ADVERTISEMENT

ಇರುವವರೆಗೂ ನಗಿಸುತಿರುವೆ...

​ಪ್ರಜಾವಾಣಿ ವಾರ್ತೆ
Published 25 ಜನವರಿ 2017, 19:30 IST
Last Updated 25 ಜನವರಿ 2017, 19:30 IST
ಪ್ರತಾಪ್
ಪ್ರತಾಪ್   

2004ರಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕುರಿಗಳು ಸಾರ್’ ನಗೆ ಕಾರ್ಯಕ್ರಮ ಜನರನ್ನು ಬಕ್ರ (ಕುರಿ) ಮಾಡುವ ಮೂಲಕ ಜನಪ್ರಿಯವಾಗಿತ್ತು. ‘ಕುರಿ, ಕುರಿ, ಕುರಿ. ಕುರಿಗಳು ಸಾರ್ ಕುರಿಗಳು...’ ಎಂದು ಪ್ರಸಾರವಾಗುತ್ತಿದ್ದ ಟೈಟಲ್‌ನಲ್ಲಿಯೇ ನಗೆ ಗಮ್ಮತ್ತಿತ್ತು. ಬರೋಬ್ಬರಿ 1200 ಸಂಚಿಕೆಗಳನ್ನು  ಯಶಸ್ವಿಯಾಗಿ ಪೂರ್ಣಗೊಳಿಸಿತು.

ಈ ಕಾರ್ಯಕ್ರಮದ ಜನಪ್ರಿಯತೆ ಒಬ್ಬ ಕಲಾವಿದನ ಬದುಕನ್ನೂ ಬದಲಿಸಿತು. ಅಂದಹಾಗೆ ಆ ಕಲಾವಿದ ಕುರಿ ಪ್ರತಾಪ್. ಸದ್ಯ ‘ಮಜಾ ಟಾಕೀಸ್‌’ನಲ್ಲಿ ನಗೆ ಬುಗ್ಗೆ ಉಕ್ಕಿಸುತ್ತ ಟಿ.ವಿ. ವೀಕ್ಷಕರಿಗೆಲ್ಲ ಮನರಂಜನೆ ಉಣಬಡಿಸುತ್ತಿರುವ ಕುರಿ ಪ್ರತಾಪ್ ತೆರೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದು ‘ಕುರಿಗಳು ಸಾರ್’ ಕಾರ್ಯಕ್ರಮದಿಂದ. ‘ಮಜಾ ಟಾಕೀಸ್‌’ ಯಾನವನ್ನು ನೆನಪಿಸಿಕೊಳ್ಳುತ್ತಲೇ ಪ್ರತಾಪ್, ‘ಕುರಿ ಪ್ರತಾಪ್’ ಆಗಿದ್ದರ ಬಗ್ಗೆಯೂ ಮಾತುಗಳನ್ನು ಬಿಡಿಸಿಟ್ಟರು. 

ಪ್ರತಾಪ್ ಹುಟ್ಟಿದ್ದು ಬೆಂಗಳೂರೇ ಆದರೂ ಬೆಳೆದದ್ದು ಮೈಸೂರಿನಲ್ಲಿ. ಮಂಡ್ಯದ ಕರಿಗೌಡನ ಕೊಪ್ಪಲಿನಲ್ಲೂ ಬಾಲ್ಯ ಹಂಚಿಕೊಂಡಿದ್ದವರು. ಹಳ್ಳಿಯ ದಟ್ಟ ಅನುಭವಗಳು ಅವರನ್ನು ಒಬ್ಬ ಹಾಸ್ಯಗಾರನನ್ನಾಗಿ ರೂಪಿಸಿತು.

‘ನಾನು ಎಲ್ಲೇ ಹೋದರೂ ಕಾಮಿಡಿ ಮಾಡಿಕೊಂಡೇ ಇರುತ್ತೇನೆ. ಎಲ್ಲರನ್ನೂ ನಗಿಸುವುದು ನನಗಿಷ್ಟ. ಎರಡು ದಿನ ನನ್ನ ಜೊತೆ ಇದ್ದರೆ ಅವರ ಭಾಷೆಯನ್ನೇ ಬದಲಿಸಿ ಬಿಡುತ್ತೇನೆ, ಸಿಡಿಮಿಡಿ ಎನ್ನುವವರನ್ನೂ ನಗಿಸಿಬಿಡುತ್ತೇನೆ’ ಎಂದು ನಗುತ್ತಲೇ ಹೇಳುವರು.

‘ಆರನೇ ತರಗತಿಯಲ್ಲಿದ್ದಾಗಲೇ ಗಣೇಶ ಹಬ್ಬದ ಕಾರ್ಯಕ್ರಮದಲ್ಲಿ ಕಾಮಿಡಿ ಮಾಡಿದ್ದೆ. ಇದರಿಂದ ಊರಿನ ಜನರೆಲ್ಲರೂ ತರಲೆ ತುಂಟಾಟಕ್ಕೆ ಇನ್ನೊಂದು ಹೆಸರು ಪ್ರತಾಪ್ ಎನ್ನುತ್ತಿದ್ದರು. ಮೂರು ನಾಲ್ಕು ಜೋಕ್‌ಗಳನ್ನು ಸೇರಿಸಿ ಚಿಕ್ಕ ನಾಟಕ ಮಾಡಿ ನಗಿಸುತ್ತಿದ್ದೆ’ ಎಂದು ಬಾಲ್ಯದಲ್ಲಿನ ನಗೆ ರಸಾಯನದ ಕುರಿತು ವಿವರಿಸುವರು. 

ಇಂತಿಪ್ಪ ಪ್ರತಾಪ್, ಕಾಲೇಜಿನ ಮೆಟ್ಟಿಲು ಹತ್ತಿದ್ದೇ ತಡ, ನಾಚಿಕೆಯ ಮುದ್ದೆಯಾದರು. ಕಾರ್ಯಕ್ರಮಗಳಲ್ಲಿ ಕಾಲೇಜು ಲಲನೆಯರ ನಡುವೆ ಎದ್ದು ಮಾತನಾಡಲೂ ಸಂಕೋಚ! ಆದರೆ ವಿಚಿತ್ರ ಎನ್ನುವಂತೆ ಕಾಮಿಡಿ ಕಾರ್ಯಕ್ರಮಗಳನ್ನು ನೀಡಲು ಮುಂದಾದಾಗ ಮಾತ್ರ ಈ ಸಂಕೋಚಗಳೆಲ್ಲ ಅವರಿಂದ ಮಾಯವಾಗಿಬಿಡುತ್ತಿದ್ದವಂತೆ.

ಪಿಯುಸಿ ಓದಿದ್ದು ಏಳು ವರ್ಷ
ಎರಡು ವರ್ಷದ ಪಿಯುಸಿ ತರಗತಿಯನ್ನು ಪ್ರತಾಪ್ ಓದಿದ್ದು ಏಳು ವರ್ಷ! ‘ಕಾಲೇಜಿನಿಂದ ನನ್ನ ಯಾರೂ ಉತ್ತೀರ್ಣ ಮಾಡಿಸಲೇ ಇಲ್ಲ. ಪಿಯುಸಿ ವಿಷಯದಲ್ಲಿಯೇ ಪಿಎಚ್‌.ಡಿ ಮಾಡಿಕೊಂಡೆ’ ಎಂದು ನಗೆಚಟಾಕಿ ಹಾರಿಸುವರು.

ಫೈನಾನ್ಸ್‌ ಕೆಲಸ ಮಾಡಿಕೊಂಡಿದ್ದ ಪ್ರತಾಪ್‌ ಅವರಿಗೆ ಬಣ್ಣ ಹಚ್ಚಲು ಪ್ರೇರಣೆ ನೀಡಿದ್ದು ಹಾಸ್ಯ ನಾಟಕಗಳು. ಮೈಸೂರಿನಲ್ಲಿ ದೃಶ್ಯ ಕಲಾವೇದಿಕೆಯಿಂದ ನಡೆಯುತ್ತಿದ್ದ ಶ್ರೀಹರಿ ಅವರ ಹಾಸ್ಯ ನಾಟಕವೊಂದನ್ನು ನೋಡಿ ಪ್ರಭಾವಿತರಾದರು. ಅಲ್ಲಿಂದ ಸುಧಾಕರ ಭಂಡಾರಿ ಅವರ ಪರಿಚಯವಾಯಿತು. ನಂತರ ಶುರುವಾದದ್ದೇ ‘ಕುರಿಗಳು ಸಾರ್’. ಭಂಡಾರಿಯವರ, ‘ಫ್ರೀ ಇದ್ದೀಯಲ್ಲ, ಪ್ರಯತ್ನ ಮಾಡು’ ಎಂಬ ಮಾತೇ ಕಿರುತೆರೆ ಪ್ರವೇಶಿಸಲು ಅವರಿಗೆ ಪ್ರೇರಣೆಯಾಯಿತು.

ಸಿನಿಮಾ ಆಯ್ತು ಕಾಮಿಡಿ ಸಿ.ಡಿ
ಕಿರುತೆರೆಗೆ ಪ್ರವೇಶಕ್ಕೂ ಮುನ್ನವೇ ಸಿನಿಮಾ ಮಾಡುವ ಭಂಡ ಧೈರ್ಯವನ್ನೂ ಪ್ರತಾಪ್ ಮಾಡಿದ್ದರು. ‘ಸಿನಿಮಾ ಸುಲಭ ಅಂದುಕೊಂಡಿದ್ದೆ. ಸಿನಿಮಾ ಹುಚ್ಚು ಜಾಸ್ತಿ ಇತ್ತು. ಅದಕ್ಕೆ ಸ್ನೇಹಿತರು ಸಾಥ್ ನೀಡಿದ್ದರು. ನಾಟಕವೊಂದನ್ನು ಕಾಮಿಡಿ ಸಿನಿಮಾದಂತೆ ಚಿತ್ರಿಸಲು ಮದುವೆ ಚಿತ್ರೀಕರಿಸುವ ಕ್ಯಾಮೆರಾಮೆನ್‌ಗೆ ಹೇಳಿದ್ದೆ. ಈ ಸಿನಿಮಾದ ಮುಹೂರ್ತದಲ್ಲಿ ಎಲ್ಲರಿಗೂ ಊಟ ಹಾಕಿಸಿ, ಮೂರೂವರೆ ಸಾವಿರ ಖರ್ಚಾಯಿತು.

ADVERTISEMENT

ಸಿನಿಮಾದಲ್ಲಿ ಹೆಣ್ಣಿನ ಪಾತ್ರಕ್ಕೆ ಒಬ್ಬರ ಅಗತ್ಯವಿತ್ತು. ಯಾರೂ ಸಿಗಲಿಲ್ಲ. ಕೊನೆಗೆ ಮಂಗಳಮುಖಿ ಒಬ್ಬರನ್ನೇ ಹೆಣ್ಣಿನ ಪಾತ್ರಕ್ಕೆ ಕರೆದುಕೊಂಡು ಬಂದೆವು. ರಾತ್ರಿ ಮನೆಯೊಂದರಲ್ಲಿ ಉಳಿದುಕೊಂಡೆವು. ಬೆಳಿಗ್ಗೆ ಎದ್ದು ಶೂಟಿಂಗ್ ಆರಂಭಿಸಬೇಕು ಎನ್ನುವಷ್ಟರಲ್ಲಿ, ನಾವು ಕರೆದುಕೊಂಡು ಬಂದಿದ್ದ ಮಂಗಳಮುಖಿ ಎಸ್ಕೇಪ್! 

ಒತ್ತಾಯ ಮಾಡಿ ನನ್ನ ಸ್ನೇಹಿತನೊಬ್ಬನನ್ನೇ ಹೆಣ್ಣಿನ ಪಾತ್ರಕ್ಕೆ ಸಿದ್ಧಗೊಳಿಸಿದೆವು. ಮೀಸೆ ತೆಗೆದು ಹೆಣ್ಣಿನಂತೆ ಅಲಂಕಾರ ಮಾಡಿದೆವು. ಎರಡು ಫೋಕಸ್ ಲೈಟ್, ಥರ್ಮಾಕೋಲ್ ತಂದು ಶೂಟಿಂಗ್ ಆರಂಭಿಸಿದೆವು. ವಿಡಿಯೊ ಮಾಡಿದ್ದನ್ನು ನೋಡಿದರೆ, ಫೋಕಸ್ ಲೈಟ್ ಇಟ್ಟುಕೊಂಡವನು ಫ್ರೇಮ್‌ನೊಳಗೆಲ್ಲಾ ಬಂದಿದ್ದ. ಇದೇನಿದು ಎಂದು ಕೇಳಿದರೆ, ಅದನ್ನು ತೆಗೆಯಬಹುದು ಬಿಡಿ ಎಂದ.

ಹೇಗೂ ನಾಲ್ಕು ಗಂಟೆ ಶೂಟಿಂಗ್ ಮಾಡಿದ್ದು ಸಾಕಲ್ವಾ ಎಂದರೆ, ಎಲ್ಲಾ ಎಡಿಟಿಂಗ್ ಆದರೆ ಉಳಿಯೋದು ಎರಡೇ ನಿಮಿಷ ಎಂದ! ಎಲ್ಲರಿಗೂ ಶಾಕ್. ಅವನಿಗೆ ಬೈದು ಮಧ್ಯಾಹ್ನ 2ಕ್ಕೆ ಶೂಟಿಂಗ್ ಮುಗಿಸಿದೆವು. ಆ ಚಿತ್ರದ ಶೀರ್ಷಿಕೆ ‘ಅಯ್ಯೋ ಗೋವಿಂದ’. ಆ ಸಿನಿಮಾದ ಸಿ.ಡಿ. ಇಂದಿಗೂ ಮನೆಯಲ್ಲಿದೆ. ಆಗಾಗ್ಗೆ ನೋಡಿ ನನ್ನಷ್ಟಕ್ಕೆ ನಾನೇ ನಗುವೆ’ ಎಂದು ತಮ್ಮ ಸಿನಿಮಾ ದುಸ್ಸಾಹಸವನ್ನು ವರ್ಣರಂಜಿತವಾಗಿ ಬಿಚ್ಚಿಟ್ಟರು.

ಪ್ರತಾಪ್ ಇಲ್ಲಿಯವರೆಗೂ 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ರೇಡಿಯೊ, ವೇದಿಕೆ, ಕಿರುತೆರೆ ಯಾವುದಾದರೂ ಸರಿ ಹಾಸ್ಯವಿದ್ದರೆ ಅಲ್ಲಿ ನಟಿಸುವೆ. ಆದರೆ ಧಾರಾವಾಹಿಗಳಲ್ಲಿ ಗಂಭೀರ ಪಾತ್ರಗಳಂತೂ ಒಗ್ಗುವುದಿಲ್ಲ. ನಗಿಸುವ ಅವಕಾಶ ಸಿಕ್ಕರೆ ಬಿಡುವುದಿಲ್ಲ. ಕಾಮಿಡಿ ಬಿಟ್ಟು ಬೇರೆ ದಾರಿ ಇಲ್ಲ. ಎಷ್ಟು ದಿನ ಇರುತ್ತೇನೋ ಅಷ್ಟು ದಿನ ನಗಿಸುತ್ತಲೇ ಇರುತ್ತೇನೆ’ ಎಂದು ಮುಗುಳ್ನಗುವರು.

ಮಜಾ ಟಾಕೀಸ್‌ ಮನೆಯಲ್ಲಿ...
ಇನ್ನೂರು ಸಂಚಿಕೆ ಮುಗಿಸಿರುವ ‘ಮಜಾ ಟಾಕೀಸ್‌’ ಅನ್ನು ನಗುವಿನ ಮನೆ ಎಂದು ಬಣ್ಣಿಸುವರು ಪ್ರತಾಪ್. ‘ಸೃಜನ್, ಶ್ವೇತಾ, ಅಪರ್ಣಾ, ಮಿಮಿಕ್ರಿ ದಯಾನಂದ್, ಮಂಡ್ಯ ರಮೇಶ್, ಇಂದ್ರಜಿತ್, ಮನೋಹರ್ ಅವರಂಥ ಮಂದಿಯೊಂದಿಗೆ ಕೆಲಸ ಮಾಡುವ ಒಳ್ಳೆ ಅವಕಾಶ ಇದು. ನಾನಂತೂ ಸಾಕಷ್ಟು ಕಾಲೆಳೆಯುತ್ತೇನೆ.

ಇಲ್ಲಿ ಯಾರು ಏನು ಹೇಳಿದರೂ ಬೇಸರ ಮಾಡಿಕೊಳ್ಳದೇ ಎಲ್ಲವನ್ನೂ ಹಾಸ್ಯವಾಗಿ ತೆಗೆದುಕೊಳ್ಳುವರು. ತಂಡದ ಹಿಂದೆ ನಿಂತು ಬೆಂಬಲ ಕೊಡುವವರು ತೇಜಸ್ವಿನಿ ಅವರು. ಎಲ್ಲರ ಒಟ್ಟಾರೆ ಫಲವೇ ಮಜಾ ಟಾಕೀಸ್‌ನಲ್ಲಿನ ನಗು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.