ADVERTISEMENT

ನಾನು ನಿಮ್ಮ ‘ಶಾಲಿನಿ ಟೀಚರ್‌’

ರೇಷ್ಮಾ ಶೆಟ್ಟಿ
Published 14 ಫೆಬ್ರುವರಿ 2017, 19:30 IST
Last Updated 14 ಫೆಬ್ರುವರಿ 2017, 19:30 IST
ಆಶ್ರಿತಾ
ಆಶ್ರಿತಾ   

ನೀಲಿ ಕಂಗಳು, ಹಾಲು ಬಿಳುಪು ಬಣ್ಣದ ಸುಂದರಿ ಆಶ್ರಿತಾ ಚಂದ್ರಪ್ಪ ಅವರದು ನೇರ ಮಾತು.  ನಟಿಸಿದ ಮೊದಲ ಧಾರಾವಾಹಿಯಲ್ಲಿ ಪ್ರಬುದ್ಧ, ಜವಾಬ್ದಾರಿಯುತ ಟೀಚರ್‌ನ ಪಾತ್ರ ಮಾಡಿದ್ದ ಇವರು ಇಂದಿಗೂ ಜನರ ಮನಸ್ಸಲ್ಲಿ ‘ಶಾಲಿನಿ ಟೀಚರ್’ ಆಗಿಯೇ ಉಳಿದಿದ್ದಾರೆ. ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನೀಲಿ’ ಧಾರಾವಾಹಿಯ ನಾಯಕಿ.  ಇವರು ‘ಗುಲ್‌ಮೊಹರ್‌’ನೊಂದಿಗೆ ತಮ್ಮ ಧಾರಾವಾಹಿ ಹಾಗೂ ಜೀವನ ಪಯಣದ ಕುರಿತು ಮಾತನಾಡಿದ್ದಾರೆ.

* ನಿಮ್ಮ ಧಾರಾವಾಹಿ ಬಗ್ಗೆ ತಿಳಿಸಿ?
ನೀಲಿ ಧಾರಾವಾಹಿ ಆತ್ಮ ಹಾಗೂ ಮನುಷ್ಯರ ನಡುವೆ ನಡೆಯುವ ಕತೆ. ಕತೆಯ ನಾಯಕ ವಿಷ್ಣುವನ್ನು ನಾನು ಕಾಲೇಜಿನಲ್ಲಿ ಇದ್ದಾಗಲೇ ಪ್ರೀತಿಸುತ್ತಿದ್ದೆ. ಆದರೆ ವಿಷ್ಣು, ದೀಪಾಳನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಅವರಿಗೆ ಒಂದು ಮಗು ಕೂಡ ಇರುತ್ತದೆ. ದೀಪಾ ಆಕಸ್ಮಿಕವಾಗಿ ಮರಣ ಹೊಂದಿ ಅವಳ ಆತ್ಮ ಗೊಂಬೆಯೊಂದರಲ್ಲಿ ಸೇರಿರುತ್ತದೆ. ನಾನು ಅಂದರೆ ರೇಖಾ ಮತ್ತೆ ಪ್ರೀತಿಗಾಗಿ ಹಂಬಲಿಸಿ ವಿಷ್ಣುವನ್ನು ಮದುವೆಯಾಗುವುದು, ವಿಷ್ಣು ಮಗುವಿಗಾಗಿ ರೇಖಾಳನ್ನು ಮದುವೆಯಾಗುವುದು ಇದು ಧಾರಾವಾಹಿಯ ಕತೆ.

*ನಿಮ್ಮ ಕಿರುತೆರೆ ಪ್ರಯಾಣದ ಕುರಿತು ಹೇಳಿ?
ನಾನು ಬಾಲ್ಯದಿಂದಲೂ ಚಿತ್ರರಂಗದ ಸಾಂಗತ್ಯದಲ್ಲಿ ಬೆಳೆದವಳು. ನನ್ನ ತಂದೆ ಚಂದ್ರಪ್ಪ ಸಿನಿಮಾ ವಿತರಕರು. ಸಿನಿಮಾ ಕ್ಷೇತ್ರವನ್ನು ಹತ್ತಿರದಿಂದ ನೋಡಿದವಳಾದ್ದರಿಂದ ಸಹಜವಾಗಿಯೇ ನಟಿಯಾಗುವ ಬಯಕೆ ನನ್ನಲ್ಲಿತ್ತು. ಆದರೆ ನನ್ನ ತಂದೆಗೆ ಇಷ್ಟವಿರಲಿಲ್ಲ. ನಾನು ಬಹಳ ಬೇಗನೆ ಭಾವುಕಳಾಗುತ್ತೇನೆ. ಹಾಗಾಗಿ ನನಗೆ ಈ ಕ್ಷೇತ್ರ ಹೊಂದುವುದಿಲ್ಲ ಎನ್ನುವುದು ಅವರ ಅಭಿಪ್ರಾಯ.

*ಧಾರಾವಾಹಿಯ ರೇಖಾ ಪಾತ್ರಾಧಾರಿಯಂತೆ ನಿಜ ಜೀವನದಲ್ಲೂ ನೀವು ಕುತಂತ್ರಿನಾ?
ನನ್ನ ಜೀವನಕ್ಕೂ, ರೇಖಾ ಪಾತ್ರಧಾರಿಗೂ ಅಜಗಜಾಂತರ. ನಂಗೆ ಮಕ್ಕಳು ಅಂದರೆ ತುಂಬಾ ಇಷ್ಟ. ಕೆಲವೊಮ್ಮೆ ಆ ಮಗುವಿಗೆ ಏನಾದರೂ ನೋವು ನೀಡುವ ಸಂದರ್ಭದಲ್ಲಿ ಅತ್ತಿದ್ದು ಇದೆ. ಆಗ ನೀಲಿ ಪಾತ್ರಧಾರಿಯ ಹುಡುಗಿಯೇ ನನ್ನಲ್ಲಿ ‘ಅಕ್ಕ ಇದು ಧಾರಾವಾಹಿ’ ಅಂತ ಸಮಾಧಾನ ಮಾಡುತ್ತಾಳೆ. ಆದರೂ ನೆಗೆಟಿವ್‌ ಪಾತ್ರ ಮಾಡೋದು ಸ್ವಲ್ಪ ಕಷ್ಟಾನೇ.

*ಪ್ರೀತಿ ಹೆಸರಿನಲ್ಲಿ ಮುಗ್ಧ ಮಗುವಿನ ಮೇಲೆ ಕೋಪ ತೋರುವುದು ಎಷ್ಟು ಸರಿ?
ಅದು ಸರಿಯಲ್ಲ. ಆದರೆ ರೇಖಾಳಿಗೆ ಮಗು ನನ್ನನ್ನು ಅಮ್ಮ ಎನ್ನದೇ ಆಂಟಿ ಎಂದು ಕರೆಯುವುದಕ್ಕೆ ಕೋಪ. ಹೆತ್ತ ತಾಯಿ ಮಾತ್ರ ತಾಯಿನಾ? ನಾನು ಯಾಕೆ ಆ ಮಗುವಿನ ತಾಯಿಯಾಗಬಾರದು ಎನ್ನುವುದು ರೇಖಾಳ ನಿಲುವು ಹೊರತು ಮಗುವಿಗೆ ನೋವು ನೀಡುವುದು ಆಕೆಯ ಉದ್ದೇಶವಲ್ಲ.

*ಯಾವ ರೀತಿಯ ಪಾತ್ರ ನಿಮಗೆ ಖುಷಿ ಕೊಡುತ್ತದೆ?
ನಾನು ನಿಜ ಜೀವನದಲ್ಲಿ ನಾರ್ಮಲ್ ಹುಡುಗಿ. ನಂಗೆ ಕಾಲೇಜಿಗೆ ಹೋಗೋ ಅಥವಾ ರೊಮ್ಯಾಂಟಿಕ್ ಹುಡುಗಿ ಪಾತ್ರ ಮಾಡೋದು ಇಷ್ಟ.

*ಸಿನಿಮಾಗಳಲ್ಲಿ ಅವಕಾಶ ಸಿಕ್ರೆ?
ಸಿನಿಮಾಗಳಲ್ಲಿ ಮೊದಲಿನಿಂದ ಅವಕಾಶ ಬರ್ತಿತ್ತು. ಆದರೆ ನಮ್ಮ ತಂದೆ ಒಪ್ಪಿಗೆ ನೀಡಿರಲಿಲ್ಲ. ನನಗೆ ಧಾರಾವಾಹಿಗಳೇ ತುಂಬಾ ಆರಾಮಧಾಯಕ ಅನ್ನಿಸ್ತಿದೆ. ನನಗೆ ಇಷ್ಟವಾಗುವ ಕತೆ ಸಿಕ್ಕರೆ ಸಿನಿಮಾದಲ್ಲಿ ಮಾಡ್ತೀನಿ. ಆದರೆ ನಾನು ಯಾವತ್ತೂ ಹಿರೋಯಿನ್ ಆಗ್ಲೆ ಬೇಕು ಅಂತ ಕನಸು ಕಂಡಿಲ್ಲ. ನನ್ನ ಪ್ರತಿಭೆಗೆ ಬೆಲೆ ಸಿಗುವ ಪಾತ್ರಗಳನ್ನು ಮಾಡಬೇಕು ಎಂಬುದು ನನ್ನ ಆಸೆ. ‘ಚಕ್ರವರ್ತಿ’ ಸಿನಿಮಾದಲ್ಲಿ ನಟಿಸಿರುವುದು ಖುಷಿ ತಂದಿದೆ.

*ಮದುವೆ ವಿಚಾರ?
ಮದುವೆ ಬಗ್ಗೆ ನಾನು ಅಷ್ಟೇನೂ ಯೋಚನೆ ಮಾಡಿಲ್ಲ. ಮದುವೆ ಅನ್ನೋದು ವಿಧಿಲಿಖಿತ. ಲವ್‌ ಮ್ಯಾರೇಜ್ ಆದ್ರೆ ಒಳ್ಳೇದು. ಹಾಗಂತ ಹಾಗೇ ಆಗಬೇಕು ಅಂತ ಇಲ್ಲ. ನೋಡೋಣ ಏನಾಗುತ್ತೋ.

*ನಿಮ್ಮ ಅಭಿಮಾನಿಗಳ ಬಗ್ಗೆ...
ನನ್ನ ಅಭಿಮಾನಿಗಳು ನನ್ನನ್ನು ಈಗ್ಲೂ ಶಾಲಿನಿ ಟೀಚರ್ ಅಂತಾನೇ ಕರೀತಾರೆ. ಅವರು ಇಂದಿಗೂ ನನ್ನನ್ನು ರೇಖಾ ಅಂತ ಒಪ್ಪಿಕೊಳ್ಳೋಕೇ ರೆಡಿ ಇಲ್ಲ. ನಾನು ರಿಯಲ್ ಲೈಪ್‌ಗೂ ರೀಲ್ ಲೈಫ್‌ಗೂ ತುಂಬಾ ಡಿಫ್ರೆಂಟ್ ಆಗಿ ಕಾಣಿಸ್ತೀನಿ. ಹಾಗಾಗೀ ಕೆಲವೊಮ್ಮೆ ನನ್ನ ಗುರುತು ಹಿಡಿಯೊಲ್ಲ. ಅಭಿಮಾನಿಗಳ ಸಂದೇಶಗಳು ನನಗೆ ಖುಷಿ ನೀಡುತ್ತದೆ.

*ಜೀವನವನ್ನು ಹೇಗೆ ವ್ಯಾಖ್ಯಾನಿಸುಸ್ತೀರ?
ಜೀವನ ಅನ್ನೋದು ಅನಿರೀಕ್ಷಿತ. ಯಾವುದನ್ನೂ ಯೋಜಿತವಾಗಿ ರೂಪಿಸಲು ಸಾಧ್ಯವಿಲ್ಲ. ಪ್ರತಿ ಕ್ಷಣವನ್ನು ಸಂತಸದಿಂದ ಕಳೆಯಬೇಕು. ಕಷ್ಟ, ಸುಖ ಎರಡು ಇರುತ್ತದೆ. ಎರಡನ್ನು ಸಮಾನವಾಗಿ ಎದುರಿಸುವ ಮನೋಭಾವವಿರಬೇಕು.

*ನಿಜಜೀವನದಲ್ಲಿ ಒಂದು ಮಗುವಿರುವ ವಿಧುರನನ್ನು ಮದುವೆಯಾಗಲು ರೆಡಿ ಇದೀರಾ?
ಹೋ ಖಂಡಿತಾ ರೆಡಿ ಇದೀನಿ.  ಪ್ರೀತಿ ಅಂದ್ರೆ ಹಾಗೇ. ನಾವು ಒಮ್ಮೆ ಒಬ್ಬರನ್ನು ಪ್ರೀತಿಸಿದ್ರೆ ಅವರು ಹೇಗೆ ಇರಲಿ, ಎಷ್ಟೇ ಬದಲಾಗ್ಲಿ ಅವರನ್ನೇ ಪ್ರೀತಿ ಮಾಡ್ಬೇಕು, ಪ್ರೀತಿ ವಿಷಯ ಬಂದಾಗ ಅವರು ವಿಧುರ, ಮಗುವಿದೆ ಎಂಬೆಲ್ಲಾ ವಿಷಯಗಳು ಗಣನೆಗೆ ಬರೋಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT