ADVERTISEMENT

ಟಾಟಾ ಮೋಟಾರ್ಸ್‌ನ ಟಾಮೊ

ದೇಸಿ ವಾಹನಲೋಕದಲ್ಲಿ ಹೊಸ ನಿರೀಕ್ಷೆ...

ಜಯಸಿಂಹ ಆರ್.
Published 1 ಮಾರ್ಚ್ 2017, 19:30 IST
Last Updated 1 ಮಾರ್ಚ್ 2017, 19:30 IST
ಟಾಟಾ ಮೋಟಾರ್ಸ್‌ನ   ಟಾಮೊ
ಟಾಟಾ ಮೋಟಾರ್ಸ್‌ನ ಟಾಮೊ   

ಟಾಟಾ ಮೋಟಾರ್ಸ್ ಹದಿನೈದು ದಿನಗಳ ಹಿಂದಷ್ಟೇ ‘ಟಾಮೊ’ ಎಂಬ ಉಪವಿಭಾಗವನ್ನು ಪ್ರಕಟಿಸಿದೆ. ಮಾರ್ಚ್‌ 7ರಂದು ಆರಂಭವಾಗಲಿರುವ ಜಿನಿವಾ ಮೋಟಾರ್ಸ್‌ ಷೋನಲ್ಲಿ ‘ಟಾಮೊ’ ಬ್ರ್ಯಾಂಡ್ ಅಡಿ ಅಭಿವೃದ್ಧಿಪಡಿಸಿರುವ ಮೊದಲ ಉತ್ಪನ್ನವನ್ನು ಪ್ರದರ್ಶಿಸಲಿದೆ.

ಟಾಟಾ ಮೋಟಾರ್ಸ್‌ ಹೇಳಿಕೊಂಡಿರುವಂತೆ ಇದು ಭವಿಷ್ಯದ ಕಾರ್. ‘ಈ ಕಾರ್‌ ಬೇರೆ ಕಾರ್‌ಗಳನ್ನು ಹಿಂದಿಕ್ಕುತ್ತದೆಯೇ ಹೊರತು, ಕಾರ್ಬನ್‌ ಹೆಜ್ಜೆಗಳನ್ನಲ್ಲ’. ಇದರ ಅರ್ಥ ಇದು ಮಾಲಿನ್ಯರಹಿತ ವಾಹನ ಎಂದು. ಇದರ ಜತೆಯಲ್ಲೇ ಭವಿಷ್ಯದ ಕಾರ್‌ಗಳನ್ನು ಅಭಿವೃದ್ಧಿಪಡಿಸಲು, ಹೊಸ ತಲೆಮಾರಿನ ತಂತ್ರಜ್ಞಾನಗಳನ್ನು ಒಂದೆಡೆ ಕಲೆ ಹಾಕಲು ಟಾಮೊ ಒಂದು ವೇದಿಕೆ ಒದಗಿಸಲಿದೆ. ಈ ಸಲುವಾಗಿ ಆಟೊಮೊಬೈಲ್‌ ಕ್ಷೇತ್ರದಲ್ಲಿ ಗಮನಾರ್ಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿರುವ, ಪಡಿಸುತ್ತಿರುವ ಸ್ಟಾರ್ಟ್‌ ಅಪ್‌ಗಳನ್ನು ಒಂದೆಡೆ ಸೇರಿಸುವುದಾಗಿ ಟಾಟಾ ಮೋಟಾರ್ಸ್ ಹೇಳಿದೆ.

ಮೊದಲೇ ಹೇಳಿದಂತೆ ಇದು ಮಾಲಿನ್ಯರಹಿತ ಕಾರ್‌ ಎಂಬ ಮಾಹಿತಿಯನ್ನು ಟಾಮೊ ಬಿಟ್ಟುಕೊಟ್ಟಿದೆ. ಅಂದಮೇಲೆ ಬಹುಶಃ ಇದು ಫ್ಯುಯೆಲ್ ಸೆಲ್ ಕಾರ್‌ ಆಗಿರಬಹುದು ಎಂಬ ಚರ್ಚೆ ಭಾರತದ ವಾಹನ ಪ್ರಪಂಚದಲ್ಲಿ ನಡೆಯುತ್ತಿದೆ. ನಿಜಕ್ಕೂ ಇದು ಫ್ಯುಯೆಲ್ ಸೆಲ್ ಕಾರ್‌ ಆಗಿದ್ದಲ್ಲಿ, ದುಬಾರಿ ಆಗಿರಲಿದೆ. ಆದರೆ ಟಾಟಾ ಮೋಟಾರ್ಸ್‌, ‘ಇದು ಕೈಗೆಟಕುವ ಬೆಲೆಯ ಭವಿಷ್ಯದ ಕಾರ್‌’ ಎಂದು ಘೋಷಿಸಿದೆ. ಹಾಗಿದ್ದಲ್ಲಿ, ಫ್ಯುಯೆಲ್ ಸೆಲ್ ತಂತ್ರಜ್ಞಾನವನ್ನು ಕೈಗೆಟಕುವ ದರದಲ್ಲಿ ಭಾರತದಲ್ಲಿ ಟಾಮೊ ಪರಿಚಯಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕು. ನಿರೀಕ್ಷೆಯಂತೆಯೇ ಆದಲ್ಲಿ, ಭಾರತದ ವಾಹನ ಪ್ರಪಂಚದಲ್ಲಿ ಟಾಟಾ ಮೋಟಾರ್ಸ್ ಹೊಸ ಶಕೆಯನ್ನೇ ಆರಂಭಿಸುತ್ತದೆ ಎಂದು ಹೇಳಬಹುದು.

ಇದಕ್ಕೂ ಮುಖ್ಯವಾಗಿ, ದೀರ್ಘಬಾಳಿಕೆಯ ಮತ್ತು ಕಡಿಮೆ ದರದ, ಉತ್ತಮ ಕ್ಷಮತೆಯ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಟಾಟಾ ಮೋಟಾರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ ಮತ್ತು ಮಾರುತಿ ಸುಜುಕಿ ಪರಸ್ಪರ ಒಂದು ಒಪ್ಪಂದಕ್ಕೆ ಬಂದಿದ್ದವು. ಆದರೆ ಆ ಬಗ್ಗೆ ನಂತರದ ದಿನಗಳಲ್ಲಿ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ಮೂರೂ ದೈತ್ಯ ಕಂಪೆನಿಗಳು ಅಂತಹದೊಂದು ಪ್ರಯತ್ನವನ್ನು ಸಾಕಾರಗೊಳಿಸಿದ್ದಲ್ಲಿ, ಅದು ನಿಜಕ್ಕೂ ಭಾರತೀಯರಿಗೆ ಮತ್ತು ವಿಶ್ವಕ್ಕೆ ಆಗುವ ಲಾಭ ಎಂದೇ ಪರಿಗಣಿಸಬೇಕು. ಆದರೆ ಈ ವಿಚಾರದಲ್ಲಿ ಮತ್ತೂ ಕೆಲವು ಸಂದೇಹಗಳಿವೆ. ಈ ನಿಟ್ಟಿನಲ್ಲಿ ಮೂರೂ ಕಂಪೆನಿಗಳು ಒಂದಾಗಿದ್ದಲ್ಲಿ ಮಹೀಂದ್ರಾ ಮತ್ತು ಮಾರುತಿ ಏಕೆ ಈ ಬಗ್ಗೆ ಯಾವ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ ಎಂಬ ಪ್ರಶ್ನೆ ಕಾಡುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮಾರ್ಚ್‌ 7ರವರೆಗೆ ಕಾಯಲೇಬೇಕು.

ಟಾಮೊ ಬ್ರ್ಯಾಂಡ್ ಘೋಷಿಸಿದ ನಂತರ ಟಾಟಾ ಮೋಟಾರ್ಸ್ ಟಾಮೊ ಹೆಸರಿನಲ್ಲಿ ಜಾಲತಾಣವೊಂದನ್ನು ಬಿಡುಗಡೆ ಮಾಡಿತ್ತು. ಚಲನಚಿತ್ರವೊಂದರ ಟೀಸರ್‌ ಬಿಡುಗಡೆ ಮಾಡಿದಂತೆ ಆ ಜಾಲತಾಣದಲ್ಲಿ ಪ್ರತಿದಿನ ಒಂದೊಂದು ವಿವರಗಳನ್ನು ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಒಮ್ಮೆ ಪರದೆ ಮುಚ್ಚಿದ ಕಾರ್‌ ಒಂದರ ಚಿತ್ರವನ್ನು ಪ್ರಕಟಿಸಿತ್ತು. ಪರದೆ ಹಾಕಿದ್ದರೂ, ಅದರಲ್ಲಿ ಕಾರ್‌ನ ವಿನ್ಯಾಸ ನಿಚ್ಚಳವಾಗಿ ಗೋಚರಿಸಿತ್ತು. ಅಷ್ಟರಲ್ಲೇ ಅದೊಂದು ಸ್ಪೋರ್ಟ್ಸ್‌ ಕಾರ್‌ ಎಂಬುದು ಸಾಬೀತಾಗಿತ್ತು. ತೀರಾ ಎತ್ತರ ಕಡಿಮೆ ಇರುವ, ದೇಹಕ್ಕೆ ಹೋಲಿಸಿದರೆ ತೀರಾ ದೊಡ್ಡದೆನ್ನಿಸುವ ಚಕ್ರಗಳು ಅದು ಸ್ಪೋರ್ಟ್ಸ್‌ ಕಾರ್‌ ಎಂಬುದನ್ನು ದೃಢಪಡಿಸಿದ್ದವು.

ಜತೆಗೆ ದೇಹದ ವಿನ್ಯಾಸ ಅದು ಎರಡು ಸೀಟ್‌ಗಳ ಕಾರ್‌ ಎಂಬುದನ್ನು ತೋರಿಸುತ್ತಿತ್ತು. ಇದರ ಜತೆಯಲ್ಲೇ ಟಾಟಾ ಮೋಟಾರ್ಸ್‌ ತನ್ನ ಪ್ರಕಟಣೆಯೊಂದರಲ್ಲಿ ಶಕ್ತಿಶಾಲಿ ಎಂಜಿನ್‌ ಒಂದನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿತ್ತು.

ಈ ಎಲ್ಲಾ ವಿವರಗಳನ್ನು ಆಧಾರವಾಗಿಟ್ಟುಕೊಂಡು ಪರಿಣತರು ಇನ್ನೂ ಬಹಿರಂಗವಾಗಬೇಕಿರುವ ‘ಟಾಮೊ’ ಕಾರ್‌ ಅನ್ನು ಕಲ್ಪಿಸಿಕೊಂಡಿದ್ದಾರೆ. ಇದು ರೇರ್‌ ವ್ಹೀಲ್‌ ಡ್ರೈವ್‌ ಕಾರ್ ಆಗಿರಲಿದೆ. ಜತೆಗೆ ಅದರ ಎಂಜಿನ್‌ ಕಾರ್‌ನ ಮಧ್ಯಭಾಗದಲ್ಲಿರಲಿದೆ ಎಂದು ಊಹಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಟಾಟಾ ಮೋಟಾರ್ಸ್‌ ಬಳಿ ಈಗ ಇರುವ ಪೆಟ್ರೋಲ್‌ ಎಂಜಿನ್‌ ಒಂದನ್ನು ತೀರಾ ಮಾರ್ಪಡಿಸಿದರೆ ಅದರಲ್ಲಿ ಎಷ್ಟು ಶಕ್ತಿ ಉತ್ಪಾದಿಸಬಹುದು ಎಂಬುದನ್ನು ಲೆಕ್ಕಾಚಾರ ಮಾಡಿ ಹೇಳಿದ್ದಾರೆ. ಸದ್ಯ ಟಾಟಾ ಬಳಿ ಈಗ ಇರುವ ಹೊಸ ಪೆಟ್ರೋಲ್ ಎಂಜಿನ್ ಅಂದರೆ, ಅದು 1.2 ಲೀಟರ್‌ ರೆವೊರ್ಟನ್. ಈ ಎಂಜಿನ್‌ಗೆ ವೇರಿಯೇಬಲ್ ಜಿಯೊಮಿಟ್ರಿ ಟರ್ಬೊ ಚಾರ್ಜರ್‌ ಅನ್ನು ಜೋಡಿಸಬೇಕು.

ADVERTISEMENT

ಜತೆಗೆ ಸಾಮಾನ್ಯ ಫ್ಯುಯೆಲ್ ಇಂಜೆಕ್ಷನ್ ಅನ್ನು ಡೀಸೆಲ್‌ ಎಂಜಿನ್‌ಗಳಲ್ಲಿ ಇರುವಂತೆ ಹೈ ಪ್ರೆಶರ್‌ ಡೈರೆಕ್ಟ್ ಇಂಜೆಕ್ಷನ್‌ ಆಗಿ ಪರಿವರ್ತಿಸಬೇಕು. ಇಷ್ಟೆಲ್ಲಾ ಮಾರ್ಪಾಡು ಮಾಡಿದರೆ ಈ ಎಂಜಿನ್ ಗರಿಷ್ಠ 200 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪ್ರವೇಶ ಮಟ್ಟದ ಸ್ಪೋರ್ಟ್ಸ್ ಕಾರ್‌ಗೆ ಇದು ಒಳ್ಳೆಯ ಶಕ್ತಿ. ಅದರಲ್ಲೂ ಕಡಿಮೆ ತೂಕ ಮತ್ತು ಗಾಳಿಯನ್ನು ಸೀಳಿಕೊಂಡು ಮುನ್ನುಗ್ಗುವಂತಹ ಏರೊ ಡೈನಮಿಕ್ ವಿನ್ಯಾಸ, 200 ಬಿಎಚ್‌ಪಿ ಶಕ್ತಿ ವ್ಯಯವಾಗದಂತೆ ನೋಡಿಕೊಳ್ಳುತ್ತವೆ. ಈ ಸ್ಪೋರ್ಟ್ಸ್‌ ಕಾರ್‌ನ ನಿಟ್ಟಿನಲ್ಲಿ ರಶ್‌ಲೈನ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಪರದೆ ಹಿಂದೆ ಇರುವ ಕಾರ್‌ ಹೇಗಿರಬಹುದು ಎಂದು ಊಹಿಸಿಕೊಂಡು ರಶ್‌ಲೈನ್‌ ಕಲಾವಿದರು ಒಂದು ಮಾದರಿ ಚಿತ್ರವನ್ನು ಬಿಡುಗಡೆ ಮಾಡಿದೆ. ಆ ಚಿತ್ರದಲ್ಲಂತೂ ಟಾಮೊ ಸ್ಪೋರ್ಟ್ಸ್‌ ಕಾರ್‌ ಕೋಟಿ ರೂಪಾಯಿ ಬೆಲೆಯ ಕಾರ್‌ನಂತೆ ಕಾಣುತ್ತದೆ. ಈ ನಿರೀಕ್ಷೆಗಳೂ ಏನಾಗುತ್ತವೆ ಎಂಬುದನ್ನು ಮಾರ್ಚ್‌ 7ರವರೆಗೆ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.