ADVERTISEMENT

ಮಂಡಿ ಬದಲಿಸಲೂ ಜಿಪಿಎಸ್‌

ಪ್ರಜಾವಾಣಿ ವಿಶೇಷ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ಐವತ್ತು ವರ್ಷ ದಾಟುತ್ತಿದ್ದಂತೆ ಬಹುತೇಕರಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಮಂಡಿ ನೋವಿನದ್ದು. ಕಾಲು ಬಾಗಿ ನಡೆಯಲು ಸಾಧ್ಯವಾಗದ ಸ್ಥಿತಿ ತಲುಪಿದವರು ಮಂಡಿ ಬದಲಿ ಶಸ್ತ್ರಚಿಕಿತ್ಸೆಗೊಳಪಡುತ್ತಿದ್ದಾರೆ. ವಿಶೇಷವೆಂದರೆ ಈ ಮಂಡಿ ಬದಲಿ ಶಸ್ತ್ರಚಿಕಿತ್ಸೆಯನ್ನು ಈಗ ಜಿಪಿಎಸ್‌ ಬಳಸಿಯೂ ಮಾಡಲಾಗುತ್ತಿದೆ. ಅಂದರೆ ಅಡ್ವಾನ್ಸ್‌್ಡ ಕಂಪ್ಯೂಟರ್‌ ನ್ಯಾವಿಗೇಷನ್‌ ಯಂತ್ರದ ಸಹಾಯದಿಂದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

ವೈದ್ಯಕೀಯ ಕ್ಷೇತ್ರದಲ್ಲೂ ನವೀನ ತಂತ್ರಜ್ಞಾನದಿಂದಾಗಿ ಶಸ್ತ್ರಚಿಕಿತ್ಸೆ ಸುಲಭವಾಗುತ್ತಿದೆ. 2013ರಲ್ಲಿ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆ ಯಲ್ಲೇ 800 ಮಂದಿಗೆ ಮಂಡಿ ಬದಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದುವರೆಗೂ 15ಕ್ಕೂ ಹೆಚ್ಚು ಮಂದಿಗೆ ಜಿಪಿಎಸ್‌ ಬಳಸಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಕಂಪ್ಯೂಟರ್‌ ನ್ಯಾವಿಗೇಷನ್‌ ಯಂತ್ರದ ಮೂಲಕ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಜಿಪಿಎಸ್‌ ಬಳಸಿದರೆ ಶೇ 90ರಷ್ಟು ಶಸ್ತ್ರಚಿಕಿತ್ಸೆ ಯಶಸ್ವಿಯಾಗುತ್ತದೆ ಎನ್ನುತ್ತಾರೆ ವೈದ್ಯರು. ಈ ಶಸ್ತ್ರ ಚಿಕಿತ್ಸೆಗೆ ಸುಮಾರು ₨2 ಲಕ್ಷ ವೆಚ್ಚವಾಗುತ್ತದೆ.

ಮುನ್ನೆಚ್ಚರಿಕೆ ಇರಲಿ
* ಇದು ರೋಗವಲ್ಲ, ಹುಟ್ಟಿನಿಂದಲೂ ಬರುವುದಿಲ್ಲ. ಪದೇ ಪದೇ ನೋವು ನಿವಾರಕ  ಬಳಸಬಾರದು.
* 55 ವರ್ಷದ ನಂತರ ತಜ್ಞ ಮೂಳೆ ವೈದ್ಯರನ್ನು ಭೇಟಿ ಮಾಡಬೇಕು.
* ರಾತ್ರಿ ಮಂಡಿ ನೋವಾಗುವುದು. ಕಾಲು ಬಾಗಿದಂತಾಗುವುದು, ಮಂಡಿ ಭಾಗದಲ್ಲಿ ವಿಪರೀತ ನೋವಾಗುವುದು (ನಡೆಯಲಾಗದಂತೆ), ಕುಳಿತು, ನಿಂತುಕೊಳ್ಳಲಾಗದಂತೆ ಪದೇ ಪದೇ ನೋವು ಕಂಡು ಬಂದಲ್ಲಿ ಮೂಳೆ ತಜ್ಞರನ್ನು ಭೇಟಿ ಮಾಡಲೇಬೇಕು.

ಬಹಳಷ್ಟು ಮಂದಿ ದಿನನಿತ್ಯದ ಕೆಲಸ ಮಾಡಲು ಆಗದಂತೆ ಮಂಡಿ ನೋವು ಕಾಣಿಸಿಕೊಂಡರೆ ಪದೇ ಪದೇ ನೋವು ನಿವಾರಕ ಮಾತ್ರೆ  ತೆಗೆದುಕೊಳ್ಳುತ್ತಾರೆ. ಹೀಗೆ ನೋವು ಕಂಡುಬಂದಲ್ಲಿ ವೈದ್ಯರನ್ನು ಭೇಟಿಯಾಗುವುದು ಒಳಿತು. 55 ವರ್ಷದ ನಂತರ ಇಂಥ ನೋವು ಕಾಣಿಸಿದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ನಿದ್ದೆಯಲ್ಲಿ ಮಂಡಿ ನೋವಾಗುವುದು, ವಯಸ್ಸಾಗುತ್ತಿದ್ದಂತೆ ಮೂಳೆ ಸವೆತದಿಂದಾಗಿ, ಸ್ಥೂಲಕಾಯದವರಿಗೆ, ಕ್ರೀಡಾಪಟುಗಳಿಗೆ ಗಾಯದಿಂದ, ಅಪಘಾತದಿಂದ ಕೆಲವರಿಗೆ ಮಂಡಿ ನೋವು ಕಂಡು ಬರುತ್ತದೆ.

‘ವಾಹನಗಳಲ್ಲಿ ಜಿಪಿಎಸ್‌ ಬಳಸುವಂತೆ ಈ ಶಸ್ತ್ರಚಿಕಿತ್ಸೆಯಲ್ಲೂ ಬಳಸುತ್ತಿದ್ದೇವೆ. ಮೊದಲ ಬಾರಿ ಈ ತಂತ್ರಜ್ಞಾನ ಬಳಸಿದ ಆಸ್ಪತ್ರೆ ನಮ್ಮದು. ಇಲ್ಲಿ ಇನ್‌ಫ್ರಾರೆಡ್‌ ಕಿರಣಗಳ ಮೂಲಕ ಮಂಡಿ ಬದಲಾವಣೆ ಮಾಡಲಾಗುತ್ತದೆ. ಕೃತಕ ಮೊಣಕಾಲಿನ ಭಾಗಗಳನ್ನು ಸರಿಯಾದ ಜಾಗದಲ್ಲಿ ಜೋಡಿಸಲು ಜಿಪಿಎಸ್‌ ಮಾರ್ಗದರ್ಶನ ನೀಡುತ್ತದೆ. ಈ ವಿಧಾನದಿಂದ ರೋಗಿಗೆ 20 ವರ್ಷಗಳಿಗೂ ಹೆಚ್ಚು ಕಾಲ ಸಮಸ್ಯೆ ಕಂಡುಬರುವುದಿಲ್ಲ.

ಎರಡರಿಂದ 25 ಡಿಗ್ರಿವರೆಗೂ ಕಾಲು ಡೊಂಕಾಗಿರುವ ವ್ಯಕ್ತಿಗಳಿಗೆ ಈ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಲಾಗಿದೆ. ಚಿಕಿತ್ಸೆ ಮಾಡಿದ ನಾಲ್ಕರಿಂದ ಐದು ದಿನಗಳಲ್ಲಿ ನಡೆಯಲು ಸಾಧ್ಯವಾಗುತ್ತದೆ, ಸೈಕಲ್‌ ಸಹ ತುಳಿಯುವ ಮಟ್ಟಕ್ಕೆ ಮಂಡಿ ನೋವು ನಿವಾರಣೆಯಾಗುತ್ತದೆ’ ಎನ್ನುತ್ತಾರೆ ಮೂಳೆತಜ್ಞ ಡಾ. ನಾರಾಯಣ ಹುಳ್ಸೆ. ಫೋರ್ಟಿಸ್‌ ಆಸ್ಪತ್ರೆಯಲ್ಲಿ ಆಸ್ಟ್ರೇಲಿಯಾದ ಮೂಳೆ ತಜ್ಞ ಡಾ. ರೊಡ್ನಿ ರಿಚರ್ಡ್‌ಸನ್‌ ನೇತೃತ್ವದಲ್ಲಿ ಜಿಪಿಎಸ್‌ ಬಳಸಿ ಮಂಡಿ ಬದಲಿಯ ನೇರ ಶಸ್ತ್ರಚಿಕಿತ್ಸೆ (ಲೈವ್‌ ಆಪರೇಷನ್‌) ಮಾಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT