ADVERTISEMENT

ಇದು ಸೆಲ್ಫೀ ಅಲ್ಲ ಶೂಫೀ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 19:30 IST
Last Updated 8 ನವೆಂಬರ್ 2017, 19:30 IST
ಇದು ಸೆಲ್ಫೀ ಅಲ್ಲ ಶೂಫೀ
ಇದು ಸೆಲ್ಫೀ ಅಲ್ಲ ಶೂಫೀ   

ಸೆಲ್ಫೀ ಕ್ರೇಝ್ ಹೆಚ್ಚುತ್ತಿದ್ದಂತೆ ಸುಲಭವಾಗಿ ಸೆಲ್ಫೀ ತೆಗೆದುಕೊಳ್ಳಬಲ್ಲ ಸಾಧನಗಳ ಪಟ್ಟಿಯೂ ಬೆಳೆಯುತ್ತಲೇ ಇದೆ. ಅದಕ್ಕೆ ಮತ್ತೊಂದು ಉದಾಹರಣೆ ಈ ಸೆಲ್ಫೀ ಶೂ.

ಸೆಲ್ಫೀಗಳೆಂದರೆ ಹುಡುಗಿಯರಿಗೆ ಮತ್ತೂ ಇಷ್ಟ. ಜೊತೆಗೆ ಸೆಲ್ಫೀ ತೆಗೆದುಕೊಳ್ಳುವಾಗಿನ ಅವರ ಒದ್ದಾಟ ನೋಡುವಂತಿಲ್ಲ.

ಸೆಲ್ಫೀಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಫೋಟೊ ತೆಗೆದು ತೆಗೆದು ಕೈ ನೋವು ಬರಬಾರದಲ್ಲ? ಅದಕ್ಕೆಂದೇ ನ್ಯೂಯಾರ್ಕ್‌ನ ಪ್ರಸಿದ್ಧ ಶೂ ಬ್ರ್ಯಾಂಡ್ ಕಂಪನಿ ಮಿಝ್ ಮೂಜ್, ಏಪ್ರಿಲ್‌ನಲ್ಲಿ ಈ ಸೆಲ್ಫೀ ಶೂಗಳನ್ನು ಹೊರತಂದಿದೆ.

ADVERTISEMENT

ಇದರಲ್ಲಿ ಸೆಲ್ಫೀ ತೆಗೆದುಕೊಳ್ಳಲು ಹೆಚ್ಚೇನೂ ಮಾಡಬೇಕಿಲ್ಲ. ಕಾಲನ್ನು ಎತ್ತಿ ಕಾಲಿನ ಬೆರಳಿನಿಂದಲೇ ಬಟನ್ ಒತ್ತಿದರೆ ಸಾಕು, ಸುಂದರ ಸೆಲ್ಫೀ ರೆಡಿ. ಕಾಲುಗಳೇ ಇಲ್ಲಿ ಸೆಲ್ಫೀ ಸ್ಟಿಕ್‌ಗಳಂತೆ ಕೆಲಸ ಮಾಡುತ್ತವೆ.

ಮಹಿಳೆಯರಿಗೆ ಮಾತ್ರ ಇದು ಮೀಸಲು. ವಿನ್ಯಾಸವೂ ಮಹಿಳಾಕೇಂದ್ರಿತವಷ್ಟೇ. ಶೂಗಳ ಮುಂಭಾಗ ಚಾಚಿಕೊಂಡಂತೆ ಇರುವ ಜಾಗದಲ್ಲಿ ಸ್ಮಾರ್ಟ್‌ಫೋನ್ ಡಾಕ್ ಇದೆ. ಅದರಲ್ಲಿ ಫೋನ್ ಸಿಕ್ಕಿಸಿಕೊಳ್ಳಬಹುದು. ಹೀಗೆ ಸಿಕ್ಕಿಸಿಕೊಂಡು ಕಾಲು ಮೇಲೆತ್ತಿ ಹೆಬ್ಬೆರಳಿನಿಂದ ಅಲ್ಲೇ ಕೊಟ್ಟಿರುವ ಬಟನ್ ಮುಟ್ಟಿದರೆ ಸಾಕು ಸೆಲ್ಫೀ ಮೂಡಿರುತ್ತದೆ.

ಹೀಗೊಂದು ಆವಿಷ್ಕಾರ ಮಾಡಲು ಕಂಪನಿಗೆ ಪ್ರೇರಣೆ ಸರಣಿಯಾಗಿ ಸೆಲ್ಫೀ ತೆಗೆದುಕೊಳ್ಳುವವರು. ಎಲ್ಲಿಗೆ ಹೋದರೂ ಆರಾಮಾಗಿ ಫೋಟೊ ತೆಗೆದುಕೊಳ್ಳಬೇಕು ಎಂದು ಬಯಸುವವರು. ಈ ಆವಿಷ್ಕಾರದ ಸುದ್ದಿ ‘ಶೂಫೀ’ ಹೆಸರಿನಲ್ಲಿ ಭಾರೀ ಚರ್ಚೆಗೂ ಇಳಿದಿತ್ತು.

ಇದಕ್ಕೆ ಕಾರಣ, ಇದು ಏಪ್ರಿಲ್‌ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದು. ಏಪ್ರಿಲ್ ಫೂಲ್ ಮಾಡಲೆಂದೇ ಈ ಆವಿಷ್ಕಾರ ನಡೆದಿದೆ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಹಾಗೆಯೇ ಎಲ್ಲಾ ಫೋನ್‌ಗಳಿಗೂ, ಎಲ್ಲಾ ಗಾತ್ರದ ಪಾದಗಳಿಗೂ ಈ ಶೂಗಳು ಹೊಂದುತ್ತವೆಯೇ, ಕಾಲೆತ್ತಿ ಕತ್ತನ್ನು ಹೀಗೆ ಚಾಚಿದರೆ ಗಂಭೀರವಾಗಿ ಕುತ್ತಿಗೆ ನೋವೂ ಬರಬಹುದಲ್ಲವೇ ಎಂಬ ಪ್ರಶ್ನೆಗಳ ನೂರಾರು ಕಮೆಂಟ್‌ಗಳೂ ಹರಿದಾಡಿದ್ದವು.

ಏನಾದರಾಗಲಿ, ಸೆಲ್ಫೀ ತೆಗೆದುಕೊಳ್ಳಲು ಕಾಲೆತ್ತುವಾಗ ಸ್ವಲ್ಪ ಹುಷಾರಾಗಿರಿ ಎಂದು ಎಚ್ಚರಿಕೆ ಕೊಟ್ಟವರೇ ಪಾಲೇ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.