ADVERTISEMENT

ಬೀಗ ಹುಡುಕ್ತಿದ್ದಾರೆ ಶ್ರೀನಿವಾಸ್‌!

ಹರವು ಸ್ಫೂರ್ತಿ
Published 14 ಮಾರ್ಚ್ 2017, 19:30 IST
Last Updated 14 ಮಾರ್ಚ್ 2017, 19:30 IST
ಬೀಗ ಹುಡುಕ್ತಿದ್ದಾರೆ ಶ್ರೀನಿವಾಸ್‌!
ಬೀಗ ಹುಡುಕ್ತಿದ್ದಾರೆ ಶ್ರೀನಿವಾಸ್‌!   

ಈಚೆಗೆ ತೆರೆಕಂಡ ಸಿನಿಮಾಗಳಲ್ಲಿ ಹೆಚ್ಚು ಲವಲವಿಕೆಯಿಂದ ಪ್ರೇಕ್ಷಕರನ್ನು ಸೆಳೆದ ಸಿನಿಮಾ ‘ಶ್ರೀನಿವಾಸ ಕಲ್ಯಾಣ’. ಹಾಸನ ಮೂಲದ ಎಂ.ಜಿ.ಶ್ರೀನಿವಾಸ್ ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ಗೆದ್ದಿದ್ದೇ ತುಂಟತನದ ಸಂಭಾಷಣೆ ಮತ್ತು ಸಹಜ ಅಭಿನಯದಿಂದ. ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ ಎಂ.ಜಿ. ಶ್ರೀನಿವಾಸ್.

– ಭಗ್ನ ಪ್ರೇಮಿಗಳು ‘ಶ್ರೀನಿವಾಸ ಕಲ್ಯಾಣ’ ಸಿನಿಮಾ ನೋಡಿದರೆ ಮೋಕ್ಷ ಪ್ರಾಪ್ತಿಯಾಗುತ್ತಾ?
ಸಿನಿಮಾ ನೋಡಿದ ಪ್ರೇಕ್ಷಕರು ಹಾಗೇ ಹೇಳುತ್ತಿದ್ದಾರೆ. ಯಾವಾಗಲೂ ಫೀಲಿಂಗ್‌ ಅಲ್ಲಿ ಇರಬಾರದು, ಖುಷಿಖುಷಿಯಾಗಿ ಇರಬೇಕು. ತುಂಬಾ ಜನ ಲವ್‌ಫೇಲ್ಯೂರ್ ಅಂತ  ಗೋಳಾಡುತ್ತಾರೆ. ಜೀವನ ಯಾವಾಗಲೂ ನಮ್ಮನ್ನು ಬೇಜಾರು ಮಾಡೋದಿಲ್ಲ. ಎಲ್ಲೋ ಕೆಲವು ಸಂದರ್ಭದಲ್ಲಿ ಹುಡುಗಿ ಕೈಕೊಡುತ್ತಾಳೆ, ಅದಕ್ಕೆಲ್ಲಾ ಬೇಜಾರಾದರೆ ಮುಂದೆ ಸಿಗಲಿರುವ ಹುಡುಗಿಯನ್ನು ಮಿಸ್‌ ಮಾಡಿಕೊಳ್ಳುತ್ತೇವೆ.

– ದೇವರ ಹೆಸರಿನ ಚಿತ್ರದಲ್ಲಿ ಬರೀ ಪೋಲಿ ಡೈಲಾಗ್ ಇದೆಯಲ್ಲಾ?
‘ಶ್ರೀನಿವಾಸ ಕಲ್ಯಾಣ’ ಅಂತ ಚಿತ್ರ ಶೀರ್ಷಿಕೆ ಹೇಳುತ್ತಿದ್ದಂತೆ ದೇವ್ರ ಪಿಕ್ಚರಾ ಅಂತ ಕೇಳೋರು. ಅದಕ್ಕೆ ನಾನು ಟ್ಯಾಗ್‌ಲೈನ್‌ ಅಲ್ಲೇ ‘ದೇವ್ರಾಣೆ ದೇವ್ರ್‌ ಪಿಕ್ಚರ್ ಅಲ್ಲ’ ಎಂದು ಬರೆಸಿದೆ. ಇನ್ನು ಈ ಪೋಲಿ ಅನ್ನೋದು ಏನೂ ಇಲ್ಲ. ‘ಶ್ರೀನಿವಾಸ ಕಲ್ಯಾಣ’ ಸಿನಿಮಾ ಸಂಭಾಷಣೆ ಬರೆದವರು ಸಿನಿಮಾದ ಸಹ ನಿರ್ದೇಶಕರಾದ ಪ್ರಸನ್ನ, ಸುಕೃತ್.
ಒಳಗಿಂದ ಎಲ್ಲರೂ ಪೋಲಿಗಳೇ. ಹೊಸದಾಗಿ ನಾವೇನು ಡೈಲಾಗ್‌  ಹೊಡೀತಾ ಇಲ್ಲ. ಇಂದಿನ ಯುವಕರು ಹೀಗೆ ಮಾತನಾಡ್ತಿರೋದು. ಎಲ್ಲರೊಳಗೂ ಈ ತುಂಟತನ ಇದ್ದೇ ಇರುತ್ತೆ. ಕೆಲವರು ಧೈರ್ಯವಾಗಿ ಹೇಳಿಕೊಳ್ಳುತ್ತಾರೆ, ಇನ್ನು ಕೆಲವರು ಹೇಳಿಕೊಳ್ಳುವುದಿಲ್ಲ.

– ನಿಜ ಜೀವನದಲ್ಲಿ ನೀವು ‘ಮಾಸ್ಟರ್‌ ಕೀ’ ನಾ?
ಅಯ್ಯೋ ಕೀನೂ ಅಲ್ಲ. ಮಾಸ್ಟರ್‌ ಕೀನೂ ಅಲ್ಲ. ಸದ್ಯಕ್ಕೆ ಬೀಗ ರೆಡಿ ಮಾಡ್ತಿದ್ದೀನಿ..  ನನ್ನ ಜೊತೆಯಲ್ಲಿ ಇರೋ ಗೆಳೆಯರಿಗೆ ಮದುವೆ ಮಾಡ್ಸೋದೆ ಆಯ್ತು. ಗೆಳೆಯರ ಬೀಗ, ಕೀ ರೆಡಿ ಮಾಡೋದರಲ್ಲೇ ಸಮಯ ಕಳೆದೆ. ನಾನೂ ಒಂದು ಬೀಗ ಹುಡುಕುತ್ತಿದ್ದೇನೆ.

– ಹಾಗಾದರೆ ಸದ್ಯದಲ್ಲೇ ಮದುವೆ ಇದೆ ಅನ್ನಿ.
ಹೌದು... ಹೌದು.. ವಧು ಅನ್ವೇಷಣೆ ನಡೆಯುತ್ತಿದೆ.

– ನಿಮಗೆ ಎಷ್ಟು ಲವ್‌ ಫೇಲ್ಯೂರ್ ಆಗಿದೆ?
ಸುಮಾರು ನಾಲ್ಕು ಯಶಸ್ವಿ ಲವ್‌ ಫೇಲ್ಯೂರ್ ಆಗಿದೆ. ಈಗಲೂ ನಾವು ನಾಲ್ಕೂ ಜನ ಮಾತನಾಡುತ್ತೇವೆ. ಉತ್ತಮ ಗೆಳೆಯರಾಗಿದ್ದೇವೆ. ‘ಶ್ರೀನಿವಾಸ ಕಲ್ಯಾಣ’ ಸಿನಿಮಾ ಬಗ್ಗೆ ನನ್ನ ಗೆಳತಿಯರು ಉತ್ತಮ ಅಭಿಪ್ರಾಯಗಳನ್ನೇ ನೀಡಿದ್ದಾರೆ.

– ಒರಿಜಿನಲ್ ಶ್ರೀನಿವಾಸ ಅವರನ್ನು  ಕಲ್ಯಾಣವಾಗೋ ಹುಡುಗಿ ಹೇಗಿರಬೇಕು?
ನಾನು ಮದುವೆಯಾಗೋ ಹುಡುಗಿ ನನ್ನ ಎಲ್ಲಾ ಕಾಟಗಳನ್ನು, ತರ್ಲೆಗಳನ್ನು ತಡೆದುಕೊಳ್ಳಬೇಕು, ನಾನು ತಪ್ಪು ಮಾಡಿದಾಗ ತಿದ್ದಬೇಕು, ಅಂದ್ರೆ ನನಗಿಂತ ಬುದ್ಧಿವಂತಳಾಗಿರಬೇಕು. ನನ್ನಲ್ಲಿರದ  ಅಂಶಗಳು ಅವಳಲ್ಲಿ ಇರಬೇಕು. ನನ್ನ ಸ್ವಭಾವಕ್ಕೆ ವಿರುದ್ಧವಾಗಿರಬೇಕು ಅವಳ ಸ್ವಭಾವ. ಆಗಲೇ ಜೀವನ ಸಂಪೂರ್ಣ ಅನಿಸೋದು.

–ಸಿನಿಮಾ ಕ್ಷೇತ್ರಕ್ಕೆ ಬರಲು ಪ್ರೇರಣೆ?
ಮೂಲತಃ ನಾನು ನೃತ್ಯ ಸಂಯೋಜಕ. ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಇತರೆ ಕಾರ್ಯಕ್ರಮಗಳಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದೆ. ಹಾಗೇ ನನಗೆ ನಿರೂಪಕನಾಗಬೇಕು ಎಂಬ ಆಸೆಯೂ ಇತ್ತು. ರೇಡಿಯೊ ಒಂದರಲ್ಲಿ  ಆರ್‌.ಜೆ. ಆದೆ. ಈ ನಡುವೆ ಒಂದು ಕಿರುಚಿತ್ರವನ್ನಾದರೂ ಮಾಡೋಣ ಅಂದುಕೊಂಡು ‘ರೂಲ್ಸ್‌’ ಎಂಬ ಕಿರುಚಿತ್ರ ನಿರ್ದೇಶನ ಮಾಡಿದೆ.

ನಂತರ ‘ಅಭಿನಯ ತರಂಗ’ದಲ್ಲಿ ನಟನಾ ತರಬೇತಿ ಪಡೆದೆ. ಎ.ಎಸ್.ಮೂರ್ತಿ  ಅವರು ಬರೆದ ‘ಟಿಪಿಕಲ್ ಕೈಲಾಸಂ’ ನಾಟಕವನ್ನು ಕಿರುಚಿತ್ರ ಮಾಡಿದೆ. ನಂತರ ಉಪೇಂದ್ರ ‘ಟೋಪಿವಾಲ’ ಸಿನಿಮಾ ಮಾಡಲು ಅವಕಾಶ ಮಾಡಿಕೊಟ್ಟರು. ಆದರೆ ಈ ಸಿನಿಮಾ ಅಷ್ಟೇನೂ ಹೆಸರು ತಂದುಕೊಡಲಿಲ್ಲ. ಈ ಎಲ್ಲಾ ಕೆಲಸಗಳ ನಡುವೆ ನಟನಾಗಬೇಕು ಎಂದುಕೊಳ್ಳುತ್ತಿದ್ದ ನನ್ನ ಆಸೆ ಹಾಗೇ ಇತ್ತು. ‘ಶ್ರೀನಿವಾಸ ಕಲ್ಯಾಣ’  ಸಿನಿಮಾದ ಮೂಲಕ ನನ್ನ ಆಸೆ ಈಡೇರಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.