ADVERTISEMENT

ಸರಳತೆಯ ಶಕ್ತಿ

ಸೃಜನಾನಂದ
Published 21 ಡಿಸೆಂಬರ್ 2016, 19:30 IST
Last Updated 21 ಡಿಸೆಂಬರ್ 2016, 19:30 IST

ಅನೇಕ ಸಂದರ್ಭಗಳಲ್ಲಿ ಸರಳವಾಗಿರುವುದನ್ನು ಜಿಪುಣತನ ಎಂದು ನಾವು ಭಾವಿಸುವುದಿದೆ. ಆದರೆ ಸರಳ ಬದುಕನ್ನು ಬಾಳುವುದು ಮತ್ತು ಅದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇನೂ ಸರಳವಲ್ಲ.

ಗಾಂಧೀಜಿಯ ಎರಡು ತುಂಡು ಬಟ್ಟೆ, ಅಸಿಸಿಯ ಸಂತ ಫ್ರಾನ್ಸಿಸರು ಕ್ರಿಸ್ತನ ಬಳಿ ಇದ್ದದ್ದು ಎಷ್ಟು ಜೊತೆ ಬಟ್ಟೆ ಎಂದು ಕೇಳಿಕೊಂಡು ಅಷ್ಟರಲ್ಲೇ ಬದುಕನ್ನು ಕಳೆದದ್ದು ಈಗಲೂ ಕೆಲವು ಕ್ರೈಸ್ತ ಪಂಥಗಳ ಸನ್ಯಾಸಿಗಳು ಬ್ಯಾಂಕ್ ಖಾತೆಗಳೂ ಇಲ್ಲದೇ ಬದುಕುವುದನ್ನು ಅರ್ಥ ಮಾಡಿಕೊಳ್ಳುತ್ತಾ ಹೋದರೆ ಸರಳ ಬದುಕಿನ ಹಿಂದಿರುವ ಸಂಕೀರ್ಣ ತತ್ವಗಳು ಕಾಣಿಸುತ್ತವೆ.

ಗಾಂಧೀಜಿ ಎರಡೇ ತುಂಡು ಬಟ್ಟೆಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುವುದರ ಹಿಂದೆ ಎರಡು ಮುಖ್ಯವಾದ ಉದ್ದೇಶಗಳಿದ್ದವು. ತನಗೆ ಬೇಕಿರುವ ಬಟ್ಟೆಗೆ ಬೇಕಿರುವ ನೂಲನ್ನು ತಾನೇ ತಯಾರಿಸಿಕೊಳ್ಳಲು ಅವರು ತೀರ್ಮಾನಿಸಿದ್ದು. ಇದಕ್ಕೆ ಪ್ರೇರಕವಾದದ್ದು ಸ್ವದೇಶೀ ಉತ್ಪಾದನೆ. ವ್ಯಕ್ತಿಯಿಂದ ದೇಶದ ತನಕ ಸ್ವಯಂ ಸಂಪೂರ್ಣವಾಗಬೇಕೆಂಬ ಸಿದ್ಧಾಂತ. ಎಲ್ಲದಕ್ಕಿಂತ ಹೆಚ್ಚಾಗಿ ಮಿತವಾಗಿರುವ ಸಂಪನ್ಮೂಲವನ್ನು ಎಲ್ಲರೂ ಹಂಚಿಕೊಂಡು ಬದುಕಲು ಸಾಧ್ಯ ಎಂಬುದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉಪದೇಶಿಸಬೇಕೆಂಬ ಸಂಕಲ್ಪ.

ಅಸಿಸಿಯ ಸಂತ ಫ್ರಾನ್ಸಿಸರದ್ದೂ ಹೆಚ್ಚೂ ಕಡಿಮೆ ಇದೇ ಬಗೆಯ ನಿಲುವು. ಆದರೆ ಅವರದ್ದು ರಾಜಕಾರಣಕ್ಕಿಂತ ಹೆಚ್ಚಾಗಿ ಭಕ್ತಿ ಮತ್ತು ಆರಾಧನೆಯ ಮಾರ್ಗ. ಆದರೆ ಗುರಿ ಮಾತ್ರ ಗಾಂಧೀಜಿಯವರದ್ದೇ. ಆಸೆಗೆ ಸಂಬಂಧಿಸಿದಂತೆ ಬುದ್ಧ ಹೇಳುವ ಮಾತುಗಳನ್ನು ಟಾಲ್‌ಸ್ಟಾಯ್ ಎತ್ತುವ ‘ಮನುಷ್ಯನಿಗೆಷ್ಟು ಭೂಮಿ ಬೇಕು?’ ಎಂಬ ಪ್ರಶ್ನೆಯೊಂದಿಗೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ದೃಷ್ಟಿಯಲ್ಲಿ ಸರಳತೆಯನ್ನು ನೋಡುತ್ತಾ ಹೋದರೆ ಅದರ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸ್ವರೂಪಗಳು ಅರ್ಥವಾಗುತ್ತಾ ಹೋಗುತ್ತವೆ.

ಪ್ರಜ್ಞಾಪೂರ್ವಕವಾಗಿ ಸರಳತೆಯನ್ನು ಅಳವಡಿಸಿಕೊಳ್ಳದೇ ಹೋದರೆ ಅದನ್ನು ಅನುಸರಿಸುವುದು ಕಷ್ಟ. ಇದಕ್ಕೆ ಸಂಬಂಧಿಸಿದಂತೆ ಮುಲ್ಲಾ ನಾಸಿರುದ್ದೀನ್‌ನ ಬದುಕಿಗೆ ಸಂಬಂಧಿಸಿದ ಕಥೆಯೊಂದಿದೆ. ಚಳಿಗಾಲದ ಒಂದು ದಿನ ಮುಲ್ಲಾ ನಾಸಿರುದ್ದೀನ್ ತನ್ನ ಎಂದಿನ ಸರಳ ವಸ್ತ್ರಗಳೊಂದಿಗೆ ರಸ್ತೆಯಲ್ಲಿ ನಡೆಯುತ್ತಿದ್ದ. ಅವನು ಚಳಿಯಿಂದ ನಡುಗುತ್ತಿರಲಿಲ್ಲ. ಸಹಜವಾಗಿದ್ದ. ಎದುರಿಗೆ ಸಿಕ್ಕ ಅವನ ಶ್ರೀಮಂತ ಸ್ನೇಹಿತ ಮೂರು ಮೂರು ಉಣ್ಣೆಯ ಬಟ್ಟೆಯನ್ನು ಧರಿಸಿಯೂ ನಡುಗುತ್ತಾ ಎದುರಾದ.

ಮುಲ್ಲಾನನ್ನು ನೋಡಿದವನೇ ‘ಒಂದು ಉಣ್ಣೆಯ ನಿಲುವಂಗಿಯೂ ಇಲ್ಲದೆ ನೀನಿಷ್ಟು ಆರಾಮವಾಗಿರುವುದು ಹೇಗೆ?’ ಎಂದಾತ ಪ್ರಶ್ನಿಸಿದ. ಮುಲ್ಲಾ ಹೇಳಿದ ‘ನನಗೆ ಉಣ್ಣೆಯ ಅಂಗಿಯನ್ನು ಖರೀದಿಸುವ ಶಕ್ತಿಯಿಲ್ಲ. ಆದ್ದರಿಂದ ನನಗೆ ಚಳಿಯೂ ಆಗುತ್ತಿಲ್ಲ’. ಈ ದೃಷ್ಟಾಂತ ಒಂದು ತಮಾಷೆಯಂತೆ ಕಾಣಿಸುತ್ತದೆ. ಆದರೆ ಸೂಕ್ಷ್ಮವಾಗಿ ಓದಿಕೊಂಡರೆ ಮುಲ್ಲಾ ಹೇಳುವ ದೊಡ್ಡ ಸತ್ಯವೊಂದು ತಿಳಿಯುತ್ತದೆ. 

ನಮಗೆ ನಿಜವಾಗಿಯೂ ಎಷ್ಟು ಬೇಕು ಎಂಬುದನ್ನು ಅರಿತುಕೊಂಡರೆ ಸಾಕು ಎಂಬುದು ಅದರ ಸಂದೇಶ. ನಮಗೆ ಖರೀದಿಸುವ ಸಾಮರ್ಥ್ಯವಿದೆಯೆಂದರೆ ಖರೀದಿಸುತ್ತಾ ಹೊರಟರೆ ಕಣ್ಣಿಗೆ ಕಾಣಿಸುವುದೆಲ್ಲವೂ ಅಗತ್ಯ ಎಂದೇ ಭಾಸವಾಗುತ್ತಿರುತ್ತದೆ. ನಮ್ಮ ಸಹಜ ಸಾಮರ್ಥ್ಯಗಳೂ ಮರೆಯಾಗಿ ಉಪಕರಣಗಳ ಮೊರೆ ಹೋಗುತ್ತಿರುತ್ತೇವೆ.

ಉಣ್ಣೆಯ ಬಟ್ಟೆಯನ್ನು ಖರೀದಿಸುವ ಸಾಮರ್ಥ್ಯವಿರುವ ಕಾರಣಕ್ಕಾಗಿ ಚಳಿಯನ್ನು ಸಹಿಸಿಕೊಳ್ಳುವ ನಮ್ಮ ಶಕ್ತಿ ಇಲ್ಲವಾಗುತ್ತಿರುತ್ತದೆ. ಸರಳ ಬದುಕು ಎಂದರೆ ನಮಗೆ ನೈಸರ್ಗಿಕವಾಗಿ ಲಭ್ಯವಾಗಿರುವ ಶಕ್ತಿಯನ್ನು ಸಹಜವಾಗಿ ಬಳಸುವುದು ಎಂದರ್ಥ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.