ADVERTISEMENT

ನಿಸರ್ಗದ ವೇಗ

ಬೆಳದಿಂಗಳು

ಸೃಜನಾನಂದ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST

ನಮ್ಮ ಬದುಕಿಗೆ ಅದೆಂಥ ವೇಗ ಬಂದು ಬಿಟ್ಟಿದೆಯೆಂದರೆ ನಾವು ಯಾವುದನ್ನೂ ನಿಧಾನವಾಗಿ ಮಾಡಲಾರದ ಸ್ಥಿತಿ ತಲುಪಿದ್ದೇವೆ. ಅಷ್ಟೇನೂ ಮುಖ್ಯವಾಗದೇ ಇರುವ ಸೆಕೆಂಡಿನ ಸಾವಿರದ ಒಂದನೇ ಭಾಗವೂ ನಮ್ಮ ಮಟ್ಟಿಗೆ ಮುಖ್ಯವಾಗಲು ತೊಡಗಿದೆ. ಇಷ್ಟೆಂದು ವೇಗದ ಬದುಕು ನಿಜಕ್ಕೂ ಅಗತ್ಯವೇ ಎಂಬ ಪ್ರಶ್ನೆಗೆ ಹೊರಟರೆ ನಾವು ಆತುರಗಾರರಾಗಿಬಿಟ್ಟಿರುವುದು ನಮ್ಮ ಅರಿವಿಗೆ ಬರುತ್ತದೆ.

ಕನ್ನಡದಲ್ಲಿ ಬಹಳ ಹಳೆಯ ಗಾದೆಯೊಂದಿದೆ ‘ಆತುರಗಾರನಿಗೆ ಬುದ್ಧಿ ಮಟ್ಟ’. ಆತುರದಲ್ಲಿ ಮಾಡುವ ಎಲ್ಲಾ ಕೆಲಸಗಳೂ ಗೊಂದಲದ ಗೂಡಾಗಿ ಅದು ಮಾಡುವುದಕ್ಕೆ ಬೇಕಿರುವ ನಿಜವಾದ ಸಮಯಕ್ಕಿಂತ ಹೆಚ್ಚಿನ ಅವಧಿ ಬೇಕಾಗುತ್ತದೆ. ವೇಗ ಎಂಬುದನ್ನು ಸಾಪೇಕ್ಷವಾಗಿ ಪರಿಗಣಿಸಿದಾಗ ಮಾತ್ರ ನಮ್ಮ ಈ ಸಮಸ್ಯೆಗೆ ಉತ್ತರ ದೊರೆಯುತ್ತದೆ. ಸೌದೆಯ ಒಲೆಯಲ್ಲಿ ಅನ್ನ ಬೇಯುವುದಕ್ಕೆ ಒಂದಷ್ಟು ಹೊತ್ತು ಬೇಕು. ಆದರೆ ಅಕ್ಕಿಯನ್ನು ಕುಕ್ಕರಿನಲ್ಲಿಟ್ಟು ಗ್ಯಾಸ್ ಸ್ಟೌ ಮೇಲಿಟ್ಟರೆ ಬೇಗ ಬೇಯುತ್ತದೆ. ಆದರೆ ಸೌದೆ ಒಲೆಯಲ್ಲಿ ಬೆಂದ ಅನ್ನಕ್ಕೂ ಗ್ಯಾಸ್ ಸ್ಟೌನ ಮೇಲಿದ್ದ ಕುಕ್ಕರಿನಲ್ಲಿ ಬೆಂದ ಅನ್ನದ ರುಚಿಗೂ ವ್ಯತ್ಯಾಸವಿರುತ್ತದೆ.

ಪೋಷಕಾಂಶಗಳ ತನಕವೂ ಈ ಚರ್ಚೆಯನ್ನು ವಿಸ್ತರಿಸಬಹುದು. ಅನ್ನ ಬೇಯುವುದು ಎಂಬ ಕ್ರಿಯೆ ಒಂದು ರಾಸಾಯನಿಕ ಕ್ರಿಯೆ. ನಿಧಾನವಾಗಿ ಬೇಯುವುದಕ್ಕೂ ಕ್ಷಣಾರ್ಧದಲ್ಲಿ ಬಿಸಿಯೇರಿ ಬೇಯುವುದಕ್ಕೂ ವ್ಯತ್ಯಾಸವಿದೆ.

ಒಂದು ವೇಳೆ ಗ್ಯಾಸ್ ಸ್ಟೌ ಮತ್ತು ಕುಕ್ಕರ್ ನೀಡುವ ಅನುಕೂಲಗಳನ್ನು ಅನ್ನ ಸರಿಯಾಗಿ ಬೇಯಲು ಅಗತ್ಯವಿರುವ ಉಷ್ಣತೆಯನ್ನು ಅರಿತು ಬಳಸಿದರೆ ಅದು ಹೇಗಿರಬಹುದಿತ್ತು. ಅಂದರೆ ಆಧುನಿಕತೆ ಒದಗಿಸಿದ ಸವಲತ್ತುಗಳನ್ನು ನಿರಾಕರಿಸ ಬೇಕಾಗಿಲ್ಲ. ಅದರ ಸರಿಯಾದ ಬಳಕೆಯ ಬಗ್ಗೆ ಆಲೋಚಿಸಿದರೆ ಅನ್ನದ ರುಚಿಯನ್ನು ಉಳಿಸಿಕೊಂಡೇ ಆಧುನಿಕ ಸವಲತ್ತುಗಳ ಉಪಯೋಗ ಪಡೆಯಬಹುದು.

ಇದೆಲ್ಲಾ ಹೇಳಲು ಸುಲಭ ಎಂದು ಟೀಕಿಸುವವರು ಇರಬಹುದು. ಕೆಲ ಸಂಗತಿಗಳಿಗೆ ಅದರದ್ದೇ ಆದ ವೇಗವಿರುತ್ತದೆ. ಅದನ್ನು ಅರಿತು ಮುಂದುವರೆಯಬೇಕು. ಬೀಜವೊಂದು ಮೊಳಕೆಯೊಡೆದು ಗಿಡವಾಗಿ ಫಲ ನೀಡುವುದಕ್ಕೆ ಒಂದು ಅವಧಿ ಇದೆ. ಅದನ್ನು ವೇಗಗೊಳಿಸುವುದು ನೈಸರ್ಗಿಕ ಪ್ರಕ್ರಿಯೆಯೊಂದರ ಒಳಗೆ ಮಧ್ಯ ಪ್ರವೇಶಿಸಿದಂತೆ. ಇದು ದೀರ್ಘಕಾಲೀನವಾದ ದುಷ್ಪರಿಣಾಮಕ್ಕೆ ಹೇತುವಾಗುತ್ತದೆ. ನಾವೀಗ ಕೀಟನಾಶಕಗಳನ್ನು ಬಳಸಿ ಸೃಷ್ಟಿಸಿರುವ ಅನಾಹುತವೂ ಇಂಥದ್ದೇ ತಾನೇ.

ನಿಸರ್ಗದಲ್ಲಿ ಯಾವುದೂ ವ್ಯರ್ಥವಲ್ಲ. ಒಂದೊಂದು ಜೀವಿಗೂ ಅದರದ್ದೇ ಆದ ಪಾತ್ರವಿದೆ. ಕೀಟನಾಶಕಗಳು ಆ ಪಾತ್ರವನ್ನೇ ನಿರಾಕರಿಸಿಬಿಡುತ್ತವೆ. ಅದರ ಪರಿಣಾಮಗಳು ಮತ್ತೊಂದು ಬಗೆಯಲ್ಲಿ ಗೋಚರಿಸುತ್ತವೆ. ಅಂದರೆ ಅನೈಸರ್ಗಿಕವಾದ ಸುಳಿಯೊಂದರ ಒಳಕ್ಕೆ ನಾವು ಸಿಕ್ಕಿಬೀಳುತ್ತೇವೆ.

ನಿಧಾನ ಗತಿಯ ಬದುಕು ಎಂದರೆ ನಿಷ್ಪ್ರಯೋಜನಕಾರಿಯಾಗುವುದೆಂದಲ್ಲ. ಪ್ರಕೃತಿಯ ಗತಿಗೆ ನಮ್ಮ ವೇಗವನ್ನು ಹೊಂದಿಸಿಕೊಳ್ಳುವುದು ಎಂದರ್ಥ. ಪ್ರಕೃತಿ ನಿರ್ಧರಿಸುವ ವೇಗವನ್ನು ಅರಿತು ಅದಕ್ಕೆ ಅನುಗುಣವಾಗಿ ನಡೆಯುವುದು ಅಷ್ಟೇ. ಇದನ್ನು ಈಗ ಹೊಸ ಬಗೆಯ ಪದಪುಂಜಗಳ ಮೂಲಕ ವಿವರಿಸುವುದುಂಟು. ಪರಿಸರಸ್ನೇಹಿ ಬದುಕು ಇತ್ಯಾದಿಯಾಗಿ ಕರೆಯುವುದು ಇದನ್ನೇ. ಇದಕ್ಕಾಗಿ ಮನುಷ್ಯ ದೊಡ್ಡ ಸರ್ಕಸ್ ಮಾಡುವ ಅಗತ್ಯವೂ ಇಲ್ಲ. ಸುಮ್ಮನೇ ಮನುಷ್ಯನಾಗಿ ಬದುಕಲು ಪ್ರಯತ್ನಿಸಿದರೆ ಸಾಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.