ADVERTISEMENT

ವಿರೋಧ ಅವರ ಚಾಳಿ, ಪ್ರತಿರೋಧ ನಮ್ಮ ಹಕ್ಕು

ಪ್ರಜಾವಾಣಿ ವಿಶೇಷ
Published 28 ನವೆಂಬರ್ 2014, 19:30 IST
Last Updated 28 ನವೆಂಬರ್ 2014, 19:30 IST

ಮೇಕೆದಾಟು ಯೋಜನೆಯ ಆಗುಹೋಗು­ಗಳ ಬಗ್ಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ:

*ಮೇಕೆದಾಟು ಯೋಜನೆಯ ಉದ್ದೇಶ ಏನು?
ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿನ ಕುಡಿಯುವ ನೀರಿನ ದಾಹ ತಣಿಸುವುದು ಈ ಯೋಜನೆಯ

ಉದ್ದೇಶ.

*ನಿಜಕ್ಕೂ ಯೋಜನೆ ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಸರ್ಕಾರಕ್ಕೆ ಇದೆಯೇ?
ಖಂಡಿತಾ ಇದೆ. ಈ ವಿಷಯದಲ್ಲಿ ಹಲವು ಸುತ್ತಿನ ಮಾತುಕತೆ ನಡೆದಿದೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

*ಯೋಜನೆ ಅನುಷ್ಠಾನಕ್ಕೆ ಏನೆಲ್ಲ ಸಿದ್ಧತೆ ನಡೆದಿದೆ?
ಖಾಸಗಿ ಸಂಸ್ಥೆಯೊಂದು ಈಗಾಗಲೇ ಮೇಕೆದಾಟು ಆಸುಪಾಸಿನ 22 ಕಡೆ ಅಣೆಕಟ್ಟು ನಿರ್ಮಾಣಕ್ಕೆ ಜಾಗ ಗುರುತಿಸಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲಿ ಅಣೆಕಟ್ಟು ನಿರ್ಮಿಸಿದರೆ ಹೆಚ್ಚು ನೀರು ಸಂಗ್ರಹಿಸಬಹುದು ಎಂಬುದನ್ನು ತಿಳಿಯುವ ಸಲುವಾಗಿ ಜಾಗತಿಕ ಟೆಂಡರ್‌ ಕರೆಯಲಾಗಿದೆ.

*ವರದಿ ಬಂದ ನಂತರ ಏನು ಮಾಡುತ್ತೀರಿ?
ಕೇಂದ್ರ ಜಲ ಆಯೋಗದ ಅನುಮತಿಗಾಗಿ ಕಳುಹಿಸು­ತ್ತೇವೆ. ನಂತರ ಟೆಂಡರ್‌ ಕರೆದು ಕಾಮಗಾರಿ ಆರಂಭಿಸುತ್ತೇವೆ.

*ಇಷ್ಟೆಲ್ಲ ಆಗಲು ಇನ್ನೂ ಎಷ್ಟು ದಿನ ಬೇಕಾಗಬಹುದು?
ನನ್ನ ಪ್ರಕಾರ ಯೋಜನೆ ಕುರಿತ ಅಧ್ಯಯನಕ್ಕೇ ಕನಿಷ್ಠ ಆರೇಳು ತಿಂಗಳು ಬೇಕು. ಅದರ ನಂತರ ಟೆಂಡರ್ ಪ್ರಕ್ರಿಯೆಗೆ 2–3 ತಿಂಗಳಾಗುತ್ತದೆ. ಒಟ್ಟಿನಲ್ಲಿ ಒಂದು ವರ್ಷದಲ್ಲಿ ಕಾಮಗಾರಿ ಆರಂಭ ಆಗಲಿದೆ.

*ಕಾವೇರಿ ನ್ಯಾಯಮಂಡಳಿಯ ತೀರ್ಪಿನ ಪ್ರಕಾರ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು?
ಉತ್ತಮ ಮಳೆಯಾದ ವರ್ಷಗಳಲ್ಲಿ ಕಾವೇರಿ ನ್ಯಾಯಮಂಡಳಿ ನಿಗದಿ­ಪಡಿ­ಸಿರುವಷ್ಟು ನೀರು ಬಿಡಬೇಕು. ಮಳೆ ಇಲ್ಲದಾಗ  ಸಂಕಷ್ಟ ಸೂತ್ರ ಅನುಸರಿಸಬೇಕು ಎಂಬುದು ನಿಯಮ.

*ಸರಾಸರಿ ಎಷ್ಟು ಪ್ರಮಾಣದ ನೀರು ತಮಿಳುನಾಡಿಗೆ ಹೆಚ್ಚುವರಿಯಾಗಿ ಹೋಗುತ್ತಿದೆ?
1991ರಿಂದ ಇಲ್ಲಿಯವರೆಗೆ ತಮಿಳುನಾಡಿಗೆ ಹರಿದು ಹೋಗಿರುವ ನೀರಿನ ಪ್ರಮಾಣ ನೋಡಿದರೆ ಉತ್ತಮ ಮಳೆಯಾದ ವರ್ಷಗಳಲ್ಲಿ ಸರಾಸರಿ 50–60 ಟಿಎಂಸಿ ಅಡಿ ನೀರು ಹೆಚ್ಚಿಗೆ ಹೋಗಿದೆ. ಕೆಲವೊಮ್ಮೆ 150 ಟಿಎಂಸಿ ಅಡಿ ನೀರೂ ಹೋಗಿದೆ.

*ಹೆಚ್ಚುವರಿ ನೀರು ಬಳಸುವುದಕ್ಕೆ ಕಾನೂನಿನ ತೊಡಕು ಎದುರಾಗುವುದಿಲ್ಲವೇ?
ಖಂಡಿತಾ ಇಲ್ಲ. ನಾವೇನೂ ತಮಿಳುನಾಡಿಗೆ ಬಿಡಬೇಕಾದ ನೀರನ್ನು ಉಳಿಸಿಕೊಳ್ಳಲು ಅಣೆಕಟ್ಟು ಕಟ್ಟುವ ಯೋಚನೆಯಲ್ಲಿ ಇಲ್ಲ. ನಮ್ಮದೇನಿದ್ದರೂ ಹೆಚ್ಚುವರಿ ನೀರನ್ನು ಸಂಗ್ರಹಿಸಿ, ಕುಡಿಯುವ ಸಲುವಾಗಿ ಬಳಸುವ ಉದ್ದೇಶ. ಇದಕ್ಕೆ ಕಾನೂನಿನ ತೊಡಕು ಇಲ್ಲ.

*ರಾಜ್ಯದ ಯತ್ನಕ್ಕೆ ತಮಿಳುನಾಡು ವಿರೋಧವಿದೆಯಲ್ಲ?
ವಿರೋಧಿಸುವುದು ಆ ರಾಜ್ಯದ ಹಕ್ಕು. ಹಾಗೆಯೇ ಅದನ್ನು ಎದುರಿಸುವುದು ಕೂಡ ನಮ್ಮ ಹಕ್ಕು. ನಾವು ತಪ್ಪು ಮಾಡುತ್ತಿಲ್ಲ. ಹೀಗಾಗಿ ಕಾನೂನು ಹೋರಾಟಕ್ಕೂ ಸಿದ್ಧ ಆಗಿದ್ದೇವೆ.

*ಉದ್ದೇಶಿತ ಯೋಜನೆಯಿಂದ ಎಷ್ಟು ಅರಣ್ಯ ಮುಳುಗಡೆ ಆಗುತ್ತದೆ?
2000 ಹೆಕ್ಟೇರ್‌ ಅರಣ್ಯ ಮುಳುಗುವ ಅಂದಾಜಿದೆ.

*ಅರಣ್ಯ ಮುಳುಗಡೆ ಆಗುವುದನ್ನು ತಪ್ಪಿಸಲು ಬೇರೆ ಯೋಜನೆ ಏನೂ ಇಲ್ಲವೇ?
ಆ ಬಗ್ಗೆ ಪರಿಶೀಲನೆ ನಡೆದಿದೆ. 45–50 ಟಿಎಂಸಿ ಅಡಿಯನ್ನು ಒಂದೇ ಕಡೆ ಶೇಖರಿಸುವುದರ ಬದಲು, ಸಣ್ಣ ಜಲಾಶಯಗಳ ನಿರ್ಮಾಣ ಕೂಡ ನಮ್ಮ ಆದ್ಯತೆ. ಮೇಕೆದಾಟು ಸಮೀಪ 10–15 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ನಿರ್ಮಿಸಿ, ಹೆಚ್ಚುವರಿ ನೀರನ್ನು ಮಂಚನಬೆಲೆ, ಕಣ್ವ, ತಿಪ್ಪಗೊಂಡನಹಳ್ಳಿ ಜಲಾಶಯಗಳಿಗೆ ಪಂಪ್‌ ಮಾಡುವ ಉದ್ದೇಶ ಇದೆ.

*ಯೋಜನೆಗೆ ಎಷ್ಟು ಹಣ ಬೇಕಾಗುತ್ತದೆ? ಅದನ್ನು ಹೊಂದಿಸುವುದು ಹೇಗೆ?
ಯೋಜನಾ ವರದಿ ಸಿದ್ಧ ಆದ ನಂತರ ಹಣಕಾಸಿನ ವಿವರ ಲಭ್ಯ ಆಗಲಿದೆ. ಯೋಜನೆಗೆ ಎಲ್ಲ ರೀತಿಯ ಅನುಮತಿ ಸಿಕ್ಕ ನಂತರ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಅಥವಾ ಜಪಾನ್‌ ಇಂಟರ್‌ನ್ಯಾಷನಲ್‌ ಕೊ ಆಪರೇಟಿವ್‌ ಏಜೆನ್ಸಿಯ ನೆರವು ಪಡೆಯುವ ಉದ್ದೇಶ ಇದೆ.

*ತಮಿಳುನಾಡಿಗೂ ನೀರಿನ ಸಮಸ್ಯೆ ಎದುರಾದಾಗ ಉದ್ದೇಶಿತ ಅಣೆಕಟ್ಟೆಯಿಂದ  ನೀರು ಬಿಡುತ್ತೀರಾ?
ಹೆಚ್ಚುವರಿ ನೀರು ಸಮುದ್ರ ಸೇರುವುದನ್ನು ತಡೆದು, ಸದುಪಯೋಗ ಪಡಿಸಿಕೊಳ್ಳುವ ನಮ್ಮ ಪ್ರಯತ್ನಕ್ಕೆ ತಮಿಳುನಾಡು ಬೆಂಬಲಿಸಬೇಕು. ಅಗತ್ಯ ಬಿದ್ದಾಗ ಆ ರಾಜ್ಯಕ್ಕೂ ನೀರು ಬಿಡಲು ಯೋಜನೆ ಅನುಕೂಲ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT