎರಕದ ಮನೆ, ವಿಷಕಾರಿ ವಸ್ತು ಅಥವಾ ಸ್ಫೋಟಕಗಳ ನಿರ್ವಹಣೆ, ಕೈಮಗ್ಗ, ವಿದ್ಯುತ್‌ ಮಗ್ಗ, ಗಣಿಗಳು, ಪ್ಲಾಸ್ಟಿಕ್‌ ಘಟಕಗಳು, ಮನೆಕೆಲಸ, ಹೋಟೆಲುಗಳು, ಸ್ಪಾ, ಮನರಂಜನಾ ಸ್ಥಳ, ಮುಳುಗು ಶೋಧನೆ, ಸರ್ಕಸ್‌, ಬೀಡಿ, ಕಾರ್ಪೆಟ್‌, ಸಿಮೆಂಟ್‌ ತಯಾರಿಕೆ, ಬಟ್ಟೆ ಮುದ್ರಣ, ಬಣ್ಣ, ಬೆಂಕಿಪೊಟ್ಟಣ, ಸ್ಫೋಟಕ, ಪಟಾಕಿ, ಅರಗು, ಸೋಪು ತಯಾರಿಕೆ, ಕಟ್ಟಡ ನಿರ್ಮಾಣ, ಗ್ರಾನೈಟ್‌ ಕಲ್ಲುಗಳ ಸಂಸ್ಕರಣೆ ಮತ್ತು ಪಾಲಿಷ್‌, ಬಳಪ, ಅಗರಬತ್ತಿ, ಪಾತ್ರೆಗಳು, ಟೈರ್‌, ಗಾಜಿನ ವಸ್ತು ತಯಾರಿಕೆ, ಸೀಸ, ಪಾದರಸದಂಥ ವಿಷಕಾರಿ ಖನಿಜಗಳು ಮತ್ತು ಕೀಟನಾಶಕ ಬಳಸುವ ಸಂಸ್ಕರಣಾ ಘಟಕಗಳು, ಚಿಂದಿ ಆಯುವುದು ಇತ್ಯಾದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.