ADVERTISEMENT

ಸಿನಿಮಾಗೆ ಸ್ಫೂರ್ತಿಯಾದ ಸಾಧಕರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2017, 19:30 IST
Last Updated 19 ಜೂನ್ 2017, 19:30 IST
ಸಿನಿಮಾಗೆ ಸ್ಫೂರ್ತಿಯಾದ ಸಾಧಕರು
ಸಿನಿಮಾಗೆ ಸ್ಫೂರ್ತಿಯಾದ ಸಾಧಕರು   

ಚಕ್‌ ದೇ ಇಂಡಿಯಾ (2007)
ಈ ಚಿತ್ರವು ಭಾರತದ ಹಾಕಿ ಆಟಗಾರ ಮೀರ್‌ ರಂಜನ್‌ ನೇಗಿ ಅವರ ಜೀವನಕತೆಯನ್ನೊಳಗೊಂಡಿದೆ ಎಂದು ಹೇಳಲಾಗಿತ್ತು. 1982ರಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಸೋತಿತ್ತು. ಆಗ ನೇಗಿ ವಿರುದ್ಧ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಕೇಳಿಬಂದಿತ್ತು. 1998ರಲ್ಲಿ ಏಷ್ಯನ್‌ ಗೇಮ್ಸ್‌ ತಂಡದ ಕೋಚ್‌ ಆಗಿ ನೇಗಿ ಆಯ್ಕೆಯಾದರು. ಆಗ ಭಾರತ ತಂಡ  ಚಿನ್ನದ ಪದಕ ಗೆದ್ದಿತ್ತು. ಆದರೆ ಈ ಸಿನಿಮಾದಲ್ಲಿ, ಇದು ನೇಗಿ ಅವರ ಕುರಿತ ಚಿತ್ರ ಎಂದು ಅಧಿಕೃತವಾಗಿ ಹೇಳಿಕೊಂಡಿಲ್ಲ.

ಪಾನ್‌ ಸಿಂಗ್‌ ತೋಮರ್‌ (2012)
ಈ ಚಿತ್ರವು ಅಥ್ಲೆಟ್‌ ಪಾನ್‌ ಸಿಂಗ್‌ ತೋಮರ್‌ ಕುರಿತಾಗಿದ್ದು, ಸೇನೆಯಿಂದ ನಿವೃತ್ತರಾದ ಬಳಿಕ ಡಕಾಯಿತನಾಗಿ ಬದಲಾದ ತೋಮರ್‌ ಬದುಕಿನ ಕತೆಯೇ ಈ ಚಿತ್ರದ ಕತೆ. ಚಿತ್ರ ಬಿಡುಗಡೆಗೂ ಮುನ್ನ ವಿವಾದಕ್ಕೆ ಗುರಿಯಾಗಿತ್ತು. ಈ ಚಿತ್ರಕ್ಕೆ ₹15 ಲಕ್ಷ ಸಂಭಾವನೆ ನೀಡುವುದಾಗಿ ನಿರ್ದೇಶಕ ಟಿಗ್ಮಂನ್ಶು ಧುಲಿಯಾ ಹೇಳಿ ವಂಚಿಸಿದ್ದಾರೆ ಎಂದು ತೋಮರ್‌ ಸೋದರಳಿಯ ದೂರು ದಾಖಲಿಸಿದ್ದರು. ಆ ಬಳಿಕ ₹15 ಲಕ್ಷ ಸಂಭಾವನೆ ನೀಡಿದ್ದರು.

ಮೀ ಸಿಂಧುತಾಯಿ ಸಪ್ಕಲ್‌ (2010)
ಇದು ಮರಾಠಿ ಚಿತ್ರವಾಗಿದ್ದು, ಇದು  ಅನಾಥ ಮಕ್ಕಳ ತಾಯಿ ಸಿಂಧುತಾಯಿ ಸಪ್ಕಲ್‌  ಬದುಕಿನ ಕತೆಯನ್ನೊಳಗೊಂಡ ಚಿತ್ರ ‘ಮೀ ಸಿಂಧುತಾಯಿ ಸಪ್ಕಲ್‌. ಈ ಚಿತ್ರಕ್ಕೆ ಪ್ರತಿಯಾಗಿ ಅವರು ಪುಣೆಯ ಹಡಪ್ಸರ್‌ನಲ್ಲಿರುವ ತಮ್ಮ ಆಶ್ರಮದ ಅಭಿವೃದ್ಧಿಗಾಗಿ ₹ 1 ಲಕ್ಷ ಹಣ ಪಡೆದಿದ್ದರು. ತೇಜಸ್ವಿನಿ ಪಂಡಿತ್‌ ಸಪ್ಕಲ್‌ ಪಾತ್ರದಲ್ಲಿ ನಟಿಸಿದ್ದರು.

ADVERTISEMENT

ಭಾಗ್‌ ಮಿಲ್ಕಾ ಭಾಗ್‌ (2013)
ಈ ಚಿತ್ರವು ಅಥ್ಲೀಟ್‌ ಮಿಲ್ಕಾ ಸಿಂಗ್‌ ಕುರಿತಾಗಿದ್ದು, ತನ್ನ ಜೀವನ ಕತೆಯ ಭಾಷಾಂತರಕ್ಕಾಗಿ ಮಿಲ್ಕಾ  ಸಂಭಾವನೆ ಕೇಳಿದ್ದರು. ಆದರೆ ನಿರ್ಮಾಪಕರು ಲಾಭಾಂಶದಲ್ಲಿ ಪಾಲು ನೀಡುವುದಾಗಿ ಹೇಳಿ ವಂಚಿಸಿದ್ದಾರೆ ಎಂಬ ಆರೋಪವೂ ಈ ಸಂದರ್ಭದಲ್ಲಿ ಕೇಳಿಬಂದಿತ್ತು. ನಟ ಫರ್ಹಾನ್‌ ಅಖ್ತರ್‌ ಮಿಲ್ಕಾ ಸಿಂಗ್‌ ಪಾತ್ರ ಮಾಡಿದ್ದರು.

ಮೇರಿ ಕೋಮ್‌  (2014)
ಬಾಕ್ಸಿಂಗ್‌ ಚಾಂಪಿಯನ್‌ ಮಣಿಪುರದ ಮೇರಿ ಕೋಮ್‌  ಕುರಿತಾದ ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.ಈ ಚಿತ್ರಕ್ಕೆ ಮೇರಿ ಕೋಮ್‌ ₹25 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಚಿತ್ರವನ್ನು ನಿರ್ದೇಶನ ಮಾಡಿದ ಒಮಂಗ್‌ ಕುಮಾರ್‌ ಅವರು ‘ನಾನು ಹಣದ ಬಗ್ಗೆ ಮೇರಿ ಕೋಮ್‌ ಅವರ ಬಳಿ ಚರ್ಚೆ ನಡೆಸಿಲ್ಲ. ಅವರಿಗೆ ಸಿನಿಮಾ ಲಾಭಾಂಶದಲ್ಲಿ ಯಾವ ಪಾಲೂ ನೀಡಿಲ್ಲ. ಆದರೆ ಒಂದು ಬಾರಿ ಸಂಭಾವನೆಯಾಗಿ ಸ್ವಲ್ಪ ಮೊತ್ತ ನೀಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ದಿ ರಿಯಲ್‌ ಹೀರೊ (2014):
ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ಡಾ. ಪ್ರಕಾಶ್‌ ಬಾಬಾ ಆಮ್ಟೆ ಕುರಿತ ಚಿತ್ರವಿದು. ಈ ಚಿತ್ರದಲ್ಲಿ ಆಮ್ಟೆ ಪಾತ್ರವನ್ನು ನಾನಾ ಪಾಟೇಕರ್‌ ನಿರ್ವಹಿಸಿದ್ದು, ಸೋನಾಲಿ ಕುಲಕರ್ಣಿ  ಚಿತ್ರದಲ್ಲಿದ್ದಾರೆ.  ಸಮೃದ್ಧಿ ಪೋರೆ ನಿರ್ದೇಶಿಸಿದ್ದು, ಆಮ್ಟೆ ಅವರು ಒಂದು ಪೈಸೆ ಸಂಭಾವನೆ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.

‘ಕತೆ ಸಿದ್ಧಪಡಿಸಿಕೊಂಡು, ಕಾನೂನು ದಾಖಲೆಗಳನ್ನು ಹಿಡಿದು ಡಾ.ಆಮ್ಟೆ ಅವರನ್ನು ಭೇಟಿ ಮಾಡಿದೆ. ಅವರಾಗಲಿ, ಅವರ ಪತ್ನಿಯಾಗಲಿ ಒಂದು ಪೈಸೆಯನ್ನೂ ಸಂಭಾವನೆ ಪಡೆಯಲು ಒಪ್ಪಲಿಲ್ಲ. ಬಳಿಕ ನಾವು ಅವರ ಆಶ್ರಮಕ್ಕೆ ಸ್ವಲ್ಪ ಮೊತ್ತವನ್ನು ದೇಣಿಗೆ ನೀಡಿದೆವು’ ಎಂದು ತಿಳಿಸಿದ್ದಾರೆ.

ಎಂ.ಎಸ್‌ ದೋನಿ– ದಿ ಆನ್‌ಟೋಲ್ಡ್‌ ಸ್ಟೋರಿ (2016)
ಈ ಸಿನಿಮಾ ಭಾರತದ ಕ್ರಿಕೆಟ್‌ ತಂಡದ ನಾಯಕ ಎಂ.ಎಸ್‌ ದೋನಿ ಕುರಿತಾಗಿದ್ದು, ಈ ಚಿತ್ರಕ್ಕೆ ದೋನಿ ಅವರು ₹80 ಕೋಟಿ ಸಂಭಾವನೆ ಪಡೆದಿದ್ದಾರೆ.  ನೀರಜ್‌ ಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ದೋನಿ ಪಾತ್ರದಲ್ಲಿ ಸುಶಾಂತ್‌ ಸಿಂಗ್‌ ರಜಪೂತ್‌ ಅಭಿನಯಿಸಿದ್ದರು. ದೋನಿ ಅವರ ಬಾಲ್ಯ, ಕ್ರಿಕೆಟ್‌ ಜಗತ್ತಿನ ಕಡೆಗೆ ಆಕರ್ಷಣೆ, ಸವಾಲು, ವೈಯಕ್ತಿಕ ಬದುಕಿನ ಹಲವು ಸಂಗತಿಗಳನ್ನು ತೋರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.