ADVERTISEMENT

ಸಿನಿಮಾ ಅನುರಾಗ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಅನುರಾಗ್ ಬಸು
ಅನುರಾಗ್ ಬಸು   

‘ತುಮ್ಸಾ ನಹೀ ದೇಖಾ’ ಎಂಬ ಹಿಂದಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಸ್ಪತ್ರೆಯ ಹಾಸಿಗೆ ಮೇಲೆ ಕುಳಿತೇ ಡಿಕ್ಟಾಫೋನ್ ನಿಂದ ನಿರ್ದೇಶಕ ಅನುರಾಗ್ ಬಸು ಸೂಚನೆ ಕೊಡುತ್ತಿದ್ದರು. ಶಾಟ್ ಹೇಗೆ ಇಡಬೇಕು ಎಂದು ಅವರು ಸಣ್ಣ ಸಣ್ಣ ವಿವರಗಳ ಸಹಿತ ತಿಳಿಹೇಳುತ್ತಿದ್ದುದನ್ನು ಕಂಡು ಆಸ್ಪತ್ರೆ ಸಿಬ್ಬಂದಿಯ ಕಣ್ಣುಗಳೂ ತೇವಗೊಳ್ಳುತ್ತಿದ್ದವು.

‘ಸೀನ್ ಚೆನ್ನಾಗಿದೆಯಾ’ ಎಂದು ಅವರಿಗೆ ಪ್ರಶ್ನೆ ಹಾಕುತ್ತಾ, ಚಟಾಕಿ ಹಾರಿಸಿ, ಎಲ್ಲರ ಮುಖದಲ್ಲೂ ಅನುರಾಗ್ ನಗು ತರಿಸುತ್ತಿದ್ದರು. ಕಣ್ಣೀರು ಒರೆಸಿಕೊಂಡು, ನಗು ತುಳುಕಿಸಿ ಎಲ್ಲರೂ ಹೊರಹೋದಮೇಲೆ ಮತ್ತೆ ಪ್ಯಾಡ್ ಎತ್ತಿಕೊಂಡು ಮರುದಿನ ಚಿತ್ರೀಕರಣವಾಗಬೇಕಿದ್ದ ದೃಶ್ಯವನ್ನು ಬರೆಯಲು ಯೋಚಿಸತೊಡಗುತ್ತಿದ್ದರು.

ಆಗ ಅನುರಾಗ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಖಿನ್ನತೆ ಹತ್ತಿರವೂ ಸುಳಿಯಕೂಡದು ಎಂದೇ ಕೆಲಸದಲ್ಲಿ ಆ ಮಟ್ಟಿಗೆ ನಿರತರಾದದ್ದು. ಸಿನಿಮಾ ಅವರಿಗೆ ಕಾಲೇಜು ದಿನಗಳ ಕನವರಿಕೆ. ಜಬಲ್ ಪುರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುವಾಗಲೇ ಓದನ್ನು ಮೊಟಕುಗೊಳಿಸಿ, ದೃಶ್ಯ ಮಾಧ್ಯಮದ ಬೆನ್ನಿಗೆ ಬಿದ್ದರು. ಹಿಂದಿ ಟಿ.ವಿ. ಧಾರಾವಾಹಿ ‘ತಾರಾ’ದ 70 ಕಂತುಗಳನ್ನು ಸಹಾಯಕನಾಗಿ ನಿರ್ದೇಶಿಸುವ ಅವಕಾಶ ಒಲಿಯಿತು. ಅನುರಾಗ್ ಪಾಲಿಗೆ ಅದು ಪ್ರಯೋಗಶಾಲೆ. ಮುಂದೆ ಸ್ವತಂತ್ರವಾಗಿ ಮೆಗಾಧಾರಾವಾಹಿಗಳನ್ನು ನಿರ್ದೇಶಿಸಲು ಸಾಧ್ಯವಾದುದು ಅಲ್ಲಿನ ಕಲಿಕೆಯಿಂದ.

ADVERTISEMENT

ಛತ್ತೀಸ್‌ಗಡದ ಭಿಲಾಯ್‌ನ ಸುಬ್ರತೊ ಬೋಸ್ ಹಾಗೂ ದೀಕ್ಷಿಖಾ ಬೋಸ್ ದಂಪತಿ ‘ಅಭಿಯಾನ್’ ಎಂಬ ರಂಗತಂಡ ಕಟ್ಟಿದ್ದರು. ಅವರ ಮಗ ಅನುರಾಗ್. ಬಾಲ್ಯದಿಂದಲೇ ಅಪ್ಪ-ಅಮ್ಮನ ರಂಗ ಪ್ರಯೋಗಗಳನ್ನು ಕಂಡ ಅನುರಾಗ್, ರವೀಂದ್ರನಾಥ ಟ್ಯಾಗೋರರ ಸಾಹಿತ್ಯವನ್ನೂ ಓದಿಕೊಂಡರು. ‘ನೌಕಾದುಬಿ’ ಕಾದಂಬರಿ ಆಧಾರಿತ ಧಾರಾವಾಹಿಯನ್ನು ‘ಝೀ’ ವಾಹಿನಿಗೆ ನಿರ್ದೇಶಿಸಿದ್ದು ಅವರಿಗಿದ್ದ ಟ್ಯಾಗೋರ್ ಸಾಹಿತ್ಯಪ್ರೀತಿಗೆ ಸಾಕ್ಷಿ.

ಅನುರಾಗ್ ಹಲವು ಮಾಧ್ಯಮಗಳಲ್ಲಿ ತಮ್ಮನ್ನು ಒರೆಗೆ ಹಚ್ಚಿಕೊಂಡರು. ಜಾಹೀರಾತು, ಟಿ.ವಿ. ಧಾರಾವಾಹಿಗಳಲ್ಲಿ ಕೈಪಳಗಿಸಿಕೊಂಡ ಮೇಲೆ ಸಿನಿಮಾ ಕನಸನ್ನು ನನಸಾಗಿಸಿಕೊಂಡರು. ಮೊದಲ ಎರಡು ಸಿನಿಮಾಗಳು ತೋಪಾದವು. ಆಧುನಿಕ ಕಾಲದ ವಿವಾಹೇತರ ಸಂಬಂಧಗಳು, ಕಾಮೋತ್ಕಟತೆ, ಮೆಟ್ರೊ ನಗರಗಳ ಮನೋವ್ಯಾಪಾರ ಎಲ್ಲವೂ ಹದಿನೈದು ವರ್ಷಗಳ ಹಿಂದೆ ಅವರನ್ನು ಕಾಡಿದ ಸಂಗತಿಗಳು. ‘ಲೈಫ್ ಇನ್ ಎ ಮೆಟ್ರೊ’, ‘ಕಲಿಯುಗ್’, ‘ಮರ್ಡರ್’ ಅವರ ಆ ಕಾಲಘಟ್ಟದ ಸಂವೇದನೆ ತೆರೆದಿಟ್ಟ ಚಿತ್ರಗಳು.

ಕ್ರೌರ್ಯ ರಸವನ್ನು ಸಿನಿಮಾದಲ್ಲಿ ಮೊದಲು ಬಿಂಬಿಸಿದ ಅನುರಾಗ್, ಆಮೇಲೆ ಹೆಚ್ಚು ಪ್ರಯೋಗಮುಖಿಯಾದರು. ‘ಕೈಟ್ಸ್’, ‘ಬರ್ಫಿ’ ಚಿತ್ರಗಳು ಅದಕ್ಕೆ ಉದಾಹರಣೆಗಳು.
ರಣಬೀರ್ ಕಪೂರ್ ಜತೆಗೆ ತಾವೂ ನಿರ್ಮಾಣಕ್ಕಿಳಿದು, ಮಹತ್ವಾಕಾಂಕ್ಷೆಯಿಂದ ಚಿತ್ರೀಕರಿಸಲಾರಂಭಿಸಿದ ಸಿನಿಮಾ ‘ಜಗ್ಗಾ ಜಾಸೂಸ್’. ಮೊದಲ ಹತ್ತು ದಿನದ ಚಿತ್ರೀಕರಣವಾದ ಮೇಲೆ, ರಣಬೀರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಭಿನಯದ ಎಡವಟ್ಟುಗಳನ್ನು ಎತ್ತಿ ತೋರಿಸಿದರು. ಆಗ ನಿಜವಾಗಲೂ ಪ್ರೀತಿಸುತ್ತಿದ್ದ ರಣಬೀರ್, ಕತ್ರಿನಾ ನಡುವೆ ‘ಪಾತ್ರಗಳ ಕೆಮಿಸ್ಟ್ರಿ’ ಕೈಕೊಟ್ಟಿತು. ಅದರಿಂದಾಗಿ ಅನೇಕ ದೃಶ್ಯಗಳನ್ನು ಮರು ಚಿತ್ರೀಕರಿಸಬೇಕಾಗಿ ಬಂತು. ನಾಲ್ಕು ವರ್ಷಕ್ಕೂ ಹೆಚ್ಚಿನ ಅವಧಿಯ ನಂತರ ಸಿನಿಮಾ ಮೊನ್ನೆಯಷ್ಟೆ ತೆರೆಕಂಡಿತು.

ಅನುರಾಗ್ ರಂಗಾನುಭವ, ಬಾಲ್ಯದಲ್ಲಿ ಕಂಡುಂಡ ಸೂಕ್ಷ್ಮ ಸಂಗತಿಗಳು, ಅಪ್ಪ-ಅಮ್ಮನ ಗೀತನಾಟಕ ಪ್ರಯೋಗ ಎಲ್ಲವುಗಳ ಬಿಂಬ ಆ ಸಿನಿಮಾ. ಕ್ಯಾನ್ಸರ್ ಆತಂಕ ಮೆಟ್ಟಿನಿಂತು, ತನ್ನತನವ ಕಾಪಾಡಿಕೊಂಡು ಬಂದ ಈ ಚಿತ್ರಕರ್ಮಿಯ ಬದುಕು ಬಲು ಆಸಕ್ತಿಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.