ADVERTISEMENT

ಆಟೊ ಸಂತೆಯಲ್ಲಿ...

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST
ಆಟೊ ಸಂತೆಯಲ್ಲಿ...
ಆಟೊ ಸಂತೆಯಲ್ಲಿ...   

ಭಾರತಕ್ಕೆ ನೋಟ್–ಇ ಪವರ್

ಕಳೆದ ವರ್ಷ ಜಪಾನ್‌ನಲ್ಲಿ ಬಿಡುಗಡೆಗೊಂಡು ಭಾರೀ ಮಾರಾಟ ಕಂಡಿದ್ದ ನಿಸ್ಸಾನ್ ನೋಟ್ ಇ–ಪವರ್ ಅನ್ನು ಭಾರತಕ್ಕೆ ತರುವ ಆಲೋಚನೆಯಿದೆ.

ವಿದ್ಯುತ್ ಚಾಲಿತ ಕಾರುಗಳ ತಯಾರಿಕೆಗೆ ಭಾರತ ಒತ್ತು ನೀಡುತ್ತಿರುವುದರ ಹಿನ್ನೆಲೆಯಲ್ಲಿ ಈ ವಾಹನವನ್ನು ಇಲ್ಲಿ ಪರಿಚಯಿಸುವ ಸಿದ್ಧತೆ ನಡೆಸಿದೆ.

ADVERTISEMENT

ಭಾರತೀಯರ ಅವಶ್ಯಕತೆಗಳಿಗೆ ತಕ್ಕಂತೆ ಕೆಲವು ಮಾರ್ಪಾಡುಗಳನ್ನು ಮಾಡುವುದೆಂದು ತಿಳಿಸಲಾಗಿದೆ. ಈ ಹ್ಯಾಚ್‌ಬ್ಯಾಕ್ನಲ್ಲಿ 1,198 ಸಿಸಿ ಪೆಟ್ರೋಲ್ ಎಂಜಿನ್ ಮೂಲಕ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದ್ದು, ಚಾರ್ಜಿಂಗ್ ಸಾಕೆಟ್‌ನ ಅಗತ್ಯ ಇರುವುದಿಲ್ಲ.

ಇಲ್ಲಿನ ಅವಶ್ಯಕತೆಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲೆಂದು ನಿಸ್ಸಾನ್‌ನಿಂದ ತಂಡವೂ ರಚಿತಗೊಂಡಿದೆ. ಭಾರತದಂಥ ದೇಶದಲ್ಲಿ ಚಾರ್ಜಿಂಗ್ ನೆಟ್‌ವರ್ಕ್ ಕಡಿಮೆ ಇರುವುದರಿಂದ ಈ ರೀತಿಯ ವಾಹನ ಹೆಚ್ಚು ಉಪಯೋಗಕ್ಕೆ ಬರಲಿದೆ ಎಂಬುದು ಕಂಪೆನಿಯ ಉದ್ದೇಶ. ಜೊತೆಗೆ ನಿಸ್ಸಾನ್ ತನ್ನ ಎಲೆಕ್ಟ್ರಿಕ್ ವಾಹನ ಲೀಫ್ ಅನ್ನು ಪರಿಷ್ಕೃತಗೊಳಿಸಿ ಪರಿಚಯಿಸುವ ಯೋಜನೆಯನ್ನೂ ಹೊಂದಿದೆ.

***

ಪರಿಷ್ಕೃತಗೊಂಡಿದೆ ರಾಯಲ್‌ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹಾಗೂ 500 ಹೊಸ ಆವೃತ್ತಿಗಳು ಹೊರಬರುವ ಹಾದಿಯಲ್ಲಿವೆ. ಈ ಎರಡು ಮಾದರಿಗಳಿಗೂ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿ ಆವೃತ್ತಿಗಳನ್ನು ಪರಿಚಯಿಸಲಿದೆ. ಮುಖ್ಯ ಪರಿಷ್ಕರಣೆ ಎಂದರೆ ರಿಯರ್ ಡಿಸ್ಕ್‌ ಬ್ರೇಕ್‌ಗಳನ್ನು ನೀಡಿರುವುದು.

ಸಣ್ಣ ಎಂಜಿನ್‌ನ ಕ್ಲಾಸಿಕ್ 350, ಹೊಸ ಗನ್‌ಮೆಟಲ್ ಗ್ರೇ ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ. ಫ್ಯುಯೆಲ್ ಟ್ಯಾಂಕ್ ಮೇಲೆ, ಫೆಂಡರ್ ಹಾಗೂ ಸೈಡ್‌ ಬಾಕ್ಸ್‌ಗಳ ಮೇಲೆ ಈ ಬಣ್ಣ ಇರಲಿದೆ. ಗಾಢ ಬಣ್ಣದ ಸೀಟ್‌ ಕವರ್‌ ವಿನ್ಯಾಸಕ್ಕೆ ಜೊತೆಯಾಗಿದೆ. ಕ್ಲಾಸಿಕ್ 500ನ ದೇಹ ಹಾಗೂ ಎಕ್ಸ್‌ಹಾಸ್ಟ್‌ಗೆ ಮ್ಯಾಟ್‌ ಬ್ಲಾಕ್ ಫಿನಿಶ್, ಕಪ್ಪು ಸ್ಪೋಕ್‌ ವೀಲ್‌ಗಳು ಸೇರ್ಪಡೆಯಾಗಲಿವೆ. ಎಂಜಿನ್ ಹಾಗೂ ಶಕ್ತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕ್ಲಾಸಿಕ್ 350, 346 ಸಿಸಿ ಸಿಂಗಲ್ ಸಿಲಿಂಡರ್ ಮೋಟಾರು 19.8ಎಚ್‌ಪಿ ಪೀಕ್ ಪವರ್ ಹಾಗೂ 28ಎನ್ಎಂ ಟಾರ್ಕ್ ಶಕ್ತಿ ಉತ್ಪಾದಿಸಿದರೆ, ಕ್ಲಾಸಿಕ್ 500, 499 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 27.2ಎಚ್‌ಪಿ ಹಾಗೂ 41.3ಎನ್‌ಎಂ ಪೀಕ್ ಟಾರ್ಕ್ ಶಕ್ತಿ ಉತ್ಪಾದಿಸುತ್ತದೆ. ಎರಡಕ್ಕೂ ಸ್ಪೀಡ್ ಟ್ರಾನ್ಸ್‌ಮಿಷನ್ ಇದೆ.ಕ್ಲಾಸಿಕ್ 350ಗೆ ₹1.59 ಲಕ್ಷ, ಕ್ಲಾಸಿಕ್ 500ಗೆ ₹ 2.05 ಲಕ್ಷ ಬೆಲೆ.

***

ಮಹೀಂದ್ರಾದಿಂದ ಇ–ಆಲ್ಫಾ ಮಿನಿ ರಿಕ್ಷಾ

ಮಹೀಂದ್ರಾ, ಇತ್ತೀಚೆಗಷ್ಟೇ ಇ –ಆಲ್ಫಾ ಮಿನಿ ರಿಕ್ಷಾವನ್ನು ಬಿಡುಗಡೆಗೊಳಿಸಿತು.

ವಾಹನ ಕ್ಷೇತ್ರದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು
ಈ ಆಟೊವನ್ನು ರೂಪಿಸಲಾಗಿದ್ದು, ಭಾರತೀಯ ಪರಿಸ್ಥಿತಿಗಳಿಗೆ ತಕ್ಕಂತೆ ವಿನ್ಯಾಸಗೊಳಿಸಿರುವುದಾಗಿ ಕಂಪೆನಿ ತಿಳಿಸಿದೆ. ನಗರ ಪರಿಮಿತಿಯ ಉದ್ದೇಶದೊಂದಿಗೆ ಇದು ರೂಪಿತಗೊಂಡಿದೆ.

4+1 ಸೀಟಿಂಗ್ ಸಾಮರ್ಥ್ಯ, ಆಕರ್ಷಕ ಹೊರವಿನ್ಯಾಸ ಹಾಗೂ ಆರಾಮದಾಯಕ ಕ್ಯಾಬಿನ್‌ ಹೊಂದಿದೆ. ಝೀರೊ ಎಮಿಷನ್, ಉತ್ತಮ ಸಸ್ಪೆನ್ಷನ್ ಹಾಗೂ ಚಾಸಿಸ್‌, 120ಎಎಚ್‌ ಬ್ಯಾಟರಿ, ಶಕ್ತಿಯುತ ಮೋಟಾರನ್ನು ಒಳಗೊಂಡಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, 85 ಕಿ.ಮೀವರೆಗೂ ಚಲಿಸಬಲ್ಲದು. ಗಂಟೆಗೆ 25 ಕಿ.ಮೀ ವೇಗವನ್ನು ಹೊಂದಿದೆ. ಕಡಿಮೆ ಡೌನ್‌ಪೇಮೆಂಟ್, ಇಎಂಐ ಹಾಗೂ ಉಚಿತ ಬ್ಯಾಟರಿ ರಿಪ್ಲೇಸ್‌ಮೆಂಟ್ ಸೌಲಭ್ಯ ಒದಗಿಸಿದೆ. ₹1.12 ಲಕ್ಷ ಬೆಲೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.